For the best experience, open
https://m.samyuktakarnataka.in
on your mobile browser.

ಬಾಡಿಗೆ ಮನೆ ಬೇಕಾಗಿದೆ

09:56 AM Feb 18, 2024 IST | Samyukta Karnataka
ಬಾಡಿಗೆ ಮನೆ ಬೇಕಾಗಿದೆ

ಡಾ. ಮಲ್ಲಿಕಾರ್ಜುನ ಗುಮ್ಮಗೋಳ
“ಎಲ್ಲಿಯೂ ನಿಲ್ಲದಿರು
ಮನೆಯನೆಂದು ಕಟ್ಟದಿರು
ಕೊನೆಯನೆಂದು ಮುಟ್ಟದಿರು
ಓ ಅನಂತವಾಗಿರು
ಓ ನನ್ನ ಚೇತನಾ ಆಗು ನೀ ಅನಿಕೇತನ”
ಎಂದು ಕವಿ ಕುವೆಂಪು ಹಾಡಿದ ಹಾಡನ್ನು ಎದೆಯ ತುಂಬ ತುಂಬಿಕೊಂಡು ಅನಂತದೆಡೆಗೆ ನೋಡುತ್ತ ದಿಗಂತ ದ್ವನಿಯಲ್ಲಿ ಹಾಡುತ್ತ ಕಾಲ ಕಳೆಯುತ್ತಿದ್ದ ಪರಮೇಶಿಗೆ ಮದುವೆಯಾಯಿತು. ಗೆಳೆಯರ ರೂಮ್, ಹಾಸ್ಟೇಲ್‌ಗಳಲ್ಲಿ ಅರಾಮವಾಗಿ ಕಾಲ ಕಳೆಯುತ್ತಿದ್ದವನಿಗೆ ಮನೆಯನ್ನು ಮಾಡಲೇಬೇಕಾದ ಅನಿವಾರ್ಯತೆ ಉಂಟಾಯಿತು. ಗಂಡ-ಹೆಂಡತಿಗೆ ಎಷ್ಟು ದೊಡ್ಡ ಮನೆ ಬೇಕು? ಸಿಂಗಲ್ ಬೆಡ್ ರೂಮ್ ಆದರೆ ಸಾಕು, ಎಂದು ಪರಮೇಶಿ ಬಾಡಿಗೆ ಮನೆಯನ್ನು ಹುಡುಕಲು ಆರಂಭಿಸಿದ.
“ಅಲ್ಲರೀ ಇಷ್ಟ್ ವರ್ಷಾತು ನೌಕರಿ ಮಾಡಾಕತ್ತು ಒಂದು ಮನೆ ಕಟ್ಟಿಸಲು ಆಗಿಲ್ಲ ನಿಮ್ಮ ಕಡೆಯಿಂದ? ಹೋಗಲಿ ಬಾಡಿಗೆ ಮನೆಯನ್ನು ಮಾಡಿಲ್ಲಂದ್ರ ವಿಚಿತ್ರ ಅನ್ನಿಸಲಿಕ್ಕತ್ಯದ. ಬಂದಿದ್ದ ಪಗಾರೆಲ್ಲ ಏನ್ ಮಾಡಿರಿ” ಎಂದು ಹೆಂಡತಿ ಪಾರು ಪುಕಾರು ತೆಗೆದಳು. “ಅಲ್ಲಾ ಮದುವಿ ಆಗಿ ನಾಲ್ಕ ದಿನಾ ಆಗಿಲ್ಲ. ಆಗಲೇ ತನಿಖೆ, ಯಜಮಾನಿಕೆ ಶುರುವಾತಲ್ಲ ನಿಂದು” ಎಂದು ಜಬರೀ ಮಾತಾಡಿದ.
“ನನಗ ನಿಮ್ಮ ದನದ ಕೊಟ್ಟಿಗೆಯಂತಹ ಹಳ್ಳಿ ಮನ್ಯಾಗ ಇರ್ಲಿಕ್ಕೆ ಆಗಲ್ಲ. ದನಗಳ ಸಗಣಿ ವಾಸನಿ ಕುಡಿದು ವಾಂತಿ ಬರ್ಲಿಕಹತ್ಯೆದ. ಬೇಗನ ಹುಬ್ಬಳ್ಳಿಯೊಳಗ ಮನಿ ಮಾಡ್ರಿ” ಎಂದು ಪಾರು ಪಿರಿಪಿರಿ ಮಾಡತೊಡಗಿದಳು. ಹೆಂಡತಿ ಕಿರುಕುಳ ತಾಳಲಾರದೆ ಪರಮೇಶಿ ರಜೆಹಾಕಿ ಬಾಡಿಗೆ ಮನೆ ಹುಡುಕಲು ಆರಂಭಿಸಿದ.
“ನೋಡ್ರಿ ಮನೆಯಲ್ಲಿ ಇಬ್ಬರೆ ಇರಬೇಕು, ನೀರು ಹೆಚ್ಚು ಚೆಲ್ಲಾಡಬಾರದು, ಜೋರಾಗಿ ಟಿವಿ, ರೇಡಿಯೋ ಹಚ್ಚಬಾರದು, ಮೆಲು ದ್ವನಿಯಲ್ಲಿ ಮಾತಾಡಬೇಕು, ಬೆಕ್ಕು ನಾಯಿ ಸಾಕುವಂತಿಲ್ಲ, ನಾವು ಸಾಕಿದ ನಾಯಿ ಬೆಕ್ಕು ನಿಮ್ಮ ಮನೆಯ ಒಳಗೆ ಬಂದರೆ ಅವುಗಳನ್ನು ಹೊಡೆದು ಓಡಿಸಬಾರದು, ಕೆಮ್ಮುವುದು, ಕ್ಯಕರಿಸಿ ಉಗುಳುವುದು ಮಾಡಬಾರದು, ಸಿಗರೇಟ್, ಗುಟ್ಕಾ, ದಾರು ಸೇವಿಸಬಾರದು, ವಯಸ್ಸಾದ ಗೂರಲು ವೃದ್ಧರು ಮನೆಯಲ್ಲಿ ಇರಬಾರದು, ಮೇಲಿಂದ ಮೇಲೆ ನೆಂಟರು ಬರುವಂತಿಲ್ಲ, ಬಾಲ್ಕನಿ, ವರಾಂಡಾದಲ್ಲಿ ಬಂದು ನಿಲ್ಲವುದು, ಕುಳಿತುಕೊಳ್ಳುವುದು ಮಾಡಬಾರದು, ಕಿಟಕಿಯಿಂದ ಇಣುಕಿ ಆಚೀಚೆ ನೋಡಬಾರದು, ಬೇರೆಯವರ ಮನೆಯ ವಿಷಯದ ಬಗ್ಗೆ ಮಾತನಾಡುವುದು, ಆಸಕ್ತಿ ತೋರಿಸುವುದು ಮಾಡಬಾರದು, ಓಣಿಯ ಜನರೊಂದಿಗೆ ಹೆಚ್ಚು ಸಲುಗೆ ಮಾಡಿಕೊಂಡು ನಮ್ಮ ಮನೆಯ ವಿಷಯವನ್ನು ಬಣ್ಣಕಟ್ಟಿ ವರ್ಣಿಸಿ ಪ್ರಸರಣ ಮಾಡಬಾರದು, ಗೋಡೆಗೆ ಮೊಳೆ ಹೊಡೆಯುವಂತಿಲ್ಲ, ದಪ್ಪದುಪ್ಪ ಎಂದು ಸಾಮಾನುಗಳನ್ನು ಎತ್ತಿಟ್ಟು ಸಪ್ಪಳ ಮಾಡಬಾರದು.. ಹೀಗೆ ನೂರಾ ಎಂಟು ಕರಾರು ಕಂಡಿಷನ್‌ಗಳನ್ನು ಮನೆ ಮಾಲೀಕರು ಹಾಕುತ್ತಿರುವುದನ್ನು ಕೇಳಿದ ಪರಮೇಶಿ ಬಾಡಿಗೆ ಮನೆಯ ಸಹವಾಸವೇ ಬೇಡ ಎಂದು ನಡೆದುಬಿಟ್ಟ.
ಶಹರದಲ್ಲಿ ಬಾಡಿಗೆ ಮನೆ ಮಾಡಲೊಲ್ಲದ ಗಂಡನ ಜೊತೆಗೆ ಜಗಳ ಮಾಡಿಕೊಂಡ ಪಾರು ತವರು ಮನೆಗೆ ಹೋಗಿ ಕುಳಿತಳು. ಹೊಸತಾಗಿ ಮದುವೆಯಾಗಿ ದಾಂಪತ್ಯ ಸುಖ ಅನುಭವಿಸಬೇಕಾದ ಹೊತ್ತಿನಲ್ಲಿ ಬಾಡಿಗೆ ಮನೆ ಹುಡುಕುವ ಧಾಪು ಹತ್ತಿತು. “ದಡ್ಡ ಆದಾಂವ್ ಮನಿ ಕಟ್ಟತಾನ, ಶ್ಯಾಣ್ಯಾ ಆದಾಂವ್ ಅದರಾಗ ಬಾಡಿಗೆ ಇರ್ತಾನ” ಎಂಬ ಮಾತನ್ನು ನಂಬಿಕೊಂಡಿದ್ದ ಪರಮೇಶಿಗೆ ಈಗ ಬಾಡಿಗೆ ಮನೆ ಹುಡುಕುವ ಫಜೀತಿಗೆ ಸಿಕ್ಕಿಕೊಂಡ. ಸ್ವೇಚ್ಛೆಯಿಂದ ಬದುಕಿದವನಿಗೆ ಬಾಡಿಗೆ ಮನೆಯ ಕಂಡಿಷನ್ ಗಳು ಜೈಲಿನ ನಿಯಮಗಳಿಗಿಂತ ಕಠಿಣವೆನ್ನಿಸಿದವು. ಮದುವೆ ಮಾಡಿಕೊಂಡು ಮನದನ್ನೆಯೊಂದಿಗೆ ರಸಮಯವಾಗಿ ಬದುಕಬೇಕೆಂದು ಹಪಹಪಿಸುತ್ತಿದ್ದವನಿಗೆ ಹೆಂಡತಿ ತವರಿಗೆ ಹೋದ ವಿರಹ ವಿಪರೀತವಾಗಿ ಕಾಡತೊಡಗಿತು.
“ಹಳ್ಳಿಯಾಗ ಹೊಲ ಇರಬೇಕು ಶಹರದಾಗ ಮನಿ ಇರಬೇಕು. ಅದಕ್ಕ ನೀ ಖರ್ಚು ಕಡಿಮೆ ಮಾಡಿಕೊಂಡು, ಎಂತಹದೋ ಒಂದು ಜಾಗಾ ತೆಗೆದುಕೊ” ಎಂದು ಅಪ್ಪ ನೌಕರಿ ಹತ್ತಿದ ತಕ್ಷಣ ಹೇಳುತಿದ್ದ ಮಾತಿನ ಬೆಲೆ ಈಗ ಅರ್ಥವಾಗುತ್ತಿದೆ ಎಂದು ಪರಮೇಶಿ ಹಳಹಳಿಸುತ್ತಿದ್ದ.