For the best experience, open
https://m.samyuktakarnataka.in
on your mobile browser.

ಜಿಜ್ಞಾಸೆಗಳ ಕಾಲವಯ್ಯಾ….

01:59 AM Mar 27, 2024 IST | Samyukta Karnataka
ಜಿಜ್ಞಾಸೆಗಳ ಕಾಲವಯ್ಯಾ…

ಲೋಕಸಭಾ ಚುನಾವಣೆ ಪ್ರಕ್ರಿಯೆ ಗರಿಗಟ್ಟುತ್ತಿರುವ ಸಂದರ್ಭದಲ್ಲಿ ನೇರವಾಗಿ ರಾಜಕೀಯಕ್ಕೆ ಸಂಬಂಧಿಸಿದ ಜಿಜ್ಞಾಸೆಗಳು ಏಕಕಾಲದಲ್ಲಿ ಎದುರಾಗಿರುವುದು ನಿಜಕ್ಕೂ ಒಂದು ಅಚ್ಚರಿಯ ಬೆಳವಣಿಗೆ. ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಇಡಿ ಸಂಸ್ಥೆಯ ಲಾಕಪ್‌ನಿಂದಲೇ ಆಡಳಿತವನ್ನು ನಿಯಂತ್ರಿಸುವ ರೀತಿಯಲ್ಲಿ ಆದೇಶಗಳನ್ನು ಹೊರಡಿಸುತ್ತಿರುವುದು ಒಂದು ಜಿಜ್ಞಾಸೆ. ಹಾಗೆಯೇ, ದೇಶದ ಬಾಗಿಲಿಗೆ ಚುನಾವಣೆ ಬಂದ ಸಂದರ್ಭದಲ್ಲಿ ಮುಖ್ಯಮಂತ್ರಿಯಾದವರನ್ನು ಭ್ರಷ್ಟಾಚಾರದ ಆರೋಪದ ಮೇಲೆ ದಸ್ತಗಿರಿ ಮಾಡಿರುವುದು ಇನ್ನೊಂದು ಚರ್ಚೆ. ಭ್ರಷ್ಟಾಚಾರದ ಆರೋಪ ಹೊತ್ತವರ ಪೈಕಿ ಅನೇಕರು ಪಕ್ಷಾಂತರ ಮಾಡಿ ಅಧಿಕಾರರೂಢ ಬಿಜೆಪಿಯನ್ನು ಸೇರ್ಪಡೆಯಾಗಿರುವುದು ಇನ್ನೊಂದು ಒಗಟು. ಇಷ್ಟೆಲ್ಲದ ನಡುವೆಯೂ ಸುಪ್ರೀಂಕೋರ್ಟಿನಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರಿಗೆ ಜಾಮೀನು ಕೊಡುವ ಪ್ರಕರಣದ ವಿಚಾರಣೆಯಲ್ಲಿರುವುದು ದೇಶದಲ್ಲಿ ಕುತೂಹಲ ಮೂಡಿಸಿರುವ ಇನ್ನೊಂದು ಸಂಗತಿ. ಈ ಎಲ್ಲಾ ಜಿಜ್ಞಾಸೆಗಳಿಗೆ ಮಿಗಿಲು ಎಂಬ ರೀತಿಯಲ್ಲಿ ಏಳು ಹಂತದ ಲೋಕಸಭಾ ಚುನಾವಣೆಯಲ್ಲಿ ಸುಮಾರು ೯೦ ದಿನ ನೀತಿ ಸಂಹಿತೆ ಜಾರಿಗೊಳಿಸಿ ಆಡಳಿತ ಪ್ರಕ್ರಿಯೆ ನನೆಗುದಿಗೆ ಬೀಳುವಂತೆ ಮಾಡಿರುವುದು ಸಾರ್ವಜನಿಕರಿಂದ ಹಿಡಿದು ಆಡಳಿತಗಾರರಿಗೆ ಬಿಸಿ ಮುಟ್ಟಿಸಿರುವ ಜಿಜ್ಞಾಸೆ.
ನಿಜ. ಯಾವುದೇ ಪ್ರಸ್ತಾಪಗಳು ಸರ್ಕಾರದ ಮುಂದೆ ಬಂದಾಗ ಅದರ ಉದ್ದೇಶ ಏನೆಂಬುದು ಬಡಪೆಟ್ಟಿಗೆ ತಿಳಿಯುವುದಿಲ್ಲ. ಕಾನೂನಿನ ಆಡಳಿತ ಎಂಬ ಸರ್ವೇ ಸಾಧಾರಣ ತಿಳಿವಳಿಕೆಯೊಂದಿಗೆ ಈ ಪ್ರಸ್ತಾಪಗಳು ಆದೇಶಗಳಾಗಿ ಹೊರಬೀಳುವ ಹೊತ್ತಿಗೆ ಅವುಗಳ ಪೂರ್ವಾಪರ ಏನೆಂಬುದು ಬಯಲಾದ ಮೇಲೆ ವೈಚಾರಿಕ ಹಾಗೂ ವ್ಯಕ್ತಿಗತ ನೆಲೆಯ ಚರ್ಚೆಗಳು ಆರಂಭವಾಗಿ ಜಿಜ್ಞಾಸೆಯ ಬೀಜಾಂಕುರವಾಗುತ್ತದೆ. ಕೇಜ್ರಿವಾಲ್ ಅಬಕಾರಿ ಹಗರಣದ ಆರೋಪಿ ಎಂಬ ವಿಚಾರ ಮಾಧ್ಯಮಗಳ ಮೂಲಕ ದೇಶದಲ್ಲಿ ಮಾರ್ದನಿಗೊಂಡು ಬಹಳ ಕಾಲವಾಗಿತ್ತು. ಇಡಿ ಸಂಸ್ಥೆಯವರು ಒಟ್ಟು ೯ ಬಾರಿ ಸಮನ್ಸ್ ಜಾರಿ ಮಾಡಿದ ಮೇಲಂತೂ ಕೇಜ್ರಿವಾಲ್ ವ್ಯಕ್ತಿತ್ವದ ಮೇಲೆ ಕಳಂಕ ಮೆತ್ತಿಕೊಳ್ಳಲು ಕಾರಣವಾಯಿತು. ನ್ಯಾಯಾಲಯದ ತೀರ್ಪು ಹೊರಬೀಳುವ ಹೊತ್ತಿಗೆ ಚುನಾವಣೆ ಘೋಷಣೆಯಾದದ್ದು ಒಂದು ರೀತಿಯ ಕಾಕತಾಳೀಯ ಬೆಳವಣಿಗೆ. ಇದೇ ಹೊತ್ತಿನಲ್ಲಿ ಕೇಜ್ರಿವಾಲ್ ಇಡಿ ಸಂಸ್ಥೆಯವರಿಂದ ದಸ್ತಗಿರಿಗೆ ಒಳಗಾಗಿರುವುದರಲ್ಲಿ ದೋಷ ಎಲ್ಲಿದೆ ಎಂಬುದು ಖಚಿತವಾಗಿ ಯಾರೊಬ್ಬರಿಗೂ ಅರ್ಥವಾಗದ ಸ್ಥಿತಿ. ಈ ಪ್ರಕರಣ ಕೋರ್ಟಿನಲ್ಲಿದೆಯಾದ ಕಾರಣ ಹೆಚ್ಚು ವಿಸ್ತರಿಸುವುದು ಸಾಧುವಲ್ಲ. ಇದರ ವಿಸ್ತರಣೆಯಾಗಿ ಇಡಿ ಲಾಕಪ್‌ನಲ್ಲಿರುವ ಕೇಜ್ರಿವಾಲ್ ಅಲ್ಲಿಂದಲೇ ಆಡಳಿತವನ್ನು ನಿಯಂತ್ರಿಸುವ ರೀತಿಯಲ್ಲಿ ಆದೇಶಗಳನ್ನು ಹೊರಡಿಸಿದರೆ ಅದಕ್ಕೆ ಕಾನೂನಿನ ಮಾನ್ಯತೆ ಇದೆಯೇ ಎಂಬುದು ಹೊಸ ವಸ್ತು.
ಬಂಧನಕ್ಕೆ ಒಳಗಾದ ಮೇಲೆ ಅಧಿಕಾರಸ್ಥರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡುವುದು ವಾಡಿಕೆ. ಇಲ್ಲವೇ ರಾಜೀನಾಮೆ ಕೊಟ್ಟ ನಂತರ ಅಧಿಕಾರಸ್ಥ ರಾಜಕಾರಣಿಗಳು ಬಂಧನಕ್ಕೆ ಒಳಗಾಗುವುದು ಇನ್ನೊಂದು ವಾಡಿಕೆ. ಈಗ ಆರಂಭವಾಗಿರುವ ಹೊಸ ವಾಡಿಕೆ ಎಂದರೆ ಬಂಧನಕ್ಕೊಳಗಾದ ಅಧಿಕಾರಸ್ಥರು ಎಲ್ಲಿರುವರೋ ಅಲ್ಲಿಂದಲೇ ಆಡಳಿತದ ಚುಕ್ಕಾಣಿ ಹಿಡಿದಿರುವುದು. ವಸ್ತುಸ್ಥಿತಿ ಹಿಗೆಯೇ ಮುಂದುವರಿದು ಇದೊಂದು ಸ್ಥಾಪಿತ ಸಂಪ್ರದಾಯವಾದರೆ ಇನ್ನು ಮುಂದೆ ಯಾರೂ ಕೂಡಾ ಬಂಧನಕ್ಕೆ ಒಳಗಾಗಲು ಹಿಂಜರಿಯಲಾರದ ಸ್ಥಿತಿ ಸೃಷ್ಟಿಯಾಗಬಹುದು. ಹಾಗೆ ನೋಡಿದರೆ, ನೈತಿಕವಾಗಿ ಬಂಧನದ ನಂತರ ಅಧಿಕಾರದಲ್ಲಿರುವುದು ಸೂಕ್ತವಲ್ಲ. ಆದರೆ, ಕಾನೂನಿನ ದೃಷ್ಟಿಯಲ್ಲಿ ಇದು ಖಚಿತವಿಲ್ಲ. ಹೀಗಾಗಿ ಇಂತಹ ಚರ್ಚೆ ಸೃಷ್ಟಿಯಾಗಿದೆ.
ಕೇಜ್ರಿವಾಲ್ ಬಂಧನದಲ್ಲಿ ರಾಜಕೀಯ ಎಳೆಗಳಿಲ್ಲ ಎಂಬುದನ್ನು ಎಷ್ಟು ಸಾಕ್ಷ್ಯಾಧಾರಗಳ ಸಮೇತ ಮಂಡಿಸಿದರೂ ದೇಶವಾಸಿಗಳು ನಂಬುವ ಸ್ಥಿತಿಯಲ್ಲಿ ಇಲ್ಲ. ಏಕೆಂದರೆ, ಘಟನೆಗಳ ಸರಮಾಲೆ ಇದಕ್ಕೆ ಕಾರಣ. ಬಂಧಿಸಲೇಬೇಕಿತ್ತು ಎಂಬ ಹಠವಿದ್ದಿದ್ದರೆ ಹಿಂದೆಯೇ ಆ ಕೆಲಸವನ್ನು ಮಾಡಬಹುದಿತ್ತು. ಆದರೆ, ಚುನಾವಣೆಯ ಸಂದರ್ಭದಲ್ಲಿ ಹೀಗೆ ಮಾಡಿರುವುದು ನಾನಾ ರೀತಿಯ ಶಂಕೆಗಳನ್ನು ಸೃಷ್ಟಿಸಿವೆ. ಸುಪ್ರಸಿದ್ಧ ಕಾನೂನು ತಜ್ಞ ಕಪಿಲ್ ಸಿಬಲ್ ವಾದಿಸುವಂತೆ ಕೇಜ್ರಿವಾಲ್ ಬಂಧನದ ಹಿಂದೆ ಹಲವು ಲೆಕ್ಕಾಚಾರಗಳು ಕೆಲಸ ಮಾಡಿವೆ. ಇದರ ನಡುವೆ ಬೀದಿ ಹೋರಾಟಕ್ಕೆ ಮುಂದಾಗಿರುವ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ದೆಹಲಿಯಲ್ಲಿ ಬೃಹತ್ ರ‍್ಯಾಲಿ ನಡೆಸಿ ಬೆಂಬಲ ಸೂಚಿಸಿದ್ದರು. ಬಿಜೆಪಿಯವರು ಮಾತ್ರ ತಮ್ಮ ನಿಲುವನ್ನು ಸಡಿಲಗೊಳಿಸದೇ ರಾಜೀನಾಮೆಗೆ ಪಟ್ಟು ಹಿಡಿದಿರುವುದು ಈ ಬೆಳವಣಿಗೆ ರಾಜಕೀಯ ಅಸ್ತ್ರವಾಗುವ ಎಲ್ಲ ಸಾಧ್ಯತೆಗಳು ಕಂಡುಬರುತ್ತಿವೆ.
ಇನ್ನು ಸುದೀರ್ಘ ಅವಧಿಯ ನೀತಿ ಸಂಹಿತೆ ಸೃಷ್ಟಿಸಿರುವ ಜಿಜ್ಞಾಸೆಗೆ ಗೊತ್ತುಗುರಿಗಳು ಏನೆಂಬುದು ಅಸ್ಪಷ್ಟ. ಇಷ್ಟೊಂದು ಸುದೀರ್ಘ ಅವಧಿಯ ಚುನಾವಣಾ ಪ್ರಕ್ರಿಯೆ ಅಗತ್ಯವಿತ್ತೆ ಎಂಬ ಪ್ರಶ್ನೆ ಒಂದು ಕಡೆ ಇದ್ದರೆ ಅದಕ್ಕಿಂತ ಮುಖ್ಯವಾಗಿ ಇಷ್ಟೊಂದು ಸುದೀರ್ಘ ನೀತಿ ಸಂಹಿತೆ ಜಾರಿ ಅನಿವಾರ್ಯವಾಗಿತ್ತೇ ಎಂಬುದು ಇನ್ನೊಂದು ಪ್ರಶ್ನೆ. ಇಂತಹ ಪ್ರಶ್ನೆಗಳಿಗೆ ಯಾವ ಪಕ್ಷವಾಗಲೀ ಇಲ್ಲವೇ ಸರ್ಕಾರವಾಗಲಿ ಉತ್ತರಿಸುವ ಸ್ಥಿತಿಯಲ್ಲಿ ಇಲ್ಲ. ಏಕೆಂದರೆ, ಕಾನೂನಿನ ಪಾಠ ಹೇಳುವವರು ಸೃಷ್ಟಿಸಿರುವ ಈ ಬೆಳವಣಿಗೆಗಳು ಇಡೀ ದೇಶವನ್ನು ಚರ್ಚೆಯ ಮಡಿಲಿಗೆ ತಳ್ಳಿರುವುದು ವಿಚಿತ್ರ ಆದರೂ ನಿಜ.