For the best experience, open
https://m.samyuktakarnataka.in
on your mobile browser.

ಸತ್ಯ-ಅಸತ್ಯದ ಸಂಘರ್ಷ: ಸತ್ಯಕ್ಕೆ ಜಯ

02:30 AM Mar 09, 2024 IST | Samyukta Karnataka
ಸತ್ಯ ಅಸತ್ಯದ ಸಂಘರ್ಷ  ಸತ್ಯಕ್ಕೆ ಜಯ

ಸಂಜೆ ಗೃಹ ಕಚೇರಿಯಲ್ಲಿ ಕುಳಿತು ನಾಳೆ ಕೇಸಿನ ತಯಾರಿ ಮಾಡುತ್ತಿದ್ದೆ. ಚೇಂಬರ್‌ನಲ್ಲಿದ್ದ ಇಬ್ಬರು ಕಕ್ಷಿದಾರರ ಕೇಸ್ ಫೈಲ್‌ನ್ನು ಪರಿಶೀಲಿಸುತ್ತಿದ್ದೆ. ವೇಟಿಂಗ್ ರೂಮಿನಲ್ಲಿ ಐದಾರು ಕಕ್ಷಿದಾರರು ಕಾಯುತ್ತಿದ್ದರು.
ನಗರದ ಪ್ರತಿಷ್ಠಿತ ವ್ಯಾಪಾರಿ ಪ್ರಹ್ಲಾದ (ಹೆಸರು ಬದಲಿಸಿದೆ) ಆಫೀಸನ್ನು ಪ್ರವೇಶಿಸಿದರು. ಅವರನ್ನು ನೋಡಿ ಮುಗುಳ್ನಕ್ಕು, ಕಾಯಲು ಸೂಚಿಸಿದೆ. ಪ್ರಹ್ಲಾದ ಅವರಿಗೆ ಕಾಯುವಷ್ಟು ಸಂಯಮ ಇಲ್ಲದ್ದು ಕಂಡುಬಂದಿತು. ಬೇರೆಯವರಿಗೆ ಕಾಯಲು ತಿಳಿಸಿ, ಚೇಂಬರಿಗೆ ಕರೆದೆ. ಅವರು ಎಂದೂ ಕೋರ್ಟ್ ಕಚೇರಿಗೆ ಬಂದವರಲ್ಲ. ಪ್ರತಿಷ್ಠಿತ, ಸೌಜನ್ಯಯುತ, ಪ್ರಾಮಾಣಿಕ ವ್ಯಾಪಾರಸ್ಥರೆಂದು ಗೌರವ ಇದೆ. ಅವರೆಡೆಗೆ ಒಂದು ಮುಗುಳ್ನುಗೆ ಬೀರಿ ಸುಮ್ಮನೆ ಕುಳಿತೆ. ದುಗುಡ, ಧಾವಂತದಿಂದ ಬ್ಯಾಗ್‌ನಿಂದ ಕಾಗದ ಪತ್ರಗಳನ್ನು ಹೊರತೆಗೆದು ಟೇಬಲ್ ಮೇಲೆ ಇಟ್ಟರು "ಸರ್, ಕೋರ್ಟಿನವರು ಈ ಕಾಗದ ಪತ್ರಗಳನ್ನು ನನಗೆ ಕೊಟ್ಟು, ಸಹಿ ಮಾಡಿಸಿಕೊಂಡು ಹೋಗಿದ್ದಾರೆ. ಇದರಲ್ಲಿ ಏನು ಬರೆದಿದ್ದಾರೆ ಅರ್ಥ ಆಗುತ್ತಿಲ್ಲ" ಇಷ್ಟು ಹೇಳಿ ನನ್ನ ಉತ್ತರಕ್ಕೆ ಕಾಯ್ದು ಕುಳಿತರು.
ಇದೇ ನಗರದಲ್ಲಿ ಬಡ್ಡಿ ವ್ಯವಹಾರ ಮಾಡುವ ಆಸಾಮಿಯೊಬ್ಬನು, ಪ್ರಹ್ಲಾದನ ಗೆಳೆಯ ಶ್ರೀನಾಥ (ಹೆಸರು ಬದಲಿಸಿದೆ)ನ ಕಡೆಯಿಂದ ಪಾವರ್ ಆಫ್ ಅಟಾರ್ನಿ ಬರೆಸಿಕೊಂಡು ನಿರ್ದಿಷ್ಟ ಕರಾರು ಕಾರ್ಯ ನಿರ್ವಹಣೆ ದಾವೆ ಮಾಡಿದ್ದನು. ಪ್ರಹ್ಲಾದ ನಗರದ ಹೃದಯ ಭಾಗದ ಮಾರುಕಟ್ಟೆ ಪ್ರದೇಶದಲ್ಲಿ ಎರಡು ಅಂತಸ್ತಿನ ಕಟ್ಟಡ ಹೊಂದಿದ್ದು ಅದನ್ನು ತನ್ನ ವ್ಯಾಪಾರದ ಅಡಚಣೆಗಾಗಿ ಮಾರಾಟ ಮಾಡಲು ತೆಗೆದಿದ್ದನು, ವಾದಿ ಶ್ರೀನಾಥನು ಹೆಚ್ಚಿನ ಬೆಲೆಗೆ ಅಂದರೆ ರೂ. ೩೦ ಲಕ್ಷಕ್ಕೆ ಬೇಡಿದ್ದು, ಪ್ರತಿವಾದಿ ಪ್ರಹ್ಲಾದನು ಒಪ್ಪಿಕೊಂಡು ರೂ. ೧೫ ಲಕ್ಷ ಮುಂಗಡ ಪಡೆದುಕೊಂಡು ಕ್ರಯ ಕರಾರು ಪತ್ರ ಬರೆದು ಕೊಟ್ಟು ನೋಂದಾಯಿಸಿ ಕೊಟ್ಟಿರುತ್ತಾನೆ, ಉಳಿದ ಹಣವನ್ನು ಎರಡು ವರ್ಷಕ್ಕೆ ಪಡೆದುಕೊಂಡು ನೋಂದಾಯಿತ ಕ್ರಯಪತ್ರ ಮಾಡಿ ಕಟ್ಟಡದ ಸ್ವಾಧೀನ ಕೊಡುವುದಾಗಿ ಒಪ್ಪಿಕೊಂಡಿರುತ್ತಾನೆ, ಅವಧಿಯ ನಂತರ ವಾದಿ ಹಲವಾರು ಸಲ, ಉಳಿದ ಹಣ ರೂ. ೧೫ ಲಕ್ಷ ಪಡೆದುಕೊಂಡು ಸ್ವಾಧೀನ ಕೊಡಲು ವಿನಂತಿಸಿದರೂ ಕೇಳಿರುವುದಿಲ್ಲವೆಂದು, ಪ್ರತಿವಾದಿ ಬಾಕಿ ಉಳಿದ ರೂ. ೧೫ ಲಕ್ಷಗಳನ್ನು ವಾದಿಯಿಂದ ಪಡೆದುಕೊಂಡು ಕಟ್ಟಡದ ಬಗ್ಗೆ ಕ್ರಯಪತ್ರ ಬರೆದುಕೊಡುವಂತೆ ನಿರ್ದೇಶಿಸಲು ಕೋರಿ ದಾವೆ ಮಾಡಿದ್ದನು. ಪ್ರಹ್ಲಾದನಿಗೆ ವಿವರಿಸಿ ಹೇಳಿದನು ವಿಚಲಿತನಾದನು." ನೋಡಿ, ಅಧೈರ್ಯ ಆಗುವುದು ಬೇಡ ಎಂದು ಭರವಸೆ ನೀಡಿದೆ.
"ನೀವು ಪೇಪರ್ಸ್ ತಂದಿದ್ದರೆ ಕೊಡಿ, ನೀವು ಹೇಳಬೇಕಿದ್ದು ಯಾವುದನ್ನೂ ಮುಚ್ಚುಮರೆ ಇಲ್ಲದೆ ಹೇಳಿ." ಎಂದು ಮಾತಿಗೆ ಪೀಠಿಕೆ ಇಟ್ಟೆ. "ಸರ್, ನನ್ನ ಕಟ್ಟಡ ಮಾರ್ಕೆಟ್ ಜಾಗೆಯಲ್ಲಿದ್ದು ಅದು ರೂ. ಎರಡು ಕೋಟಿ ಬೆಲೆ ಬಾಳುತ್ತದೆ. ಅದನ್ನು ರೂ. ೩೦ ಲಕ್ಷಕ್ಕೆ ಹೇಗೆ ಕ್ರಯ ಮಾಡಲು ಒಪ್ಪಿಕೊಳ್ಳಲಿ? ನನಗೆ ಶ್ರೀನಾಥ ಪರಿಚಯದ ಸ್ನೇಹಿತ. ವ್ಯಾಪಾರಕ್ಕೆ ನಮಗೆ ಎಷ್ಟೇ ಹಣ ಇದ್ದರೂ ಸಾಲುವುದಿಲ್ಲ. ಬ್ಯಾಂಕು, ಫೈನಾನ್ಸ್ಗಳಿಂದ ನಾವು ಸಾಲ ಪಡೆಯುತ್ತೇವೆ. ಪ್ರಾಮಾಣಿಕವಾಗಿ ಮರಳಿ ನೀಡುತ್ತೇವೆ. ಬ್ಯಾಂಕ್ ಸಾಲ ಮಂಜೂರಾಗುವುದು ತಡವಾಗುತ್ತದೆ. ಅದಕ್ಕಾಗಿ ಖಾಸಗಿ ವ್ಯಕ್ತಿಯಿಂದ ಪಡೆಯುವುದು ಅನಿವಾರ್ಯವಾಗುತ್ತದೆ. ಶ್ರೀನಾಥನಿಂದ ತಿಂಗಳು ಬಡ್ಡಿ ಆಧಾರದ ಮೇಲೆ ಸಾಲ ಪಡೆದಿದ್ದೇನೆ. ಮೊದಮೊದಲು ಕಡಿಮೆ ಸಾಲ ಪಡೆದಿದ್ದರಿಂದ ಯಾವುದೇ ಆಧಾರ ಪತ್ರ ಬರೆದು ಕೊಟ್ಟಿರಲಿಲ್ಲ. ರೂ. ೫ ಲಕ್ಷ ಸಾಲ ಪಡೆದುಕೊಂಡೆ. ಕಟ್ಟಡದ ಕ್ರಯ ಕರಾರು ಪತ್ರ ಸಾಲ ಭದ್ರತೆಗಾಗಿ ಬರೆದುಕೊಡಲು ಒತ್ತಾಯಿಸಿದ. ಹಣದ ಅವಶ್ಯಕತೆ ಇದ್ದು ಬರೆದುಕೊಟ್ಟೆ. ಮುಂಗಡ ಹಣವೆಂದು ೫ ಲಕ್ಷ ತೋರಿಸಿದ. ಮತ್ತೆ ರೂ. ೫ ಲಕ್ಷ ಸಾಲ ಬೇಕಾಯಿತು. ಮೊದಲ ಕರಾರು ಪತ್ರವನ್ನು ರದ್ದುಪಡಿಸಿ ಅಂದೆ. ರೂ. ೧೦ ಲಕ್ಷ ಸಾಲವನ್ನು ಮುಂಗಡವೆಂದು ತೋರಿಸಿ ಮತ್ತೆ ಕ್ರಯ ಕರಾರು ಪತ್ರ ಬರೆದುಕೊಟ್ಟೆ. ಹೀಗೆ ಸಾಲು ಸಾಲಾಗಿ ನಾಲ್ಕು ಸಲ ಕರಾರು ಪತ್ರ ಬರೆದುಕೊಟ್ಟೆ, ಮೂರು ಸಲ ಕರಾರು ರದ್ದತಿ ಪತ್ರ ಬರೆದು ಕೊಟ್ಟ. ದಾವೆ ಮಾಡಿದ್ದು ನಾಲ್ಕನೇ ಕರಾರು ಪತ್ರ. ಇವು ೭ ತಿಂಗಳ ಅವಧಿಯಲ್ಲಿ ಆಗಿವೆ. ಪತ್ರಗಳಲ್ಲಿ ತೋರಿಸಿದ ಕಟ್ಟಡದ ಮೌಲ್ಯ ಕೇವಲ ಕಾಲ್ಪನಿಕವಾದದ್ದು. ಇಷ್ಟು ಮಾಹಿತಿ ನೀಡಿ, ಎಲ್ಲ ದಾಖಲಾತಿಗಳನ್ನು ನನ್ನ ಮುಂದೆ ಇರಿಸಿದ. ಅವುಗಳನ್ನು ಪರಿಶೀಲಿಸಿದೆ, ಕ್ರಯ ಕರಾರು ಪತ್ರವಲ್ಲ, ಸಾಲ ಭದ್ರತೆಗಾಗಿ ಬರೆದುಕೊಟ್ಟ ಪತ್ರವೆಂಬುದು ಸ್ಪಷ್ಟವಾಯಿತು.
ನ್ಯಾಯಾಲಯದಲ್ಲಿ ಪ್ರತಿವಾದಿ ಪ್ರಹ್ಲಾದನ ಪರವಾಗಿ ವಕಾಲತ್ತು ದಾಖಲಿಸಿದೆ. ಇನ್ನಷ್ಟು ಕಾಗದಪತ್ರಗಳನ್ನು ಪರಿಶೀಲಿಸಿ, ಪ್ರತಿವಾದಿಯು ವಾದಿಗೆ ಬರೆದುಕೊಟ್ಟ ಪತ್ರ ಕ್ರಯ ಕರಾರು ಪತ್ರವಲ್ಲ, ಅದು ಸಾಲದ ಭದ್ರತೆಗಾಗಿ ಬರೆದುಕೊಟ್ಟ ಪತ್ರವೆಂದು, ಬಡ್ಡಿಯ ಆಧಾರದ ಮೇಲೆ ಕೊಟ್ಟ ಸಾಲ ೨೦ ಲಕ್ಷ ರೂ.ಗಳನ್ನು ವಾದಿಗೆ ಮರಳಿ ಕೊಡಲು ಸಿದ್ಧನಿರುವುದಾಗಿ, ಕೈಫಿಯತ್/ತಕರಾರು ಸಲ್ಲಿಸಿದೆ. ನ್ಯಾಯಾಲಯವು ರೂ. ೨೦ ಲಕ್ಷ ಪಡೆದುಕೊಂಡು ಸಂಧಾನ ಮಾಡಿಕೊಳ್ಳಲು ಸೂಚಿಸಿತು. ಪ್ರತಿವಾದಿ ಕಟ್ಟಡದ ಬಗ್ಗೆ ಕ್ರಯಪತ್ರ ಬರೆದುಕೊಟ್ಟರೆ ರಾಜಿ ಆಗುವುದಾಗಿ ವಾದಿಸಿದ. ಸಂಧಾನ ವಿಫಲವಾಯಿತು.
ಪ್ರಕರಣ ವಿಚಾರಣೆ ಪ್ರಾರಂಭವಾಯಿತು. ವಾದಿಯ ಪಿಎ ಹೋಲ್ಡರ್ ಮೊದಲಿಗೆ ತನ್ನ ಮುಖ್ಯ ವಿಚಾರಣೆ ಪ್ರಮಾಣ ಪತ್ರವನ್ನು ನ್ಯಾಯಕ್ಕೆ ಸಲ್ಲಿಸಿದ. ಪಾಟಿ ಸವಾಲಿನಲ್ಲಿ ಪ್ರತಿವಾದಿಯು ವಾದಿಗೆ ಬರೆದುಕೊಟ್ಟ ನಾಲ್ಕು ಕರಾರು ಪತ್ರಗಳು, ಮೂರು ಕರಾರು ರದ್ದತಿ ಪತ್ರಗಳನ್ನು ಎದುರಿಗೆ ಹಿಡಿದೆ. ಅವನ್ನು ಒಪ್ಪಿಕೊಂಡನು. ರದ್ದತಿ ಪತ್ರ ಬರೆದುಕೊಡುವಾಗ ಮುಂಗಡ ಹಣ ಮರಳಿ ಮುಟ್ಟಿದೆ ಎಂದು ತೋರಿಸಿದ್ದು, ೧೦ ನಿಮಿಷದ ಅಂತರದಲ್ಲಿ ಮತ್ತೊಂದು ಕರಾರು ಪತ್ರ ಬರೆದುಕೊಡುವ ವ್ಯವಹಾರ ಹೇಗೆ ಆಗಲಿಕ್ಕೆ ಸಾಧ್ಯ ಅನ್ನುವುದನ್ನು ಹೇಳಲು ತತ್ತರಿಸಿದ. ಕ್ರಯ ಪತ್ರದ ಸಾಕ್ಷಿದಾರರನ್ನು ಅದೇ ರೀತಿ ಪಾಟಿ ಸವಾಲಿನಲ್ಲಿ ಪ್ರಶ್ನಿಸಿದಾಗ ನಿರುತ್ತರರಾದರು. ಪ್ರತಿವಾದಿಯ ಮುಖ್ಯ ವಿಚಾರಣಾ ಪ್ರಮಾಣ ಪತ್ರವನ್ನು ಸಲ್ಲಿಸಿ, ಕರಾರು ಪತ್ರಗಳು ಮತ್ತು ನೋಂದಾಯಿತ ಕರಾರು ಪತ್ರ ರದ್ದತಿ ಪತ್ರಗಳನ್ನು ಹಾಜರುಪಡಿಸಿ ಗುರುತಿಸಿದೆ. ವಾದಿಯ ವಕೀಲರು ಸುದೀರ್ಘವಾಗಿ ಪಾಟಿ ಸವಾಲು ಮಾಡಿದರೂ, ತಮಗೆ ಅನುಕೂಲ ಅಂಶ ಪಡೆಯಲು ವಿಫಲರಾದರು.
ಕೊನೆಯ ಘಟ್ಟ ಆರ್ಗ್ಯುಮೆಂಟ್. ವಾದಿ ಪರ ವಕೀಲರು ವಾದ ಮಂಡಿಸುತ್ತ, ಕ್ರಯ ಕರಾರು ಪತ್ರ ನೋಂದಾಯಿತ ಪತ್ರವಾಗಿದೆ. ಪ್ರತಿವಾದಿ ಒಪ್ಪಿಕೊಂಡಿರುತ್ತಾನೆ. ಆದ್ದರಿಂದ ಕರಾರು ಪತ್ರದ ಅಂಶಗಳನ್ನು ಒಪ್ಪಿಕೊಂಡಂತೆ ಆಗಿದೆ. ಸಾಕ್ಷಿ ಅಧಿನಿಯಮದಂತೆ. ಕರಾರು ಪತ್ರದ ಅಂಶಗಳ ಹೊರತಾಗಿ ಬೇರೆ ಸಂಗತಿ ಆಗಿವೆ ಅಂತ ಸಾಕ್ಷೀಕರಿಸಲು ಅವಕಾಶ ಇಲ್ಲ ಎಂದು ವಾದಿಸಿದರು. ಪ್ರತಿವಾದಿ ಪರವಾಗಿ ನಾನು ವಾದಿಸುತ್ತಾ, ಕೇವಲ ೮ ತಿಂಗಳು ಅವಧಿಯಲ್ಲಿ ರಚಿತವಾದ ನಾಲ್ಕು ಕರಾರು ಪತ್ರಗಳು ಮೂರು ರದ್ದತಿ ಪತ್ರಗಳು ಇವೆಲ್ಲ ಇವು ನಿಜವಾದ ಕ್ರಯ ಕರಾರು ಪತ್ರ ಅಲ್ಲ ಅನ್ನುವುದನ್ನು ನಿರೂಪಿಸುತ್ತದೆ. ಒಂದು ಕರಾರು ರದ್ದತಿ ಪತ್ರ ಆದ ಹತ್ತು ನಿಮಿಷಗಳ ಒಳಗೆ ಮತ್ತೊಂದು ಕ್ರಯ ಕರಾರು ಪತ್ರ ಹೇಗೆ ಆಗುತ್ತದೆ ಎಂದು ಪ್ರಶ್ನೆ ಎತ್ತಿದೆ. ಸಾಕ್ಷಿ ಕಾನೂನಿನಂತೆ ಯಾವುದೇ ಪತ್ರ ಮೋಸತನದಿಂದ, ಬೇರೆ ಉದ್ದೇಶ, ದೃಷ್ಟಿ ಇತರೆ ಸಂಗತಿ ಹೊರತುಪಡಿಸಿ ರಚಿತವಾಗಿದ್ದರೆ, ಅದನ್ನು ಸಾಕ್ಷೀಕರಿಸಬಹುದು ಎಂದು ನ್ಯಾಯಾಲಯದ ಗಮನಕ್ಕೆ. ವಾದಿಯು ಕ್ರಯ ಕರಾರು ಪತ್ರ ಎಂದು ರುಜುವಾತುಪಡಿಸಲು ವಿಫಲನಾಗಿದ್ದಾನೆ. ವಾದಿಯು ಮುಂಗಡ ಹಣವನ್ನು ಮರಳಿ ಪಡೆಯಲು ಅನರ್ಹನಾಗಿದ್ದಾನೆ ಅಂತ ವಾದಿಸಿದೆ.
ನ್ಯಾಯಾಲಯವು, ವಾದಿ ಕ್ರಯ ಕರಾರು ಪತ್ರ ರುಜುವಾತುಪಡಿಸಲು ವಿಫಲನಾಗಿದ್ದಾನೆ. ಆದ್ದರಿಂದ ಮುಂಗಡ ಹಣವನ್ನು ಮರಳಿ ಪಡೆಯಲು ಕೂಡ ಅನರ್ಹನಾಗಿದ್ದಾನೆ. ಕರಾರು ಪತ್ರ ಕೇವಲ ಸಾಲದ ಆಧಾರಕ್ಕೆ ಬರೆದುಕೊಟ್ಟ ಕರಾರು ಪತ್ರ ಎಂದು ಅಭಿಪ್ರಾಯಪಟ್ಟು ದಾವೆ ವಜಾಗೊಳಿಸಿ ಡಿಕ್ರಿ ಆದೇಶ ಮಾಡಿದರು.
ನ್ಯಾಯಾಲಯದ ಜಡ್ಜ್ಮೆಂಟ್ ಡಿಕ್ರಿ ಆದೇಶದ ಮೇಲೆ ವಾದಿ ಉಚ್ಚ ನ್ಯಾಯಾಲಯದಲ್ಲಿ ಅಪೀಲು ದಾಖಲಿಸಿದ. ಉಚ್ಚ ನ್ಯಾಯಾಲಯವು ನ್ಯಾಯದಾನ ದೃಷ್ಟಿಯಿಂದ ಪ್ರತಿವಾದಿಯು ವಾದಿಗೆ ರೂ. ೨೦ ಲಕ್ಷ ಮರಳಿ ಕೊಡಲು ಆದೇಶಿಸಿತು. ಪ್ರಹ್ಲಾದನಿಗೆ ಮರಳಿ ಹಣ ನೀಡಿ ವ್ಯವಹಾರಿಕ ಮನುಷ್ಯ ಅನ್ನುವುದನ್ನು ನಿರೂಪಿಸಿದ.
ಸತ್ಯ ಅಸತ್ಯದ ನಡುವೆ ಸಂಘರ್ಷ ನಡೆಯುತ್ತಲೇ ಇರುತ್ತದೆ. ಕಾಯಬೇಕು, ಹೋರಾಡಬೇಕು, ಕೊನೆಗೆ ಪ್ರಾಮಾಣಿಕತೆಗೆ, ಸತ್ಯಕ್ಕೆ ಜಯವಾಗುತ್ತದೆ.