For the best experience, open
https://m.samyuktakarnataka.in
on your mobile browser.

ಸಂಸ್ಕೃತಿ ಆಚರಣೆಗಳಿಗೆ ಅಡ್ಡಿಪಡಿಸುವುದು ಶೋಭೆಯಲ್ಲ

04:59 PM Jan 17, 2025 IST | Samyukta Karnataka
ಸಂಸ್ಕೃತಿ ಆಚರಣೆಗಳಿಗೆ ಅಡ್ಡಿಪಡಿಸುವುದು ಶೋಭೆಯಲ್ಲ

ಮಂಗಳೂರು: ಧಾರ್ಮಿಕ ನೆಲೆಗಟ್ಟಿನ ಮೇಲೆ ಅನಾದಿ ಕಾಲದಿಂದಲೂ ಯಾವುದೇ ಅಡ್ಡಿ-ಆತಂಕಗಳಿಲ್ಲದೇ ನಿರಂತರವಾಗಿ ನಡೆದು ಬಂದಂತಹ ಗಂಡುಕಲೆಯಾದ ಯಕ್ಷಗಾನವನ್ನು ಪೊಲೀಸರ ಮೂಲಕ ಅರ್ಧಕ್ಕೆ ನಿಲ್ಲಿಸುವ ಮೂಲಕ ಕಲೆಗೆ ಅವಮಾನಿಸಲು ಯತ್ನಿಸಿರುವುದು ಕಾಂಗ್ರೆಸ್ಸಿನ ಹೀನ ಮನಸ್ಥಿತಿಗೆ ಹಿಡಿದ ಕೈಗನ್ನಡಿ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಕಳದಲ್ಲಿ ಸಂಕ್ರಾಂತಿಯ ಪ್ರಯುಕ್ತ ಸಾರ್ವಜನಿಕ ಸತ್ಯನಾರಾಯಣ ಪೂಜೆಯ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಯಕ್ಷಗಾನ ಪ್ರದರ್ಶನಕ್ಕೆ ಸ್ಥಳೀಯ ಕಾಂಗ್ರೆಸ್ ನಾಯಕನ ಫೋನ್ ಕರೆಯ ದೂರಿನ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ಯಕ್ಷಗಾನವನ್ನು ನಿಲ್ಲಿಸುವಂತೆ ಸೂಚಿಸಿ, ಆಯೋಜಕರನ್ನು ಬಂಧಿಸಲು ಮುಂದಾಗಿದ್ದು ಖಂಡನೀಯ. ಇದೀಗ ಯಕ್ಷಗಾನ ಆಯೋಜನೆ ಮಾಡಿದವರ ಮೇಲೆ ಪ್ರಕರಣ ದಾಖಲಾಗಿದ್ದು ಇಂತಹ ಘಟನೆಗಳನ್ನು ಖಂಡಿಸದಿದ್ದರೆ ಮುಂದಿನ ದಿನಗಳಲ್ಲಿ ಅವರು ತುಳುನಾಡ ಪರಂಪರೆಯಾದ ಕೋಲ, ನೇಮ, ಕಂಬಳ, ಜಾತ್ರೆಗೂ ಅಡ್ಡಿಪಡಿಸಲು ಹೇಸುವುದಿಲ್ಲ ಎಂದರು.
ಯಾರೋ ಒಬ್ಬ ವ್ಯಕ್ತಿಯ ದುರುದ್ದೇಶದ ರಾಜಕೀಯ ಹಿತಾಸಕ್ತಿಗಾಗಿ ಶತ ಶತಮಾನಗಳಿಂದ ನಡೆದುಕೊಂಡು ಬಂದಿರುವ ಸಂಸ್ಕೃತಿ ಆಚರಣೆಗಳಿಗೆ ಅಡ್ಡಿಪಡಿಸುವುದು ಶೋಭೆಯಲ್ಲ. ಯಕ್ಷಗಾನವನ್ನೇ ಉಸಿರಾಗಿಸಿಕೊಂಡು ಬದುಕುತ್ತಿರುವ ಕಲಾವಿದರಿಗೆ ಹಾಗೂ ತುಳುನಾಡ ಪರಂಪರೆಗೆ ಕಿಂಚಿತ್ತು ಧಕ್ಕೆಯುಂಟಾದರೂ ಸಹಿಸುವ ಪ್ರಶ್ನೆಯೇ ಇಲ್ಲ. ಕರಾವಳಿಯ ಕಲೆ ಹಾಗೂ ಧಾರ್ಮಿಕತೆಯ ನಂಬಿಕೆಗೆ ಧಕ್ಕೆಯುಂಟು ಮಾಡಿ ದರ್ಪ ತೋರಿದ ಕಾಂಗ್ರೆಸ್ಸಿಗರು ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೇಳುವುದರ ಜೊತೆಗೆ ದ್ವೇಷದಿಂದ ದಾಖಲಾಗಿರುವ ಪ್ರಕರಣವನ್ನು ಬೇಷರತ್ ಹಿಂಪಡೆಯಬೇಕೆಂದು ಶಾಸಕರು ಸರ್ಕಾರವನ್ನು ಆಗ್ರಹಿಸಿದರು.

Tags :