For the best experience, open
https://m.samyuktakarnataka.in
on your mobile browser.

ಸಂಸತ್ ಅಧಿವೇಶನದ ಹಿನ್ನೋಟ

03:15 AM Jan 31, 2024 IST | Samyukta Karnataka
ಸಂಸತ್ ಅಧಿವೇಶನದ ಹಿನ್ನೋಟ

ದೇಶವಾಸಿಗಳ ರಾಜಕೀಯ ಪ್ರಬುದ್ಧತೆಯ ಜಲಾಶಯ ಎಂದೇ ಪರಿಗಣಿಸಲಾಗುವ ಸಂಸತ್ ಅಧಿವೇಶನದಲ್ಲಿ ಲೋಕಸಭೆಗೆ ಈ ಬಾರಿಯ ಕಲಾಪಕ್ಕೆ ಹೆಚ್ಚಿನ ಮಹತ್ವ. ಏಕೆಂದರೆ ಪ್ರಸ್ತುತ ಲೋಕಸಭೆಯ ಕಡೆಯ ಅಧಿವೇಶನ ಇದು. ಮೇ ತಿಂಗಳಿನಲ್ಲಿ ಹೊಸ ಚುನಾಯಿತ ಸರ್ಕಾರ ಅಧಿಕಾರಕ್ಕೆ ಬರಬೇಕಾಗಿರುವ ಹಿನ್ನೆಲೆಯಲ್ಲಿ ತನ್ನ ಅವಧಿಯ ಕಡೆಯ ಕಲಾಪದ ಅಂಗವಾಗಿ ನಾಳೆಯಿಂದ ಆರಂಭವಾಗುವ ಅಧಿವೇಶನದಲ್ಲಿ ಮುಂಗಡಪತ್ರ ಮಂಡನೆಯೇ ಪ್ರಮುಖ ಘಟ್ಟ. ರಾಜಕೀಯ ದೃಷ್ಟಿಯಿಂದ ಈ ಅಧಿವೇಶನವನ್ನು ವಿಶ್ಲೇಷಿಸುವುದಾದರೆ, ಕಳೆದ ಐದು ವರ್ಷಗಳ ಅವಧಿಯಲ್ಲಿ ಜನಾದೇಶದ ನಿರ್ವಹಣೆಯ ಸಾಧನೆ ಹಾಗೂ ವೈಫಲ್ಯಗಳ ಮೆಲುಕು ಹಾಕುವುದು ಸೂಕ್ತವಾದ ಮತ್ತು ಸಾಧುವಾದ ಕ್ರಮ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನದ ಸೌಲಭ್ಯವನ್ನು ರದ್ದತಿಪಡಿಸಿರುವ ಕ್ರಮ ಸಾಮಾನ್ಯವಂತೂ ಅಲ್ಲ. ಈಗಲೂ ಕೂಡಾ ಕೇಂದ್ರ ಸರ್ಕಾರದ ನಿರ್ಧಾರ ನಾನಾ ರೀತಿಯ ವಿಶ್ಲೇಷಣೆಯಲ್ಲಿಯೇ ಮುಂದುವರಿದಿದೆ. ಸುಪ್ರೀಂಕೋರ್ಟ್ ಕೂಡಾ ಈ ವಿಚಾರದಲ್ಲಿ ಸರ್ಕಾರದ ನಿಲುವನ್ನು ಬೆಂಬಲಿಸುವ ರೀತಿಯಲ್ಲಿ ನಿರ್ಣಯವನ್ನು ಕೊಟ್ಟಿದೆ. ಹೀಗಾಗಿ ಮುಂದೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ಮತ್ತೆ ಇನ್ನಾವ ರೀತಿಯ ಹೊಸ ಶಾಸನವನ್ನು ರೂಪಿಸಬಹುದು ಎಂಬ ಲೆಕ್ಕಾಚಾರ ಈಗಲೇ ಶುರುವಾಗಿದೆ. ಅದೇನೇ ಇದ್ದರೂ, ಕಳೆದ ಎರಡು ಅವಧಿಯ ಅಧಿವೇಶನಗಳು ಪ್ರಧಾನಿ ನರೇಂದ್ರ ಮೋದಿ ಸುತ್ತವೇ ಪ್ರದಕ್ಷಿಣೆ ಹಾಕುತ್ತಿರುವುದು ಒಂದು ರೀತಿಯಲ್ಲಿ ರಾಜಕೀಯ ಪರಿಸ್ಥಿತಿಯ ದಿಕ್ಸೂಚಿ.
ಸಂಸತ್ತಿನಲ್ಲಿ ಎನ್‌ಡಿಎ ಮೈತ್ರಿಕೂಟದ ಪ್ರಾಬಲ್ಯವನ್ನು ಒಪ್ಪಿಕೊಳ್ಳಲೇ ಬೇಕು. ಹೀಗಾಗಿ ಹಿಂದೆ ಬಹುಮತವಿದ್ದರೂ ಪ್ರಮುಖ ಶಾಸನಗಳನ್ನು ರೂಪಿಸಲು ಹಿಂದೇಟು ಹಾಕುತ್ತಿದ್ದ ಸರ್ಕಾರಗಳಿಗೆ ಹೋಲಿಸಿದರೆ ಮೋದಿ ನೇತೃತ್ವದ ಸರ್ಕಾರ ವೈಚಾರಿಕ ಬದ್ಧತೆಗೆ ಅನುಗುಣವಾಗಿ ಕಾರ್ಯನಿರ್ವಹಣೆಗೆ ಮುಂದಾಗಿದೆ. ಮುಂದಿನ ಚುನಾವಣೆಯಲ್ಲಿಯೂ ಎನ್‌ಡಿಎ ಮೈತ್ರಿಕೂಟಕ್ಕೆ ಜನಾದೇಶ ದೊರೆತರೆ ಏಕರೂಪದ ನಾಗರಿಕ ಸಂಹಿತೆ ಶಾಸನ ಮಂಡನೆಯಾಗುವ ಲಕ್ಷಣಗಳು ದಟ್ಟವಾಗಿ ಕಾಣುತ್ತಿದೆ. ಹಾಗೇನಾದರೂ ಆದರೆ ರಾಜಕೀಯ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದ ಧ್ರುವೀಕರಣ ಸಾಮಾಜಿಕ ಹಾಗೂ ಧಾರ್ಮಿಕ ವಲಯದಲ್ಲೂ ಜರುಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.
ಈ ಬಾರಿಯ ಮುಂಗಡ ಪತ್ರದಲ್ಲಿ ರಾಜಕೀಯ ಲೇಪ ಇರುವುದು ಸ್ವಾಭಾವಿಕ. ಲೋಕಸಭಾ ಚುನಾವಣೆಗೆ ಇನ್ನೊಂದೆರಡು ತಿಂಗಳು ಮಾತ್ರ ಬಾಕಿ ಉಳಿದಿರುವ ಸಂದರ್ಭದಲ್ಲಿ ಜನರ ವಿಶ್ವಾಸ ಹಾಗೂ ಆಕರ್ಷಣೆಗೆ ಪಾತ್ರವಾಗಲು ಮುಂಗಡ ಪತ್ರದಲ್ಲಿ ಹಲವು ಜನಪರ ಸೌಲಭ್ಯಗಳನ್ನು ಕಲ್ಪಿಸುವ ಸಾಧ್ಯತೆಗಳು ಹೆಚ್ಚು. ಇಷ್ಟಕ್ಕೂ ಇದೊಂದು ಮಧ್ಯಂತರ ಮುಂಗಡಪತ್ರ. ಚುನಾವಣೆಯ ನಂತರ ಪೂರ್ಣ ಪ್ರಮಾಣದ ಮುಂಗಡಪತ್ರ ಮಂಡನೆಯಾಗಬೇಕು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿರುವ ಆರನೇಯ ಮುಂಗಡಪತ್ರವಿದು. ಇದರಿಂದಾಗಿ ಈ ಹಿಂದೆ ಪ್ರಧಾನಿಯಾಗಿದ್ದ ಮುರಾರ್ಜಿ ದೇಸಾಯಿ ಅವರು ಮಂಡಿಸಿದ್ದ ಮುಂಗಡಪತ್ರ ದಾಖಲೆ ಮುರಿದಂತಾಗುತ್ತದೆ. ಇನ್ನು ಪ್ರತಿಪಕ್ಷಗಳ ದೃಷ್ಟಿಯಿಂದ ಈ ಬಾರಿಯ ಅಧಿವೇಶನದಲ್ಲಿ ಸರ್ಕಾರಕ್ಕೆ ಗಂಡಾಂತರವಾಗುವ ಹಲವು ಪ್ರಮುಖ ಪ್ರಸ್ತಾಪಗಳನ್ನು ಮಂಡಿಸುವ ಯತ್ನಗಳು ಜರುಗುತ್ತಿವೆ. ಪ್ರತಿಪಕ್ಷಗಳಿಗಿರುವ ದೊಡ್ಡ ಸಮಸ್ಯೆಯೆಂದರೆ ಏಕತೆಯ ಕೊರತೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದಿಂದ ತೃಣಮೂಲ ಹಾಗೂ ಜೆಡಿಯು ಪಕ್ಷಗಳು ನಿರ್ಗಮಿಸಿರುವ ಬೆನ್ನಹಿಂದೆಯೇ ಆಮ್ ಆದ್ಮಿ ಪಕ್ಷವು ಕೂಡಾ ಅದೇ ಜಾಡಿನಲ್ಲಿರುವಂತೆ ಭಾಸವಾಗುತ್ತಿದೆ. ಈಗಿರುವ ಸ್ಥಿತಿಯಲ್ಲಿ ಕಾಂಗ್ರೆಸ್‌ಗೆ ಸಂಸತ್‌ನಲ್ಲಿ ಅಷ್ಟೊಂದು ಬಲವಿಲ್ಲ. ಆದರೆ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಹೊಸ ಛಲವಂತೂ ಬಂದಿದೆ. ತೆಲಂಗಾಣದ ಚುನಾವಣೆಯ ಗೆಲುವಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರವನ್ನು ಪೇಚಿಗೆ ಸಿಕ್ಕಿಸಲು ಹಲವು ಅಕ್ರಮಗಳನ್ನು ಬಯಲಿಗೆಳೆಯುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಬೇಸರದ ಸಂಗತಿ ಎಂದರೆ, ಇತ್ತೀಚಿನ ಸಂಸದೀಯ ನಡವಳಿಕೆಯಲ್ಲಿ ಶಾಸನ ರಚನೆ ಪ್ರಕ್ರಿಯೆ ನೇಪಥ್ಯಕ್ಕೆ ಸರಿದು ರಾಜಕೀಯ ಲೇಪದ ಪ್ರಸ್ತಾಪಗಳಿಗೆ ಹೆಚ್ಚಿನ ಮಹತ್ವ ದೊರೆಯುತ್ತಿರುವುದು. ಸಂಸತ್ತಿನ ಮೂಲ ಉದ್ದೇಶವೇ ಶಾಸನ ರಚನೆ. ಆದರೆ ಈಗ ಸಮ್ಮಿಶ್ರ ರಾಜಕೀಯ ವ್ಯವಸ್ಥೆಯ ಅಂಗವಾಗಿ ಭುಗಿಲೆದ್ದಿರುವ ಪೈಪೋಟಿಯ ಪರಿಣಾಮದ ಫಲಶ್ರುತಿ ಎಂದರೆ ಸತ್ವ ತತ್ವದ ಪ್ರಸ್ತಾಪಗಳಿಗಿಂತ ಮಾರಾಮಾರಿ ಚಕಮಕಿ ಹಾಗೂ ಧರಣಿ ಸತ್ಯಾಗ್ರಹಗಳೇ ಹೆಚ್ಚಿನ ಪ್ರಾಶಸ್ತ್ಯ ಪಡೆದುಕೊಳ್ಳುತ್ತಿರುವುದು ಜನರ ದೃಷ್ಟಿಯಿಂದ ಒಂದು ಅಪಚಾರದ ಸಂಗತಿಯಾಗಿದೆ.