For the best experience, open
https://m.samyuktakarnataka.in
on your mobile browser.

ಸಾಂಸ್ಕೃತಿಕ ತೇರಿಗೆ ಚಾಲನೆ

02:00 AM Jun 15, 2024 IST | Samyukta Karnataka
ಸಾಂಸ್ಕೃತಿಕ ತೇರಿಗೆ ಚಾಲನೆ

ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಇದೀಗ ಲವಲವಿಕೆಯ ವಾತಾವರಣ. ಸುಮಾರು ವರ್ಷಕ್ಕೂ ಹೆಚ್ಚಿನ ಸಮಯದಿಂದ ನನೆಗುದಿಗೆ ಬಿದ್ದಿದ್ದ ಚಟುವಟಿಕೆಗಳಿಗೆ ಮರುಜೀವ ಬರುವ ವಾತಾವರಣ ಸರ್ಕಾರದಿಂದ ಸೃಷ್ಟಿಯಾಗಿರುವುದು ಇದಕ್ಕೆ ಮುಖ್ಯವಾದ ಕಾರಣ. ಸುಮಾರು ಮೂರು ತಿಂಗಳ ಹಿಂದೆ ರಚನೆಯಾಗಿದ್ದ ವಿವಿಧ ಕ್ಷೇತ್ರಗಳ ಅಕಾಡೆಮಿಗಳ ಅಧ್ಯಕ್ಷರು ಹಾಗೂ ಸದಸ್ಯರು ಅಧಿಕಾರ ಸ್ವೀಕರಿಸಿರುವ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕ್ಷೇತ್ರದ ರಥ ಎಂದು ಗುರುತಿಸಬಹುದಾದ ವ್ಯವಸ್ಥಿತ ಚಟುವಟಿಕೆ ಇನ್ನು ಗರಿಗಟ್ಟಲು ಮುಕ್ತ ಅವಕಾಶ. ನಾಡಿನ ಸಾಂಸ್ಕೃತಿಕ ಕ್ಷೇತ್ರದ ಲವಲವಿಕೆ ಆ ಪ್ರದೇಶದ ಒಟ್ಟಾರೆ ಜನತೆಯ ಮನೋಧರ್ಮದ ದಿಕ್ಸೂಚಿ. ಈ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಆರಂಭವಾಗಿರುವ ಈ ಚಟುವಟಿಕೆ ಸ್ವಾಗತಾರ್ಹ ಬೆಳವಣಿಗೆ.
ಅಕಾಡೆಮಿಗಳ ಅವಧಿ ಮೂರು ವರ್ಷ. ಈ ಅವಧಿಯಲ್ಲಿ ಕಾರ್ಯಯೋಜನೆಯನ್ನು ರೂಪಿಸಿ ಆಯಾ ಕ್ಷೇತ್ರಗಳಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಪ್ರಯೋಗಗಳ ರೂಪದಲ್ಲಿ ಉತ್ತೇಜನ ಕೊಡಲು ಅಕಾಡೆಮಿಗಳು ಇನ್ನು ವಿಳಂಬವಿಲ್ಲದೆ ಕಾರ್ಯ ನಿರ್ವಹಿಸುವುದು ಅಪೇಕ್ಷಿತ ಕ್ರಮ. ಏಕೆಂದರೆ, ಈಗಾಗಲೇ ಮೂರು ತಿಂಗಳ ಕಾಲ ಯಾವುದೇ ಚಟುವಟಿಕೆಯಾಗದಂತಹ ಸ್ಥಿತಿ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ನೀತಿ ಸಂಹಿತೆ ಜಾರಿಯಿಂದಾಗಿ ಸಾಧ್ಯವಾಗಿರಲಿಲ್ಲ. ಈ ಎಲ್ಲ ಅಡೆತಡೆಗಳು ನಿವಾರಣೆಯಾಗಿರುವ ಹಿನ್ನೆಲೆಯಲ್ಲಿ ಅಕಾಡೆಮಿಗಳು ಕಾರ್ಯಪ್ರವೃತ್ತವಾಗುವುದೇ ಅವುಗಳ ಕರ್ತವ್ಯ.
ಮೊದಲು ಘೋಷಣೆಯಾಗಿದ್ದ ಅಕಾಡೆಮಿಗಳ ಪೈಕಿ ಕೆಲವು ಮಾರ್ಪಾಟುಗಳಾಗಿರುವುದು ಅಚ್ಚರಿಯ ಸಂಗತಿ. ಸಂಗೀತ ಹಾಗೂ ನೃತ್ಯ ಅಕಾಡೆಮಿಗೆ ಕೃಪಾ ಪಡಕೆ ಬದಲಿಗೆ ಶುಭ ಧನಂಜಯರ್ ಅವರನ್ನು ನೇಮಿಸಲು ಕಾರಣವೇನೆಂಬುದು ತಿಳಿಯುತ್ತಿಲ್ಲ. ಹಾಗೆ ನೇಮಿಸುವುದಾಗಿದ್ದರೆ ಮೊದಲೇ ಶುಭ ಧನಂಜಯ್ ಅವರನ್ನು ಈ ಸ್ಥಾನಕ್ಕೆ ನೇಮಿಸಬಹುದಾಗಿತ್ತು. ಇದೇ ರೀತಿಯಲ್ಲಿ ನಾಟಕ ಅಕಾಡೆಮಿಯ ಸದಸ್ಯರ ಬದಲಾವಣೆ ಆಗಿದೆ. ಅಕಾಡೆಮಿಗಳ ರಚನೆ ಹಾಗೂ ಕಾರ್ಯ ನಿರ್ವಹಣೆಯಲ್ಲಿ ರಾಜಕಾರಣ ನುಸುಳುವುದು ಒಳ್ಳೆಯ ಬೆಳವಣಿಗೆಯಲ್ಲ. ಸರ್ಕಾರ ಯಾವುದೇ ಇರಲಿ. ನೇಮಕಗೊಳ್ಳುವ ಅರ್ಹ ಕಲಾವಿದರು ಯಾವ ಪಂಥದವರೇ ಆಗಿರಲಿ ಅಕಾಡೆಮಿಯ ಪದಾಧಿಕಾರಿಯಾಗುವ ಅರ್ಹತೆ ಇದ್ದವರಿಗೆ ಮಾತ್ರ ಸರ್ಕಾರ ಮಣೆ ಹಾಕಿದರೆ ಆಗ ಯಾವುದೇ ವಿವಾದ ಉದ್ಭವಿಸುವುದಿಲ್ಲ. ಈ ಹಿಂದಿನ ಸರ್ಕಾರದ ಅವಧಿಯಲ್ಲಿಯೂ ಕೂಡಾ ಒಂದೇ ಪಂಥ ಹಾಗೂ ವಿಚಾರಧಾರೆಯ ಕಲಾವಿದರನ್ನು ಗುರುತಿಸಿ ಅಕಾಡೆಮಿಗಳಿಗೆ ನೇಮಕ ಮಾಡಿದ್ದರಿಂದ ನಿರೀಕ್ಷಿತ ಪ್ರಮಾಣದ ಚಟುವಟಿಕೆ ಸಾಧ್ಯವಾಗಿರಲಿಲ್ಲ. ಹಾಗೆಯೇ ಜರುಗಿದ ಚಟುವಟಿಕೆಗಳಿಗೆ ಸಾರ್ವಜನಿಕ ಮಾನ್ಯತೆಯೂ ನಿರೀಕ್ಷಿತ ಪ್ರಮಾಣದಲ್ಲಿ ಇರಲಿಲ್ಲ. ಅಕಾಡೆಮಿಗಳಿಗೆ ನೇಮಿಸುವಾಗ ಅಸಲಿ ವಜ್ರಗಳಂತಹ ಕಲಾವಿದರು ಹಾಗೂ ಬರಹಗಾರರನ್ನು ಗುರುತಿಸುವ ಒಳಗಣ್ಣು ಸರ್ಕಾರಕ್ಕಿರಬೇಕು. ಈ ನೇಮಕಾತಿ ವಿವಾದಮುಕ್ತವಾಗಿರಬೇಕು ಎಂದರೆ ಅಕಾಡೆಮಿಗಳ ನೇಮಕಾತಿಗೆ ಪ್ರತ್ಯೇಕವಾದ ಆಯ್ಕೆ ಸಮಿತಿ ರಚನೆಯಾಗಬೇಕು. ಆಯ್ಕೆ ಸಮಿತಿಯ ಶಿಫಾರಸುಗಳನ್ನು ಪರಿಶೀಲಿಸಿ ಸರ್ಕಾರ ಅಂತಿಮವಾಗಿ ನೇಮಕಾತಿ ಆದೇಶವನ್ನು ಹೊರಡಿಸಿದರೆ ಆಗ ಟೀಕೆ ಟಿಪ್ಪಣಿಗಳು ಎದುರಾಗುವುದು ಕಡಿಮೆಯಾಗಬಹುದು.
ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರಕ್ಕೆ ರಾಷ್ಟçಮಟ್ಟದಲ್ಲಿ ಉತ್ತಮ ಸ್ಥಾನವಿದೆ. ಎಂಟು ಜ್ಞಾನಪೀಠಗಳ ಪುರಸ್ಕೃತರ ನಾಡು ಈ ಕರ್ನಾಟಕ. ಕನ್ನಡ ರಂಗಭೂಮಿಗೆ ಅಂತಾರಾಷ್ಟ್ರೀಯ ಮನ್ನಣೆ ತಂದುಕೊಟ್ಟಿರುವ ಬೀಡು ಈ ಕರ್ನಾಟಕ. ಸಂಗೀತ ಕ್ಷೇತ್ರದಲ್ಲಿ ಸಮುದ್ರದಾಚೆಯಲ್ಲಿ ತರಂಗಗಳನ್ನು ಮೂಡಿಸಿ ಕನ್ನಡತನ ಮೂಡಿಸಿರುವ ಹೆಮ್ಮೆಯ ನಾಡು ಈ ಕನ್ನಡ ನಾಡು. ಇಂತಹ ವೈಭವದ ನಾಡಿನ ಸಂಸ್ಕೃತಿಯನ್ನು ಮತ್ತಷ್ಟು ಹೆಚ್ಚಿಸಲು ಸಾಧ್ಯವಾಗುವುದಾದರೆ ನಿಜಕ್ಕೂ ಅಕಾಡೆಮಿಗಳ ರಚನೆ ಸಾರ್ಥಕ.
ಕರ್ನಾಟಕದಲ್ಲಿ ಈ ಹಿಂದೆ ಅಕಾಡೆಮಿಗಳಿಗೆ ಶಿಕ್ಷಣ ಮಂತ್ರಿಗಳೇ ಅಧ್ಯಕ್ಷರಾಗಿರುತ್ತಿದ್ದ ಕಾಲವೂ ಒಂದಿತ್ತು. ಅದು ಬರಬರುತ್ತಾ ಬದಲಾಗಿ ಸಂಗೀತ, ನೃತ್ಯ ಹಾಗೂ ನಾಟಕ ಅಕಾಡೆಮಿಯಾಗಿ ಸೃಷ್ಟಿಯಾದ ನಂತರ ಕಲಾವಿದರ ನೇಮಕಾತಿ ಆರಂಭವಾಯಿತು. ಪ್ರತ್ಯೇಕ ಅಕಾಡೆಮಿಗಳ ರಚನೆಯ ಪರ್ವ ಆರಂಭವಾಗಿ ಒಂದು ಖಚಿತ ನೆಲೆಯಲ್ಲಿ ಚಟುವಟಿಕೆಗಳು ಆರಂಭವಾಗಲು ಕಾರಣವಾಗಿದ್ದು ರಾಮಕೃಷ್ಣ ಹೆಗಡೆ ಸರ್ಕಾರದ ಅವಧಿಯಲ್ಲಿ. ಆಗಿನ ಕನ್ನಡ ಸಂಸ್ಕೃತಿ ಮಂತ್ರಿಗಳಾಗಿದ್ದ ಎಂ.ಪಿ. ಪ್ರಕಾಶ್ ಹಾಗೂ ಡಾ. ಜೀವರಾಜ ಆಳ್ವ ಅವರು ತಮ್ಮ ಸಾಂಸ್ಕೃತಿಕ ಆಸಕ್ತಿಯಿಂದಾಗಿ ಈ ಕ್ಷೇತ್ರಗಳ ಬೆಳವಣಿಗೆಗೆ ಹೆಗಲು ಕೊಟ್ಟು ನಿಂತು ಚಟುವಟಿಕೆಗೆ ಸೀಮಿತವಾಗಿದ್ದ ಸಾಂಸ್ಕೃತಿಕ ವಲಯದಲ್ಲಿ ಚಳವಳಿ ಗರಿಗಟ್ಟುವಂತೆ ಮಾಡಿ ಹೊಸ ದಾರಿ ಸೃಷ್ಟಿಸಿದ್ದರು. ಈಗಲೂ ಕೂಡಾ ಹೊಸ ಚಳವಳಿ ಆರಂಭಿಸಲು ಕಾಲ ಪಕ್ವವಾಗಿದೆ. ಅಕಾಡೆಮಿಗಳು ಇಂತಹ ಸವಾಲನ್ನು ಅವಕಾಶದ ರೂಪದಲ್ಲಿ ಬಳಸಿಕೊಳ್ಳುವುದು ಅವುಗಳ ಕೈಯ್ಯಲೇ ಇದೆ.