For the best experience, open
https://m.samyuktakarnataka.in
on your mobile browser.

ಸಚಿವ ಬಿ.ನಾಗೇಂದ್ರ ರಾಜೀನಾಮೆ ಆಗ್ರಹಿಸಿ ಪ್ರತಿಭಟನೆ

06:37 PM Jun 01, 2024 IST | Samyukta Karnataka
ಸಚಿವ ಬಿ ನಾಗೇಂದ್ರ ರಾಜೀನಾಮೆ ಆಗ್ರಹಿಸಿ ಪ್ರತಿಭಟನೆ

ಮಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಹಾಗೂ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಯುವಜನ ಸೇವೆ, ಕ್ರೀಡೆ ಮತ್ತು ಪರಿಶಿಷ್ಟಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಶನಿವಾರ ನಗರದ ಪಿವಿಎಸ್ ವೃತ್ತದ ಬಳಿ ರಸ್ತೆ ತಡೆ, ಪ್ರತಿಭಟನೆ ನಡೆಯಿತು.
ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಅವರು ಮಾತನಾಡಿ, ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿಯ ಡೆತ್‌ನೋಟ್‌ನಲ್ಲಿ ಸಚಿವ ನಾಗೇಂದ್ರ ಅವರ ಹೆಸರು ಉಲ್ಲೇಖಿಸಿವಾಗಿದೆ ತತ್‌ಕ್ಷಣ ಅವರು ರಾಜೀನಾಮೆ ಕೊಡಬೇಕು. ವಾಲ್ಮೀಕಿ ನಿಗಮದ ನೂರಾರು ಕೋ.ರೂ. ವನ್ನು ಹಣವನ್ನು ದರೋಡೆ ಮಾಡುವ ಕೆಲಸ ರಾಜ್ಯ ಸರಕಾರ ಮಾಡಿದೆ. ಈ ದುಡ್ಡು ಈಗಾಗಲೇ ಬೇರೆ ರಾಜ್ಯಗಳಿಗೆ ವರ್ಗಾವಣೆ ಆಗಿದೆ. ತತ್‌ಕ್ಷಣವೇ ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕು. ನೊಂದ ಕುಟುಂಬಕ್ಕೆ ೨೫ ಲಕ್ಷ ಪರಿಹಾರ ಧನವನ್ನು ತಕ್ಷಣವೇ ಸರಕಾರ ನೀಡಬೇಕು.
ಪೊಲೀಸರು ಶಾಸಕ ಹರೀಶ್ ಪೂಂಜಾ ಅವರ ಮೇಲೆ ತರಾತುರಿಯಿಂದ ಪ್ರಕರಣ ದಾಖಲಿಸುತ್ತಾರೆ. ಕಂಕನಾಡಿ ನಮಾಜ್ ಪ್ರಕರಣದಲ್ಲಿ ‘ಬಿ’ ರಿಪೋರ್ಚ್ ಹಾಕುತ್ತಾರೆ. ಆದರೆ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವರ ಹೆಸರಿದ್ದರೂ, ಎಫ್‌ಐಆರ್ ದಾಖಲಿಸುವ ಕೆಲಸ ಸರಕಾರ ಮಾಡುತ್ತಿಲ್ಲ. ಜೂ.೬ರೊಳಗೆ ಸಚಿವರು ರಾಜೀನಾಮೆ ಕೊಡದಿದ್ದರೆ ಯುವಮೋರ್ಚಾ ರಾಜ್ಯದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಿದೆ ಎಂದರು.
ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್, ಪ್ರಮುಖರಾದ ಅಶ್ವಿತ್ ಕೊಟ್ಟಾರಿ, ಮೌನೇಶ್ ಚೌಟ, ಯಶ್‌ಪಾಲ್ ಸಾಲ್ಯಾನ್, ಸಾಕ್ಷತ್ ಶೆಟ್ಟಿ, ಪ್ರಕಾಶ್ ಗರೋಡಿ, ಪ್ರಮೋದ್ ಕರ್ಕೇರ, ಮುರಳೀಧರ್ ಕೊಣಾಜೆ, ಆಶಿತ್, ಪ್ರೀತಮ್, ಅವಿನಾಶ್, ಮಿಥುನ್ ಭಂಡಾರಿ, ಸುರೇಶ್ ಕೋಟ್ಯಾನ್, ಭವಿಷ್ ಶೆಟ್ಟಿ, ಜೀತೇಶ್ ಮೊದಲಾದವರಿದ್ದರು.
ಸಂಪುಟದಿಂದ ಸಚಿವರನ್ನು ವಜಾಗೊಳಿಸಬೇಕು ಎಂದು ಯುವ ಮೋರ್ಚಾ ಕಾರ್ಯಕರ್ತರು ಆಗ್ರಹಿಸಿದರು. ಇದೇ ವೇಳೆ ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.