For the best experience, open
https://m.samyuktakarnataka.in
on your mobile browser.

ಸತ್ಯವನ್ನು ಸುಳ್ಳು ಮಾಡುವುದು ಆರ್‌ಎಸ್‌ಎಸ್ ಕೆಲಸ

06:13 PM Aug 30, 2024 IST | Samyukta Karnataka
ಸತ್ಯವನ್ನು ಸುಳ್ಳು ಮಾಡುವುದು ಆರ್‌ಎಸ್‌ಎಸ್ ಕೆಲಸ

ಮಂಗಳೂರು: ಸತ್ಯವನ್ನು ಸುಳ್ಳು ಮಾಡುವುದೇ ಆರ್‌ಎಸ್‌ಎಸ್ ಕೆಲಸ. ಯಾವ ರೀತಿ ಪ್ರಚೋದನೆ ಮಾಡಬೇಕು, ಗಲಾಟೆ ಎಬ್ಬಿಸಬೇಕು, ದಂಗೆ ಮಾಡಬೇಕೆಂಬ ತರಬೇತಿ ಕೊಡುತ್ತಾರೆ. ಬಿಜೆಪಿ, ಸಂಘ ಪರಿವಾರದಲ್ಲಿ ಇದಕ್ಕೆಂದೆ ತರಬೇತಿ ಇರುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮೈಸೂರಿನ ಮುಡಾ ಹಗರಣದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಸುಮ್ಮನೆ ಬೊಬ್ಬೆ ಹಾಕಿ ಸುಳ್ಳನ್ನು ಸತ್ಯ ಮಾಡಲು ದೇಶಾದ್ಯಂತ ಯತ್ನಿಸುತ್ತಿದ್ದಾರೆ. ಅವರ ವ್ಯವಸ್ಥೆಯೇ ಅದೇ ರೀತಿ. ಅದನ್ನೇ ಇಲ್ಲಿ ಸಹ ಮಾಡಲು ಹೊರಟಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯರ ನಡೆ ಬಹಳ ಸ್ಪಷ್ಟವಾಗಿದೆ. ಅವರು ಯಾವುದೇ ರೀತಿಯ ತಪ್ಪು ಮಾಡಿಲ್ಲ. ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರ ನಡೆ ಬಗ್ಗೆ ಇಡೀ ರಾಜ್ಯಕ್ಕೆ ಗೊತ್ತಾಗಿದೆ. ಯಾವ ರೀತಿ ಪಕ್ಷಪಾತ ಮಾಡಿದ್ದಾರೆಂದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದ್ದಾರೆ.
ಪ್ರಾಸಿಕ್ಯೂಶನ್, ಕೋರ್ಟ್ ಅದೆಲ್ಲಾ ನ್ಯಾಯಾಧೀಶರು ತೀರ್ಮಾನ ಮಾಡುತ್ತಾರೆ. ರಾಜ್ಯಪಾಲರು ಮುಖ್ಯಮಂತ್ರಿಗೆ ೧೨ ಗಂಟೆಯ ಒಳಗೆ ತರಾತುರಿಯಲ್ಲಿ ಶೋಕಾಸ್ ನೋಟಿಸ್ ನೀಡಿದ್ದಾರೆ. ನಮ್ಮ ಮುಖ್ಯಮಂತ್ರಿ ಯಾವುದೇ ಅಧಿಕಾರ ದುರುಪಯೋಗ ಮಾಡಿಲ್ಲ ಭ್ರಷ್ಟಾಚಾರ ಮಾಡಿಲ್ಲ ಎಂದರು.
ರಾಜ್ಯಪಾಲರು ಸರ್ಕಾರದ ಸಾಂವಿಧಾನಿಕ ಮುಖ್ಯಸ್ಲ. ಮುಖ್ಯಸ್ಥ ಸರಕಾರದ ವಿರುದ್ಧವೇ ಷಡ್ಯಂತ್ರದಲ್ಲಿ ಭಾಗಿಯಾದರೆ ಏನೆಂದು ಕರೆಯೋದು. ಇದು ರಾಜ್ಯಕ್ಕೆ ಮಾಡಿದ ದ್ರೋಹ ಅಲ್ವಾ..? ಎಂದು ಪ್ರಶ್ನಿಸಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವರು ದ್ರೋಹ ಮಾಡಿದ್ದಾರೆಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.