For the best experience, open
https://m.samyuktakarnataka.in
on your mobile browser.

ಸಂವಿಧಾನ ಅರಿವು ರಾಷ್ಟ್ರೀಯ ಆಂದೋಲನವಾಗಲಿ

03:30 AM Feb 23, 2024 IST | Samyukta Karnataka
ಸಂವಿಧಾನ ಅರಿವು ರಾಷ್ಟ್ರೀಯ ಆಂದೋಲನವಾಗಲಿ

ಜಾತಿ, ಧರ್ಮ ಮತ್ತು ಲಿಂಗದ ಭೇದವನ್ನು ಎಣಿಸದೇ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಬೇಕೆಂದು ಈ ದೇಶದ ಬಹುದೊಡ್ಡ ಜನ ಸಮುದಾಯಕ್ಕೆ ಅವಕಾಶಗಳ ಅಕ್ಷಯ ಪಾತ್ರೆಯನ್ನು ಹೊತ್ತು ತಂದಿದ್ದು ಬಾಬಾ ಸಾಹೇಬರು ರಚಿಸಿದ ಸಂವಿಧಾನ.
ಅಲ್ಲಿಯವರೆಗೂ ಸಮಾನತೆ ಮತ್ತು ಘನತೆಯ ಬದುಕು ಅಸಾಧ್ಯವೇನೋ ಎಂದುಕೊಂಡಿದ್ದ ಜನರ ಬದುಕೂ ಕೂಡಾ ಸಹ್ಯವಾಗಬಲ್ಲದು ಎಂದು ಸಾಧಿಸಿ ತೋರಿಸಿದ ಕೀರ್ತಿ ಬಾಬಾ ಸಾಹೇಬರ ಸಂವಿಧಾನದ್ದು.
ರಾಜಕೀಯ ಸ್ವಾತಂತ್ರ‍್ಯ ಪಡೆದ ನಂತರದಲ್ಲಿ ಮುಂದೇನು ಎಂಬಂತಹ ಸ್ಥಿತಿಯನ್ನು ಎದುರಿಸುತ್ತಿದ್ದ ಭಾರತಕ್ಕೆ ಆಡಳಿತಾತ್ಮಕ ಹಾಗೂ ಜನರ ರಕ್ಷಣೆಯ ಚಂದದ ಮಾರ್ಗದರ್ಶಿ ಸೂತ್ರಗಳನ್ನು ಸಂವಿಧಾನವು ಒದಗಿಸಿತು. ಜಾತಿ, ಧರ್ಮ ವರ್ಗಗಳ ಭೇದ ನೋಡದೇ ಎಲ್ಲಾ ಜನರಿಗೂ ಸಮಾನ ಅವಕಾಶಗಳನ್ನು ಕೊಡಬೇಕೆಂದು ಆಲೋಚಿಸಿದ ಈ ದೇಶದ ಸಂವಿಧಾನವು ಜನರ ಬದುಕಿನ ಹಿತವನ್ನು ಕಾಪಾಡುತ್ತಿರುವ ಕಾರಣಕ್ಕಾಗಿಯೇ ಇಂದಿಗೂ ಸಹ ಮಹತ್ವದ ಶಕ್ತಿಯಾಗಿ ಉಳಿದಿದೆ.
ಹಿಂದೆ ಯಾರದ್ದೋ ಮನೆಯಲ್ಲಿ ಇದ್ದುಕೊಂಡು ಓದುವುದು, ಅನುಕೂಲ ಇಲ್ಲದಿದ್ದರೆ ಕೆಲಸವನ್ನು ಅರಸಿ ಹೋಗುವುದು ರೂಢಿಯಾಗಿತ್ತು. ಅಸ್ಪೃಶ್ಯ ಸಮುದಾಯಗಳಿಗಂತೂ ಈ ಸೌಲಭ್ಯ ಇರಲೇ ಇಲ್ಲ ಎಂದು ಹೇಳಬಹುದು. ಇಂತಹ ಸಂದರ್ಭವನ್ನು ತೊಡೆದುಹಾಕಲು ಎಲ್ಲರಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಸಂವಿಧಾನ ನೀಡಿತು.
ಅದರಲ್ಲೂ ಸಂಪ್ರದಾಯ, ಮೌಢ್ಯದ ಆಚರಣೆಗಳಿಗೆ ಒಳಗಾಗಿ ಹೆಣ್ಣು ಮಕ್ಕಳ ಸಾಮಾಜಿಕ ಸ್ಥಾನಮಾನಗಳು ಇಂತಿಷ್ಟೇ ಆಗಿರುತ್ತದೆ ಎಂಬ ಮೂರ್ಖತನದ ನಂಬಿಕೆಗಳಿಗೆ ಎದುರಾಗಿ ಹೆಣ್ಣು ಮಕ್ಕಳಿಗೆ ಎಲ್ಲಾ ಕ್ಷೇತ್ರದಲ್ಲೂ ಸಮಾನ ಅವಕಾಶಗಳನ್ನು ಒದಗಿಸಿದ್ದು ಈ ದೇಶದ ಸಂವಿಧಾನ. ಸಮುದಾಯದ ಹಿತಾಸಕ್ತಿಗೆ ಅನುಗುಣವಾಗಿ ರೂಪುಗೊಂಡ ಸಂವಿಧಾನದ ಆಶಯ ಮತ್ತು ಆಲೋಚನೆಗಳು ೧೪೦ ಕೋಟಿ ಜನರಿಗೂ ಸಂಬಂಧಿಸಿದೆ ಎಂಬುದು ಅದರ ಶಕ್ತಿ.
ಸರ್ವತೋಮುಖ ಬೆಳವಣಿಗೆಗಳ ನಿಟ್ಟಿನಲ್ಲಿ ಒಂದು ದೇಶದ ಪ್ರಜೆಗಳ ಹಕ್ಕುಗಳು ಏನಾಗಿರಬೇಕು, ಓರ್ವ ದೇಶವಾಸಿಯಾಗಿ ಅವರ ಕರ್ತವ್ಯವೇನು? ಎಂಬುದನ್ನು ನಮ್ಮ ಸಂವಿಧಾನವು ಸೂಚ್ಯವಾಗಿ ನಮಗೆ ತಿಳಿಸಿಕೊಡುತ್ತದೆ.
ದೇಶದ ಬಹುತ್ವವನ್ನು ಕಾಪಾಡುವ ಇಂತಹ ಸಂವಿಧಾನವು ಈ ದಿನ ಬಹಳಷ್ಟು ಸಂದಿಗ್ಧತೆಯನ್ನು ಎದುರಿಸುತ್ತಿದೆ. ಅದರಲ್ಲೂ ಸಂವಿಧಾನದ ಆಶಯಗಳಾಗಿದ್ದ ಸಾಮಾಜಿಕ ನ್ಯಾಯ, ಸಮಾನತೆ, ಧರ್ಮ ನಿರಪೇಕ್ಷತೆ ಹಾಗೂ ಸಮಾನ ಅವಕಾಶಗಳ ಬಗ್ಗೆ ಗಟ್ಟಿಯಾಗಿ ಮಾತನಾಡಲೇಬೇಕಾದಂತಹ ವಾತಾವರಣವು ಈಗ ಸೃಷ್ಟಿಯಾಗುತ್ತಿದ್ದು ಇದು ನಿಜಕ್ಕೂ ಸಂವಿಧಾನದ ಸಂದರ್ಭವೆಂದೇ ನಾನು ಭಾವಿಸುತ್ತೇನೆ.
ಈಗಂತೂ ದೇಶವನ್ನು ಧಾರ್ಮಿಕತೆಯ ತಾಣ ಎಂಬಂತೆ ಬಿಂಬಿಸುವ ಪ್ರಯತ್ನವನ್ನು ಮಾಡಲಾಗುತ್ತಿದ್ದು ಇದರ ನೇತೃತ್ವವನ್ನು ಎಲ್ಲಾ ಜಾತಿ ಧರ್ಮಗಳ ಹಿತಾಸಕ್ತಿಯನ್ನು ಕಾಪಾಡಬೇಕಾದ ಪ್ರಧಾನಿಗಳೇ ವಹಿಸಿರುವುದು ದೊಡ್ಡ ದುರಂತ. ಸಂವಿಧಾನಾತ್ಮಕ ಹುದ್ದೆಯಲ್ಲಿರುವ ಪ್ರಧಾನಿಗಳೇ ಇಂತಹ ಕೆಟ್ಟ ಪರಂಪರೆಗೆ ನಾಂದಿ ಹಾಡಿದರೆ ಸಂವಿಧಾನದ ಆಶಯಗಳ ಗತಿಯೇನು ಎಂಬಂತಹ ಪರಿಸ್ಥಿತಿ ಉಂಟಾಗಿದೆ.
ಉದಾಹರಣೆಗೆ ನೋಡುವಾಗ ಹಿಂದೂಧರ್ಮ ಅಪಾಯದಲ್ಲಿದೆ, ಹಿಂದೂಗಳು ಅಪಾಯದಲ್ಲಿದ್ದಾರೆ ಎಂಬ ದೊಡ್ಡ ಸುಳ್ಳನ್ನು ಧಾರ್ಮಿಕ ಮೂಲಭೂತವಾದಿಗಳು ಹುಟ್ಟುಹಾಕುತ್ತಿದ್ದು ಈ ನೆಪದಲ್ಲಿ ಇವರು ಯಾವುದೋ ಒಂದು ಧರ್ಮಕ್ಕೆ ಮಾತ್ರ ದೇಶವನ್ನು ಸೀಮಿತಗೊಳಿಸಲು ಹೊರಟಿದ್ದಾರೆ ಎಂದು ನನಗೆ ಕಾಣುತ್ತಿದೆ. ಆದರೆ ಇವರು ಹೇಳುತ್ತಿರುವ ಧರ್ಮದ ಅಪಾಯದ ಕುರಿತಂತಹ ಇವರ ಮಾತಿಗೂ ಮತ್ತು ವಾಸ್ತವ ಸ್ಥಿತಿಗೂ ಬಹಳಷ್ಟು ವ್ಯತ್ಯಾಸವಿದೆ ಎಂಬುದನ್ನು ಅಧ್ಯಯನದ ಅಂಕಿ ಅಂಶಗಳೇ ನಮಗೆ ತಿಳಿಸಿಕೊಡುತ್ತವೆ.
೧೯೦೦ರ ನಂತರ ಅಂದರೆ, ಬಂಗಾಳ ವಿಭಜನೆಯಾಗಿ, ಪಂಜಾಬ್ ಭೂ ಒತ್ತುವರಿ ಕಾಯ್ದೆ, ಹಾಗೂ ೧೯೦೯ ರ ಭಾರತ ಕೌನ್ಸಿಲ್ ಕಾಯ್ದೆಯು ಮುಸ್ಲಿಮರಿಗೆ ಪ್ರತ್ಯೇಕ ಮತಕ್ಷೇತ್ರವನ್ನು ನೀಡಿದ ಮೇಲೆ ಮುಸ್ಲಿಮರ ಸಂಖ್ಯೆ ಹಿಂದೂಗಳಿಗಿಂತಲೂ ಹೆಚ್ಚುತ್ತಿದೆ ಎಂಬ ಮಾತುಗಳು ಹೆಚ್ಚು ಮುನ್ನೆಲೆಗೆ ಬರುತ್ತಿವೆ.
ಕಳೆದ ೭೦ ವರ್ಷಗಳಲ್ಲಿ ಎಂದಿಗೂ ಕೂಡಾ ಮುಸ್ಲೀಮರ ಜನಸಂಖ್ಯೆಯು ಹಿಂದೂಗಳ ಜನಸಂಖ್ಯೆಗೆ ಸವಾಲಾಗೇ ಇಲ್ಲ. ಅಷ್ಟೇ ಏಕೆ? ಮುಂದಿನ ೨೧೦೧ ನೇ ಇಸವಿಯಲ್ಲಿ ಈಗಿನ ಜನಸಂಖ್ಯಾ ಅಭಿವೃದ್ಧಿ ದರದಲ್ಲಿ ಭಾರತದ ಜನಸಂಖ್ಯೆಯು ೧.೭ ಬಿಲಿಯನ್ ಇರಲಿದ್ದು ಈ ಪೈಕಿ ಹಿಂದೂಗಳು ೧.೨೭ ಬಿಲಿಯನ್ ಹಾಗೂ ಮುಸ್ಲಿಮರ ಸಂಖ್ಯೆ ೩೨೦ ಮಿಲಿಯನ್ ಇರಲಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ
ಒಂದು ವೇಳೆ ಭಾರತವೇನಾದರೂ ವಿಶ್ವಸಂಸ್ಥೆ ನಿಗದಿಪಡಿಸಿದ ಸುಸ್ಥಿರ ಅಭಿವೃದ್ಧಿ ಅಂಶಗಳನ್ನು ಸರಿಯಾಗಿ ಅಳವಡಿಸಿಕೊಂಡಿದ್ದೇ ಆದರೆ ೨೧೦೦ನೇ ಇಸವಿಯ ಹೊತ್ತಿಗೆ ಭಾರತದ ಜನಸಂಖ್ಯೆಯು ೯೨೯ ಮಿಲಿಯನ್‌ಗೆ ಇಳಿಕೆಯಾಗಲಿದೆ ಎಂದು ಲಾನ್ಸೆಟ್ ನವರು ೨ ವರ್ಷಗಳ ಹಿಂದೆಯೇ ಅಧ್ಯಯನದ ಮೂಲಕ ತಿಳಿಸಿದ್ದಾರೆ.
ಇದು ಒಂದೆಡೆಯಾದರೆ ಈ ದೇಶವನ್ನು ಮೊಘಲರು ೫೦೦ ವರ್ಷ ಆಳಿದ್ದಾರೆ, ಬ್ರಿಟಿಷರು ೩೦೦ ವರ್ಷ ಆಳಿದ್ದಾರೆ. ಈ ಎರಡೂ ಸಂದರ್ಭದಲ್ಲಿ ಭಾರತವು ಅತ್ತ ಮುಸ್ಲಿಂ ರಾಷ್ಟ್ರವಾಗಿಯೂ ಬದಲಾಗಿಲ್ಲ, ಇತ್ತ ಕ್ರೈಸ್ತ ರಾಷ್ಟ್ರವಾಗಿಯೂ ಬದಲಾಗಿಲ್ಲ.
ಹೀಗಿರುವಾಗ ಯಾವ ಕಾರಣಕ್ಕೆ ಇಲ್ಲದ ಅಂಶಗಳನ್ನು ಹೇಳಿ, ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಧಾರ್ಮಿಕ ಕ್ಷೋಭೆಯ ವಾತಾವರಣವನ್ನು ನಿರ್ಮಿಸಲಾಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ನನ್ನ ಪ್ರಕಾರ ಸಂವಿಧಾನವು ನೀಡಿರುವ ಧಾರ್ಮಿಕ ಸ್ವಾತಂತ್ರ‍್ಯದ ಹಕ್ಕುಗಳ ಕುರಿತಂತೆ ಜ್ಞಾನ ಇಲ್ಲದಿರುವುದೇ ಇದಕ್ಕೆಲ್ಲಾ ಕಾರಣ.
ಇದು ಒಂದು ಭಾಗವಾದರೆ ಇಂದಿನ ಪೀಳಿಗೆಯ ಮಕ್ಕಳು ಸಂವಿಧಾನದ ಅರಿವಿನಿಂದ ಕ್ರಮೇಣ ದೂರ ಉಳಿಯುತ್ತಿದ್ದಾರೆ ಎಂಬುದು ನನ್ನ ಅಭಿಪ್ರಾಯವಾಗಿದೆ. ಒಂದು ದೇಶದ ಜನರ ರಾಜಕೀಯ, ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಬದುಕನ್ನು ನಿರ್ಧರಿಸುವ ಸಂವಿಧಾನದ ಕುರಿತಂತೆ ಅರಿವು ಇರಬೇಕಾದ್ದು ಇಂದಿನ ಪೀಳಿಗೆಯ ಜವಾಬ್ದಾರಿ ಆಗಿದ್ದು ಇದನ್ನು ಎಲ್ಲರೂ ಮುತುವರ್ಜಿ ವಹಿಸಿ ಮಾಡಬೇಕು.
ರಾಜಕೀಯ ಪಕ್ಷಗಳಿಗೊಂದು ವಿನಂತಿ
ದೇಶಕ್ಕೆ ಸ್ವಾತಂತ್ರ‍್ಯ ಬಂದು ಇಷ್ಟು ವರ್ಷಗಳಾದರೂ ಕೂಡಾ ಇಂದಿಗೂ ಮೌಢ್ಯತೆ, ಕಂದಾಚಾರ ಅವೈಚಾರಿಕ ವಾತಾವರಣವು ಜೀವಂತವಾಗಿದ್ದು ಇದು ಪ್ರಜಾಪ್ರಭುತ್ವದ ಬಹುದೊಡ್ಡ ಶತ್ರುವಾಗಿದೆ. ಸಾಲದು ಎಂಬಂತೆ ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣಗಳು, ಶೋಷಿತ ಸಮುದಾಯಗಳಿಗೆ ಸಮಾನವಾಗಿ ದೊರಕದ ಅವಕಾಶಗಳ ಸಂದರ್ಭವನ್ನು ನೋಡುವಾಗ ನಮ್ಮ ರಾಜಕೀಯ ಹಾಗೂ ಆಡಳಿತಾತ್ಮಕ ವಲಯಕ್ಕೆ ಸಂವಿಧಾನದ ಅರಿವು ತುಸು ಹೆಚ್ಚಾಗೇ ಬೇಕೆಂದು ನನಗೆ ತೋರುತ್ತದೆ.
ಇನ್ನು ಶಿಕ್ಷಣ ಪಡೆಯುತ್ತಿರುವ ಯುವ ಸಮುದಾಯ ಹಾಗೂ ಮಕ್ಕಳೂ ಕೂಡಾ ತಮ್ಮ ಹಕ್ಕುಗಳೇನು, ಕರ್ತವ್ಯಗಳೇನು ಎಂಬುದನ್ನು ಅರಿಯುವ ಜರೂರು ಪ್ರಜಾಪ್ರಭುತ್ವದ ಭವಿಷ್ಯದ ದೃಷ್ಟಿಯಿಂದ ತುಸು ಹೆಚ್ಚೇ ಇದೆ.
ಈ ಗಂಭೀರತೆಯನ್ನು ಅರಿತೇ ನಮ್ಮ ಸರ್ಕಾರವು ರಾಜ್ಯದ ಎಲ್ಲಾ ಪಂಚಾಯಿತಿಗಳ ಮಟ್ಟದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದು ಕ್ರಮೇಣ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ
ಕೊನೆಯದಾಗಿ ಹೇಳುವುದಾದರೆ
ಸಂವಿಧಾನದ ಚೌಕಟ್ಟಿನಲ್ಲಿ ಅಧಿಕಾರ ನಡೆಸುವ ಮತ್ತು ಸಂವಿಧಾನದಿಂದಲೇ ಅವಕಾಶಗಳನ್ನು ಪಡೆಯುತ್ತಿರುವ ಈ ದೇಶದ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಸಂವಿಧಾನದ ಕುರಿತಂತೆ ಅರಿವು ಮೂಡಿಸಬೇಕು. ಏಕೆಂದರೆ ಸಂವಿಧಾನವೇ ಇಲ್ಲದೇ ದೇಶದ ಜನರ ಸಮಾನ ಹಾಗೂ ಘನತೆಯ ಬದುಕಿನ ಉಳಿವು ಅಸಾಧ್ಯವಾದ ಕಾರಣ ಇಂತಹ ಮಹತ್ವದ ಸಂವಿಧಾನದ ಅರಿವಿನ ಕ್ರಾಂತಿಗೆ ಪಕ್ಷಾತೀತವಾಗಿ ಚಾಲನೆ ನೀಡಬೇಕೆಂದು ಈ ಮೂಲಕ ಎಲ್ಲರನ್ನೂ ಪ್ರೀತಿಪೂರ್ವಕವಾಗಿ ಆಗ್ರಹಿಸುತ್ತೇನೆ.
ಸಂವಿಧಾನ ಅರಿವು ರಾಷ್ಟ್ರೀಯ ಆಂದೋಲನವಾಗಲಿ ಮತ್ತು ಇಂತಹ ಆಂದೋಲನವು ಜನರ ಬದುಕನ್ನು ಚಂದವಾಗಿ ರೂಪಿಸಲಿ.