ಸಂಯುಕ್ತ ಕರ್ನಾಟಕ ರಾಜಕೀಯ ಹೋರಾಟಗಳಿಗೆ ಬಲ ತುಂಬಿದೆ
ಹುಬ್ಬಳ್ಳಿ: ಆರೋಗ್ಯ ಹಬ್ಬ ಏರ್ಪಡಿಸುವ ಮೂಲಕ ಸಂಯುಕ್ತ ಕರ್ನಾಟಕ ಹಲವು ಮಾರಕ ರೋಗಗಳ ಬಗ್ಗೆ ಜಾಗೃತಿ ಮೂಡಿಸಿ ಜನಪರ ಕಾಳಜಿ ಮೆರೆದಿದೆ ಎಂದು ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಅವರು ಹೇಳಿದರು.
ಸಂಯುಕ್ತ ಕರ್ನಾಟಕ ವತಿಯಿಂದ ವಿದ್ಯಾನಗರದ ಸ್ಟೆಲ್ಲರ್ ಮಾಲ್‌ನಲ್ಲಿ ಏರ್ಪಡಿಸಲಾದ ಆರೋಗ್ಯ ಹಬ್ಬಕ್ಕೆ ಭೇಟಿ ನೀಡಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ರಾಜ್ಯದ ವಿವಿಧೆಡೆಯಿಂದ ತಜ್ಞ ವೈದ್ಯರನ್ನು ಕರೆಸಿ ಹಲವಾರು ಜನರಿಗೆ ಉಚಿತ ತಪಾಸಣೆಯ ಸೌಲಭ್ಯ ನೀಡಲಾಗಿದೆ. ವಿವಿಧ ಮಾರಕ ರೋಗಗಳು ಹಾಗೂ ಚಿಕಿತ್ಸಾ ಕ್ರಮದ ಬಗ್ಗೆ ತಜ್ಞ ವೈದ್ಯರಿಂದ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿರುವುದು ಶ್ಲಾಘನೀಯ. ವಿವಿಧ ಆಸ್ಪತ್ರೆ, ವೈದ್ಯಕೀಯ ಸಂಸ್ಥೆಗಳ ಮಳಿಗೆಗಳನ್ನು ಹಾಕಿಸಿ ತಪಾಸಣೆಗೆಂದು ಬಂದ ಜನರಿಗೆ ಒಂದೇ ಸೂರಿನಡಿ ಹಲವು ರೋಗಗಳ ಚಿಕಿತ್ಸಾ ಕ್ರಮದ ಬಗ್ಗೆ ಪರಿಣಾಮಕಾರಿಯಾದ ಮಾಹಿತಿ ದೊರೆಯುವಂತೆ ಮಾಡಲಾಗಿದೆ. ಇಂಥ ಕಾರ್ಯಕ್ರಮಗಳು ಮಾಧ್ಯಮ ಕ್ಷೇತ್ರದಲ್ಲಿ ಒಂದು ವಿನೂತನ ಪ್ರಯತ್ನವಾಗಿದೆ. ಜನತೆ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಸಂಯುಕ್ತ ಕರ್ನಾಟಕ ರಾಜಕಾರಣದ ಪಾಠಶಾಲೆ. ಇದು ಉತ್ತರಕರ್ನಾಟಕದ ಜನಮನದ ಜೀವನಾಡಿಯಾಗಿ ಹಲವಾರು ರಾಜಕೀಯ ನಾಯಕರನ್ನು ಬೆಳೆಸಿದೆ. ಇದರಿಂದ ನಾನು ಸಾಕಷ್ಟು ಕಲಿತಿದ್ದೇನೆ. ನೈಋತ್ಯ ರೈಲ್ವೆ, ಮಹದಾಯಿ ಹೋರಾಟಗಳಿಗೆ ಬಲ ತುಂಬಿದೆ. ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ ಅವರು ಒಂದೆಡೆ ಸಂಯುಕ್ತ ಕರ್ನಾಟಕದ ದಿಟ್ಟತನವನ್ನು ಶ್ಲಾಘಿಸಿ, ಶಾಮರಾವ್ ಅವರಂತೆ ನಿರ್ಭೀತಿಯಿಂದ ಬರೆಯುವದನ್ನು ರೂಢಿಸಿಕೊಳ್ಳಿರಿ ಎಂದು ತಿಳಿಸಿದ್ದರು ಎಂದು ಈ ಸಂದರ್ಭದಲ್ಲಿ ಕೋನರಡ್ಡಿ ಸ್ಮರಿಸಿಕೊಂಡರು.
ಈ ಸಂದರ್ಭದಲ್ಲಿ ಕೋನರಡ್ಡಿ ಅವರು ಆರೋಗ್ಯ ಹಬ್ಬದ ಮಳಿಗೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕ ಎನ್.ಎಚ್.ಕೋನರಡ್ಡಿ ಅವರಿಗೆ ಲೋಕ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಹರಿಚೆನ್ನಕೇಶವ, ಸಂಯುಕ್ತ ಕರ್ನಾಟಕ ಸಿಇಒ ಮೋಹನ ಹೆಗಡೆ ಅವರು ಸನ್ಮಾನಿಸಿದರು. ಮಾಜಿ ಸಂಸದ ಐ.ಜಿ.ಸನದಿ, ಡಾ.ಗೋವಿಂದ ಮಣ್ಣೂರ ಮತ್ತಿತರರು ಇದ್ದರು.