ಸಂಭ್ರಮದ ಸಾರ್ವಜನಿಕ ಗಣೇಶೋತ್ಸವಕ್ಕೆ ಅಡ್ಡಿ ಸಹಿಸುವುದಿಲ್ಲ
ಮಂಗಳೂರು: ಇಡೀ ದೇಶ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿರುವ ಹೊತ್ತಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಅರ್ಥವಿಲ್ಲದ ನೀತಿ ನಿಯಮಗಳನ್ನು ಹೇರಿ ಹಿಂದೂಗಳಲ್ಲಿ ಇನ್ನಿಲ್ಲದ ಗೊಂದಲ ಸೃಷ್ಟಿಸುತ್ತಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ರವರು ಆಕ್ರೋಶ ವ್ಯಕ್ತಪಡಿಸಿದರು.
ಗಣೇಶೋತ್ಸವಕ್ಕೆ ಅನುಮತಿ ಬೇಕಾದರೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಗಣ್ಯರ-ಅತಿಥಿಗಳ ಹೆಸರು ಕೊಡಿ, ಅವರ ಮೊಬೈಲ್ ಸಂಖ್ಯೆ ಕೊಡಿ, ವಿಳಾಸ ಕೊಡಿ, ಟ್ಯಾಬ್ಲೋ ಎಷ್ಟು ಇರುತ್ತದೆ, ಎಲ್ಲಿಂದ ಬರುತ್ತದೆ, ಯಾವ ವಾಹನದಲ್ಲಿ ಬರುತ್ತದೆ, ಅದರ ದಾಖಲೆ ಕೊಡಿ, ಎಷ್ಟು ಜನ ಬರುತ್ತಾರೆ, ಎಂದೆಲ್ಲ ತೊಂದರೆ ಕೊಟ್ಟರೆ ಯಾವ ಹಬ್ಬ ತಾನೇ ಸಂಭ್ರಮದಿಂದ ಆಚರಿಸಲು ಸಾಧ್ಯ? ಇವೆಲ್ಲವೂ ಭಾರತದಲ್ಲೇ ಭಾರತದ ಸಂಸ್ಕೃತಿಯನ್ನು ಹೊಸಕಿ ಹಾಕುವ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಷಡ್ಯಂತ್ರವೆಂದು ಎಂತವರಿಗಾದರೂ ಅರ್ಥವಾಗುತ್ತದೆ. ಇಷ್ಟೆಲ್ಲಾ ಷರತ್ತುಗಳ ನಂತರವೂ ಗಣೇಶೋತ್ಸವದ ಒಂದು ಅನುಮತಿಗಾಗಿ ಆಯೋಜಕರನ್ನು ಹತ್ತಾರು ಬಾರಿ ಪೊಲೀಸ್ ಠಾಣೆ, ಪಾಲಿಕೆ, ಸ್ಥಳೀಯಾಡಳಿತ ಹೀಗೆ ಎಲ್ಲೆಡೆ ಅಲೆದಾಡಿಸುತ್ತಿರುವುದು ಯಾಕೆ? ಎಂದು ಶಾಸಕರು ಪ್ರಶ್ನಿಸಿದರು.
ಬಿಜೆಪಿ ಮೇಲಿನ ರಾಜಕೀಯ ಕೋಪಕ್ಕಾಗಿ ಗಣೇಶ ಹಬ್ಬಕ್ಕೆ ಅಡ್ಡಿಯುಂಟು ಮಾಡಲು ಹೊರಟಿದ್ದು ಕಾಂಗ್ರೆಸ್ಸಿನಲ್ಲಿರುವ ಹಿಂದುಗಳಿಗಾದರೂ ಸಹಿಸಲು ಸಾಧ್ಯವೇ? ಈ ಹಿಂದೆ ಮೊಘಲ್ ಆಡಳಿತದಲ್ಲಿ, ಬ್ರಿಟಿಷ್ ಆಡಳಿತದಲ್ಲಿ ಇದ್ದಂತಹ ಸರ್ಕಾರಕ್ಕೆ ಕಪ್ಪ ಕಾಣಿಕೆ ನೀಡುವ ಪದ್ಧತಿಯನ್ನು ಸಹ ಇಂದು ಸರ್ಕಾರ ಚಲನ್ ಕಟ್ಟಿಸಿಕೊಳ್ಳುವ ಮೂಲಕ ಆರಂಭಿಸಿರುವುದು ದುರಂತ.
ಈ ಸರ್ಕಾರದ ಹಿಂದೂ ವಿರೋಧಿ ನೀತಿಯು ಇಷ್ಟಕ್ಕೆ ನಿಂತಿಲ್ಲದೇ, ಗಣೇಶ ಚತುರ್ಥಿಯ ಪ್ರಸಾದ ತಯಾರಿಸಿ ಹಂಚಲೂ ಸಹ FSSAI(ಆಹಾರ ಸುರಕ್ಷತಾ ಗುಣಮಟ್ಟ ಇಲಾಖೆ) ಅನುಮತಿ ಪಡೆಯಬೇಕೆಂಬ ನಿಯಮ ರೂಪಿಸುವವರೆಗೆ ಬಂದು ನಿಂತಿದೆ.
ಭಕ್ತರು ಅತ್ಯಂತ ಭಕ್ತಿ ಹಾಗೂ ನಂಬಿಕೆಯಿಂದ ಪ್ರಸಾದ ಸ್ವೀಕರಿಸುಷ್ಟೇ ಶ್ರದ್ದೆಯಿಂದ ಪ್ರಸಾದವನ್ನೂ ಸಹ ತಯಾರಿಸಲಾಗುತ್ತದೆ. ಸ್ವಾತಂತ್ರ್ಯ ಪೂರ್ವದಿಂದಲೂ ಅತ್ಯಂತ ಶ್ರದ್ಧಾ ಭಕ್ತಿಯಿಂದ ಗಣೇಶೋತ್ಸವ ಆಚರಿಸುತ್ತಿರುವ ಆಯೋಜಕರಿಗೆ ಭಕ್ತರ ಸುರಕ್ಷತೆಯ ಬಗ್ಗೆ ಈ ಸರ್ಕಾರಕ್ಕಿಂತ ಹೆಚ್ಚು ಕಾಳಜಿ ಇದೆ. ಇಂತಹ ದುರುದ್ದೇಶಪೂರಿತ ಆದೇಶದಿಂದ ಕಲಿಯುವ ಅಗತ್ಯ ಹಿಂದೂ ಸಮಾಜಕ್ಕಿಲ್ಲ. ಇಂತಹ ನಿಯಮಗಳು ಹಿಂದೂಗಳಿಗೆ ಮಾತ್ರ ಯಾಕೆ? ಆ ನಿಯಮಗಳು ಬಿರಿಯಾನಿಗೆ ಅನ್ವಯಿಸುವುದಿಲ್ಲ ಯಾಕೆ? ನಿಗದಿತ ಸುರಕ್ಷತಾ ನೀತಿ ಅನುಸರಿಸಿದೇ ರಾಜಸ್ಥಾನದಿಂದ ಮಾಂಸಗಳನ್ನು ತಂದು ಮಾರುವವರಿಗೆ FSSAI ಪರವಾನಿಗೆ ಅಗತ್ಯವಿಲ್ಲ ಯಾಕೆ? ಕೇವಲ ಹಿಂದೂ ಹಬ್ಬಗಳ ಸಂದರ್ಭದಲ್ಲಿ ಮಾತ್ರ ಈ ಎಲ್ಲಾ ಕಟ್ಟುನಿಟ್ಟಿನ ನಿಯಮಗಳು ನೆನಪಾಗುವುದೇ?
ಒಂದೋ ಇಂತಹ ನಿಯಮಗಳನ್ನು ಕೂಡಲೇ ಹಿಂಪಡೆಯಿರಿ ಇಲ್ಲವೇ, ನೀವು ಹಿಂದೂ ವಿರೋಧಿಗಳು ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಳ್ಳಿರಿ. ಕೂಡಲೇ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿಯನ್ನು ಇಲ್ಲಿಗೆ ಕೈ ಬಿಟ್ಟು ಹಿಂದೂ ಧಾರ್ಮಿಕ ಭಾವನೆಗಳಿಗೆ ಬೆಲೆ ಕೊಡುವುದನ್ನು ಕಲಿಯಲಿ. ಗಣೇಶ ಇಡೀ ಜಗತ್ತಿನ ವಿಘ್ನವನ್ನು ಕಳೆಯುವ ವಿಘ್ನ ವಿನಾಯಕ. ಅಂತಹ ಮಹಾನ್ ಶಕ್ತಿಗೆ ವಿಘ್ನ ತಂದೊಡ್ಡಿರುವ ಮೂರ್ಖತನ ಬೇಡ. ಇಷ್ಟರ ಮೇಲೆಯೂ ಕಾಂಗ್ರೆಸ್ ಸರ್ಕಾರ ತನ್ನ ಹಠವನ್ನೇ ಸಾಧಿಸುವುದಾದರೆ ಭಾರತೀಯ ಜನತಾ ಪಾರ್ಟಿ ಗಣೇಶೋತ್ಸವ ಆಯೋಜಕರ ಪರವಾಗಿ ನಿಲ್ಲುತ್ತದೆ. ಯಾವುದೇ ಕಾರಣಕ್ಕೂ ಸರ್ಕಾರದ ಬೆದರಿಕೆಗಳಿಗೆ ಜಗ್ಗುವುದು ಬೇಡ. ಹಬ್ಬವನ್ನು ಇನ್ನಷ್ಟು ಸಂಭ್ರಮದಿಂದ ಆಚರಿಸಿ. ಯಾವುದೇ ಅಡ್ಡಿ ಆತಂಕ ಬಂದರೂ ನಿಮ್ಮೊಂದಿಗೆ ನಾವಿದ್ದೇವೆ, ಇಡೀ ಹಿಂದೂ ಸಮಾಜವಿದೆ ಎಂಬ ಭರವಸೆಯನ್ನು ಈ ಮೂಲಕ ನೀಡುತ್ತಿದ್ದೇವೆ ಎಂದು ಶಾಸಕರು ಭರವಸೆ ನೀಡಿದರು.