ಸಂವಿಧಾನ ಬದಲಾಯಿಸಲು ಬಂದಿರುವವರನ್ನು ಅಧಿಕಾರದಿಂದ ಕಿತ್ತೊಗೆಯದಿದ್ದರೆ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ
ಬೆಂಗಳೂರು: ಸಂವಿಧಾನ ಬದಲಾಯಿಸಲು ಬಂದಿರುವವರನ್ನು ಅಧಿಕಾರದಿಂದ ಕಿತ್ತೊಗೆಯದಿದ್ದರೆ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದರು
ಅರಮನೆ ಮೈದಾನದಲ್ಲಿ ನಡೆದ ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇಡಿ ವಿಶ್ವದ ಸಂವಿಧಾನಗಳನ್ನೆಲ್ಲಾ ಅಧ್ಯಯನ ಮಾಡಿ ಎಲ್ಲದರಲ್ಲಿರುವ ಅತ್ಯುತ್ತಮ ಸಾರವನ್ನು ತೆಗೆದು ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯದ ಹಕ್ಕುಗಳನ್ನು ನಮ್ಮ ಸಂವಿಧಾನದಲ್ಲಿ ಸೇರಿಸಿದ್ದಾರೆ.
ಬುದ್ದ, ಬಸವಾದಿ ಶರಣರು, ವಚನ ಕ್ರಾಂತಿಯ ಆಶಯಗಳು ಮತ್ತು ಕುವೆಂಪು, ನಾರಾಯಣಗುರು, ವಿವೇಕಾನಂದ ಸೇರಿ ಮುಂತಾದವರ ಆಶಯಗಳ ಮೂರ್ತರೂಪ ನಮ್ಮ ಸಂವಿಧಾನವಾಗಿದೆ ಎಂದು ವಿವರಿಸಿದರು.
ನರೇಂದ್ರ ಮೋದಿಯವರ ಮಂತ್ರಿ ಮಂಡಲದಲ್ಲಿ ಇದ್ದುಕೊಂಡೇ ಕೇಂದ್ರ ಸಚಿವ ಆಗಿದ್ದ ಅನಂತಕುಮಾರ ಹೆಗ್ಡೆ, "ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು" ಎಂದು ಘೋಷಿಸಿದರು. ಈ ಘೋಷಣೆಯನ್ನು ಪ್ರಧಾನಿ ಮೋದಿಯವರಾಗಲೀ, ಅಮಿತ್ ಶಾ ಆಗಲೀ, ಬಿಜೆಪಿಯಾಗಲೀ, RSS ಆಗಲಿ ಖಂಡಿಸಲಿಲ್ಲ. ವಿರೋಧಿಸಲಿಲ್ಲ. ಹೀಗಾಗಿ BJP ಮತ್ತು RSSನ ಅಜೆಂಡಾವನ್ನು, ಉದ್ದೇಶವನ್ನು ಅನಂತಕುಮಾರ ಹೆಗ್ಡೆ ಬಾಯಲ್ಲಿ ಹೇಳಿಸಿದರು. ಈ ಬಗ್ಗೆ ಇಡಿ ದೇಶದ ಜನತೆ ಎಚ್ಚೆತ್ತುಕೊಳ್ಳಬೇಕು ಎಂದರು.
ಈ ದೇಶದ, ನಮ್ಮ ನಾಡಿನ ದುಡಿಯುವವರ ಹಕ್ಕುಗಳು, ಶ್ರಮಿಕರು, ರೈತರು, ಕಾರ್ಮಿಕರು ಮತ್ತು ಮಹಿಳಾ ಸಮುದಾಯದ ಅಸ್ತಿತ್ವ ಅಡಗಿರುವುದೇ ನಮ್ಮ ಸಂವಿಧಾನದಲ್ಲಿ. ಸಂವಿಧಾನ ಬದಲಾವಣೆಯಿಂದ ಈ ಎಲ್ಲಾ ಸಮುದಾಯಗಳು ಮರಳಿ ಗುಲಾಮಗಿರಿಗೆ ದೂಡಲ್ಪಡುತ್ತಾರೆ. ಸಂವಿಧಾನ ಇಲ್ಲದ ಸಂದರ್ಭದಲ್ಲಿ ಶೂದ್ರ, ದಲಿತ ಮತ್ತು ಶ್ರಮಿಕರನ್ನು ಹೇಗೆ ನಡೆಸಿಕೊಳ್ಳಲಾಗುತ್ತಿತ್ತು ಎನ್ನುವುದನ್ನು ಸ್ಮರಿಸಿಕೊಳ್ಳಿ ಎಂದರು.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಹೆಚ್.ಸಿ. ಮಹದೇವಪ್ಪ, INDIA ಒಕ್ಕೂಟದ ಮುಖಂಡರಾದ ಫಾರೂಕ್ ಅಬ್ದುಲ್ಲಾ, ಸೀತಾರಾಮ್ ಯೆಚೂರಿ ಸೇರಿ 18 ರಾಜ್ಯಗಳ 40 ಮಂದಿ ಮುಖಂಡರು, 12 ಪಕ್ಷಗಳ ನಾಯಕರು ಸಂವಿಧಾನ ರಕ್ಷಣೆ ಮಾಡಬೇಕಾದ ಅನಿವಾರ್ಯತೆ ಕುರಿತು ಜನರನ್ನು ಜಾಗೃತಗೊಳಿಸಿದರು.