ಸತತ ಮಳೆಯಿಂದ ರೈತರಿಗೆ ಮತ್ತಷ್ಟು ನಷ್ಟು
ಬಾಗಲಕೋಟೆ(ಕುಳಗೇರಿ ಕ್ರಾಸ್): ಕಳೆದೊಂದು ತಿಂಗಳಿಂದ ಬಿಡುವಿಲ್ಲದೆ ಮಳೆ ಸುರಿಯುತ್ತಿದ್ದು ಹೋಬಳಿ ಸುತ್ತ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ನದಿ ಪಾತ್ರದಲ್ಲಿ ಉತ್ತಮ ಬೆಳೆ ಕಳೆದುಕೊಂಡ ರೈತರು ಸತತ ಮಳೆಯಿಂದ ಮತ್ತಷ್ಟು ಬೆಳೆ ಕಳೆದುಕೊಂಡು ಗೋಳಾಡುತ್ತಿದ್ದಾರೆ.
ಈ ಭಾಗದ ಪ್ರಮುಖ ಬೆಳೆಗಳಾದ ಜೋಳ, ಮೆಕ್ಕೆ ಜೋಳ ಸತತ ಮಳೆಯಿಂದಾಗಿ ಹೊಲದಲ್ಲೇ ಮೊಳಕೆ ಒಡೆದರೆ, ಹತ್ತಿ ಬೆಳೆ ಹಾಳಾಗಿ ಹೋಗಿದೆ. ತೋಟಗಾರಿಕೆ ಬೆಳೆಗಳು ಕೊಳೆಯುವ ಹಂತ ತಲುಪಿದೆ. ಸಂಬಂಧಿಸಿದ ಯಾವ ಅಧಿಕಾರಿಗಳು ಭೇಟಿ ನೀಡಿಲ್ಲ ಇಲ್ಲಿಯವರೆಗೂ ನಮ್ಮ ಬೆಳೆಗಳನ್ನ ವೀಕ್ಷಿಸಿಲ್ಲ ಎಂದು ನೊಂದ ರೈತರು ಆರೋಪಿಸುತ್ತಿದ್ದಾರೆ.
ಈ ಬಾರಿ ಉತ್ತಮ ಮಳೆ ಸುರಿದಿದ್ದರಿಂದ ರೈತರು ಉತ್ಸುಕತೆಯಿಂದ ಭೂಮಿ ಹದ ಮಾಡಿ ಬಿತ್ತನೆ ಮಾಡಿದ್ದರು. ಸಮಯಕ್ಕೆ ಸರಿಯಾಗಿ ಮಳೆ ಬಂದು ಬೆಳೆಗಳು ಸಹ ಉತ್ತಮವಾಗಿ ಬೆಳೆದು ರೈತರಿಗೆ ಖುಷಿ ನೀಡಿತ್ತು. ಹುಲುಸಾಗಿ ಬೆಳೆದ ಬೆಳೆ ಬಂಪರ್ ಬೆಲೆ ಕೊಡುವ ಸೂಚನೆ ನೀಡಿತ್ತು. ಕೊಯ್ಲಿಗೆ ಮುಂದಾಗಿರುವ ಸಂದರ್ಭದಲ್ಲಿ ಸತತ ಮಳೆ ಸುರಿಯುತ್ತಿದ್ದು ಬೆಳೆಗಳು ನೆಲಕಚ್ಚಿವೆ.
ಎಡಬಿಡದೆ ಸುರಿಯುತ್ತಿರುವ ಮಳೆಗೆ ಕೊಯ್ಲು ಮಾಡಲಾಗದೆ ಕೈ ಬಿಟ್ಟ ಕಾರಣ ಮೆಕ್ಕೆ ಜೋಳದ ತೆನೆಗಳು ಮಳೆ ನೀರಿಗೆ ನೆನೆದು ಸಿಪ್ಪೆಯೊಳಗೆ ಮೊಳಕೆ ಒಡೆದಿವೆ. ಮಳೆ ನೀರಿಗೆ ಜಮಿನು ತಂಪೇರಿ ಮೇವು ಕಪ್ಪಾಗಿ ಕೊಳೆತ ಸ್ಥಿತಿಯಲ್ಲಿದೆ. ಭೂಮಿ ತುಂಬ ಮೊನಕಾಲೆತ್ತರಕ್ಕೆ ಹಸಿರು ಹುಲ್ಲಿನ ಕಸ-ಕಡ್ಡಿ ಬೆಳೆದು ನಿಂತಿದೆ. ಉತ್ತಮ ಬೆಳೆ ಕೈ ಸೇರಲಿಲ್ಲ ಎಂಬ ಕಾರಣಕ್ಕೆ ರೈತರು ಕಣ್ಣೀರು ಸುರಿಸುತ್ತಿದ್ದಾರೆ.
ಬಂಪರ್ ಬೆಳೆ ಕೈ ಸೇರುವ ಕನಸು ಕಂಡಿದ್ದ ರೈತರಿಗೆ ಬಾರಿ ನಿರಾಶೆಯಾಗಿದೆ. ಬಿತ್ತನೆಗೆ ಖರ್ಚು ಮಾಡಿದ ಹಣವಾದರೂ ಸಹ ಮರಳಿ ಸಿಗುವುದೇ ಎನ್ನುವ ಅನುಮಾನ ಮೂಡಿದೆ. ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿದ್ದು ಸರ್ಕಾರ ಗಮನ ಹರಿಸಿ ಪರಿಹಾರ ನೀಡಬೇಕಿದೆ.
ಹುಲುಸಾಗಿ ಬೆಳೆದ ಗೋವಿನಜೋಳ ಬೆಳೆಯನ್ನು ರಾಶಿ ಮಾಡಲು ಬಿಡಲಿಲ್ಲ ಮಳೆ. ಈ ಮಳೆಯಿಂದ ನಮ್ಮ ಬೆಳೆ ಕಣ್ಮುಂದೆಯೇ ಹಾನಿಯಾಗಿದ್ದು ನೋಡಲಾಗುತ್ತಿಲ್ಲ ಸತತ ಮಳೆ ನೀರು ನಮ್ಮ ಜಮಿನಿನೊಳಗೆ ನಿಂತು ಉತ್ತಮ ಬೆಳೆ ಹಾಳಾಗಿದೆ. ಬೀಜ ಗೊಬ್ಬರಕ್ಕಾಗಿ ಸಾವಿರಾರು ರೂ ಸಾಲ ಮಾಡಿರುವೆ ನಮ್ಮ ಗೋಳು ಕೇಳುವವರಾರು ಎಂದು ಬೀರನೂರ ಗ್ರಾಮದ ರೈತ ಹನಮಂತಗೌಡ ಕುಬೇರಗೌಡ ಮುಷ್ಟಿಗೇರಿ ಪತ್ರಿಕೆ ಎದುರು ತಮ್ಮ ಅಳಲು ತೋಡಿಕೊಂಡರು.