ಸಚಿವ ಸಂಪುಟ ಸಭೆ ಇಂದು ಮಹತ್ವದ ವಿಷಯಗಳ ಚರ್ಚೆ
12:05 AM Jun 13, 2024 IST
|
Samyukta Karnataka
ಬೆಂಗಳೂರು: ಲೋಕಸಭಾ ಚುನಾವಣೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇದೇ ಮೊದಲ ಸಚಿವ ಸಂಪುಟ ಸಭೆ ಗುರುವಾರ ನಡೆಯಲಿದೆ. ಸರ್ಕಾರಿ ನೌಕರರ ಏಳನೇ ವೇತನ ಆಯೋಗ ಶಿಫಾರಸು ಜಾರಿ, ಮತ್ತೆ ಭುಗಿಲೆದ್ದಿರುವ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ, ವಿಧಾನಮಂಡಳದ ಮುಂಗಾರು ಅಧಿವೇಶನಕ್ಕೆ ದಿನಾಂಕ ನಿಗದಿ, ಸರ್ಕಾರ ಈಗಾಗಲೇ ಸ್ವೀಕರಿಸಿರುವ ಜಾತಿಗಣತಿಗೆ ಸಂಬಂಧಿಸಿದಂತೆ ಪರಾಮರ್ಶೆ ಸಮಿತಿ ರಚನೆ ವಿಷಯಗಳು ಪ್ರಮುಖವಾಗಿ ಚರ್ಚೆಯಾಗುವ ಸಾಧ್ಯತೆ ಇದೆ. ಇದಲ್ಲದೆ ಚುನಾವಣೆಯಲ್ಲಿ ಕ್ಷೇತ್ರಸೋತ ಸಚಿವರ ಭವಿಷ್ಯದ ಬಗ್ಗೆಯೂ ಪ್ರಸ್ತಾಪವಾಗಲಿದ್ದು ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾ ನಕ್ಕೆ ಬದ್ದವಾಗಿರುವಂತೆ ಸಂದೇಶ ರವಾನೆಯಾ ಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಭಾರೀ ಅವ್ಯವಹಾರಕ್ಕೆ ಸಂಬಂಧಿಸಿ ಪರಿಶಿಷ್ಟ ಕಲ್ಯಾಣ ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡಿದ ಬಳಿಕ ನಡೆಯುತ್ತಿರುವ ಕ್ಯಾಬಿನೆಟ್ ಮೀಟಿಂಗ್ ಇದಾಗಿದೆ.
Next Article