ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಜನಾಕಾಶದ ಒಂಟಿ ನಕ್ಷತ್ರ

02:00 AM May 01, 2024 IST | Samyukta Karnataka

ನಾಯಕತ್ವದ ಸಾಮರ್ಥ್ಯವನ್ನು ಗಣಿತ ಶಾಸ್ತ್ರದ ಆಧಾರದ ಮೇಲೆ ಒರೆಗೆ ಹಚ್ಚುವುದು ಕಷ್ಟ. ಏಕೆಂದರೆ, ನಾಯಕತ್ವವೆಂಬುದು ಜನಗಳ ವಿಶ್ವಾಸದ ಮೇಲೆ ನಿರಂತರ ಸಂಬಂಧದಿಂದಾಗಿ ನಿತ್ಯದ ಸಂಕಟಗಳಿಗೆ ಮುಖಾಮುಖಿಯಾಗುತ್ತಲೇ ಪರಿಹಾರ ಮಾರ್ಗಗಳನ್ನು ಹುಡುಕಿಕೊಡುವ ಅನಧಿಕೃತ ಜವಾಬ್ದಾರಿಯನ್ನು ಅಧಿಕೃತ ಕರ್ತವ್ಯದ ರೂಪದಲ್ಲಿ ನಿರ್ವಹಿಸಿ ವಿಶ್ವಾಸಾರ್ಹತೆ ಪಡೆದುಕೊಂಡಿರುವ ಬೆಳವಣಿಗೆಯ ಹಿಂದಿರುವುದು ಪರಸ್ಪರ ಮಮಕಾರ. ಇದು ಯಾವುದೇ ಕಾರಣಕ್ಕೆ ಜನಪ್ರಿಯತೆಯ ಅಥವಾ ಸ್ಥಾನಮಾನದ ದೃಷ್ಟಿಯಿಂದ ಬರುವ ಮಮಕಾರವಲ್ಲ. ಮಾನವೀಯ ಸಂಬಂಧದ ಮೇಲೆ ಕಟ್ಟಿಕೊಂಡ ಈ ಮಮಕಾರದ ಮಹತ್ವ ಅರಿವಿಗೆ ಬರುವುದು ನಾಯಕತ್ವ ಅಥವಾ ನಾಯಕ ಕಣ್ಮರೆಯಾದಾಗ ಮಾತ್ರ. ಮೈಸೂರು ಸೀಮೆಯ ಪ್ರಶ್ನಾತೀತ ಗುಣದ ರಾಜಕಾರಣಿ ಶ್ರೀನಿವಾಸ ಪ್ರಸಾದ್ ಇಂತಹ ವಿಶ್ವಾಸಾರ್ಹತೆಯನ್ನು ಸಂಪಾದಿಸಿಕೊಂಡಿದ್ದರೂ ವಿವಾದಗಳಿಗೆ ಜಗ್ಗದೆ-ಬಗ್ಗದೆ ಅವುಗಳನ್ನು ಅವಕಾಶಗಳನ್ನಾಗಿ ಬಳಸಿಕೊಂಡು ಮುನ್ನುಗ್ಗಿದ ಅಪರೂಪದ ನಾಯಕ. ಇಂತಹ ಅಪರೂಪದ ನಾಯಕರನ್ನು ಯಾವುದೇ ವರ್ಗ, ಭಾಷೆ, ಸೀಮೆ ಇಲ್ಲವೇ ಬಣ್ಣಕ್ಕೆ ಸೀಮಿತಗೊಳಿಸುವುದು ನಿಜಕ್ಕೂ ಕ್ರೌರ್ಯದ ಇನ್ನೊಂದು ಮುಖ. ಶ್ರೀನಿವಾಸ ಪ್ರಸಾದ್ ದಲಿತರು ಎಂಬುದು ನಿಜ. ಆದರೆ, ಅವರು ಕೇವಲ ದಲಿತರ ಕಲ್ಯಾಣಕ್ಕೆ ಮಾತ್ರ ಸೀಮಿತವಾಗಿ ಹೋರಾಡಿದವರಲ್ಲ. ಆದರ್ಶ ಭಾರತದ ಕನಸುಗಳು ನುಚ್ಚು ನೂರಾಗುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿ ದೆಸೆಯಿಂದ ಸಾರ್ವಜನಿಕ ಬದುಕಿಗೆ ಕಾಲಿರಿಸಿದ ಶ್ರೀನಿವಾಸ ಪ್ರಸಾದ್ ವೈಚಾರಿಕವಾಗಿ ದೃಢತೆಯನ್ನು ಹೊಂದಿದ್ದರೂ ಎಲ್ಲಾ ವೈಚಾರಿಕಸ್ಥರ ಸಂಗಡ ಅನ್ಯೋನ್ಯ ಸಂಬಂಧ ಹೊಂದಿದ್ದವರು. ಸಮಾಜವಾದಿ ಚಿಂತನೆಯ ಮೂಸೆಯಲ್ಲಿ ಅರಳುತ್ತಿರುವಾಗಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರ ಜೊತೆ ನಿರಂತರ ಸಂವಾದದಲ್ಲಿ ಇರುತ್ತಿದ್ದದ್ದು ಅವರ ಬಹುತ್ವದ ಅಸಲಿ ಮುಖ. ತರುಣ ಶ್ರೀನಿವಾಸ ಪ್ರಸಾದ್ ಚುನಾವಣಾ ರಾಜಕಾರಣಕ್ಕೆ ಪ್ರವೇಶಿಸಿದ್ದು ಡಿಎಂಕೆ ಅಭ್ಯರ್ಥಿಯಾಗಿ ಎಂಬುದು ಈಗಲೂ ಸೋಜಿಗದ ಸಂಗತಿಯೇ. ಡಿಎಂಕೆ ಅಭ್ಯರ್ಥಿಯಾಗಿ ಸೋತ ನಂತರ ಸಂಸ್ಥಾ ಕಾಂಗ್ರೆಸ್‌ನ ಯುವ ನಾಯಕರಾಗಿ ನಂತರ ರಾಜಕೀಯ ಸ್ಥಿತ್ಯಂತರದ ನಡುವೆ ಟಿ. ನರಸೀಪುರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಮೇಲೆ ಬದಲಾದ ಸನ್ನಿವೇಶಕ್ಕೆ ಅನುಗುಣವಾಗಿ ಇಂದಿರಾ ಗಾಂಧಿ ನಾಯಕತ್ವದ ಕಾಂಗ್ರೆಸ್ ಪಕ್ಷದಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಮೇಲೆ ಶ್ರೀನಿವಾಸ ಪ್ರಸಾದ್ ಹಂತ ಹಂತವಾಗಿ ಬೆಳೆದರೂ ತಾವು ಬೆಳೆದುಬಂದ ದಾರಿ ಮತ್ತು ಬೆಳೆಯಲು ಕಾರಣರಾದ ಜನರನ್ನು ಎಂದಿಗೂ ಮರೆತವರಲ್ಲ. ದಲಿತರ ಕಲ್ಯಾಣವನ್ನು ಹೃದಯ ಸಾಕ್ಷಿಯಾಗಿ ನೆರವೇರಿಸುವ ಸಂದರ್ಭದಲ್ಲಿಯೇ ಸಮಾಜದ ಎಲ್ಲಾ ವರ್ಗದ ಜನರ ಕಲ್ಯಾಣವನ್ನೂ ಕೂಡಾ ಅಷ್ಟೇ ಪ್ರಾಮುಖ್ಯತೆ ಕೊಡುತ್ತಿದ್ದರಿಂದ ಶ್ರೀನಿವಾಸ ಪ್ರಸಾದ್ ಮೈಸೂರು ಸೀಮೆಯ ರಾಜಕೀಯ ಮತ್ತು ವೈಚಾರಿಕತೆಯ ಧ್ರುವೀಕರಣದ ಕೇಂದ್ರಬಿಂದುವಾಗಿ ರೂಪುಗೊಳ್ಳಲು ಅವರ ಅಪಾರ ಮಿತ್ರ ಮಂಡಳಿಯ ಸಹಕಾರ ಅನನ್ಯ.
ನಿಜ. ಶ್ರೀನಿವಾಸ ಪ್ರಸಾದ್ ಅವರ ಸಾಮರ್ಥ್ಯಕ್ಕೆ ತಕ್ಕ ಸ್ಥಾನಮಾನಗಳು ದೊರೆಯಲಿಲ್ಲ. ಕೇಂದ್ರದಲ್ಲಿ ಮಂತ್ರಿ ಸ್ಥಾನ ದೊರೆತದ್ದು ಕೂಡಾ ತಡವಾಗಿಯೇ. ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಆಹಾರ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದನ್ನು ಬಿಟ್ಟರೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಮೊದಲ ಆವೃತ್ತಿಯ ಸಂಪುಟದಲ್ಲಿ ಕಂದಾಯ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಷ್ಟೇ ಅವರಿಗೆ ಒದಗಿಬಂದ ಅಧಿಕಾರ ಸ್ಥಾನಗಳ ಅವಕಾಶ. ಆದರೆ, ಅವಕಾಶಗಳು ವಂಚಿತವಾದರೂ ಅವರೆಂದಿಗೂ ಕೊರಗಿದವರಲ್ಲ. ಮರುಗುವುದು ಅವರ ಜಾಯಮಾನದಲ್ಲೇ ಇರಲಿಲ್ಲ. ಕೇಂದ್ರ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟಾಗ ಸಂಜೀವಿನಿ ಪರ್ವತ ಹೊತ್ತ ಹನುಮಂತನಂತೆ ಅವರ ನೆರವಿಗೆ ಬಂದವರು ಆಗಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್. ವೈದ್ಯಕೀಯ ನೆರವು ಹಾಗೂ ಔಷಧೋಪಚಾರಗಳು ದೇಶವಿದೇಶಗಳಲ್ಲಿ ಶ್ರೀನಿವಾಸ ಪ್ರಸಾದ್‌ಗೆ ಸುಲಭವಾಗಿ ದೊರೆಯುವಂತೆ ಮಾಡಿದ ಜಾರ್ಜ್ ಫರ್ನಾಂಡಿಸ್ ಅವರ ಔದಾರ್ಯ ಮತ್ತು ಕಕ್ಕುಲತೆ ನಾಯಕತ್ವದ ಮೌಲ್ಯ ಹಾಗೂ ಪರೋಪಕಾರದ ದಿಕ್ಸೂಚಿ.
ಶ್ರೀನಿವಾಸ ಪ್ರಸಾದ್ ಅವರು ಅರ್ಧ ಶತಮಾನಕ್ಕೂ ಹೆಚ್ಚಿನ ಕಾಲದ ಸಕ್ರಿಯ ರಾಜಕಾರಣದ ನಂತರ ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದರೂ ಅವರ ಸುತ್ತ ಯಾವಾಗಲೂ ಬೆಂಬಲಿಗರ ದೊಡ್ಡ ಪಡೆಯೇ ಇರುತ್ತಿತ್ತು ಎಂಬುದು ಅವರ ಜನಾನುರಾಗದ ಅಸಲಿ ಮುಖ. ಕರ್ನಾಟಕ ರಾಜಕಾರಣದ ದಿಕ್ಕು ದೆಸೆ ಬದಲಾಗುವ ರೀತಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಪ್ರಸಾದ್ ಅವರಿಗೆ ದ್ವೇಷವೆಂದರೆ ಗಾವುದ ದೂರ. ಆದರೆ, ವಿಶ್ವಾಸವೇ ಅಪಾರ. ವೈರಿಗಳಿಲ್ಲದ ಆದರೆ ಕನಸುಗಳೇ ತುಂಬಿದ್ದ ಅವರ ಬದುಕು ಹೊಸ ತಲೆಮಾರಿನ ನೇತಾರರಿಗೆ ಹಲವು ದೃಷ್ಟಿಕೋನದಿಂದ ದಾರಿದೀಪ. ದಾರಿಯೇ ಇಲ್ಲದ ದೀಪವನ್ನು ಕಣ್ಣೆತ್ತಿಯೂ ನೋಡದ ಈಗಿನ ತಲೆಮಾರಿನಲ್ಲಿ ಶ್ರೀನಿವಾಸ ಪ್ರಸಾದ್ ನಿಜವಾದ ಅರ್ಥದಲ್ಲಿ ಜನಾಕಾಶದಲ್ಲಿ ಹೊಳೆಯುತ್ತಿರುವ ಒಂಟಿ ನಕ್ಷತ್ರ.

Next Article