ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ನಶೆ ರಾಜ್ಯದ ನೆರಳು

02:00 AM May 25, 2024 IST | Samyukta Karnataka

ಮಾದಕ ದ್ರವ್ಯಗಳ ಅಕ್ರಮ ಸಾಗಣೆ ಹಾಗೂ ವಹಿವಾಟು ಎಗ್ಗಿಲ್ಲದೆ ಸಾಗುತ್ತಿರುವ ಪರಿಣಾಮವಾಗಿ ಕರ್ನಾಟಕ ರಾಜ್ಯದಲ್ಲಿ ಅಮಲಿನ ರಾಜ್ಯದ ನೆರಳು ದಿನದಿಂದ ದಿನಕ್ಕೆ ದಟ್ಟವಾಗುತ್ತಿದೆ. ಕುಡಿತದ ವ್ಯಾಮೋಹದ ಜಾಗದಲ್ಲಿ ಮಾದಕ ದ್ರವ್ಯಗಳ ಸೇವನೆ ಹೆಚ್ಚಾಗುತ್ತಿರುವುದು ಗಮನಿಸಬೇಕಾದ ಸಂಗತಿ. ಒಂದು ಕಾಲದಲ್ಲಿ ಪಂಜಾಬ್ ರಾಜ್ಯದಲ್ಲಿ ಮಿತಿ ಮೀರುತ್ತಿದ್ದ ಈ ಮಾದಕ ದ್ರವ್ಯಗಳ ಸೇವನೆ ಪರಿಣಾಮ ಚುನಾವಣೆಗಳಲ್ಲಿ ಚರ್ಚೆಯ ವಿಷಯವೂ ಆಗಿತ್ತು. ಪಂಜಾಬ್ ರಾಜ್ಯದಲ್ಲಿ ಐದು ವರ್ಷಗಳ ಹಿಂದೆ ಆವರಿಸಿದ್ದ ಪರಿಸ್ಥಿತಿ ಈಗ ಕರ್ನಾಟಕದಲ್ಲಿ ಉದ್ಭವಿಸಿದೆ ಎನ್ನಲು ಬೆಂಗಳೂರು ಹೊರವಲಯದ ಹೆಬ್ಬಗೋಡಿ ಸಮೀಪದ ಫಾರಂ ಹೌಸ್‌ನಲ್ಲಿ ಜರುಗಿರುವ ರೇವ್ ಪಾರ್ಟಿಯೇ ತಾಜಾ ನಿದರ್ಶನ.
ಮಾದಕ ದ್ರವ್ಯಗಳ ಜಾಲ ಕೇವಲ ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಇದೊಂದು ಜಾಗತಿಕ ಜಾಲ. ಉತ್ತರ ಅಮೆರಿಕದ ಪ್ರದೇಶದಲ್ಲಿ ಸರ್ಕಾರಗಳನ್ನು ಉರುಳಿಸುವ ಹಾಗೂ ಸೃಷ್ಟಿಸುವ ಸಾಮರ್ಥ್ಯವನ್ನು ಈ ಮಾದಕ ದಂಧೆಕೋರರು ಪಡೆದುಕೊಂಡಿದ್ದಾರೆ ಎಂಬುದು ಅವರ ಪ್ರಭಾವದ ದಿಕ್ಸೂಚಿ. ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ಅಕ್ರಮವಾಗಿ ತಲುಪುವ ಈ ಮಾದಕ ದ್ರವ್ಯಗಳನ್ನು ವ್ಯವಸ್ಥಿತವಾಗಿ ದೇಶದ ವಿವಿಧ ಭಾಗಗಳಿಗೆ ಸರಬರಾಜು ಮಾಡುವ ಜಾಲವೇ ಇದೆ. ಇನ್ನು ಕರ್ನಾಟಕದ ವಿಚಾರಕ್ಕೆ ಬಂದರೆ ನೆರೆಯ ಆಂಧ್ರ ಪ್ರದೇಶದ ಗುಂಟೂರಿನಿಂದ ಸರಬರಾಜಾಗುವ ಗಾಂಜಾ ಸೊಪ್ಪಿನ ವಹಿವಾಟು ಉತ್ತರ ಕರ್ನಾಟಕ ಭಾಗದಲ್ಲಿ ಯಾವ ರೀತಿ ವ್ಯಾಪಕವಾಗಿ ಹಬ್ಬಿದೆ ಎಂಬ ಖಚಿತ ನೆಲೆಯ ವಿವರಗಳನ್ನು ಸಂಯುಕ್ತ ಕರ್ನಾಟಕ ಶುಕ್ರವಾರದ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗಿರುವ ವಿಶೇಷ ವರದಿಯಲ್ಲಿ ಕಾಣಬಹುದು. ಯುವ ತಲೆಮಾರು ಮಾದಕ ದ್ರವ್ಯಗಳ ಆಕರ್ಷಣೆಗೆ ಒಳಗಾಗಿ ದಾರಿ ತಪ್ಪಿದ ಮಕ್ಕಳಾಗಿ ಬದಲಾಗುತ್ತಿರುವ ಬೆಳವಣಿಗೆಯ ಹಿಂದಿನ ಸಾಮಾಜಿಕ ಸ್ಥಿತಿಗತಿಗಳ ದಿಕ್ಸೂಚಿಯನ್ನು ಈ ವರದಿಯ ಮೂಲಕ ಗುರುತಿಸಬಹುದು. ಇಂತಹ ವ್ಯವಸ್ಥಿತ ಜಾಲ ನಿಸೂರಾಗಿ ಕಾರ್ಯ ನಿರ್ವಹಿಸಲು ಪೊಲೀಸರು ಹಾಗೂ ಜಾರಿ ಪ್ರಕ್ರಿಯೆ ನೋಡಿಕೊಳ್ಳುವ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಕಾರಣ. ಜೊತೆಗೆ ಪೊಲೀಸರು ಕೂಡಾ ಈ ದಂಧೆಯಲ್ಲಿ ಶಾಮೀಲಾಗಿರುವ ಸಾಧ್ಯತೆಗಳೂ ಕೂಡಾ ಇರಬಹುದು. ಸಮಾಜಕ್ಕೆ ಕಂಟಕವಾಗುವ ಇಂತಹ ದಂಧೆಯನ್ನು ಬಗ್ಗುಬಡಿಯುವ ನಿಟ್ಟಿನಲ್ಲಿ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ರಾಜಕೀಯ ಸಂಕಲ್ಪ ಪ್ರದರ್ಶಿಸದೆ ಯಥಾ ಪ್ರಕಾರದ ನಿಲುವುಗಳನ್ನು ಪ್ರಕಟಿಸಿ ಸುಮ್ಮನಾಗುತ್ತಿರುವ ಧೋರಣೆ ಪಟ್ಟಭದ್ರರ ಬಲವರ್ಧನೆಗೆ ಮತ್ತಷ್ಟು ಕುಮ್ಮಕ್ಕು ಸಿಕ್ಕಿದಂತಾಗುತ್ತದೆ. ರಾಜ್ಯದ ಜಿಲ್ಲಾ ಕೇಂದ್ರಗಳಷ್ಟೇ ಅಲ್ಲ ಪಟ್ಟಣ ಪ್ರದೇಶಗಳಲ್ಲಿಯೂ ಕೂಡಾ ಈ ಮಾದಕ ದ್ರವ್ಯಗಳ ಮಾರಾಟ ಜಾಲ ಕಾರ್ಯ ನಿರ್ವಹಿಸುತ್ತಿರುವ ಸಾಧ್ಯತೆಗಳಿವೆ. ಇನ್ನು ರಾಜಧಾನಿ ಬೆಂಗಳೂರಿನ ಬಗ್ಗೆಯಂತೂ ಎಷ್ಟು ಹೇಳಿದರೂ ಕಡಿಮೆಯೇ. ರೇವ್ ಪಾರ್ಟಿಗಳನ್ನು ಏರ್ಪಡಿಸಿ ಶ್ರೀಮಂತರನ್ನು ಆಹ್ವಾನಿಸುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ತೆಲುಗು ಚಿತ್ರರಂಗದ ಅನೇಕ ಮಂದಿ ಇಂತಹ ರೇವ್ ಪಾರ್ಟಿಗಳಲ್ಲಿ ಪಾಲ್ಗೊಂಡಿರುವ ವರದಿಗಳಿವೆ. ಹೆಬ್ಬಗೋಡಿಯ ಪಾರ್ಟಿಯಲ್ಲೇ ನಟಿ ಹೇಮಾ ಸೇರಿದಂತೆ ಹಲವಾರು ಮಂದಿ ನಟ ನಟಿಯರು ಪಾಲ್ಗೊಂಡಿದ್ದರು. ಆದರೆ, ಈ ವಿವರಗಳನ್ನು ಬಹಿರಂಗಪಡಿಸಲು ಪೊಲೀಸರಿಗೆ ಅದೇಕೋ ಸಂಕೋಚ ಅಡ್ಡಿಯಾದದ್ದು ಅರ್ಥವಾಗದ ಸಂಗತಿ. ಚಿತ್ರರಂಗದವರು ಹಾಗೂ ಶ್ರೀಮಂತರಲ್ಲದೆ ಸಾಮಾನ್ಯರು ಇಂತಹ ರೇವ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರೆ ಪೊಲೀಸರು ಇದೇ ರೀತಿಯ ಸಂಕೋಚ ಪ್ರವೃತ್ತಿಯನ್ನು ಅನುಸರಿಸುತ್ತಿದ್ದರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕುವುದು ಕಷ್ಟ.
ಭಾವತೀವ್ರತೆಯ ಇನ್ನೊಂದು ಮುಖವೇ ಉತ್ಕಟತೆ. ಗಂಭೀರವಾದ ವಿಚಾರಗಳನ್ನು ಆಲಿಸಿದಾಗ, ಉತ್ತಮ ಸಂಗೀತವನ್ನು ಆನಂದಿಸುವಾಗ, ಒಳ್ಳೆಯ ಊಟವನ್ನು ಸಂಭ್ರಮಿಸುವಾಗ, ಇಷ್ಟದೇವರ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾದಾಗ ಭಾವತೀವ್ರತೆಗೆ ಒಳಗಾಗಿ ಉತ್ಕಟತೆ ತಲೆದೋರುವುದು ಸ್ವಾಭಾವಿಕ. ಇಂತಹ ಉತ್ಕಟತೆಯನ್ನು ಕೃತಕ ಮಾರ್ಗದಲ್ಲಿ ಪಡೆಯುವ ವಿಧಾನವೆಂದರೆ ಮದ್ಯ ಹಾಗೂ ಮಾದಕ ದ್ರವ್ಯಗಳ ಸೇವನೆಯ ಮೂಲಕ. ಮದ್ಯದ ನಶೆ ನೆತ್ತಿಗೇರಲು ಸಮಯ ಬೇಕು. ಈ ನಶೆಯ ಅವಧಿ ಕೂಡಾ ಕಡಿಮೆ. ಆದರೆ, ಈ ಮಾದಕ ದ್ರವ್ಯಗಳ ಪರಿಣಾಮ ಹಾಗಲ್ಲ. ಮಾದಕ ದ್ರವ್ಯಗಳ ಸೇವನೆ ಬೇರೆಯವರಿಗೆ ವಾಸನೆಯಿಂದಾಗಲೀ ಅಥವಾ ವರ್ತನೆಯಿಂದಾಗಲೀ ಸುಲಭಕ್ಕೆ ಗೊತ್ತಾಗುವುದಿಲ್ಲ. ಹೀಗಾಗಿ ಹೆಚ್ಚಿನ ಪ್ರಮಾಣದ ಯುವಕರು ಮಾದಕ ದ್ರವ್ಯಗಳ ದಾಸರಾಗುತ್ತಿರುವ ಬೆಳವಣಿಗೆ ಹೆಚ್ಚಾಗುತ್ತಿದೆ.
ದೇಶದ ವಿಚಾರ ಹೇಗೂ ಇರಲಿ, ಕರ್ನಾಟಕದಲ್ಲಿ ಈ ಮಾದಕ ದ್ರವ್ಯಗಳ ದಂಧೆಯನ್ನು ಬಗ್ಗುಬಡಿಯುವ ನಿಟ್ಟಿನಲ್ಲಿ ಸರ್ಕಾರ ವಿಶೇಷ ಕಾರ್ಯಪಡೆಯನ್ನು ರಚಿಸಿ ಯುದ್ದೋಪಾದಿಯಲ್ಲಿ ಅರಿವು ಹಾಗೂ ಕಾರ್ಯಾಚರಣೆಯ ಮೂಲಕ ಸಮಾಜದಲ್ಲಿ ಬೆಳಕನ್ನು ಮೂಡಿಸುವ ಕೆಲಸವನ್ನು ಆದ್ಯತೆಯ ಮೇರೆಗೆ ಮಾಡುವುದು ಅತ್ಯಗತ್ಯ. ಇದು ನಿಜವಾದ ಅರ್ಥದಲ್ಲಿ ಸಮಾಜಮುಖಿ ಕಾಯಕ.

Next Article