For the best experience, open
https://m.samyuktakarnataka.in
on your mobile browser.

ಸತ್ಯವಂತರಿಗಿದು ಕಾಲವಲ್ಲಾ

02:00 AM Mar 29, 2024 IST | Samyukta Karnataka
ಸತ್ಯವಂತರಿಗಿದು ಕಾಲವಲ್ಲಾ

ಹರಿತ ಮಾತಿನ ಚುರುಕುಬುದ್ಧಿಯ ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರ ಕುದುರೆ ಓಟದಂತಹ ಮಾತಿನ ಧಾಟಿಯಲ್ಲಿ ಕರ್ತೃ ಪದಗಳು ಕ್ರಿಯಾಪದಗಳಾಗಿ ಪರಿವರ್ತನೆಯಾಗಿ ಅದರ ಸಂಸ್ಕಾರದಿಂದಲೇ ಹೊಸದಾಗಿ ಕರ್ಮ ಪದ ಸೃಷ್ಟಿಯಾಗುವುದರಿಂದ ಅವರ ವಾಗ್ವಿಲಾಸವನ್ನು ಆಲಿಸುವುದೇ ಒಂದು ಸೊಬಗು. ಪ್ರತಿಷ್ಠಿತ ದೆಹಲಿಯ ಜೆಎನ್‌ಯು ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದರಿಂದಲೋ ಏನೋ ಹಣಕಾಸಿನ ಲೆಕ್ಕಾಚಾರವನ್ನು ಬಳಕೆದಾರರ ವಿಚಾರವಂತಿಕೆಯೊಂದಿಗೆ ಹೊಂದಾಣಿಕೆ ಮಾಡಿ ನೀತಿ ನಿಲುವುಗಳನ್ನು ರೂಪಿಸುವ ಅವರ ಕಾರ್ಯಶೈಲಿ ನಿಜಕ್ಕೂ ವಿಶಿಷ್ಟ. ಇಂತಹ ಅನುಪಮ ವ್ಯಕ್ತಿತ್ವದ ನಿರ್ಮಲಾ ಸೀತಾರಾಮನ್ ಅವರು ಟೈಂಸ್ ನೌ' ಮಾಧ್ಯಮ ಶೃಂಗಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾಲೋಕಸಭಾ ಚುನಾವಣೆಗೆ ಸ್ಪರ್ಧಿಸುವಷ್ಟು ಹಣ ನನ್ನ ಬಳಿ ಇಲ್ಲ. ಹೀಗಾಗಿ ನನಗೆ ಚುನಾವಣೆಗೆ ಸ್ಪರ್ಧಿಸುವ ಆಸಕ್ತಿ ಇಲ್ಲ' ಎಂದು ಕಡ್ಡಿ ಮುರಿದಂತೆ ಹೇಳಿರುವ ಮಾತಿನ ಹಿಂದಿರುವುದು ಭಾರತದ ಚುನಾವಣಾ ವೆಚ್ಚದ ನೈಜ ಸ್ಥಿತಿಯ ಪ್ರತಿಬಿಂಬ. ಸಾಮಾನ್ಯರ ದೃಷ್ಟಿಯಲ್ಲಿಯೇ ಹಣಕಾಸು ಮಂತ್ರಿಗಳ ನಿಲುವನ್ನು ವಿಶ್ಲೇಷಿಸುವುದಾದರೆ ಚುನಾವಣೆಗೆ ಸ್ಪರ್ಧಿಸಲು ಧನಿಕರಿಗೆ ಮಾತ್ರ ಸಾಧ್ಯ. ಉಳಿದವರು ಕೇವಲ ಪಾತ್ರಧಾರಿಗಳು. ಹಾಗಾದರೆ ಜನತಂತ್ರ ಪದ್ಧತಿಯಲ್ಲಿ ಹಣವಿಲ್ಲದೆ ಚುನಾವಣೆ ಎದುರಿಸುವುದು ಸಾಧ್ಯವೇ ಇಲ್ಲ ಎಂಬ ನಿಲುವಿಗೆ ಅಧಿಕಾರಸ್ಥ ರಾಜಕಾರಣಿಗಳೇ ಬರುವುದಾದರೆ ಚುನಾವಣೆಗೆ ಇನ್ನಾರು ಸ್ಪರ್ಧಿಸಲು ಸಾಧ್ಯ ಎಂಬ ಮಾತುಗಳು ಬೃಹದಾಕಾರವಾಗಿ ಭುಗಿಲೇಳುವುದು ಸ್ವಾಭಾವಿಕ. ನಿರ್ಮಲಾ ಅವರ ಮಾತಿನಲ್ಲಿ ದೋಷವನ್ನು ಹುಡುಕುವುದು ಸಾಧುವಲ್ಲ. ಹಾಗೆಯೇ ಭೂತಗನ್ನಡಿ ಹಿಡಿದು ಚುನಾವಣೆಗೆ ಸ್ಪರ್ಧಿಸುವವರನ್ನು ತುಲಾಭಾರಕ್ಕೆ ಹಾಕುವುದೂ ಕೂಡಾ ಸಾಧುವಲ್ಲ. ಸಾಧುವಾದ ಮಾರ್ಗವೆಂದರೆ ಯಾವುದಾದರೂ ಒಪ್ಪಿತ ಮಾರ್ಗದಿಂದ ಚುನಾವಣಾ ವೆಚ್ಚದ ಮೇಲೆ ನಿರ್ಬಂಧ ಹೇರುವುದು ಮಾತ್ರ. ನಿಜ. ಚುನಾವಣಾ ವೆಚ್ಚದ ಮೇಲಿನ ಈಗಿನ ನಿರ್ಬಂಧಗಳು ಬೆದರು ಬೊಂಬೆಗಳಷ್ಟೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಬೇಕಾದ ಪರಿಸ್ಥಿತಿ ಇರುವ ಈಗಿನ ಸಂದರ್ಭದಲ್ಲಿ ಚುನಾವಣಾ ಆಯೋಗ ರೂಪಿಸಿರುವ ವೆಚ್ಚದ ನಿರ್ಬಂಧ ಕೇವಲ ಆಟಕ್ಕೆ ಮಾತ್ರ. ಇದರ ಲೆಕ್ಕವಿರುವುದು ಕೃಷ್ಣನ ಬಳಿ. ರಾಮನ ಲೆಕ್ಕ ಆಯೋಗಕ್ಕೆ. ಕೃಷ್ಣನ ಲೆಕ್ಕ ಲೋಕಕ್ಕೆ. ಇಂತಹ ಸ್ಥಿತಿಯಲ್ಲಿ ಜನತಂತ್ರದ ಉದ್ಧಾರ ಅಥವಾ ಜೀರ್ಣೋದ್ಧಾರ ಹೇಗೆ ಸಾಧ್ಯ ಎಂಬುದನ್ನು ಪ್ರತಿಯೊಬ್ಬರೂ ಆಲೋಚಿಸಬೇಕು.
ಚುನಾವಣಾ ವೆಚ್ಚದ ಮಿತಿ ಎಂಬುದು ಕೇವಲ ಆಯೋಗ ಮತ್ತು ಸರ್ಕಾರಕ್ಕೆ ಸಂಬಂಧಿಸಿದ ಸಮಸ್ಯೆಯಲ್ಲಾ. ಇದು ಪ್ರತಿಯೊಬ್ಬ ಭಾರತೀಯನಿಗೂ ಅನ್ವಯವಾಗುವ ಸಮಸ್ಯೆ. ರಾಜಕಾರಣವೆಂಬುದು ವೃತ್ತಿಯಾಗಿ ಪರಿವರ್ತನೆಯಾದ ಮೇಲೆ, ವೃತ್ತಿವಂತಿಕೆಯಿಂದ ಗೆಲುವಿನ ಮಾರ್ಗವನ್ನು ಕಂಡುಕೊಂಡ ಮೇಲೆ ಆಯೋಗಗಳು ರೂಪಿಸುವ ಮಿತಿಯನ್ನು ಮೀರಲು ರಾಜಕಾರಣಕ್ಕೆ ಸಾವಿರಾರು ದಾರಿಗಳು. ಈ ಅಂಶ ಇಡೀ ದೇಶಕ್ಕೆ ಬರಿಗಣ್ಣಿಗೆ ಕಾಣುವಂತದ್ದು. ಭಾರತದ ರಾಜಕಾರಣದಲ್ಲೂ ಮೌಲ್ಯಾಧಾರಿತ ಅಂಶಗಳು ನಾಪತ್ತೆಯಾಗಲು ಇದೇ ಪ್ರಮುಖ ಕಾರಣ ಕೂಡಾ. ಮತದಾರರೇ ಭ್ರಷ್ಟಾಚಾರವನ್ನು ಪೋಷಿಸುವ ವ್ಯವಸ್ಥೆಯ ಭಾಗವಾದ ಮೇಲೆ ಅದನ್ನು ನಿಯಂತ್ರಣಕ್ಕೆ ಬಳಸುವ ಬಾರುಗೋಲನ್ನು ಯಾರ ಮೇಲೆ ಪ್ರಯೋಗಿಸಬೇಕು? ಹಾಗೆ ಪ್ರಯೋಗಕ್ಕೆ ಒಳಗಾದವರು ಪ್ರಯೋಗಪಶುಗಳೇ ವಿನಃ ನಿಜವಾದ ಫಲಾನುಭವಿಗಳು ಗೆಲುವಿನ ಮಾರ್ಗ ಗೊತ್ತಿರುವವರು. ಇಂತಹ ಪರಿಸ್ಥಿತಿಯಲ್ಲಿ ಸಾಕ್ಷಿಪ್ರಜ್ಞೆಯಿಂದ ವೈಚಾರಿಕತೆಯ ಬೆಳಕಿನಲ್ಲಿ ರಾಜಕಾರಣದ ಶುದ್ಧೀಕರಣ ಆಗಬೇಕು ಎಂಬ ಮಾತು ಕೇವಲ ಜಿಹ್ವಾ ಚಾಪಲ್ಯವಾಗಬಾರದು. ಅಂತಹ ಪರಿಸ್ಥಿತಿ ಮತ್ತೆ ಬಂದೇ ಬರುತ್ತದೆ ಎಂಬ ವಿಶ್ವಾಸದೊಂದಿಗೆ ಸಾಕ್ಷಿಪ್ರಜ್ಞೆಯನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ನಿರ್ವಿಕಾರವಾಗಿ ಪ್ರಸ್ತಾಪಿಸಿರುವ ಚುನಾವಣೆ ಸ್ಪರ್ಧೆಯ ವಿಚಾರ ಇಡೀ ದೇಶದ ಸಮಸ್ಯೆಯಾಗಿ ರೂಪುಗೊಂಡಾಗ ಮಾತ್ರ ಭಾರತದ ಕೀರ್ತಿ ಪಾರವಿಲ್ಲದ ರೀತಿಯಲ್ಲಿ ಮಾರ್ದನಿಗೊಳ್ಳಲು ಸಾಧ್ಯವೇನೋ.
ಚುನಾವಣೆಗಳು ಜನತಂತ್ರದ ಮಟ್ಟಿಗೆ ಸುಗ್ಗಿಯ ಕಾಲ. ಈ ಸುಗ್ಗಿಯ ಕಾಲವೆಂಬುದು ಸಮೃದ್ಧತೆಯ ಪ್ರತಿಬಿಂಬ. ಇಂತಹ ಸಂದರ್ಭದಲ್ಲಿ ಈ ದಿನ ಸೇವಿಸಿದ ಮೃಷ್ಟಾನ್ನ ನಾಳೆಯ ಮಲವೆಂಬ ನಗ್ನ ಸತ್ಯವನ್ನು ಅರಿತು ಎಚ್ಚರವಂತಿಕೆಯಲ್ಲಿ ವಿಚಾರವಂತಿಕೆ ಬೆರೆಸಿ ನಡೆಯುವುದು ರಾಷ್ಟ್ರಧರ್ಮವಾಗಿ ರೂಪುಗೊಳ್ಳುವ ಕಾಲದ ಮಹಾನಿರೀಕ್ಷೆಯಲ್ಲಿ ದೇಶವಾಸಿಗಳಿದ್ದಾರೆ ಎಂಬುದೇ ನಮಗೆಲ್ಲರಿಗೆ ಸಮಾಧಾನದ ಸಂಗತಿ.