ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಪಿತ್ರೋಡ ಅಧಿಕ ಪ್ರಸಂಗತನ

02:00 AM May 09, 2024 IST | Samyukta Karnataka

ಸ್ಯಾಮ್ ಪಿತ್ರೋಡ ರಾಜೀವಗಾಂಧಿ ಕಾಲದಲ್ಲಿ ಹಲವು ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗಳಿಗೆ ಕಾರಣಕರ್ತರಾಗಿದ್ದರು. ಅಮೇಲೆ ನೇಪಥ್ಯಕ್ಕೆ ಸರಿದಿದ್ದರು. ಈಗ ಮತ್ತೆ ತಮ್ಮ ವಿವಾದಾತ್ಮಕ ಹೇಳಿಕೆಗಳ ಮೂಲಕ ಜನರ ಗಮನ ಸೆಳೆಯಲು ಆರಂಭಿಸಿದ್ದಾರೆ. ಪಿತ್ರೋಡ ಮೂಲತಃ ರಾಜಕಾರಣಿಯಲ್ಲ. ತಂತ್ರಜ್ಞ. ಹೀಗಾಗಿ ಇವರಿಗೆ ರಾಜಕೀಯ ಪಟ್ಟುಗಳು ತಿಳಿದಿರುವುದಿಲ್ಲ. ಇಂಥವರು ಹೇಳಿಕೆ ನೀಡಿದಾಗ ಅದು ಅಧಿಕಪ್ರಸಂಗವಾಗುತ್ತದೆಯೇ ಹೊರತು ಯಾವುದೇ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗುವುದಿಲ್ಲ.
ಇತ್ತೀಚೆಗೆ ಅವರು ಅಮೆರಿಕದಲ್ಲಿರುವ ತೆರಿಗೆಯನ್ನು ಪ್ರಸ್ತಾಪಿಸಿ ಯಾರೇ ನಿಧನರಾದರೂ ಅವರ ಅರ್ಧ ಆಸ್ತಿ ಸರ್ಕಾರಕ್ಕೆ ಹೋಗುತ್ತದೆ. ಅದನ್ನು ಇಲ್ಲೂ ಜಾರಿಗೆ ತರಬೇಕು ಎಂದು ಹೇಳಿದ್ದು ಮೋದಿ ಅವರ ಟೀಕೆಗೆ ಗ್ರಾಸವಾಯಿತು. ಆಗ ಕಾಂಗ್ರೆಸ್ ಮುಜುಗರಕ್ಕೆ ಒಳಗಾಗಿ ಪಿತ್ರೋಡ ಹೇಳಿಕೆಯಿಂದ ದೂರ ಸರಿಯಿತು. ಸತ್ತವರ ಆಸ್ತಿಯ ಮೇಲೂ ತೆರಿಗೆ ವಿಧಿಸುತ್ತಾರೆ ಎಂಬುದು ಹಲವರನ್ನು ಕೆರಳಿಸಿತು. ಕೊನೆಗೆ ಕಾಂಗ್ರೆಸ್ ಇದು ನಮ್ಮ ಅಜೆಂಡಾದಲ್ಲಿಲ್ಲ ಎಂದು ಸ್ಪಷ್ಟೀಕರಣ ನೀಡಬೇಕಾಗಿ ಬಂದಿತು. ಈ ವಿವಾದ ಜನರ ಮನಸ್ಸಿನಿಂದ ದೂರಸರಿಯುವ ಮುನ್ನವೇ ಉತ್ತರ ಭಾರತದವರು ಅರಬ್ಬರನ್ನು ಹೋಲುತ್ತಾರೆ, ಈಶಾನ್ಯ ಭಾಗದವರು ಚೀನೀಯರು ಮತ್ತು ದಕ್ಷಿಣದವರು ಆಫ್ರಿಕನ್ ರೀತಿ ಇದ್ದಾರೆ ಎಂದು ಹೇಳಿ ಗೊಂದಲ ಮೂಡಿಸಿದ್ದಾರೆ. ಇದರಿಂದ ಮತ್ತೆ ಜನರ ಭಾವನೆ ಕೆರಳಿದೆ. ಇಂಥ ಹೇಳಿಕೆಗಳಿಂದ ಕಾಂಗ್ರೆಸ್ ವರ್ಚಸ್ಸು ಕಡಿಮೆಯಾಗುತ್ತದೆಯೇ ಹೊರತು ಮತ್ತೇನೂ ಆಗುವುದಿಲ್ಲ. ಈಗಾಗಲೇ ದೇಶಾದ್ಯಂತ ಹಲವು ವಿವಾದಗಳು ತಲೆ ಎತ್ತಿವೆ. ಕಾಂಗ್ರೆಸ್ ಪಕ್ಷದ ಚುನಾವಣೆ ಪ್ರಣಾಳಿಕೆಯನ್ನು ಹಿಡಿದು ಎಳೆಎಳೆಯಾಗಿ ಮೋದಿ ಹಿಂಜಿ ಜನರ ಮುಂದಿಡುತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ಬಿಜೆಪಿ ಮೇಲೆ ವಾಗ್ದಾಳಿ ನಡೆಸುವುದು ಕಷ್ಟವಾಗಿದೆ. ಹೀಗಿರುವಾಗ ಪಿತ್ರೋಡ ತಮ್ಮ ಮಾತುಗಳ ಮೂಲಕ ಹೊಸ ವಿವಾದಗಳನ್ನು ಸೃಷ್ಟಿಸುತ್ತಿರುವುದು ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗುತ್ತಿದೆ.
ಹಿಂದೆ ಒಂದು ಕಾಲದಲ್ಲಿ ಪ್ರಚಾರ ಪಡೆಯುವುದರಲ್ಲಿ ಮುಂಚೂಣಿಯಲ್ಲಿದ್ದವರಿಗೆ ಈಗ ಹಿಂದೆ ಸರಿಯಲು ಮನಸ್ಸು ಒಪ್ಪುವುದಿಲ್ಲ. ಪಿತ್ರೋಡ ಕೂಡ ಇದೇ ಮನಸ್ಥಿತಿಯಲ್ಲಿದ್ದಾರೆ. ಜನರ ಗಮನ ಸೆಳೆಯುವುದಕ್ಕೆ ಏನೇನೋ ಹೇಳಿಕೆ ನೀಡುವುದು ಚುನಾವಣೆ ಕಾಲದಲ್ಲಿ ಉಪಯೋಗವಾಗುವುದಕ್ಕಿಂತ ಅಪಾಯವಾಗುವುದೇ ಹೆಚ್ಚು. ಮೋದಿ ಈಗ ಕಾಂಗ್ರೆಸ್ ಮೇಲೆ ಪ್ರಮುಖ ಅಸ್ತçವಾಗಿ ಮುಸ್ಲಿಮರಿಗೆ ಮೀಸಲಾತಿ ಹೆಚ್ಚಿಸುತ್ತಿದ್ದಾರೆ ಎಂದು ಆರೋಪಿಸುತ್ತಿದ್ದರೆ, ಕಾಂಗ್ರೆಸ್‌ನವರು ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನೇ ಬದಲಿಸಿ ಬಿಡುತ್ತಾರೆ. ಇನ್ನು ಚುನಾವಣೆ ನಡೆಯುವುದೇ ಇಲ್ಲ. ಸರ್ವಾಧಿಕಾರಿ ಆಡಳಿತ ಜಾರಿಗೆ ಬರುತ್ತದೆ ಎಂದು ಬಿಂಬಿಸುತ್ತಿದ್ದಾರೆ. ಇದರ ನಡುವೆ ಪಿತ್ರೋಡ ಮಾತುಗಳು ಅಧಿಕಪ್ರಸಂಗವಾಗಿ ಕಂಡು ಬರುತ್ತಿದೆ.
ಕಾಂಗ್ರೆಸ್ ೧೫೦ ವರ್ಷಗಳೂ ಮೀರಿ ಬೆಳೆದು ಬಂದಿದ್ದರೂ ಯುವ ಪೀಳಿಗೆ ನಾಯಕರು ಪಿತ್ರೋಡ ಮಾತುಗಳನ್ನು ಒಪ್ಪುವುದಿಲ್ಲ ಎಂಬುದನ್ನು ಆದಷ್ಟು ಬೇಗ ತಿಳಿದರೆ ಒಳಿತು. ಹಿಂದೆ ನೆಹರೂ ಕುಟುಂಬಕ್ಕೆ ನಿಷ್ಠರಾಗಿದ್ದರೆ ಸಾಕು. ಅವರು ಪಕ್ಷದ ಮುಂಚೂಣಿಯಲ್ಲಿರುತ್ತಿದ್ದರು. ಈಗ ರಾಹುಲ್ ಗಾಂಧಿಯೇ ಮುಂಚೂಣಿಯಲ್ಲಿರಲು ಬಯಸುತ್ತಿಲ್ಲ ಎಂದಾಗ ಪಿತ್ರೋಡ ಅಂಥವರಿಗೆ ಅವಕಾಶ ಇರುವುದಿಲ್ಲ. ಇದನ್ನು ಅರಿತು ಜಾಣತನದಿಂದ ಹಿಂದೆ ಸರಿಯುವುದು ಸೂಕ್ತ. ಈಗಾಗಲೇ ರಾಜೀವಗಾಂಧಿ ಕಾಲದ ನಾಯಕರು ಹಿಂದೆ ಸರಿದಿದ್ದಾರೆ. ನೆಹರೂ ಕುಟುಂಬಕ್ಕೆ ನಿಷ್ಠರಾಗಿರುವುದೇ ನಾಯಕರಾಗುವುದಕ್ಕೆ ಅರ್ಹತೆ ಎಂಬ ಮಾನದಂಡ ಈಗ ಉಳಿದಿಲ್ಲ. ಜನರ ಹಾಗೆ ಕಾಂಗ್ರೆಸ್ ಕೂಡ ಬದಲಾವಣೆ ಬಯಸುತ್ತಿದೆ. ಪಿತ್ರೋಡ ಕಾಲದಲ್ಲಿದ್ದ ತಾಂತ್ರಿಕ ಬಡತನ ಈಗ ಭಾರತದಲ್ಲಿಲ್ಲ. ನಮ್ಮ ಯುವ ಪೀಳಿಗೆ ಜಗತ್ತಿಗೆ ಹೊಸ ದಿಕ್ಕು ತೋರಿಸುವ ಮಟ್ಟದಲ್ಲಿ ಬೆಳೆಯುತ್ತಿದ್ದಾರೆ. ಇದನ್ನು ಪಿತ್ರೋಡ ಅರಿತುಕೊಳ್ಳುವುದು ಅಗತ್ಯ. ಇಂಟರ್‌ನೆಟ್ ಯುಗದಲ್ಲಿ ಭಾರತ ದಾಪುಗಾಲು ಇರಿಸುವಾಗ ದಕ್ಷಿಣದವರು ಆಫ್ರಿಕಾದವರ ಹಾಗೆ ಇದ್ದಾರೆ ಎನ್ನುವುದು ಅವರ ಸಂಕುಚಿತ ಮನೋಭಾವವನ್ನು ತೋರಿಸುತ್ತದೆ. ಇಡೀ ಜಗತ್ತು ಒಂದಾಗುತ್ತಿರುವ ವರ್ಣಬೇಧ ನೀತಿಗೆ ಬೆಲೆ ಇಲ್ಲ. ದುಬೈಗೆ ಹೋಗಿ ನೋಡಿ ಎಲ್ಲ ಬಣ್ಣದ ಜನ ಒಂದಾಗಿ ದುಡಿಯುತ್ತಾರೆ, ಜೀವನದಸುಖ ಕ್ಷಣಗಳನ್ನು ಅನುಭವಿಸುತ್ತಾರೆ. ಹೀಗಿರುವಾಗ ಆರ್ಥಿಕ ಮುನ್ನಡೆಯಲ್ಲಿ ಬಣ್ಣ, ಭಾಷೆ, ಧರ್ಮ, ಆಹಾರ ಪದ್ಧತಿ ಅಡ್ಡಿ ಬರುವುದಿಲ್ಲ. ಇಂಥ ವಿಶ್ವಬಂಧು ಯುಗದಲ್ಲಿ ಇಡೀ ಜಗತ್ತು ಚಲಿಸುತ್ತಿರುವಾಗ ಪಿತ್ರೋಡ ಮಾತುಗಳು ಹಾಸ್ಯಾಸ್ಪದವಾಗಿ ಕಂಡಲ್ಲಿ ಆಶ್ಚರ್ಯವೇನೂ ಅಲ್ಲ.
ಪಿತ್ರೋಡ ಒಂದುಕಾಲಕ್ಕೆ ಪ್ರಗತಿಪರ ಚಿಂತಕರಾಗಿದ್ದರು. ರಾಜೀವ ಗಾಂಧಿ ಇವರ ಸಲಹೆ ಪಡೆಯುತ್ತಿದ್ದರು. ಈಗ ಜಗತ್ತು ಹಾಗೂ ಭಾರತ ಪಿತ್ರೋಡ ಅವರ ಚಿಂತನೆಗಳಿಗಿಂತ ಮುಂದೆ ಸಾಗುತ್ತಿದೆ. ಅದೇ ವೇಗದಲ್ಲಿ ಚಿಂತಿಸುವ ಜನ ಬೇಕಿದ್ದಾರೆ. ಅಂಬಾನಿ-ನಂದನ್ ನಿಲೇಕಣಿ-ನಾರಾಯಣಮೂರ್ತಿ ಇಡೀ ದೇಶದ ಬಂಡವಾಳ ಹೂಡಿಕೆಯ ಬಗ್ಗೆ ಹೊಸ ಆಲೋಚನೆಗಳನ್ನು ಜನರ ಮುಂದಿಡುತ್ತಿದ್ದಾರೆ. ಅವರು ಹೊಸ ಪೀಳಿಗೆಗೆ ಹೊಸ ದಾರಿಯನ್ನು ತೋರುತ್ತಿದ್ದಾರೆ. ಈ ದಾರಿಗಳ ಮೌಲ್ಯಮಾಪನ ನಡೆಯಬೇಕಿದೆ. ಇಂಥ ಸಂದರ್ಭದಲ್ಲಿ ಪಿತ್ರೋಡ ಮಾತುಗಳು ಅಪ್ರಾಸಂಗಿಕ ಎಂದೆನಿಸುವುದು ಸಹಜ. ಜನರ ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಮುನ್ನ ಪಿತ್ರೋಡ ತಮ್ಮ ಮಾತುಗಳನ್ನು ಹಿಂದಕ್ಕೆ ಪಡೆದು ವಿವೇಕಯುತವಾಗಿ ವರ್ತಿಸುವುದು ಸೂಕ್ತ.

Next Article