ಸಂಭ್ರಮದ ಮೂರು ತೇರು ಉತ್ಸವಕ್ಕೆ ಮಳೆಯ ಸಿಂಚನ
ಉಡುಪಿ: ಮಕರ ಸಂಕ್ರಾಂತಿ ಶುಭ ದಿನದಂದು ದ್ವೈತ ಮತ ಸಂಸ್ಥಾಪಕ ಶ್ರೀ ಮಧ್ವಾಚಾರ್ಯರು ಉಡುಪಿಯಲ್ಲಿ ದ್ವಾರಕೆಯಿಂದ ಬಂದ ಶ್ರೀಕೃಷ್ಣನನ್ನು ಭಕ್ತರಿಗಾಗಿ ಪ್ರತಿಷ್ಠಾಪಿಸಿದರು ಎಂಬ ಐತಿಹ್ಯದ ಹಿನ್ನೆಲೆಯಲ್ಲಿ ಮಂಗಳವಾರ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ನೇತೃತ್ವದಲ್ಲಿ ಮೂರು ತೇರು ಉತ್ಸವ ನಡೆಯಿತು. ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಇದ್ದರು.
ಬ್ರಹ್ಮರಥದಲ್ಲಿ ಶ್ರೀಕೃಷ್ಣನ ಉತ್ಸವ ಮೂರ್ತಿ ಹಾಗೂ ಇತರ ಎರಡು ರಥಗಳಲ್ಲಿ ಅನಂತೇಶ್ವರ ಮತ್ತು ಚಂದ್ರೇಶ್ವರ ಹಾಗೂ ಮುಖ್ಯಪ್ರಾಣ ದೇವರ ಉತ್ಸವ ಮೂರ್ತಿಗಳನ್ನು ಇರಿಸಲಾಗಿತ್ತು. ಶ್ರೀಕೃಷ್ಣನ ಉತ್ಸವ ಮೂರ್ತಿಯನ್ನು ಚಿನ್ನದ ಪಲ್ಲಕಿಯಲ್ಲಿ ಕೃಷ್ಣ ದೇವಳದಿಂದ ವಾದ್ಯ ವೇದ ಘೋಷದೊಂದಿಗೆ ವೈಭವದ ಮೆರವಣಿಗೆಯಲ್ಲಿ ಹೊರತಂದು, ಮಧ್ವ ಸರೋವರದಲ್ಲಿ ತೆಪ್ಪೋತ್ಸವ ನಡೆಸಲಾಯಿತು. ಬಳಿಕ ರಥೋತ್ಸವ ನಡೆಯಿತು. ಗುಡುಗು ಸಿಡಿಲಿನ ಮಳೆ ಕೊಂಚ ಅಡ್ಡಯಾಯಿತಾದರೂ ಉತ್ಸವದ ಉತ್ಸಾಹಕ್ಕೆ ಕುಂದು ಬರಲಿಲ್ಲ. ಮಠದ ದಿವಾನ ನಾಗರಾಜ ಆಚಾರ್ಯ, ವಿದೇಶ ವ್ಯವಹಾರಗಳ ಕಾರ್ಯದರ್ಶಿ ಪ್ರಸನ್ನಾಚಾರ್ಯ ಸಹಕರಿಸಿದರು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ನೆರೆದಿದ್ದರು.
ನಾಳೆ ಚೂರ್ಣೋತ್ಸವ
ಬುಧವಾರ ಬೆಳಿಗ್ಗೆ 10 ಗಂಟೆಗೆ ಚೂರ್ಣೋತ್ಸವ (ಹಗಲು ರಥೋತ್ಸವ) ನಡೆಯಲಿದೆ. ಬಳಿಕ ಮಧ್ವಸರೋವರದಲ್ಲಿ ಅವಭೃತಸ್ನಾನ ನಡೆದು, ಏಳು ದಿನಗಳ ಸಪ್ತೋತ್ಸವಕ್ಕೆ ತೆರೆ ಬೀಳಲಿದೆ. ವೃಂದಾವನ ಶ್ರೀರಾಧಾರಮಣ ಮಂದಿರದ ಗೌಡೀಯ ಮಾಧ್ವ ಸಂಪ್ರದಾಯದ ಶ್ರೀಮನ್ಮಧ್ವಗೌಡೇಶ್ವರ ಆಚಾರ್ಯ ಡಾ.ಪುಂಡರೀಕ ಗೋಸ್ವಾಮಿ ಆಗಮಿಸುವರು.