ಸಂಸದರ ಆಪ್ತನ ಕೊಲೆ: ನಾಲ್ವರ ಬಂಧನ
ಪಾರ್ಟಿ ಕೊಡುವ ನೆಪದಲ್ಲಿ ಗಿರೀಶ್ ಚಕ್ರ ಅವರನ್ನು ಕರೆದು ಹತ್ಯೆ ಮಾಡಲಾಗಿತ್ತು.
ಕಲಬುರಗಿ: ಸಂಸದ ಉಮೇಶ್ ಜಾಧವ್ ಆಪ್ತ ಗಿರೀಶ್ ಚಕ್ರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಗಾಣಗಾಪುರ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಕಳೆದ ದಿ. 29ರಂದು ಗಿರೀಶ್ ಚಕ್ರ ಕೊಲೆಯಾಗಿತ್ತು. ಒಂದು ವಾರದೊಳಗೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಅಫಜಲಪುರ ತಾಲೂಕಿನ ಕಿರಸಾವಳಗಿ ಗ್ರಾಮದ ಸಚಿನ್ ಕಿರಸಾವಳಗಿ, ವಿಶ್ವನಾಥ ಅಲಿಯಾಸ್ ಕುಮ್ಯಾ, ಪ್ರಜ್ವಲ್ ಎಂದು ಗುರುತಿಸಲಾಗಿದೆ. ಇನ್ನೊಬ್ಬ ಬಂಧಿತ ಬಾಲಕನಾಗಿದ್ದಾನೆ.
ಪಾರ್ಟಿ ಕೊಡುವ ನೆಪದಲ್ಲಿ ಗಿರೀಶ್ ಚಕ್ರ ಅವರನ್ನು ಕರೆದು ಹತ್ಯೆ ಮಾಡಲಾಗಿತ್ತು. ಕಣ್ಣಿಗೆ ಖಾರದ ಪುಡಿ ಎರಚಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸಾಗನೂರ ಗ್ರಾಮದ ಜಮೀನಿನಲ್ಲಿ ಈ ಕೃತ್ಯ ಎಸಗಲಾಗಿತ್ತು.
ಗಿರೀಶ್ ಚಕ್ರ ಅವರನ್ನು ಬಿಎಸ್ಎನ್ಎಲ್ ಸಲಹಾ ಸಮಿತಿ ನಿರ್ದೇಶಕರನ್ನಾಗಿ ಕೆಲವು ದಿನಗಳ ಹಿಂದೆ ಸಂಸದ ಉಮೇಶ್ ಜಾಧವ್ ನೇಮಕ ಮಾಡಿದ್ದರು. ಈ ಪ್ರಯುಕ್ತ ಪಾರ್ಟಿ ತೆಗಡದುಕೊಳ್ಳುವ ನೆಪದಲ್ಲಿ ನಂಬಿಸಿ, ಗಿರೀಶ್ ಚಕ್ರ ಅವರ ಸ್ನೇಹಿತರೇ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿತ್ತು. ಪಾರ್ಟಿಗೆಂದು ಜಮೀನಿಗೆ ಬಂದ ಗಿರೀಶ್ ಅವರ ಕಣ್ಣಿಗೆ ಖಾರದಪುಡಿಯ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಕುರಿತು ದೇವಲಗಾಣಗಾಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.