ಸಂಸತ್ ಅಧಿವೇಶನದಲ್ಲಿ ಕರ್ನಾಟಕದ ವಿಚಾರಗಳನ್ನು ಪರಿಣಾಮಕಾರಿಯಾಗಿ ಪ್ರಸ್ತಾಪಿಸುವ ಕುರಿತು ಚರ್ಚೆ
ದೆಹಲಿ: ಕರ್ನಾಟಕದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಹಾಗೂ ಸಂಘಟನೆಯ ಬಗ್ಗೆ ರಾಜ್ಯದ ಸಂಸದರ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೆಳಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರ ನೇತೃತ್ವದಲ್ಲಿ ನವದೆಹಲಿಯಲ್ಲಿ ನಡೆದ ರಾಜ್ಯ ಬಿಜೆಪಿ ಸಂಸದರ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಾಡಿಕೆಯಂತೆ ಈ ಬಾರಿ ಬಿಜೆಪಿ ಸಂಸದ ಸಭೆ ಆಗಿದೆ. ರಾಜ್ಯದಲ್ಲಿ ಸದಸ್ಯತ್ವ ಅಭಿಯಾನ ಹಾಗೂ ಪಕ್ಷ ಸಂಘಟನೆಯ ಏನೇನು ಕೆಲಸ ಅಗಿದೆ. ಏನು ಬದಲಾವಣೆ ಮಾಡಬೇಕು ಎನ್ನುವ ಕುರಿತು ಚರ್ಚೆ ಆಗಿದೆ ಎಂದರು.
ಜಿಲ್ಲಾ ಹಾಗು ತಾಲೂಕು ಪಂಚಾಯಿತಿ ಚುನಾವಣೆ ಬಗ್ಗೆ ಕರ್ನಾಟಕ ಸರ್ಕಾರ ಸಿದ್ದತೆ ನಡೆಸಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಿಕ್ಕ ಗೆಲುವು ಹಾಗೂ ಇತ್ತೀಚೆಗೆ ನಡೆದ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಆಗಿರುವ ಹಿನ್ನಡೆಯನ್ನು ಮೆಟ್ಟಿ ನಿಂತು, ಎಲ್ಲರೂ ಒಗ್ಗಟ್ಟಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ಚರ್ಚೆ ಆಯಿತು ಎಂದು ತಿಳಿಸಿದ್ದಾರೆ.
ಇನ್ನು ಲೋಕಸಭಾ ಅಧಿವೇಶನದಲ್ಲಿ ಕರ್ನಾಟಕದ ವಿಚಾರಗಳನ್ನು ಪರಿಣಾಮಕಾರಿಯಾಗಿ ಯಾವ ರೀತಿ ಪ್ರಸ್ತಾಪಿಸಬೇಕು ಎನ್ನುವ ಕುರಿತು ಚರ್ಚೆಯಾಗಿದೆ ಎಂದು ತಿಳಿಸಿದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಂಡಾಯದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರ ಈಗಾಗಲೇ ಹೈಕಮಾಂಡ್ ಮುಂದೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸದರಾದ ಡಾ.ಕೆ. ಸುಧಾಕರ್, ಬಿ.ವೈ. ರಾಘವೇಂದ್ರ, ಪಿ.ಸಿ.ಮೋಹನ್, ರಾಜ್ಯಸಭಾ ಸದಸ್ಯರಾದ ನಾರಾಯಸಾ ಭಾಂಡಗೆ ಹಾಜರಿದ್ದರು.