ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸಂಸ್ಕೃತಿ, ಪರಂಪರೆ ನಾಶವಾದರೆ ಸರ್ವಸ್ವವೂ ನಾಶ

02:32 PM Dec 15, 2024 IST | Samyukta Karnataka

ಬಾಳೆಹೊನ್ನೂರು(ಚಿಕ್ಕಮಗಳೂರು): ಆಸ್ತಿ, ಹಣ ಹೋದರೆ ಸಂಪತ್ತು ಮಾತ್ರ ಹೋಗುತ್ತದೆ, ಆದರೆ ಪ್ರಕೃತಿ, ಪರಂಪರೆ ಮತ್ತು ಸಂಸ್ಕೃತಿಯ ನಾಶವಾದರೆ ಸರ್ವಸ್ವವೂ ನಾಶವಾಗುತ್ತದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಬಾಳೆಹೊನ್ನೂರಿನಲ್ಲಿ ಭಾನುವಾರ ರಂಭಾಪುರಿ ವೀರ ರುದ್ರಮುನಿದೇವ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಂಸ್ಕೃತಿ, ಪರಂಪರೆಯ ನಾಶವಾದರೆ ಮಾನವತೆಯೇ ಸಂಕಷ್ಟಕ್ಕೆ ಸಿಲುಕುತ್ತದೆ. ಹೀಗಾಗಿಯೇ ಮಠ ಮಾನ್ಯಗಳು ಸಂಸ್ಕೃತಿ, ಪರಂಪರೆಯ ಸಂರಕ್ಷಣೆಗೆ ಅವಿರತ ಶ್ರಮಿಸುತ್ತಿವೆ ಎಂದು ಹೇಳಿದರು.
ಬಾಳೆ ಹೊನ್ನೂರು ಮಹಾ ಸಂಸ್ಥಾನ ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ, ಸಾಹಿತ್ಯ ಸಂಸ್ಕೃತಿ ಸಂವರ್ಧಿಸಲಿ, ಶಾಂತಿ ಸಮೃದ್ಧಿ ಸರ್ವರಿಗಾಗಲಿ ಎಂಬ ಮಹೋನ್ನತ ಧ್ಯೇಯದೊಂದಿಗೆ ಧರ್ಮಪ್ರಚಾರ ಮಾಡುತ್ತಿದ್ದು, ಮಠದ ಕಾರ್ಯ ಮಹೋನ್ನತವಾದ್ದು ಎಂದರು.
ಜನ ಸಮುದಾಯ ಮತ್ತು ಸಮಾಜದಲ್ಲಿ ಧಾರ್ಮಿಕ ಸಾಮರಸ್ಯ ಬೆಳೆಸುವುದೇ ಮಠಗಳು ಎಂದ ಅವರು, ಪ್ರಕೃತಿ ದೇವಿಯ ವರದಿಂದ ಹಚ್ಚ ಹಸಿರಿನಿಂದ ಕೂಡಿ, ಕರ್ನಾಟಕದ ಕಾಶ್ಮೀರ ಎಂದೇ ಖ್ಯಾತವಾದ ಚಿಕ್ಕಮಗಳೂರು ಜಿಲ್ಲೆಯ ಜನರು ಅದೃಷ್ಟವಂತರು ಎಂದರು.
ಭದ್ರಾ ನದಿಯ ದಂಡೆಯಲ್ಲಿ, ಸುಂದರ ಪ್ರಕೃತಿ ರಮಣೀಯ ಪ್ರದೇಶದಲ್ಲಿ ಹಚ್ಚ ಹಸುರಿನ ವನರಾಶಿಯ ನಡುವೆ ಸ್ಥಾಪನೆಯಾಗಿರುವ ರಂಭಾಪುರಿ ಪೀಠ ಈ ಭೂಮಿಯ ಸ್ವರ್ಗ ಎಂದರೆ ಅತಿಶಯೋಕ್ತಿಯೇನಲ್ಲ. ಜಿಲ್ಲೆಯಲ್ಲಿ ಶೇ. 58ರಷ್ಟು ಅರಣ್ಯ ಪ್ರದೇಶ ಇದೆ ಎಂದರು.
ಪಶ್ಚಿಮಘಟ್ಟ ಹಲವು ನದಿಗಳ ಮೂಲವಾಗಿದ್ದು ಇದನ್ನು ಸಂರಕ್ಷಿಸಬೇಕು. ಅದೇ ರೀತಿ ಇರುವ ಒಂದೇ ಭೂಮಿಯನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.
ಧಾರ್ಮಿಕ ಶ್ರದ್ಧೆಯಿಂದ ಲೋಕ ಕಲ್ಯಾಣವಾಗಬೇಕು ಆಗ ಮಾತ್ರ ಜಗತ್ತು ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ಧರ್ಮದ ಪುನರುತ್ಥಾನಕ್ಕೆ ಪಂಚಪೀಠಗಳೂ ಶ್ರಮಿಸುತ್ತಿವೆ. ರಾಜ್ಯದ ಎಲ್ಲ ವೀರಶೈವ ಲಿಂಗಾಯತ ಮಠಗಳೂ ಶ್ರಮಿಸುತ್ತಿವೆ. ನಮ್ಮ ಮಠಗಳು ಕರುನಾಡಿನ ಅಭ್ಯುದಯಕ್ಕೆ ನೀಡಿರುವ ಕೊಡುಗೆ ಅಪಾರವಾದ್ದು. ಶಿಕ್ಷಣ, ವೈದ್ಯಕೀಯ, ಧಾರ್ಮಿಕ ಹೀಗಾಗಿ ನಾನಾ ರಂಗದಲ್ಲಿ ಗಣನೀಯ ಎಂದರು.
ನಮ್ಮ ಮಠಾಧಿಪತಿಗಳು, ಗುರುಪರಂಪರೆ ನೂರಲ್ಲ, ಸಾವಿರಾರು ವರ್ಷಗಳಿಂದ ಬದುಕಿದ್ದಾರೆ. ಹಲವರು ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿರಬಹುದು. ಆದರೆ ಅವರ ವಿಚಾರಧಾರೆ, ಸಮಾಜಮುಖಿ ಕಾರ್ಯಗಳಿಂದ, ಹಿತನುಡಿಗಳಿಂದ ಅಜರಾಮರರಾಗಿದ್ದಾರೆ. ನಮ್ಮ ಹೃದಯ ಸಿಂಹಾಸನದಲ್ಲಿ ನೆಲೆಸಿದ್ದಾರೆ ಎಂದರು.
ದೇಶದಲ್ಲಿ ಭಯದ ವಾತಾವರಣ ಇದೆ. ಕರುಣೆ, ಪ್ರೀತಿ, ಅನುಕಂಪ ಕಣ್ಮರೆಯಾಗುತ್ತಿದೆ. ಸ್ವಾರ್ಥ ಹೆಚ್ಚಾಗುತ್ತಿದೆ. ಅಣ್ಣನೆ ತಮ್ಮನನ್ನು, ಮಕ್ಕಳೇ ಪಾಲಕರನ್ನು ಕೊಲ್ಲುವ ಸುದ್ದಿ ಓದುತ್ತೇವೆ. ಈ ಎಲ್ಲ ಅನಾಚಾರಗಳು ನಡೆಯಲು ಕಾರಣವೇನು ಎಂಬ ಬಗ್ಗೆ ನಾವೆಲ್ಲರೂ ಚಿಂತಿಸಬೇಕು. ಧರ್ಮಮಾರ್ಗದಲ್ಲಿ ನಡೆಯಬೇಕು ಎಂದರು.
ಹಿರಿಯರಿಗೆ ಗೌರವ ನೀಡುವುದು ನಮ್ಮ ಧರ್ಮ, ತಂದೆ ತಾಯಿಯನ್ನು ವೃದ್ಧಾಪ್ಯದಲ್ಲಿ ನೋಡಿಕೊಳ್ಳುವುದು ನಮ್ಮ ಧರ್ಮ, ಗುರುಹಿರಿಯರಿಗೆ ಭಕ್ತಿಯಿಂದ ನಡೆದುಕೊಳ್ಳುವುದು ನಮ್ಮ ಧರ್ಮ, ಹಸಿದವರಿಗೆ ಅನ್ನ ನೀಡುವುದು ನಮ್ಮ ಧರ್ಮ ಎಂದು ಈಶ್ವರ ಖಂಡ್ರೆ ಹೇಳಿದರು.
ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಮತ್ತು ಶ್ರೀ ಕೇದಾರ ಕ್ಷೇತ್ರದ ಪರಮಪೂಜ್ಯ ಶ್ರೀ ಹಿಮವತ್ಕೇದಾರ ವೈರಾಗ್ಯ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ರಾವಲ್ ಪದವಿಭೂಷಿತ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜೆ. ಜಾರ್ಜ್, ಶಾಸಕರುಗಳಾದ ಟಿ.ಡಿ.ರಾಜೇಗೌಡ, ಎಚ್.ಡಿ. ತಮ್ಮಣ್ಣ ಮತ್ತಿತರರು ಪಾಲ್ಗೊಂಡಿದ್ದರು.

Next Article