ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸಂಸದರ ಅಮಾನತು ಮರುಪರಿಶೀಲನೆ ಅಗತ್ಯ

12:26 PM Dec 19, 2023 IST | Samyukta Karnataka

ದೇಶ ಸುಭದ್ರವಾಗಿದ್ದರಷ್ಟೆ ಸುಭದ್ರ ರಾಜಕಾರಣ ಎಂಬ ಸತ್ಯವನ್ನು ನೆರೆಯ ಪಾಕಿಸ್ತಾನ, ಶ್ರೀಲಂಕಾ ದೇಶಗಳ ಸ್ಥಿತಿಗತಿಯನ್ನು ನೋಡಿಯಾದರೂ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕು.

ಸಂಸತ್ತಿನ ಒಳಗೆ ನುಗ್ಗಿ ದಾಂಧಲೆ ಎಬ್ಬಿಸಿರುವ ನಿಗೂಢ ಪ್ರಕರಣಕ್ಕೆ ಸಂಬಂಧಿಸಿದಂತೆ ಭುಗಿಲೆದ್ದಿರುವ ರಾಜಕೀಯ ಸಂಘರ್ಷದ ಹಿನ್ನೆಲೆಯಲ್ಲಿ ಕಾರಣ ಅಥವಾ ಪ್ರೇರಣೆ ಏನೇ ಇದ್ದರೂ ಸಂಸತ್ ಸದಸ್ಯರ ಅಮಾನತುಗೊಳಿಸಿರುವ ಕ್ರಮ ಬಿಕ್ಕಟ್ಟಿಗೆ ಪರಿಹಾರ ರೂಪಿಸುವುದಲ್ಲ - ಬದಲಿಗೆ ಬಿಕ್ಕಟ್ಟಿಗೆ ಹೊಸ ಆಯಾಮ ನೀಡಿ ರಾಜಕೀಯ ಕಾಳಗಕ್ಕೆ ಆಹ್ವಾನ ನೀಡುವುದಷ್ಟೆ. ಸಂಸತ್ ದಾಳಿಗೆ ಸಂಬಂಧಿಸಿದಂತೆ ಕಾರಣವನ್ನು ತನಿಖೆಯ ಮೂಲಕ ಪತ್ತೆಹಚ್ಚಿ ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಈಗ ಆದ್ಯತೆಯ ಮೇಲೆ ಆಗಬೇಕಾದ ಕೆಲಸ. ಆಡಳಿತ ಪಕ್ಷ ಹಾಗೂ ಪ್ರತಿಪಕ್ಷ ಎಂಬ ಬೇಧಭಾವವಿಲ್ಲದೆ ಇಡೀ ದೇಶಕ್ಕೆ ದೇಶವೇ ಒಂದಾಗಿ ಸಂಸತ್‌ನ ಪಾವಿತ್ರ್ಯತೆ ರಕ್ಷಿಸುವ ಮೂಲಕ ಭಾರತದ ಸಾರ್ವಭೌಮತ್ವವನ್ನು ಎತ್ತಿಹಿಡಿಯುವ ಕೆಲಸ ಮೊದಲು ಆಗಬೇಕು. ವಿಚಿತ್ರವೆಂದರೆ ಈಗ ಜರುಗುತ್ತಿರುವುದು ಅದಕ್ಕೆ ಸಮಾನಾಂತರವಾಗಿ. ಈ ವಿಚಾರದಲ್ಲಿ ಆಡಳಿತ ಪಕ್ಷದ್ದು ಎಷ್ಟು ದೋಷವಿದೆಯೋ ಪ್ರತಿಪಕ್ಷಗಳ ದೋಷವೂ ಅಷ್ಟೇ ಪ್ರಮಾಣದಲ್ಲಿದೆ. ಬಿಕ್ಕಟ್ಟು ಸುಲಲಿತವಾಗಿ ಇತ್ಯರ್ಥ ಆಗಲು ಮೊದಲು ಜರುಗಬೇಕಾದ ಕೆಲಸವೆಂದರೆ ಸಂಸತ್ ದಾಂಧಲೆಗೆ ಸಂಬಂಧಿಸಿದಂತೆ ಸರ್ಕಾರದ ವಿವರಣೆ. ಅಧಿವೇಶನ ನಡೆಯುತ್ತಿರುವಾಗ ಸಂಸತ್ತಿನಲ್ಲಿಯೇ ಇಂತಹ ವಿವರಣೆಯನ್ನು ಕೊಡುವುದು ಉಚಿತವೂ ಹೌದು ಸಾಧುವೂ ಹೌದು. ಅದನ್ನು ಬಿಟ್ಟು ಹೊರಗಡೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ರಾಜಕೀಯ ದಳ್ಳುರಿಗೆ ಗ್ರಾಸ ಒದಗಿಸಿದಂತೆ ಅಷ್ಟೆ. ಪ್ರತಿಪಕ್ಷಗಳೂ ಕೂಡಾ ಈ ವಿಚಾರದಲ್ಲಿ ಹಠಕ್ಕೆ ಬಿದ್ದವರಂತೆ ವರ್ತಿಸುವುದು ಒಪ್ಪಲಾಗದ ಸಂಗತಿ. ದೇಶ ಮೊದಲು ನಂತರ ರಾಜಕಾರಣ ಎಂಬ ಪರಮಸತ್ಯವನ್ನು ಸಮಸ್ತರೂ ಅರಿತರಷ್ಟೆ ಈಗಿನ ಬಿಕ್ಕಟ್ಟಿನ ನಿವಾರಣೆ.
ಸಂಸತ್ ದಾಂಧಲೆಗೆ ಸಂಬಂಧಿಸಿದಂತೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಸುಮಾರು ೯೦ ಮಂದಿ ಸದಸ್ಯರು ಇದುವರೆಗೆ ಅಮಾನತುಗೊಂಡಿರುವುದು ಬೇಸರದ ಸಂಗತಿ. ಸದಸ್ಯರು ಸರ್ಕಾರದ ಮೌನವನ್ನು ಪ್ರತಿಭಟಿಸಿ ಆಕ್ರೋಶಭರಿತರಾಗಿ ಬೀಸು ಮಾತುಗಳ ಮೂಲಕ ಕೋಪತಾಪವನ್ನು ಪ್ರದರ್ಶಿಸಿರುವುದನ್ನು ಒಪ್ಪಿಕೊಳ್ಳುವುದು ಕಷ್ಟವೆ. ಸಂಸತ್ ಎಂಬುದು ದೇಶದ ರಾಜಕೀಯ ಪ್ರಬುದ್ಧತೆಯ ಜಲಾಶಯ. ಹೀಗಿರುವಾಗ ವೈಯಕ್ತಿಕ ಅಥವಾ ವೈಚಾರಿಕ ನೆಲೆಗಟ್ಟಿನ ಭಾವಕೋಶದ ಮೂಲಕ ಭಾವನೆಗಳನ್ನು ಮಾತಿನ ಮಾಧ್ಯಮದ ಮೂಲಕ ತೇಲಿಬಿಡುವುದು ಸಂಸದೀಯ ಪರಂಪರೆಗೆ ಒಂದು ರೀತಿಯ ಅಪಚಾರವೇ. ಮೇಲ್ನೋಟಕ್ಕೆ ಸಾರ್ವಜನಿಕರಲ್ಲಿಯೂ ಒಮ್ಮತದ ನಿಲುವು ಕಂಡುಬರುತ್ತಿಲ್ಲ. ಇದಕ್ಕೆ ಮುಖ್ಯ ಕಾರಣವಾಗಿರುವುದು ಸಾಮಾಜಿಕವಾಗಿ ಉತ್ತರ ಧ್ರುವ ಹಾಗೂ ದಕ್ಷಿಣ ಧ್ರುವದಂತೆ ಪ್ರತ್ಯೇಕಗೊಳ್ಳುತ್ತಿರುವ ವೈಚಾರಿಕತೆಯ ನೆಲೆಗಟ್ಟು. ವೈಚಾರಿಕತೆ ಅವರವರ ಭಾವ ಭಕುತಿಗೆ ಬಿಟ್ಟದ್ದು. ಆದರೆ, ಜನತಂತ್ರದಲ್ಲಿ ಮುಖ್ಯವಾಗುವುದು ಬೇರೆಯವರ ಭಾವನೆಗಳನ್ನು ಆಲಿಸುವ ಔದಾರ್ಯವನ್ನು ತೋರಿದಾಗ ಮಾತ್ರ. ಆಲಿಸುವ ಕಿವಿಗಳು ಮುಚ್ಚಿಹೋಗಿ ಕೇವಲ ಬಾಯಿಯ ಕೆಲಸವೇ ಜೋರಾದಾಗ ಜನತಂತ್ರಕ್ಕೆ ಉಸಿರು ಕಟ್ಟುವ ವಾತಾವರಣ ತಲೆದೋರುವ ಅಪಾಯ ಖಂಡಿತ. ಈಗ ಸಂಸತ್ತೂ ಸೇರಿದಂತೆ ದೇಶದಲ್ಲಿ ತಲೆದೋರಿರುವ ಸ್ಥಿತಿಯೇ ಅದು. ಇದು ಭವಿಷ್ಯದ ದೃಷ್ಟಿಯಿಂದ ಶುಭಸೂಚಕವಾಗದೇನೋ.
ದಿನದಿಂದ ದಿನಕ್ಕೆ ಬದಲಾಗುತ್ತಿರುವ ರಾಜಕೀಯ ಸ್ಥಿತ್ಯಂತರಗಳ ಹಿನ್ನೆಲೆಯಲ್ಲಿ ಸಮತೂಕದ ನಿಲುವೊಂದೇ ದೇಶದ ಸಾರ್ವಭೌಮತ್ವದ ರಕ್ಷಣೆಗೆ ಗುರಾಣಿ. ಇಂತಹ ಗುರಾಣಿ ಚುನಾಯಿತ ಪ್ರತಿನಿಧಿಗಳಿಂದ ಹಿಡಿದು ಎಲ್ಲ ದೇಶವಾಸಿಗಳ ಬಳಿಯೂ ಇರುವಾಗಲೂ ಸಮತೂಕ ಕಂಡುಕೊಳ್ಳುವ ಮಾರ್ಗಕ್ಕೆ ಅಡ್ಡಿ ಆತಂಕಗಳು ಎದುರಾಗಬಾರದು. ಸಂಸದರ ಅಮಾನತಿನ ಕ್ರಮವನ್ನು ಉಭಯ ಸದನಗಳ ಅಧ್ಯಕ್ಷರು ಮತ್ತೊಮ್ಮೆ ಪರಿಶೀಲಿಸಿ ಪರಿಸ್ಥಿತಿಯ ಸುಧಾರಣೆಗೆ ರದ್ದುಪಡಿಸುವ ಮಾರ್ಗದ ಕಡೆ ಹೆಜ್ಜೆ ಹಾಕುವುದು ಯೋಗ್ಯವೂ, ಸಾಧುವೂ ಆದ ಕ್ರಮ. ಹಾಗೆಯೇ, ಅಮಾನತುಗೊಂಡಿರುವ ಸದಸ್ಯರೂ ಕೂಡಾ ತಮ್ಮ ವರ್ತನೆಯ ಬಗ್ಗೆ ವಿಷಾದ ಸೂಚಿಸುವ ಔದಾರ್ಯವನ್ನು ವ್ಯಕ್ತಪಡಿಸುವುದು ದೇಶದ ಪ್ರತಿಷ್ಠೆ ಹೆಚ್ಚಿಸುವ ಮಾರ್ಗ. ಭಾರತದ ಘನತೆ ಹಾಗೂ ಸಾರ್ವಭೌಮತ್ವ ರಕ್ಷಣೆಯ ವಿಚಾರದಲ್ಲಿ ಯಾರೊಬ್ಬರೂ ಮುಖ್ಯರು ಹೇಗಲ್ಲವೋ ಹಾಗೆಯೇ ಯಾರೊಬ್ಬರೂ ಅಮುಖ್ಯರೂ ಆಗುವುದಿಲ್ಲ. ರಾಷ್ಟ್ರಕವಿ ಕುವೆಂಪು ಅವರ ಮಾತುಗಳಲ್ಲಿ ಹೇಳುವುದಾದರೆ ಇಂತಹ ವಿಚಾರಗಳಲ್ಲಿ ಎಲ್ಲರೂ ಮುಖ್ಯರೇ.
ದೇಶ ಸುಭದ್ರವಾಗಿದ್ದರಷ್ಟೆ ಸುಭದ್ರ ರಾಜಕಾರಣ ಎಂಬ ಸತ್ಯವನ್ನು ನೆರೆಯ ಪಾಕಿಸ್ತಾನ, ಶ್ರೀಲಂಕಾ ದೇಶಗಳ ಸ್ಥಿತಿಗತಿಯನ್ನು ನೋಡಿಯಾದರೂ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕು. ಈಗ ಮೊದಲು ಆಗಬೇಕಾದದ್ದು ಸಂಸತ್ ದಾಂಧಲೆಯ ತನಿಖೆ ಹಾಗೂ ಅದಕ್ಕೆ ಪೂರ್ವಭಾವಿಯಾಗಿ ಸರ್ಕಾರದ ವಿವರಣೆ. ಅದನ್ನು ಬಿಟ್ಟು ಉಳಿದಿದ್ದೆಲ್ಲ ರಾಜಕೀಯ ವಾಗ್ವಿಲಾಸವಷ್ಟೆ.

Next Article