ಸಂಶಯಾಸ್ಪದ ಸಾವು: ಮೃತನ ಸಹೋದರ ಪೊಲೀಸ್ ವಶಕ್ಕೆ
ಕಟೀಲು: ಅನುಮಾನಾಸ್ಪದವಾಗಿ ಸಾವಿಗೀಡಾದ ರೀತಿಯಲ್ಲಿ ಕಟೀಲು-ಗಿಡಿಗೆರೆ ಸಮೀಪ ಭಾನುವಾರ ಬೆಳಿಗ್ಗೆ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯ ವೇಳೆ ಸಂಶಯಗಳು ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ವಿಶೇಷ ತಂಡಗಳಿಂದ ತನಿಖಾ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಟೀಲು-ಕೊಂಡೆಮೂಲ ನಿವಾಸಿ ತಾರನಾಥ(40) ಎಂಬಾತ ಮನೆಯಿಂದ 100 ಮೀ. ದೂರದಲ್ಲಿ ಕೇಬಲ್ ವಯರ್ ಕುತ್ತಿಗೆಗೆ ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಶನಿವಾರ ಸಂಜೆ ಮನೆಯಲ್ಲಿ ಮಾತಿನ ಚಕಮಕಿ ನಡೆದ ಬಳಿಕ ಬಾರೊಂದಕ್ಕೆ ತೆರಳಿ ಮದ್ಯಸೇವನೆ ಮಾಡಿದ್ದನೆನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಮನೆಯಲ್ಲಿಯೇ ಇದ್ದ ತಾರನಾಥನ ಸಹೋದರನನ್ನು ಬಜಪೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮೃತನ ಮನೆ ಪರಿಸರ ಸ್ಥಳೀಯರಲ್ಲಿ ವಿಚಾರ ವಿನಿಮಯ ನಡೆಸಲಾಗಿದ್ದು ಸಮೀಪದ ಸಿಸಿ ಕ್ಯಾಮೆರಾ ದಾಖಲೆಗಳನ್ನು ಪರಿಶೀಲಿಸಲಾಗಿದೆ.
ಮರಣೋತ್ತರ ಪರೀಕ್ಷೆ ಅಂತಿಮಗೊಂಡಿಲ್ಲವಾದ ಕಾರಣ ವರದಿ ಪಡೆದ ಬಳಿಕವಷ್ಟೇ ಈ ಅನುಮಾನಾಸ್ಪದ ಸಾವು ಆತ್ಮಹತ್ಯೆಯೋ? ಕೊಲೆಯೋ? ಎಂಬುದರ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.