For the best experience, open
https://m.samyuktakarnataka.in
on your mobile browser.

ಸಕಲ ಸಾಧನೆಗಳ ಪ್ರೇರಣಾಶಕ್ತಿ

03:00 AM Apr 04, 2024 IST | Samyukta Karnataka
ಸಕಲ ಸಾಧನೆಗಳ ಪ್ರೇರಣಾಶಕ್ತಿ

ಶತಶತಮಾನಗಳ ಕಾಲ ಹೆಣ್ಣನ್ನು ಪೂಜಿಸಿ, ಆರಾಧಿಸಿ, ಗೌರವಿಸಿ, ಆದರಿಸಿದ ಸಂಸ್ಕೃತಿ ನಮ್ಮದು. ಲೋಕಕಂಟಕರ ಸಂಹಾರಕ್ಕಾಗಿ ಮಹಾಕಾಲಿಯಾಗಿ ಅವತರಿಸಿ, ಧನಧಾನ್ಯ ಅಭಿವೃದ್ಧಿಯಿಂದ ಸುಭಿಕ್ಷ ನಾಡಿನ ಪೋಷಣೆಗೆ ಮಹಾಲಕ್ಷ್ಮೀಯಾಗಿ ರೂಪುಗೊಂಡು, ಜ್ಞಾನಕೀರ್ತಿಯಿಂದ ವಿಶ್ವದ ಕತ್ತಲನ್ನು ದೂರೀಕರಿಸಿದ ಸರಸ್ವತಿ ಮನುಕುಲದ ಕಣ್ಣು. ಭಾರತೀಯ ಪರಂಪರೆಯಲ್ಲಿ ಹೆಣ್ಣಿಗಿರುವ ಸ್ಥಾನವೇ ಅತ್ಯುಚ್ಚ. ವಿವಿಧ ರೂಪಗಳಲ್ಲಿ ನಿತ್ಯವೂ ಅಷ್ಟಭುಜಧಾರಿಯಾಗುವ ಸ್ತ್ರೀ, ಭಾರತದ ನಿತ್ಯಸ್ಫೂರ್ತಿ. ಭಾರತೀಯ ಜ್ಞಾನವನ್ನು ವಿಶ್ವಕ್ಕೆ ಪರಿಚಯಿಸಿದ ಪಂಡಿತಾ ರಮಾಬಾಯಿ ಮತ್ತು ಸ್ವಾತಂತ್ರ್ಯ ಹೋರಾಟಗಾರ್ತಿ ಹಂಸಾ ಮೆಹ್ತಾ, ಉನ್ನತ ಮಹಿಳಾ ಚಿಂತನೆಯ ರಾಯಭಾರಿಗಳು.
'ಮದುವೆ, ಮನೆ, ಸಂಸಾರ, ಅಡುಗೆಗೆ ಮಾತ್ರ ಹೆಣ್ಣು ಸೀಮಿತಳಲ್ಲ. ಜಗತ್ತಿನ ಸಕಲ ಸಾಧನೆಗಳ ಪ್ರೇರಣಾಶಕ್ತಿ ಆಕೆ. ಸಾಧಿಸಲು ಅವಕಾಶ ನೀಡಿದರೆ ಜಗತ್ತನ್ನೇ ಆಳಿ ಸನ್ಮಾರ್ಗದತ್ತ ಒಯ್ಯುವ ಚಾಕಚಕ್ಯತೆ ಅವಳಿಗಿದೆ. ಎಲ್ಲಾ ಪುರುಷರೂ ಸಮಾನ ಅವಕಾಶಗಳೊಂದಿಗೆ ಜನಿಸಿದ್ದಾರೆ ಎಂಬ ಯೋಚನೆ ತಿರಸ್ಕರಿಸಿ, ಎಲ್ಲಾ ಮನುಷ್ಯರೂ ಸಮಾನ ಅವಕಾಶಗಳೊಂದಿಗೆ ಜನಿಸಿದ್ದಾರೆಂದು ಬದಲಾಯಿಸಿ. ತಾಯಿ, ಪತ್ನಿಯಾಗಿ ಬೇಕಾದ ಹೆಣ್ಣು ಹಕ್ಕು, ಕರ್ತವ್ಯಗಳ ಪ್ರಶ್ನೆ ಎದುರಾದಾಗಲೂ ಮೊದಲ ಸಾಲಲ್ಲಿ ನಿಲ್ಲಬೇಕು' ಎಂಬ ಸ್ತ್ರೀ ಅಸ್ಮಿತೆಯ ಮಾತುಗಳ ರೂವಾರಿ ಹಂಸಾ ಮೆಹ್ತಾ ಭಾರತದ ಸ್ವಾತಂತ್ರ‍್ಯ ಹೋರಾಟದ ಧೀಮಂತ ಹೆಸರು. ತತ್ವಶಾಸ್ತ್ರ, ದರ್ಶನಗಳಲ್ಲಿ ಅಪಾರ ಪಾಂಡಿತ್ಯಗಳಿಸಿ ಅಧ್ಯಾಪಕರಾಗಿ, ಬರೋಡಾ ಸಂಸ್ಥಾನದ ದಿವಾನರಾಗಿ ಕಾರ್ಯ ನಿರ್ವಹಿಸುತ್ತಿದ್ದ ಮನುಭಾಯಿ ಮೆಹತಾ ದಂಪತಿಗೆ ಜನಿಸಿದ ಹಂಸಾ, ಅಪ್ಪನ ಪ್ರೀತಿ ಪ್ರೋತ್ಸಾಹದಿಂದ ಮಹಿಳೆಯರಿಗೆ ಶಾಲೆ ಮುಖದರ್ಶನವೇ ಅಪರೂಪವಾಗಿದ್ದ ಕಾಲದಲ್ಲಿ ತತ್ವಶಾಸ್ತ್ರ ಅಧ್ಯಯನದ ಬಳಿಕ ಪತ್ರಿಕೋದ್ಯಮ ಉನ್ನತ ಶಿಕ್ಷಣಕ್ಕೆಂದು ಇಂಗ್ಲೆಂಡಿಗೆ ತೆರಳಿದರು. ವಿದೇಶೀ ಶಿಕ್ಷಣ ವ್ಯವಸ್ಥೆ ಹಾಗೂ ಮಹಿಳಾ ಶಿಕ್ಷಣಕ್ಕಿರುವ ವಿಶೇಷ ಪ್ರೋತ್ಸಾಹದಿಂದ ಆಕರ್ಷಿತರಾಗಿ ಭಾರತೀಯ ಹೆಣ್ಮಕ್ಕಳ ಶಾಲಾ-ಕಾಲೇಜು ಪ್ರವೇಶಕ್ಕೆ ಅವಕಾಶ ಒದಗಿಸುವ ಸಂಕಲ್ಪದೊಂದಿಗೆ ಸ್ವದೇಶಕ್ಕೆ ಆಗಮಿಸಿದರು. ಸರೋಜಿನಿ ನಾಯ್ಡು, ಮಹಾತ್ಮಾ ಗಾಂಧೀಜಿ, ತಿಲಕರ ರಾಷ್ಟ್ರೀಯ ಪರಿಕಲ್ಪನೆ ಮತ್ತು ಶೈಕ್ಷಣಿಕ ಅಭಿವೃದ್ಧಿಯ ಯೋಚನೆಗಳಿಂದ ಪ್ರಭಾವಿತರಾದ ಮೆಹ್ತಾ, ಸ್ವಾತಂತ್ರ‍್ಯಾಂದೋಲನಕ್ಕೆ ಧುಮುಕಿದರು. ವಿದೇಶೀ ಬಟ್ಟೆ, ಮದ್ಯ ಮಾರುವ ಅಂಗಡಿಗಳನ್ನು ಬಲವಂತವಾಗಿ ಮುಚ್ಚುವ ಯುವನಾಯಕರ ಹೋರಾಟದಲ್ಲಿ ಮುಂಚೂಣಿಯಲ್ಲಿ ಭಾಗವಹಿಸಿ ಸ್ವದೇಶೀ ವಸ್ತು ಉಪಯೋಗದಿಂದಾಗುವ ಆರ್ಥಿಕ ಲಾಭದ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಜನಜಾಗೃತಿಗೈದು ಸ್ವಾವಲಂಬಿ ಬದುಕಿಗೆ ಮುನ್ನುಡಿ ಬರೆದರು.
ಗಾಂಧಿ ಮಾರ್ಗದರ್ಶನದಡಿ ಅನೇಕ ಹೋರಾಟಗಳಲ್ಲಿ ತೊಡಗಿಸಿ ಅನೇಕ ಬಾರಿ ಜೈಲುಶಿಕ್ಷೆಗೆ ಗುರಿಯಾದ ಹಂಸಾ ಮೆಹ್ತಾ, ಮಹಿಳೆಯರ ಭಾಗವಹಿಸುವಿಕೆಯ ಪ್ರಮಾಣ ಹೆಚ್ಚಿಸಲು ಮನೆಮನೆಗಳಿಗೆ ಭೇಟಿಯಿತ್ತರು. ಮನೆಕೆಲಸದೊಂದಿಗೆ ಸ್ವಾತಂತ್ರ‍್ಯ ಚಳವಳಿಯಲ್ಲಿ ಸ್ತ್ರೀಯರ ಯೋಗದಾನದ ಬಗ್ಗೆ ಮನಮುಟ್ಟುವಂತೆ ಮಾತನಾಡಿದ ಮೆಹ್ತಾ ಕನಸು ವರ್ಷದೊಳಗೆ ನನಸಾಯಿತು. ಮುಂಬೈ ಶಾಸನ ಸಭೆಗೂ ಆಯ್ಕೆಯಾಗಿ ಅಮೆರಿಕಾದಲ್ಲಿ ನಡೆದ ಸಮ್ಮೇಳನದಲ್ಲಿ ಮಹಿಳೆ ಪುರುಷನಷ್ಟೇ ಸಮಾನಳೆಂದು ಸಾರಿದ ಧ್ವನಿಸಿರಿಗೆ ವಿಶ್ವದ ಮೂಲೆಮೂಲೆಗಳಿಂದ ಬಂದಿದ್ದ ಪ್ರತಿನಿಧಿಗಳು ತಲೆದೂಗಿದರು. ಸಂಯುಕ್ತ ರಾಷ್ಟ್ರ ಮಾನವ ಹಕ್ಕು ಒಕ್ಕೂಟದ ಉಪಾಧ್ಯಕ್ಷೆಯಾಗಿ ಗುರುತರ ಜವಾಬ್ದಾರಿ ನಿರ್ವಹಿಸಿದರು. ಭಾರತದ ಸ್ವಾತಂತ್ರ‍್ಯ ಉದಯದ ರಾತ್ರಿ 'ತ್ಯಾಗ ಬಲಿದಾನದ ಫಲವಾಗಿ ಗಳಿಸಿದ ಸ್ವತಂತ್ರ ಭಾರತದ ಕೀರ್ತಿಪತಾಕೆ ನಭದೆತ್ತರ ಹಾರಲಿ' ಎಂದು ಭಾವಪರವಶರಾದ ಮೆಹ್ತಾ ಸಂವಿಧಾನ ರಚನಾ ಸಮಿತಿಯ ಮೂಲಭೂತ ಹಕ್ಕುಗಳ ಸಲಹಾ ಮಂಡಳಿಯ ಸದಸ್ಯೆಯಾಗಿ ಕಾರ್ಯನಿರ್ವಹಿಸಿದರು. ಮಹಿಳೆಯರ ಸಮಾನತೆ, ಸಾಮಾಜಿಕ ಸ್ಥಾನಮಾನಗಳ ಅಗತ್ಯತೆಯ ಬಗ್ಗೆ ಚುರುಕಿನಿಂದ ಓಡಾಡಿದ ಹಂಸಾ ಬರೋಡಾ ವಿಶ್ವವಿದ್ಯಾಲಯದ ಪ್ರಥಮ ಮಹಿಳಾ ಕುಲಪತಿಗಳಾಗಿಯೂ ನಿಯುಕ್ತರಾಗಿ ಆ ಕಾಲದಲ್ಲೇ ಎಲ್ಲರ ಹುಬ್ಬೇರುವಂತೆ ಶೈಕ್ಷಣಿಕ ಸುಧಾರಣೆಗೆ ಮುಂದಡಿಯಿಟ್ಟರು. ಅಖಿಲ ಭಾರತ ಮಹಿಳಾ ಸಮಾವೇಶದ ಅಧ್ಯಕ್ಷೆ, ಅಖಿಲ ಭಾರತ ಮಾಧ್ಯಮಿಕ ಶಿಕ್ಷಣ ಮಂಡಳಿಯ ಸದಸ್ಯೆ, ಅಂತರ್ವಿಶ್ವವಿದ್ಯಾಲಯ ಶಿಕ್ಷಣ ಮಂಡಳಿ ಅಧ್ಯಕ್ಷೆಯಾಗಿ ಎಡೆಬಿಡದ ಪ್ರವಾಸದ ನಡುವೆಯೂ ಮಕ್ಕಳ ಸಾಹಿತ್ಯ, ಕಾದಂಬರಿ ರಚನೆಯಲ್ಲೂ ಸದಾ ವ್ಯಸ್ತರಾಗಿದ್ದ ಹಂಸಾ ಮೆಹ್ತಾ ಸಾವಿರ ಸವಾಲುಗಳ ನಡುವೆ ಸಾಧನೆಯ ಅಂಬಾರಿಯೇರಲು ಕನವರಿಸುವ ಯುವ ಸಮುದಾಯದ ಪ್ರೇರಣೆ.
'ಮಹಿಳೆಯರ ಸಾಮರ್ಥ್ಯಕ್ಕೆ ತಕ್ಕ ಶಿಕ್ಷಣ ನೀಡಬೇಕಾದುದು ಸರಕಾರದ ಜವಾಬ್ದಾರಿ. ಅಕ್ಷರದ ಅಭ್ಯಾಸಕ್ಕೆ ತಡೆಯೊಡ್ಡಿ ಶಿಕ್ಷಣಸಂಸ್ಥೆ, ಆಡಳಿತಗಳಿಂದ ಸ್ತ್ರೀಯರನ್ನು ದೂರವಿಡುವುದು ಮಹಾಪರಾಧ. ಸಾಧಿಸುವ ಆಸಕ್ತಿ, ಆತ್ಮವಿಶ್ವಾಸವಿರುವ ಮಹಿಳೆಯನ್ನು ಕಟ್ಟಿಹಾಕಿ ವಿದ್ಯಾವಂತೆಯಾಗುವ ಅವಕಾಶದಿಂದ ವಂಚಿತಳನ್ನಾಗಿಸುವುದು ಕ್ಷಮಾರ್ಹವಲ್ಲ. ತಕ್ಷಣವೇ ಈ ತಪ್ಪನ್ನು ಸರಿಪಡಿಸಿ ನಾರಿಯರ ಧೀಶಕ್ತಿಯನ್ನು ಗೌರವಿಸಬೇಕಾದುದು ನಿಮ್ಮ ಮೊದಲ ಆದ್ಯತೆಯಾಗಬೇಕು' ಎಂಬ ಸಿಡಿಲಘರ್ಜನೆಯ ಮಾತುಗಳಿಗೆ ಬ್ರಿಟಿಷ್ ಸರಕಾರದ ವಿಶೇಷ ಪ್ರತಿನಿಧಿ ಮೂಕನಾದ. ತನ್ನ ಯಥಾವತ್ ವರದಿಯನ್ನು ಇಂಗ್ಲೆಂಡ್ ರಾಣಿಗೆ ಸಲ್ಲಿಸಿ ಆತ ಕೈತೊಳೆದರೆ, ರಾಣಿಯಾದರೋ ಈ ದಿಟ್ಟ ಯೋಚನೆಯ ಹಿಂದಿದ್ದ ಧೀಮಂತ ಸ್ತ್ರೀ ಯಾರೆಂಬ ಯೋಚನೆಗೆ ಗಂಟುಬಿದ್ದರು. ಮಹಿಳಾ ಶಿಕ್ಷಣ, ಸಬಲೀಕರಣಕ್ಕಾಗಿ ಒಂದೂವರೆ ಶತಮಾನದ ಹಿಂದೆಯೇ ಧ್ವನಿಯೆತ್ತಿದ ಮಹಾಮಾತೆ ರಮಾಬಾಯಿ ಡೋಂಗ್ರೆ, ಪಂಡಿತಾ-ಸರಸ್ವತಿ ಬಿರುದಾಂಕಿತ ಪ್ರಥಮ ಮಹಿಳಾ ಸಂಸ್ಕೃತ ವಿದ್ವನ್ಮಣಿ. ಉಡುಪಿಯ ಜ್ಞಾನಶ್ರೀಮಂತ ವೈದಿಕ ಹಿನ್ನೆಲೆಯ ಕುಟುಂಬದಲ್ಲಿ ಜನಿಸಿದ ರಮಾಬಾಯಿ, ತನ್ನ ತಂದೆಯ ಗರಡಿಯಲ್ಲಿ ಸಂಸ್ಕೃತ ಶಿಕ್ಷಣ ಪಡೆದ ಅಪೂರ್ವ ಪ್ರತಿಭೆ. ಪುರಾಣಪುಣ್ಯ ಪ್ರವಚನ, ಶಾಸ್ತ್ರಾಧ್ಯಯನಗಳಲ್ಲಿ ಅದ್ವಿತೀಯರಾದ ತಂದೆಯ ಜೊತೆ ದೇಶದಾದ್ಯಂತ ಸಂಚರಿಸಿದ ರಮಾಬಾಯಿ, ತನ್ನ ಅರಿವಿನ ಆಳವನ್ನು ವಿಸ್ತರಿಸಿದರು. ಅಪ್ಪನ ಮರಣಾನಂತರ ಸಹೋದರನೊಡನೆ ವಿದ್ವತ್ಪಯಾಣದಲ್ಲಿ ತೊಡಗಿಸಿದ ತರುಣಿಯ ಕೀರ್ತಿ ವಿದ್ವಾಂಸರನೇಕರ ಕಿವಿಗೆ ಬಿತ್ತು. ಕಲ್ಕತ್ತೆಯಲ್ಲಿ ನಡೆದ ಪ್ರತಿಭಾಪ್ರದರ್ಶನ, ಜ್ಞಾನದ ಆಳದಿಂದ ಸಂತುಷ್ಟರಾದ ವಿ.ವಿ. ಮುಖ್ಯಸ್ಥರು ಪಂಡಿತಾ ರಮಾಬಾಯಿ ಸರಸ್ವತಿಯೆಂಬ ಬಿರುದಿತ್ತು ಗೌರವಿಸಿದರು. ಕೇಶವಚಂದ್ರ ಸೇನರಂತೂ ಆನಂದದ ಸುರಿಮಳೆಗರೆದು ಗಾರ್ಗಿ, ಮೈತ್ರೇಯಿಯರ ದರ್ಶನವಾಯಿತೆಂದು ಅನುಗ್ರಹಿಸಿ ವೇದಾಧ್ಯಯನಕ್ಕೆ ಅನುಕೂಲವಾಗುವ ಹೊತ್ತಗೆಗಳನ್ನು ಸಮರ್ಪಿಸಿದರು.
ಕೇವಲ ಎರಡೇ ವರ್ಷಗಳಲ್ಲಿ ಸಹೋದರನ ಸಾವು, ಮದುವೆ, ಮಗು, ವೈಧವ್ಯವನ್ನು ಕಂಡ ಇಪ್ಪತ್ನಾಲ್ಕರ ರಮಾಬಾಯಿ ಪುಣೆಯಲ್ಲಿ ಮಹಿಳಾ ಶಿಕ್ಷಣಕ್ಕೆ ಅನುವಾಗುವ ಹಿನ್ನೆಲೆಯಲ್ಲಿ ಆರ್ಯ ಮಹಿಳಾ ಸಮಾಜವನ್ನು ಸ್ಥಾಪಿಸಿದರು. ಬಾಲ್ಯವಿವಾಹ ತಡೆಗಟ್ಟಿ, ಸ್ತ್ರೀಯರ ಶಾಲಾಪ್ರವೇಶ, ಮಹಿಳಾ ಅಧಿಕಾರಿಗಳು, ಶಿಕ್ಷಕಿಯರು, ವೈದ್ಯೆಯರ ಹುಟ್ಟಿಗೆ ಶಾಲಾಕಾಲೇಜುಗಳ ನಿರ್ಮಾಣಕ್ಕೆ ಸರಕಾರವನ್ನು ಆಗ್ರಹಿಸಿದರು. ಸಂಸ್ಕೃತ ಮತ್ತು ಸಂಸ್ಕೃತಿಯೇ ಭಾರತದ ಮಾನಬಿಂದುಗಳೆಂದು ಸಾರಿದ ರಮಾಬಾಯಿಯವರ ಸ್ತ್ರೀ ಧರ್ಮನೀತಿ ಪುಸ್ತಕದ ಮೌಲಿಕ ವಿಚಾರಗಳ ಕಂಪು ಪರವೂರಿಗೂ ಬೀಸಿ ವಿದೇಶಪ್ರಯಾಣಗೈದು ಇಂಗ್ಲೆಂಡ್, ಅಮೆರಿಕಾ, ಕೆನಡಾದ ಅನೇಕೆಡೆ ಉಪನ್ಯಾಸವಿತ್ತರು. ವೇದಶಾಸ್ತ್ರಗಳ ಮೇಲೆ ಅಪಾರ ಹಿಡಿತವಿದ್ದ ರಮಾಬಾಯಿಯವರ ಸೋದಾಹರಣ ಮಾತು ವಿದೇಶೀ ವಿದ್ಯಾವಂತರ ಹೃನ್ಮನ ಸೆಳೆಯಿತು. ಅಲ್ಲಿ ಲಭಿಸಿದ ಹಣವನ್ನೆಲ್ಲ ಒಟ್ಟುಗೂಡಿಸಿ ಭಾರತಕ್ಕೆ ಮರಳಿದ ಬಳಿಕ ಬಾಲಿಕಾಶಿಕ್ಷಣ, ಕೌಶಲ ತರಬೇತಿ, ಸ್ವಾವಲಂಬಿ ಜೀವನ ಒದಗಿಸುವ ಕನಸಿನೊಂದಿಗೆ ಶಾರದಾ ಸದನ ಸ್ಥಾಪಿಸಿದರು. ಶಾಲೆಯನ್ನಾರಂಭಿಸಿ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಹಾಡಿದ ರಮಾಬಾಯಿ ಅಪ್ರತಿಮ ಲೇಖಕರೂ ಹೌದು. ತಮ್ಮ ಪುಸ್ತಕ, ಲೇಖನಗಳಿಂದ ಸಮಾಜ ಸುಧಾರಣೆಯ ಕಾರ್ಯದಲ್ಲಿ ನಿರತರಾಗಿ ಪಾದರಸದಂತೆ ಓಡಾಡಿದ ರಮಾಬಾಯಿ ಡೊಂಗ್ರೆ ತಮ್ಮ ಪುತ್ರಿಯ ಅಕಾಲ ಮೃತ್ಯುವಿನ ನೋವಿನಿಂದ ಹೊರಬರಲಾರದೆ ವಿಧಿವಶರಾದರು. ಸ್ತ್ರೀ ಗೌರವದ ಪಾಂಚಜನ್ಯವೂದಿದ ಪಂಡಿತಾ ರಮಾಬಾಯಿ ನಮ್ಮ ನೆಲದ ಹೆಮ್ಮೆ.
ನಾಡಿನ ಗೌರವ ರಕ್ಷಣೆಗಾಗಿ ಹೋರಾಡಿ, ಮಹಿಳಾ ಸಮಾನತೆಯ ಜೊತೆಜೊತೆಗೆ ಸಾಂಸ್ಕೃತಿಕ ವಿಕಾಸದ ಸಹಭಾಗಿತ್ವವನ್ನು ಸಾರಿದ ಸ್ತ್ರೀ ಕಣ್ಮಣಿಗಳ ಸ್ಮೃತಿದಿನ ನಾಡಿಗೆ ಶಕ್ತಿಯಾಗಲಿ.