ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸಂಸದೀಯ ರಾಜಕಾರಣ: ದಿವ್ಯ ಅನಾಸಕ್ತಿ!

02:00 AM Apr 01, 2024 IST | Samyukta Karnataka

ಕನ್ನಡಿಗರಲ್ಲಿ ಕನ್ನಡಾಭಿಮಾನದ ಕೊರತೆ. ಇದು ತೀರಾ ಚರ್ವಿತಚರ್ವಣದಂತಾಗಿರುವ ಸಾರ್ವತ್ರಿಕ ಗೊಣಗಾಟ. ಅಷ್ಟೇ ಅಲ್ಲ, ಚುನಾಯಿತ ಹುದ್ದೆಗಳಲ್ಲಿರುವ ರಾಜ್ಯದ ಅತ್ಯಂತ ಜನಪ್ರಿಯ ಮಾಸ್ ಲೀಡರುಗಳಲ್ಲೂ "ಸ್ವಾಭಿಮಾನ" ಎಂದರೇನೇ ಅದು ಕೇವಲ ಕರ್ನಾಟಕದ ನೆಲ, ಜಲ, ಗಡಿ, ನಿಸರ್ಗ ಸಂಪತ್ತಿಗಷ್ಟೇ ಸೀಮಿತವಾದ ಶಬ್ದಾಡಂಬರವೇ ಹೊರತು ಅದರಲ್ಲೂ ಅಂತರಾಳದ ಗಟ್ಟಿ ಸಂಕಲ್ಪ ಗೋಚರಿಸುವುದು ಅಪರೂಪ. ಇರ‍್ಯಾರಿಗೂ ಸಂಸದೀಯ ರಾಜಕಾರಣದ ಬಗ್ಗೆ ಒಂದಿನಿತೂ ಉತ್ಸಾಹ, ಆಸಕ್ತಿ ಅಥವಾ ಆಕರ್ಷಣೆ ಕಾಣುತ್ತಲೇ ಇಲ್ಲ.
ಇದೀಗ ೨೦೨೪ರ ಲೋಕಸಭಾ ಚುನಾವಣೆಯ ಪ್ರಕ್ರಿಯೆ ವಿದ್ಯುಕ್ತವಾಗಿ ಆರಂಭಗೊಂಡ ನಂತರವೂ ರಾಜ್ಯದ ಮೂರೂ ಪ್ರಭಾವಿ ರಾಜಕೀಯ ಪಕ್ಷಗಳ ಮುಂಚೂಣಿ ನಾಯಕರುಗಳ ಪೈಕಿ ಯಾರೊಬ್ಬರಲ್ಲೂ ಒಂದು ನಿರ್ದಿಷ್ಟವಾದ ರಾಷ್ಟ್ರೀಯ ದೃಷ್ಟಿಕೋನವಾಗಲೀ, ರಾಷ್ಟ್ರವ್ಯಾಪಿ ಅನ್ವಯವಾಗಬಲ್ಲ ಒಂದು ವಿನೂತನ ಜನಪರ ಚಿಂತನೆಯಾಗಲೀ ಅಥವಾ ಇಡೀ ದೇಶದಲ್ಲೇ ಮಿಂಚಿನ ಸಂಚಾರವನ್ನುಂಟು ಮಾಡಬಲ್ಲ ಒಂದೇ ಒಂದು ಸ್ಫೂರ್ತಿದಾಯಕ ಘೋಷಣೆಯಾಗಲೀ ಹೊರಹೊಮ್ಮುತ್ತಿಲ್ಲ. ಚುನಾವಣೆ ರಾಷ್ಟ್ರದ ಲೋಕಸಭೆಗಾಗಿ ನಡೆಯುತ್ತಿದ್ದರೂ ಕರ್ನಾಟಕದ ರಾಜಕಾರಣಿಗಳ ವೈಯಕ್ತಿಕ ಕನಸು-ಹಿತಾಸಕ್ತಿಗಳೇನಿದ್ದರೂ ಕೇವಲ ತಮ್ಮ ಸ್ವಂತ ಜಾತಿ, ಊರು ಮತ್ತು ಕ್ಷೇತ್ರಗಳಿಗಷ್ಟೇ ಸೀಮಿತವೆಂಬಂತೆ ಭಾಸವಾಗುತ್ತಿದೆ.
ಇದಕ್ಕೆ ವ್ಯತಿರಿಕ್ತವಾಗಿ ಮಾದರಿ ಮತ್ತು ಮನೋಧರ್ಮ ಇನ್ನಾರದ್ದೂ ಅಲ್ಲ, "ಫಿರ್ ಏಕ್ ಬಾರ್ ಮೋದಿ ಸರ್ಕಾರ್" ಎಂದಬ್ಬರಿಸುತ್ತಲೇ ಮತ್ತೊಮ್ಮೆ ಕಣಕ್ಕೆ ಧುಮುಕಿರುವ ಪ್ರಧಾನಿ ನರೇಂದ್ರ ಮೋದಿಯವರದ್ದೇ. ಈಗ್ಗೆ ೧೧ ವರ್ಷಗಳ ಹಿಂದೆ ಅಂದರೆ ೨೦೧೩ರ ಆಗಸ್ಟ್ ೧೫ರ ಸ್ವಾತಂತ್ರ್ಯೋತ್ಸವ ದಿನದಂದು ನಡೆದ ಘಟನೆಯತ್ತ ವಾಚಕರ ಗಮನ ಸೆಳೆಯಬೇಕಿದೆ. ಅಂದು ಗುಜರಾತ್ ರಾಜ್ಯದ ಸಿ.ಎಂ. ಆಗಿದ್ದ ಈ ಮೋದಿಯವರು ರಾಜ್‌ಕೋಟ್‌ನಲ್ಲಿ ತಮ್ಮ ಸರ್ಕಾರದ ಅಧಿಕೃತ ಧ್ವಜಾರೋಹಣದ ಸಮಾರಂಭವೇರ್ಪಡಿಸಿಕೊಂಡಿದ್ದರು. ಆದರೆ ಬೆಳಗ್ಗೆ ೭:೩೦ರಿಂದ ೯:೦೦ ಗಂಟೆಯವರೆಗೂ ಅದೇ ಜಾಗದಲ್ಲಿ ಸಾವಧಾನದಿಂದ ಕಾದಿದ್ದು ಅವರು ಮಾಡಿದ್ದೇನು ಗೊತ್ತೇ? ದಿಲ್ಲಿಯ ಕೆಂಪುಕೋಟೆಯಿಂದ ಅಂದಿನ ಯುಪಿಎ ಸರ್ಕಾರದ ಪ್ರಧಾನಿ ಡಾ|| ಮನಮೋಹನ್ ಸಿಂಗರು ರಾಷ್ಟ್ರವನ್ನುದ್ದೇಶಿಸಿದ ಮಾಡಿದ ಸಾಂಪ್ರದಾಯಿಕ ಭಾಷಣದ ಪ್ರಸಾರವನ್ನು ಟಿ.ವಿ. ಮುಂದೆ ಕೂತು ತದೇಕಚಿತ್ತದಿಂದ ಆಲಿಸಿದ್ದು!!
ಅತ್ತ ದಿಲ್ಲಿ ದೂರದರ್ಶನದ ಪ್ರಧಾನಿ ಭಾಷಣದ ಪ್ರಸಾರ ಕೊನೆಗೊಳ್ಳುತ್ತಿದ್ದಂತೆಯೇ ಇತ್ತ ರಾಜ್‌ಕೋಟ್‌ನಲ್ಲಿ ಧ್ವಜಾರೋಹಣ ನೆರವೇರಿಸಿದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಭಾಷಣ ಆರಂಭವಾಗಿತ್ತು. ಅದೇ ಮೊದಲ ಬಾರಿಗೆ ಇಡೀ ರಾಷ್ಟ್ರದ ಜನತೆಗೆ ಈ ಮೋದಿ ಎಂಬ ವಿಶಿಷ್ಟ ಜಾಯಮಾನದ ಆದರೆ ಅತ್ಯಂತ ಕ್ರಿಯಾಶೀಲ ಚಿಂತನೆಯ ಓರ್ವ ಪ್ರಾದೇಶಿಕ ಮಟ್ಟದ ನಾಯಕನ ಸಮಗ್ರ ದೃಷ್ಟಿಕೋನ ಮತ್ತು ವಾಗ್ಚಾತುರ್ಯದ ಪರಿಚಯವಾಗಿದ್ದು. ಅಲ್ಲಿ ದಿಲ್ಲಿಯಿಂದ ಪ್ರಧಾನಿ ಸಿಂಗ್ ಎತ್ತಿದ ಪ್ರತಿಯೊಂದು ಅಂಶಕ್ಕೂ ಇಲ್ಲಿ ಗುಜರಾತ್ ಮುಖ್ಯಮಂತ್ರಿಯ ಬಾಯಿಂದ ಅದಕ್ಕೊಂದು ಪರ್ಯಾಯ ಉತ್ತರ ಅಥವಾ ಪರಿಹಾರ ರೂಪದ ಪ್ರತ್ಯುತ್ತರ ಭೋರ್ಗರೆಯುತ್ತಾ ಹೊರಹೊಮ್ಮಿತ್ತು. ಆವತ್ತೇ ಅದುವರೆಗಿನ ಯುಪಿಎ ಆಡಳಿತವನ್ನು ಬಾಧಿಸತೊಡಗಿದ್ದ ಆಡಳಿತಾತ್ಮಕ ವೈಫಲ್ಯ, ಲಕ್ವಬಡಿದ ನೀತಿ ನಿರೂಪಣೆ, ವ್ಯಾಪಕ ಭ್ರಷ್ಟಾಚಾರ ಹಗರಣದ ಕಪ್ಪು ನೆರಳು ಹಾಗೂ ಅಧಿಕಾರಶಾಹಿಯ ಜಡತ್ವ ಇತ್ಯಾದಿಗಳ ಕುರಿತ ಮೋದಿಯ ವಿಶ್ಲೇಷಣೆ ದೂರದರ್ಶನದ ವೀಕ್ಷಕರ ಮೂಲಕ ಇಡೀ ರಾಷ್ಟ್ರಾದ್ಯಂತ ಅನುರಣಿಸತೊಡಗಿತ್ತು. ಅಷ್ಟೇ ಅಲ್ಲ, ನರೇಂದ್ರ ಮೋದಿ ಎಂಬ ರಾಜ್ಯ ನಾಯಕನ ರಾಷ್ಟ್ರೀಯ ನಾಯಕತ್ವದ ಹಂಬಲ ಕೂಡ ಅತ್ಯಂತ ಭರವಸೆಯ ಆಶಾಕಿರಣದಂತೆ ರಾಷ್ಟ್ರದ ಜನಸಾಮಾನ್ಯರೆದುರು ಅನಾವರಣಗೊಂಡಿತ್ತು. ತದನಂತರದ್ದೆಲ್ಲವೂ ಚಿರಪರಿಚಿತ ಇತಿಹಾಸದಂತಿದೆ.
ಮತ್ತೆ ನಮ್ಮ ಕನ್ನಡನಾಡಿನ ರಾಜಕೀಯ ಚರಿತ್ರೆಗೇ ಮರಳುವುದಾದಲ್ಲಿ ೧೯೭೦ರ ದಶಕದಲ್ಲಿ ಇಂದಿರಾಗಾಂಧಿ ದರಬಾರಿನ ರೇಲ್ವೆ ಮಂತ್ರಿಯಾಗಿ ಇಡೀ ದೇಶಾದ್ಯಂತ ಪ್ರಯಾಣಿಕರ ರೈಲು ಸಂಚಾರದಲ್ಲಿ ಶಿಸ್ತು, ಸಮಯಪಾಲನೆ ಹಾಗೂ ಸುಖಪ್ರಯಾಣದ ಆಹ್ಲಾದಕರ ವಾತಾವರಣ ಮೂಡಿಸಿದ ಕೆಂಗಲ್ ಹನುಮಂತಯ್ಯನವರಂತಹ ಹಿರಿಯ ಮುತ್ಸದ್ಧಿ ನೆನಪಾಗುತ್ತಾರೆ. ಸ್ವತ: ತಮ್ಮ ಕಾರ್ಯವೈಖರಿಯಲ್ಲೇ ಅಂತಹ ದಕ್ಷತೆ, ಕಾರ್ಯಕ್ಷಮತೆ ಮತ್ತು ದೃಢತೆಯನ್ನು ಮೈಗೂಡಿಸಿಕೊಂಡಿದ್ದ ಕೆಂಗಲ್ಲರ ಮಂತ್ರಿಗಿರಿ ಹಠಾತ್ತನೇ ಅಲ್ಪಾವಧಿಯಲ್ಲಿ ಸಮಾಪ್ತಿಯಾದರೂ ಅವರು ಬಿಟ್ಟುಹೋದ ಬಳುವಳಿ ಚಿರಸ್ಥಾಯಿಯಾಗಿತ್ತು. ಹಾಗೆಯೇ ೧೯೮೦ರ ದಶಕದ ಆರಂಭದಲ್ಲಿ ಅದೇ ಇಂದಿರಾಗಾಂಧಿ ಸರ್ಕಾರದ ಆರ್ಥಿಕ ಇಲಾಖೆಯ ರಾಜ್ಯ ಸಚಿವರಾಗಿ ಜನಾರ್ದನ ಪೂಜಾರಿಯವರು ಜಾರಿಗೊಳಿಸಿದ "ಲೋನ್ ಮೇಳ" ಎಂಬ ರಾಷ್ಟ್ರೀಯ ಅಭಿಯಾನವೋ ಇಡೀ ದೇಶಾದ್ಯಂತ ಬಡವರನ್ನು ಬ್ಯಾಂಕಿಂಗ್ ಮುಖ್ಯವಾಹಿನಿಯಲ್ಲಿ ತೊಡಗಿಸುವಲ್ಲಿ ಅತ್ಯಂತ ಯಶಸ್ವಿ ಪ್ರಯೋಗವೆನಿಸಿತ್ತು. ಮುಂದೆ ೧೯೯೦ರ ಪಿವಿಎನ್ ಸರ್ಕಾರದಲ್ಲೂ ರೇಲ್ವೆ ಮಂತ್ರಿಯಾಗಿ ೨ ಅವಧಿ ಕೆಲಸ ಮಾಡಿದ ಜಾಫರ್ ಶರೀಫರೋ ತಮ್ಮ ಅಚ್ಚುಮೆಚ್ಚಿನ ಕನಸಾದ ಏಕರೂಪ ಗೇಜ್ ಪರಿವರ್ತನೆ - ಯೂನಿಗೇಜ್ ಕನ್ವರ್ಷನ್- ಎಂಬ ಕ್ರಿಯಾಯೋಜನೆಯನ್ನು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಕಾರ್ಯಗತಗೊಳಿಸಲು ಪ್ರದರ್ಶಿಸಿದ ವ್ಯವಹಾರ ಕುಶಲತೆ ಹಾಗೂ ಕಾರ್ಯಕ್ಷಮತೆ ಇವತ್ತಿಗೂ ಚರಿತ್ರಾರ್ಹವಾಗಿದೆ. ಈ ಮೂವರಿಗೂ ಸಂಸದೀಯ ರಾಜಕಾರಣವೆಂಬುದು ಒಂದು ಪ್ರಜ್ಞಾಪೂರ್ವಕ ಆಯ್ಕೆಯಂತಿತ್ತೇ ವಿನ: ರಾಜ್ಯ ರಾಜಕಾರಣದಲ್ಲಿ ಜಾಗ ಖಾಲಿಯಿಲ್ಲವೆಂಬ ಅನಿವಾರ್ಯತೆಯಿಂದ ಸೃಷ್ಟಿಯಾದ "ಶಾಪಗ್ರಸ್ಥ" ಸ್ಥಿತಿಯಾಗಿರಲಿಲ್ಲ.
ಪ್ರಶ್ನೆ ಇಷ್ಟೇ. ಆವತ್ತು ವಿಧಾನಸಭೆಯ ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ನಿಂತು ತೋಳುತಟ್ಟುತ್ತಾ "ಹೌದು, ನಾನು ಈ ರಾಜ್ಯದ ಸಿಎಂ ಆಗ್ಲೇ ಬೇಕು, ಆಗೇ ಆಗ್ತೇನೆ" ಎಂದು ಘಂಟಾಘೋಷದಂತೆ ಸಾರಿ, ಅದನ್ನು ಸಾಧಿಸಿಯೂ ತೋರಿಸಿದ ಸಿದ್ರಾಮಯ್ಯನವರ ಬಾಯಿಂದೇಕೆ "ನಾನು ಈ ದೇಶದ ಪಿಎಂ ಆಗಲೇಬೇಕು" ಎಂಬ ಭೀಷ್ಮ ಪ್ರತಿಜ್ಞೆ ಹೊರಹೊಮ್ಮುತ್ತಿಲ್ಲ?

Next Article