For the best experience, open
https://m.samyuktakarnataka.in
on your mobile browser.

ಸಣ್ಣ ಅಪಘಾತ: ಮಾತುಕತೆಗೆ ತೆರಳಿದ್ದವನ ಮೇಲೆ ಹಲ್ಲೆ

12:33 PM Oct 17, 2024 IST | Samyukta Karnataka
ಸಣ್ಣ ಅಪಘಾತ  ಮಾತುಕತೆಗೆ ತೆರಳಿದ್ದವನ ಮೇಲೆ ಹಲ್ಲೆ

ಉಳ್ಳಾಲ: ಎರಡು ಕಾರುಗಳ ನಡುವೆ ನಡೆದ ಸಣ್ಣ ಅಪಘಾತವೊಂದರಲ್ಲಿ ಚಾಲಕರಿಬ್ಬರ ಮಧ್ಯೆ ನಡೆದ ಹೊಯ್ ಕೈ ಪ್ರಕರಣವು ಉಳ್ಳಾಲ ಠಾಣಾ ಮೆಟ್ಟಿಲೇರಿದ್ದು, ಮಾತುಕತೆಗೆ ತೆರಳಿದ್ದ ಹಿಂದೂ ಸಂಘಟನೆಯ ನಾಯಕನಿಗೆ ಹಲ್ಲೆಗೈದ ಘಟನೆ ನಿನ್ನೆ ರಾತ್ರಿ ನಡೆದಿದೆ.
ಅರ್ಜುನ್ ಮಾಡೂರು ಹಲ್ಲೆಗೊಳಗಾದವರು.
ಕಾಸರಗೋಡು ಜಿಲ್ಲೆಯ ಹೊಸಂಗಡಿ, ಕಡಂಬಾರು ಸರಕಾರಿ ಶಾಲೆಯ ಬಳಿಯ ನಿವಾಸಿ ಮಹಮ್ಮದ್ ಆಸಿಫ್(33) ಹಲ್ಲೆಗೈದ ಆರೋಪಿ.ಆತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಘಟನೆ ವಿವರ: ತೊಕ್ಕೊಟ್ಟುವಿನ ಮೇಲ್ಸೇತುವೆಯಲ್ಲಿ ಬುಧವಾರ ರಾತ್ರಿ 9.45 ರ ವೇಳೆ ಕುಂಪಲದ ಶರತ್, ಕೇರಳದ ಇಬ್ರಾಹಿಂ ಖಲೀಲ್ ರವರ ಕಾರುಗಳ ಮಧ್ಯೆ ಸಣ್ಣ ಅಪಘಾತ ಉಂಟಾಗಿತ್ತು. ಈ ವಿಚಾರದಲ್ಲಿ ಖಲೀಲ್ ಮತ್ತು ಆತನ ಸಹೋದರನಾಗಿರುವ ಆಸಿಫ್ ಸೇರಿ ಶರತ್ ಗೆ ಕೈಯಲ್ಲಿ ಹಲ್ಲೆಗೈದಿದ್ದಾರೆಂದು ಆರೋಪಿಸಲಾಗಿದ್ದು ಈ ಪ್ರಕರಣವು ಉಳ್ಳಾಲ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ತಡರಾತ್ರಿ ಶರತ್ ಅವರ ಪರಿಚಯಸ್ಥ ಅರ್ಜುನ್ ಮಾಡೂರು ತನ್ನ ಸ್ನೇಹಿತರೊಂದಿಗೆ ಉಳ್ಳಾಲ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ.ಇನ್ಸ್ ಪೆಕ್ಟರ್ ಕೊಠಡಿಯೊಳಗೆ ಅಪಘಾತದ ವಿಚಾರದಲ್ಲಿ ಕಾರು ಚಾಲಕರಾದ ಶರತ್, ಖಲೀಲ್ ಜತೆ ಮಾತುಕತೆ ನಡೆಸುತ್ತಿದ್ದ ವೇಳೆ ಏಕಾ ಏಕಿ ಒಳ ನುಗ್ಗಿದ ಆರೋಪಿ ಆಸೀಫ್, ಅರ್ಜುನ್ ಮಾಡೂರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಈ ವೇಳೆ ಎಚ್ಚೆತ್ತ ಪೊಲೀಸರು ಕೂಡಲೇ ಆತನನ್ನು ಬಂಧಿಸಿದ್ದಾರೆ.
ಹಲ್ಲೆಗೊಳಗಾದ ಅರ್ಜುನ್ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು ಆಸಿಫ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಚಾರ ತಿಳಿಯುತ್ತಿದ್ದಂತೆ ಮಧ್ಯರಾತ್ರಿ ಠಾಣೆಯ ಮುಂದೆ ಹಿಂದೂ ಕಾರ್ಯಕರ್ತರು ಜಮಾಯಿಸಿ ಆರೋಪಿಯನ್ನು ‌ಬಂಧಿಸುವಂತೆ ಆಗ್ರಹಿಸಿದರು. ಸ್ಥಳಕ್ಕೆ ದೌಡಾಯಿಸಿದ ಡಿಸಿಪಿ ಸಿದ್ಧಾರ್ಥ್ ಗೋಯಲ್, ಎಸಿಪಿ ಧನ್ಯ ನಾಯಕ್ ಅವರು ಠಾಣೆಯ ಸುತ್ತಲೂ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಠಾಣೆಯ ಒಳಗಡೆ ಅರ್ಜುನ್ ಮಾಡೂರಿಗೆ ಹಲ್ಲೆಗೈದ ವಿಚಾರ ತಿಳಿಯುತ್ತಲೇ ತಡರಾತ್ರಿ ವೇಳೆ ಬಿಜೆಪಿ ಮುಖಂಡ ಅರುಣ್ ಪುತ್ತಿಲ ಅವರು ಉಳ್ಳಾಲ ಠಾಣೆಗೆ ಭೇಟಿ ನೀಡಿದ್ದಾರೆ.
ಠಾಣೆಯೊಳಗಡೆಯೇ ನಡೆದ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಯ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ಆಗ್ರಹಿಸಿದರು.