For the best experience, open
https://m.samyuktakarnataka.in
on your mobile browser.

ಸಂಸದರ ಲಂಚಾವತಾರಕ್ಕೆ ಬಿಡುವು

01:00 AM Mar 06, 2024 IST | Samyukta Karnataka
ಸಂಸದರ ಲಂಚಾವತಾರಕ್ಕೆ ಬಿಡುವು

ಸಂವಿಧಾನದ ದೃಷ್ಟಿಯಲ್ಲಿ ಭಾರತೀಯರೆಲ್ಲರೂ ಒಂದೇ; ದೊಡ್ಡವರಿರಲಿ-ಚಿಕ್ಕವರಿರಲಿ, ಅಧಿಕಾರಸ್ಥರಿರಲಿ ಇಲ್ಲವೇ ಅಧಿಕಾರೇತರರೇ ಇರಲಿ ಎಲ್ಲರೂ ಸರಿಸಮಾನರು. ಆದರೆ, ಚುನಾಯಿತ ಪ್ರತಿನಿಧಿಗಳಾದ ಸಂಸದರು ಮತ್ತು ಶಾಸಕರ ಜೊತೆಗೆ ನ್ಯಾಯಾಧೀಶರಿಗೂ ಕೂಡಾ ತಮ್ಮ ಜವಾಬ್ದಾರಿ ಮತ್ತು ಕರ್ತವ್ಯ ನಿರ್ವಹಣೆಯ ಸಲುವಾಗಿ ಕೆಲ ರಿಯಾಯ್ತಿಗಳನ್ನು ಬಿಟ್ಟರೆ ಉಳಿದಂತೆ ಕಾನೂನುಗಳು ಅನ್ವಯ. ಒಬ್ಬರಿಗೆ ಒಂದೇ ಮತ ಎಂಬ ನಿಯಮದ ಬೆಳಕಿನಲ್ಲಿ ಚಾಲ್ತಿಯಲ್ಲಿರುವ ಈ ಕಾನೂನುಗಳಲ್ಲಿ ಇನ್ನೂ ಒಂದು ಎದ್ದು ಕಾಣುವ ಅಂಶವೆಂದರೆ ಸಂಸದೀಯ ಕಲಾಪದಲ್ಲಿ ಸಂಸದರಿಗೆ ಇರುವ ರಕ್ಷಣೆಯಂತೆ ಶಾಸಕರಿಗೂ ಕೂಡಾ ಇಂತಹ ರಕ್ಷಣೆ ಉಂಟು. ನ್ಯಾಯಾಧೀಶರಿಗೂ ಕೂಡಾ ಅಷ್ಟೆ. ಹಲವಾರು ಸಂದರ್ಭಗಳಲ್ಲಿ ಈ ರಿಯಾಯ್ತಿಗಳು ಸಾರ್ವಜನಿಕ ಹಿತಸಾಧನೆಗಿಂತ ವೈಯಕ್ತಿಕ ಹಿತ ಸಾಧನೆಗೆ ನಿರ್ಣಾಯಕ ಪಾತ್ರ ವಹಿಸುತ್ತಿದ್ದರೂ ಕಾನೂನಿನ ಮುಂದೆ ಎಲ್ಲರೂ ಅಸಹಾಯಕರಂತೆ ಇರಬೇಕಾದ ಸ್ಥಿತಿಯನ್ನು ಗಮನಿಸಿರುವ ಸಪ್ತ ನ್ಯಾಯಮೂರ್ತಿಗಳ ಸುಪ್ರೀಂಕೋರ್ಟ್ ನ್ಯಾಯಪೀಠ ಭ್ರಷ್ಟಾಚಾರದ ವಿಚಾರದಲ್ಲಿ ಸಂಸದರು ಹಾಗೂ ಶಾಸಕರಿಗೆ ದೊರೆಯುತ್ತಿದ್ದ ರಕ್ಷಣೆಯನ್ನು ತೆಗೆದುಹಾಕಿ ಶಿಕ್ಷೆಗೆ ಅರ್ಹರು ಎಂದು ಹೇಳಿರುವುದು ನಿಜಕ್ಕೂ ಐತಿಹಾಸಿಕ ತೀರ್ಪು. ೧೯೯೧ರಿಂದ ೧೯೯೬ರವರೆಗೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಪಿ.ವಿ. ನರಸಿಂಹ ರಾಯರ ನೇತೃತ್ವದ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಸರ್ಕಾರವನ್ನು ಬಹುಮತಕ್ಕೆ ಪರಿವರ್ತಿಸಲು ಹೊರಟಾಗ ಹಲವಾರು ಸಂಸದರನ್ನ ಒಲಿಸಿಕೊಂಡ ಬೆಳವಣಿಗೆ ನಾನಾ ರೀತಿಯ ರಾಜಕೀಯ ಸ್ಥಿತ್ಯಂತರಕ್ಕೆ ಕಾರಣವಾಯಿತು. ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಸಂಸದರು ಲಂಚ ಸ್ವೀಕರಿಸಿ ಸರ್ಕಾರದ ಪರವಾಗಿ ಮತ ಚಲಾಯಿಸಿದ ಆರೋಪಕ್ಕೆ ಸಂಬಂಧಿಸಿದಂತೆ ೧೯೯೮ರಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಮರು ವ್ಯಾಖ್ಯಾನಕ್ಕೆ ಒಳಪಡಿಸಿರುವ ಸಪ್ತ ನ್ಯಾಯಮೂರ್ತಿಗಳ ಪೀಠ ಶಾಸಕರು ಹಾಗೂ ಸಂಸದರಿಗಿದ್ದ ರಿಯಾಯ್ತಿಯನ್ನು ರದ್ದುಪಡಿಸಿ ಶಿಕ್ಷೆಗೆ ಅವಕಾಶ ಕಲ್ಪಿಸಿರುವುದು ಭ್ರಷ್ಟಾಚಾರದ ಪ್ರಕರಣಗಳ ವಿಚಾರಣೆ ಸಮತಟ್ಟಿನ ಮೈದಾನದಲ್ಲಿ ನಡೆಯಲು ಮುಕ್ತ ಅವಕಾಶ ದೊರೆತಂತಾಗಿದೆ. ಇದು ನಿಜವಾದ ಅರ್ಥದಲ್ಲಿ ಸಾತ್ವಿಕ ಸ್ವಭಾವದ ಭಾರತೀಯರ ದಿಗ್ವಿಜಯ.
ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಇನ್ನೊಂದು ಪರಿಗಣಿಸಬೇಕಾದ ಅಂಶವೆಂದರೆ ರಾಜ್ಯಸಭಾ ಚುನಾವಣೆಯಲ್ಲಿ ಶಾಸಕರು ಪ್ರತಿಫಲ ಪಡೆದು ಮತಚಲಾಯಿಸಿದರೆ ಆಗ ಅದು ಕೂಡಾ ಭ್ರಷ್ಟಾಚಾರದ ವ್ಯಾಪ್ತಿಗೆ ಎಂಬ ವಿಶ್ಲೇಷಣೆ ಮುಂಬರುವ ಪರೋಕ್ಷ ಚುನಾವಣೆಗಳಲ್ಲಿ ನಾನಾ ರೀತಿಯ ಪಾತ್ರವನ್ನು ಬೀರುವುದು ಖಂಡಿತ. ಪಕ್ಷದ ಕಟ್ಟಾಜ್ಞೆ (ವಿಪ್) ಉಲ್ಲಂಘಿಸಿದಾಕ್ಷಣ ಸದಸ್ಯತ್ವದ ಅನರ್ಹತೆ ಆಕರ್ಷಿಸುವುದಿಲ್ಲ ಎಂಬ ಮಾತು ಈಗ ಬೇರೆ ರೂಪ ಪಡೆದುಕೊಂಡು ರಾಜ್ಯಸಭೆ ಚುನಾವಣೆಯ ಮತದಾನದಲ್ಲಿ ಎಚ್ಚರ ವಹಿಸದೇ ಇದ್ದರೆ ಅನರ್ಹತೆ ಆಕರ್ಷಿಸಿಕೊಳ್ಳುವುದು ಖಚಿತವಾಗಿಹೋಗಿದೆ. ಹಾಗೊಮ್ಮೆ, ಇಂತಹ ಆದೇಶ ಈ ಹಿಂದೆಯೇ ಜಾರಿಯಲ್ಲಿದ್ದಿದ್ದರೆ ಕರ್ನಾಟಕದಲ್ಲಿ ಈಗಷ್ಟೇ ಮುಗಿದಿರುವ ರಾಜ್ಯಸಭೆ ಚುನಾವಣೆಯ ಮತಾಂತರ ಪ್ರಕರಣದಲ್ಲಿ ಕನಿಷ್ಠ ಇಬ್ಬರಾದರೂ ಶಾಸಕರು ಅನರ್ಹಗೊಳ್ಳುತ್ತಿದ್ದದ್ದು ಖಚಿತ. ಹಾಗೆಯೇ, ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶದಲ್ಲಿ ಮತಾಂತರ ಮಾಡಿರುವ ಶಾಸಕರಿಗೂ ಇದೇ ರೀತಿಯ ಶಿಕ್ಷೆ ಜಾರಿಯಾಗಿ ರಾಜಕೀಯದ ಬೆಳವಣಿಗೆ ಹೊಸ ತಿರುವು ಪಡೆಯುತ್ತಿತ್ತು.
ಸಂಸದರಿಗೆ ಇಂತಹ ರಿಯಾಯ್ತಿಯನ್ನು ಕೊಡಲು ಆಗ ಸಕಾರಗಳಿದ್ದವು. ಸಂಸದೀಯ ಕಲಾಪದಲ್ಲಿ ಸಾರ್ವಜನಿಕ ಹಿತವನ್ನು ಪ್ರತಿಪಾದಿಸಬೇಕಾದಾಗ ನಿರ್ದಾಕ್ಷಿಣ್ಯ ರೀತಿಯಲ್ಲಿ ನಿಲುವುಗಳನ್ನು ಮಂಡಿಸಿದರೆ ಆಗ ಸಂಸದರು ಕೋರ್ಟಿಗೆ ಅಲೆಯಬೇಕಾದ ಪರಿಸ್ಥಿತಿಯನ್ನು ಗಮನಿಸಿ ಕೆಲವು ರಿಯಾಯ್ತಿಗಳನ್ನು ಒದಗಿಸಲಾಗಿತ್ತು. ಈ ರಿಯಾಯ್ತಿಗಳು ಭ್ರಷ್ಟಾಚಾರ ಪ್ರಕರಣಕ್ಕೂ ಕಾರ್ಯಾಂಗದವರು ಅನ್ವಯ ಮಾಡಿಕೊಂಡ ಪರಿಣಾಮವಾಗಿ ಲಂಚಾವತಾರವೆಂಬುದು ಕೇವಲ ಸಾರ್ವಜನಿಕರಿಗೆ ಮಾತ್ರ ಎಂಬಂತಾಗಿಹೋಗಿತ್ತು. ಈಗ ಈ ದೋಷವನ್ನು ಸರಿಪಡಿಸಲಾಗಿದೆ. ಕಾನೂನಿನ ಮುಂದೆ ಭ್ರಷ್ಟಾಚಾರದ ವಿಷಯದಲ್ಲಿ ಸಂಸದರೂ ಒಂದೇ ಸಾರ್ವಜನಿಕರೂ ಒಂದೇ ಎಂಬಂತಾಗಿದೆ.
ನ್ಯಾಯಾಧೀಶರಿಗೂ ಕೂಡಾ ಇಂತಹ ರಿಯಾಯ್ತಿಗಳು ಬೇಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಬಹುಕಾಲದಿಂದ ಚರ್ಚೆಯಲ್ಲಿದೆ. ಕಾನೂನು ಆಯೋಗದ ಮುಖ್ಯಸ್ಥರಾಗಿದ್ದ ವಿ.ಎಸ್. ಪಾಟೀಲ್ ಅವರು ಹಿಂದೊಮ್ಮೆ ಪ್ರತಿಪಾದಿಸಿದಂತೆ ನ್ಯಾಯಾಧೀಶರಿಗೂ ಯಾವುದೇ ರೀತಿಯ ರಿಯಾಯ್ತಿಗಳು ಕೂಡದು ಎಂದು ಸ್ಪಷ್ಟವಾಗಿ ಹೇಳಿದ್ದರು. ನ್ಯಾಯಾಲಯದ ತೀರ್ಪುಗಳನ್ನು ವಿಶ್ಲೇಷಿಸಲು ಸಾರ್ವಜನಿಕರಿಗೆ ಅವಕಾಶವಿದೆ. ಆದರೆ, ನ್ಯಾಯಮೂರ್ತಿಗಳನ್ನು ವ್ಯಕ್ತಿಗತವಾಗಿ ಟೀಕಿಸುವ ಸ್ವಾತಂತ್ರ್ಯ ಸಾರ್ವಜನಿಕರಿಗಿಲ್ಲ ಎಂಬುದು ಬಿಟ್ಟರೆ ಬೇರೆ ಯಾವುದೇ ರೀತಿಯ ರಿಯಾಯ್ತಿಗಳ ಅನಗತ್ಯ ಎಂಬುದು ಅವರ ಮಾತಿನ ಅರ್ಥವಾಗಿತ್ತು. ಸಂಸದರಿಗಿದ್ದ ರಿಯಾಯ್ತಿ ಸೌಲಭ್ಯವನ್ನು ರದ್ದುಪಡಿಸಿರುವ ಸುಪ್ರೀಂಕೋರ್ಟ್ ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ನ್ಯಾಯಾಧೀಶರಿಗಿರುವ ರಿಯಾಯ್ತಿ ಸೌಲಭ್ಯದ ಸಾಧಕ ಬಾಧಕಗಳ ಬಗ್ಗೆ ನಿಲುವು ವ್ಯಕ್ತಪಡಿಸುವುದು ಈಗಿನ ಸಂದರ್ಭದಲ್ಲಿ ಅಪೇಕ್ಷಿತ.