For the best experience, open
https://m.samyuktakarnataka.in
on your mobile browser.

ಸತ್ಯವನ್ನು ಅನಾವರಣಗೊಳಿಸುವ ದೇಹಭಾಷೆ

03:30 AM Nov 26, 2024 IST | Samyukta Karnataka
ಸತ್ಯವನ್ನು ಅನಾವರಣಗೊಳಿಸುವ ದೇಹಭಾಷೆ

ಮಾನವ ದೇಹಭಾಷೆಯ ಇತಿಹಾಸ ಅತ್ಯಂತ ಪ್ರಾಚೀನವಾದುದು. ವಾಸ್ತವವಾಗಿ ಇದು ಮಾನವ ಜಾತಿಗಳ ಅಸ್ತಿತ್ವದ ಕ್ಷಣದೊಂದಿಗೇ ಪ್ರಾರಂಭವಾಯಿತು. ದೇಹಭಾಷೆ ಜೀವನದ ಮೊದಲ ಕ್ಷಣದಲ್ಲಿಯೇ ತಾನೇ ತಾನಾಗಿ ಸ್ವತಃ ಪ್ರಕಟವಾಗುತ್ತದೆ. ಆಗತಾನೇ ಜನಿಸಿದ ಶಿಶುವಿನ ಲಯಬದ್ಧವಾದ ಮೊದಲ ಕೂಗು ದೇಹಭಾಷೆಯ ಮತ್ತು ಧ್ವನಿಪ್ರಕ್ರಿಯೆಯ ಮೊತ್ತಮೊದಲ ಪರಿಪೂರ್ಣ ಸಂಯೋಜನೆ. ರೋಮನ್ ರಾಜನೀತಿಜ್ಞ ಮತ್ತು ತತ್ತ್ವಜ್ಞಾನಿ ಸಿಸೆರೋ ಪ್ರಕಾರ ದೇಹದ ಕ್ರಿಯೆ ಆತ್ಮದ ಭಾವನೆಗಳು ಮತ್ತು ಭಾವೋದ್ರೇಕಗಳನ್ನು ವ್ಯಕ್ತಪಡಿಸುತ್ತದೆ. ಪ್ರಕೃತಿಯು ಪ್ರತಿಯೊಂದು ಭಾವನೆಗಳಿಗೂ ಒಂದು ನಿರ್ದಿಷ್ಟ ಚೌಕಟ್ಟಿನೊಳಗೆ ತನ್ನದೇ ಆದ ನೋಟ, ಧ್ವನಿ, ಮುಖಭಾವ, ಉಚ್ಚಾರಣೆಯನ್ನು ಒದಗಿಸಿದ್ದು, ಅವು ವೀಣೆಯ ತಂತಿಗಳಂತೆ ಲಯಬದ್ಧವಾಗಿ ಸಂಗೀತವನ್ನು ಹೊರಡಿಸುತ್ತವೆ.' ದೇಹವು ಕೇವಲ ಮೂಳೆಗಳ ಗೂಡಲ್ಲ; ಮಾಂಸದ ಮುದ್ದೆಯಲ್ಲ. ಅದು ಸಾಂಕೇತಿಕ ಅರ್ಥಗಳ ಕ್ರಿಯಾತ್ಮಕ ನಕ್ಷತ್ರಪುಂಜವಾಗಿದ್ದು, ಮಾನವ ಚಟುವಟಿಕೆಗಳಲ್ಲಿ ಆಳವಾಗಿ ಮತ್ತು ವಿಸ್ತಾರವಾಗಿ ಆವರಿಸಿದೆ. ಮಾನವ ತನ್ನ ದೇಹದ ಮೂಲಕ ಜ್ಞಾನವನ್ನು ಸಂಪಾದಿಸುತ್ತಾನೆ; ರಚನಾತ್ಮಕವಾಗಿ ಪರಿಷ್ಕರಿಸುತ್ತಾನೆ ಮತ್ತು ಪ್ರಸರಿಸುತ್ತಾನೆ. ಆದ್ದರಿಂದ ದೇಹಭಾಷೆಯ ಅಧ್ಯಯನದಲ್ಲಿ ಮಾನವದೇಹವು ವಿಶೇಷ ಸ್ಥಾನವನ್ನು ಹೊಂದಿದೆ.ಮಾನವದೇಹವಿಲ್ಲದೆ ಜ್ಞಾನೋದಯ ಸಾಧ್ಯವಿಲ್ಲ' ಎಂಬುದನ್ನು ಪ್ರಾಚೀನರು ಸಾಧಿಸಿ ತೋರಿಸಿದ್ದಾರೆ. ನಮ್ಮ ಚಿಂತನೆಯ ಪ್ರಕ್ರಿಯೆಯು ಸರಿಯಾದ ದಿಕ್ಕಿನಲ್ಲಿ ಚಲಿಸುತ್ತಿದೆಯೇ ಎಂದು ಪರೀಕ್ಷಿಸಲು ದೇಹವು ನಮಗೆ ಅಗ್ನಿಪರೀಕ್ಷೆಯನ್ನು ಒಡ್ಡುತ್ತದೆ. ಬುದ್ಧಿವಂತ ದೇಹವು ತನ್ನೊಳಗಿನ ಭಾವನೆಗಳು, ವರ್ತನೆಗಳು, ಆಲೋಚನೆಗಳನ್ನು ಅರ್ಥಮಾಡಿಕೊಳ್ಳಲು ಬುದ್ಧಿವಂತ ವೀಕ್ಷಕನಿಗೆ ತನ್ನ ದ್ವಾರವನ್ನು ತೆರೆಯುತ್ತದೆ.
ಆಕರ್ಷಕ ವ್ಯಕ್ತಿಗೆ ಆಹ್ಲಾದಕರ ಧ್ವನಿ; ಕ್ರಿಯಾತ್ಮಕ ವ್ಯಕ್ತಿಗೆ ರೋಮಾಂಚಕ ಧ್ವನಿ ಮತ್ತು ಆತ್ಮವಿಶ್ವಾಸದ ವ್ಯಕ್ತಿಗೆ ಭರವಸೆಯ ಧ್ವನಿ ಇರುತ್ತದೆ ಎಂಬುದು ಸಂಶೋಧನೆಗಳಿಂದ ತಿಳಿದುಬರುತ್ತದೆ. ದೇಹಭಾಷೆಯನ್ನು ಸಾಮಾನ್ಯವಾಗಿ ದ್ವಿತೀಯ ಉತ್ಪನ್ನವೆಂದು ಪರಿಗಣಿಸಲಾಗುತ್ತದೆ ಮತ್ತು ಅದರ ಮೌಲ್ಯವನ್ನು ಕಡಿಮೆ ಅಂದಾಜು ಮಾಡಲಾಗುತ್ತಿದೆ. ಪದಗಳು ಅವುಗಳ ಆಕಾರವನ್ನು ಪಡೆದುಕೊಳ್ಳುವ ಮೊದಲೇ ದೇಹಭಾಷೆ ಪ್ರಕಟವಾಗುತ್ತದೆ. ರೋಗಿಯು ತನ್ನನ್ನು ತಾನು ವ್ಯಕ್ತಪಡಿಸಿಕೊಳ್ಳುವ ಏಕೈಕ ಭಾಷೆಯೂ ಆಗಿರುತ್ತದೆ. ದೇಹಭಾಷೆಯು ಕೇವಲ ಮಾತನಾಡುವ ಪದಗಳ ಭೌತಿಕ ಅಭಿವ್ಯಕ್ತಿಯಲ್ಲ. ವಾಸ್ತವವಾಗಿ, ಇದು ಮಾತನಾಡುವ ಪದಗಳ ಅರ್ಥವನ್ನು ಲೆಕ್ಕಿಸದೆ ಭಾವನೆಗಳ ಮೇಲೆ ತನ್ನದೇ ಆದ ಸ್ವತಂತ್ರ ವ್ಯಾಖ್ಯಾನವನ್ನು ಹೊಂದಿದೆ. ನೆನಪಿಡಿ; ಕೆಲವು ಜನರು ತಾವು ಬಳಸುವ ಪದಗಳ ವಿಷಯದಲ್ಲಿ ಸುಳ್ಳು ಹೇಳುವುದು ಸುಲಭ; ಆದರೆ, ದೇಹಭಾಷೆಯ ಅಭಿವ್ಯಕ್ತಿಗಳ ಮೂಲಕ ಸತ್ಯವು ತನ್ನಿಂತಾನೇ ಅನಾವರಣಗೊಳ್ಳುತ್ತದೆ! ಬೇರೆ ರೀತಿಯಲ್ಲಿ ಹೇಳುವುದಾದರೆ, ಜನರು ಬಳಸುವ ಆಯ್ದ ಪದಗಳಿಗಿಂತ ದೇಹಭಾಷೆ ನೈಜ ಮತ್ತು ಹೆಚ್ಚು ಸತ್ಯವಾಗಿರುತ್ತದೆ. ನಾವು ನಮ್ಮ ನಾಲಿಗೆಯನ್ನು ಮತ್ತು ಮಾತುಗಳನ್ನು ನಿಯಂತ್ರಿಸಬಹುದು; ಆದರೆ ನಮ್ಮ ದೇಹದ ಮೌನಸನ್ನೆಗಳನ್ನಲ್ಲ. ನಮ್ಮ ಹೆದರಿಕೆ, ಅಪ್ರಾಮಾಣಿಕತೆ, ಬೇಸರ ಮತ್ತಿತರ ನಕಾರಾತ್ಮಕ ಗುಣಲಕ್ಷಣಗಳು ದೇಹಭಾಷೆಯ ಸುಪ್ತಸಂಜ್ಞೆಗಳಿಗೆ ಅನುವಾದಿಸಲ್ಪಡುತ್ತವೆ ಮತ್ತು ನಮ್ಮ ಅರಿವಿಗೆ ಬಾರದೆಯೇ ಹೊರಗೆ ಪ್ರಕಟಗೊಳ್ಳುತ್ತದೆ. ನಮ್ಮ ವರ್ತನೆಗಳು, ಭಾವನೆಗಳು ಮತ್ತು ವ್ಯಕ್ತಿತ್ವದ ಗುಣಲಕ್ಷಣಗಳು ನಮ್ಮ ಮೌನಭಾಷೆಯಲ್ಲಿ ಸ್ಪಷ್ಟವಾಗಿ ಪ್ರತಿಫಲಿಸುತ್ತವೆ.
ಭಾವನೆಗಳು ಮನುಷ್ಯನ ಮೂಲಭೂತ ಅಸ್ತಿತ್ವ. ಭಾವನಾತ್ಮಕವಾಗಿರುವುದು ಮಾನವನ ಒಂದು ಅವಿಭಾಜ್ಯ ಭಾಗ. ಒಬ್ಬ ವ್ಯಕ್ತಿಯು ತನ್ನ ಬಗ್ಗೆ ಮತ್ತು ಇತರರ ಬಗ್ಗೆ ಹೇಗೆ ಭಾವಿಸುತ್ತಾನೆ ಎಂಬುದನ್ನು ತೋರಿಸುವ ಭಾವನಾತ್ಮಕ ಸೂಚನೆಗಳ ಶ್ರೀಮಂತ ಶಬ್ದಕೋಶವನ್ನು ಹೊಂದಿದ್ದಾನೆ. ಭಾವನೆಗಳ ಕ್ಷೇತ್ರದಲ್ಲಿ ಸೂಚನೆಗಳು ಸಾಮಾನ್ಯವಾಗಿ ಉದ್ದೇಶಪೂರ್ವಕವಲ್ಲದ, ಅನೈಚ್ಛಿಕ ಮತ್ತು ಪ್ರಜ್ಞಾಹೀನವಾಗಿರುತ್ತವೆ. ದೇಹದ ಚಲನೆಯು ಭಾವನಾತ್ಮಕ ಅಭಿವ್ಯಕ್ತಿಗೆ ಕೇಂದ್ರವಾಗಿರುವುದರಿಂದ ದೇಹಭಾಷೆ ಮತ್ತು ಭಾವನೆಗಳು ಒಂದರಿಂದ ಇನ್ನೊಂದನ್ನು ಬೇರ್ಪಡಿಸಲಾಗದ ಬಂಧವನ್ನು ಹೊಂದಿವೆ. ಭಾವನೆಯ ತೀವ್ರತೆಯು ಮೂಕ ಮಿದುಳಿಗೆ ಅದರ ಆಜ್ಞೆಗಳನ್ನು ನಿರ್ದೇಶಿಸುವಂತೆ ವಿಧಿಸುತ್ತದೆ; ದೇಹವು ವಿಧೇಯತೆಯಿಂದ ಆಜ್ಞೆಗಳನ್ನು ಅನುಸರಿಸುತ್ತದೆ ಮತ್ತು ಮನಃಪಟಲದ ಮೇಲೆ ವಿನ್ಯಾಸವನ್ನು ಪ್ರಸ್ತುತಪಡಿಸುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ; ಭಾವನೆಗಳು ಎಲ್ಲಿಗೆ ಹೋಗಬೇಕೆಂದು ದೇಹವು ಸೂಚಿಸುತ್ತದೆ.
ಜೀವನದ ಅವಿಶ್ರಾಂತ ಗತಿ ಮತ್ತು ವೇಗದ ಕಾರಣದಿಂದಾಗಿ ಆಧುನಿಕ ಮನುಷ್ಯ ತನ್ನ ಜೀವನದ ಕೊನೆಮೊದಲಿಲ್ಲದ ಬೇಡಿಕೆಗಳನ್ನು ಪೂರೈಸಿಕೊಳ್ಳಲು ದೈಹಿಕ ಹಾಗೂ ಮಾನಸಿಕ ಎರಡೂ ಅತಿಯಾದ ಒತ್ತಡಕ್ಕೆ ಬಲಿಯಾಗುತ್ತಿದ್ದಾನೆ. ಇಂದಿನ ಮನುಷ್ಯ ತನ್ನ ಜೀವನವನ್ನು ಪ್ರಪಂಚದ ಓಟದಲ್ಲಿ ಪಾಲ್ಗೊಳ್ಳುವಂತಾಗಲು ಸದಾ ಓಟದ ಸನ್ನದ್ಧತೆಯಲ್ಲಿರುತ್ತಾನೆ. ಓಟದಲ್ಲಿ ಹಿಂದೆ ಬೀಳದಂತೆ ಯಾವಾಗಲೂ ಸ್ಥಿರವಾಗಿರುವ ಮತ್ತು ಸಮಾನಾಂತರವಾಗಿ ತನ್ನ ಜೀವನ ವ್ಯರ್ಥವಾಗದಂತೆ ಪ್ರತಿ ಹೆಜ್ಜೆಯಲ್ಲೂ ಎಚ್ಚರದ ಸ್ಥಿತಿಯನ್ನು ಕಾದುಕೊಳ್ಳಬೇಕಾಗುವ ಅನಿವಾರ್ಯತೆಯಲ್ಲಿದ್ದಾನೆ. ದೀರ್ಘಕಾಲದ ಸಮಯದ ಕೊರತೆ, ಬದಲಾಗುತ್ತಿರುವ ಆದ್ಯತೆಗಳು ಮತ್ತು ಚಟುವಟಿಕೆಗಳ ಮಾದರಿಗಳು, ಹೆಚ್ಚಿನ ಮಾಹಿತಿಯ ಕೊರತೆ ಮತ್ತು ಹೊರೆ, ಹೆಚ್ಚು ಸಕ್ರಿಯವಾದ ಪರಸ್ಪರ ಸಂಬಂಧಗಳು ಮೌಖಿಕ ಸಂವಹನದ ಮೇಲೆ ಪರಿಣಾಮ ಬೀರಿವೆ. ದೇಹಭಾಷೆಯ ಪ್ರಮುಖ ಅಂಶ, ಭಾವನೆಗಳ ಅಭಿವ್ಯಕ್ತಿ. ಭಾವನೆಗಳು ಸಂತೋಷ, ಖಿನ್ನತೆ, ಆತಂಕ, ಆನಂದ, ಅಸಮಾಧಾನ, ಉತ್ಸಾಹ, ಅರೆನಿದ್ರಾವಸ್ಥೆ, ಹಸಿವು, ಲೈಂಗಿಕತೃಷೆ ಇತ್ಯಾದಿಗಳ ಪ್ರಚೋದನೆ ಮತ್ತು ತೃಪ್ತಿಯಂತಹ ಸೌಮ್ಯವಾದ ಮನಃಸ್ಥಿತಿಗಳನ್ನು ಒಳಗೊಂಡಿವೆ.
ಮುಖವು ಜೀವನದ ಕನ್ನಡಿ. ನಮ್ಮ ಮುಖವು ನಮ್ಮ ಗುರುತನ್ನು ವ್ಯಾಖ್ಯಾನಿಸುತ್ತದೆ. ನಮ್ಮ ವರ್ತನೆಗಳು, ಅಭಿಪ್ರಾಯಗಳು, ಮನಃಸ್ಥಿತಿಗಳನ್ನು ವ್ಯಕ್ತಪಡಿಸುತ್ತದೆ ಮತ್ತು ನಾವು ಇತರರೊಂದಿಗೆ ಹೇಗೆ ಸಂಬಂಧ ಹೊಂದಿದ್ದೇವೆ ಎಂಬುದನ್ನು ತೋರಿಸುತ್ತದೆ. ಮುಖವು ನಮ್ಮ ದೃಷ್ಟಿಗೋಚರ ವೈಯಕ್ತಿಕ ಮುದ್ರೆ(ಟ್ರೇಡ್‌ಮಾರ್ಕ್) ಮತ್ತು ಮಾನವದೇಹದ ಛಾಯಾಚಿತ್ರ. ಭಾವನಾತ್ಮಕವಾಗಿ ಮುಖವು ಪದಕ್ಕಿಂತ ಪ್ರಬಲವಾಗಿದೆ. ಮುಖಭಾವಗಳಿಗೆ ಸಂಬಂಧಿಸಿದ ಭಾವನೆಗಳು ಎಷ್ಟು ನಿಕಟವಾಗಿವೆ ಎಂದರೆ; ಒಂದಿಲ್ಲದೆ ಇನ್ನೊಂದನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಒಂದು ಮುಗುಳ್ನಗು(ಸ್ನೇಹಶೀಲತೆ); ಮುಖಗಂಟಿಕ್ಕುವಿಕೆ(ಅಸಮಾಧಾನ); ಏರಿಸಿದ ಹುಬ್ಬುಗಳು(ಅಪನಂಬಿಕೆ) ಅಥವಾ ಬಿಗಿಗೊಂಡ ದವಡೆಯ ಸ್ನಾಯುಗಳು(ವಿರೋಧ)-ಮಾತನಾಡುವ ಪದಗಳಿಂದ ತಿಳಿಸುವ ಅರ್ಥಗಳಿಗೆ ನಿಜವಾದ ಸಾರವನ್ನು ಸೇರಿಸುತ್ತದೆ. ಭಾವರಹಿತ ಅಥವಾ ನಿಸ್ತೇಜ ಮುಖಭಾವ ವೀಕ್ಷಕರಿಗೆ ಪೂರ್ವಾಗ್ರಹವನ್ನು ಉಂಟುಮಾಡಬಹುದು ಮತ್ತು ಇದು ಮರೆವುಕಾಯಿಲೆ ಅಥವಾ ಖಿನ್ನತೆಯ ಅಭಿವ್ಯಕ್ತಿಯಾಗಿರುವ ಸಾಧ್ಯತೆಯಿದೆ. ತುಟಿಗಳನ್ನು ಕಚ್ಚುವುದು, ಕಣ್ಣುಮಿಟುಕಿಸುವುದು ಅಥವಾ ನಿಯಮಿತ ಮಧ್ಯಂತರದಲ್ಲಿ ಹುಬ್ಬುಗಳನ್ನು ಮೇಲಕ್ಕೇರಿಸುವುದು ಸಾಮಾನ್ಯವಾಗಿ ಸಂವಹನದ ಸುಗಮ ಹರಿವನ್ನು ಹಾಳುಮಾಡುತ್ತದೆ. ಆತಂಕಕ್ಕೆ ಒಳಗಾದ ರೋಗಿಗಳು ಸಾಮಾನ್ಯವಾಗಿ ಹಣೆಯ ಮೇಲೆ ಸಮಾನಾಂತರವಾದ ಸುಕ್ಕುಗಳು, ಎತ್ತರಿಸಿದ ಹುಬ್ಬುಗಳು, ಅಗಲವಾದ ಕಣ್ಣುರೆಪ್ಪೆಗಳು ಅಥವಾ ಹಿಗ್ಗಿದ ಸಂದುಗಳನ್ನು ಹೊಂದಿರುತ್ತಾರೆ.
ಮೌಖಿಕವಲ್ಲದ ದೇಹಭಾಷೆಯ ಜಗತ್ತಿನಲ್ಲಿ ಒಂದು ವಿಶಿಷ್ಟ ಆಕರ್ಷಕ ಕ್ಷೇತ್ರವೆಂದರೆ; ಸಂಬಂಧ ಮತ್ತು ಅಂತರ. ಇದು ಪರಸ್ಪರ ಮೆಚ್ಚುಗೆ ಮತ್ತು ಆತ್ಮೀಯತೆಯ ಆಳ ಹಾಗೂ ಅಗಲವನ್ನು ಸೂಚಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಖಾಸಗಿತನವನ್ನು ಬಯಸುತ್ತಾನೆ ಮತ್ತು ಇದಕ್ಕಾಗಿ ಒಂದು ಹಂತದ ಅಂತರವನ್ನು ಕಾಯ್ದುಕೊಳ್ಳುತ್ತಾನೆ. ಇತರರನ್ನು ತನ್ನ ಖಾಸಗಿ ಪ್ರದೇಶಕ್ಕೆ ಪ್ರವೇಶಿಸಲು ಬಿಡುವುದಿಲ್ಲ. ಸ್ಥಳ ಮತ್ತು ಅಂತರವು ಸಂಸ್ಕೃತಿಯಿಂದ ಸಂಸ್ಕೃತಿಗೆ; ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಒಬ್ಬ ವ್ಯಕ್ತಿ ನಿರ್ವಹಿಸುವ ಈ ಅಂತರ ಆತನ ವ್ಯಕ್ತಿತ್ವದಿಂದ ನಿರ್ಧರಿತವಾಗಿರುತ್ತದೆ. ರೋಗಿಯು ಕುರ್ಚಿಯಲ್ಲಿ ಕುಳಿತುಕೊಳ್ಳುವ ವಿಧಾನ ಅಥವಾ ಭಂಗಿಯಲ್ಲಿ ಇದನ್ನು ಗಮನಿಸಬಹುದು. ಅಧಿಕಾರ ಮತ್ತು ಪ್ರತಿಷ್ಠೆಯಿಂದ ತುಂಬಿದ ವ್ಯಕ್ತಿ ತಾನು ಕುಳಿತುಕೊಂಡ ಕುರ್ಚಿಯ ಅಕ್ಕಪಕ್ಕ ತನ್ನ ವ್ಯಕ್ತಿತ್ವಕ್ಕಿಂತ ಕೆಳಗಿನವರು ಕುಳಿತುಕೊಳ್ಳುವುದನ್ನು ಸಹಿಸುವುದಿಲ್ಲ! ಅದೇ ಸ್ವಭಾವತಃ ನಾಚಿಕೆ ಅಥವಾ ಅಂತರ್ಮುಖಿಯಾಗಿರುವ ವ್ಯಕ್ತಿ ಅಥವಾ ಒಬ್ಬ ರೋಗಿ ತಾನು ಕುಳಿತಿರುವ ಕುರ್ಚಿಯಲ್ಲೇ ಅತ್ಯಂತ ಕಡಿಮೆ ಸ್ಥಳವನ್ನು ಬಳಸುತ್ತಾನೆ!