`ಸದನದಲ್ಲಿ ಎಚ್.ಕೆ ಪಾಟೀಲ' ೫ ಸಂಪುಟಗಳ ಲೋಕಾರ್ಪಣೆ
ಧಾರವಾಡ: ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ಜ.೧೩ರಂದು ಬೆಳಗ್ಗೆ ೧೧ ಗಂಟೆಗೆ `ಸದನದಲ್ಲಿ ಎಚ್.ಕೆ. ಪಾಟೀಲ' ಐದು ಸಂಪುಟಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಂಧ್ರ ಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಹಾಗೂ ಕರ್ನಾಟಕ ಸಂಶೋಧಕರ ಒಕ್ಕೂಟದ ಸಂಚಾಲಕ ಸಮಿತಿ ಅಧ್ಯಕ್ಷ ಪ್ರೊ. ತೇಜಸ್ವಿ ಕಟ್ಟಿಮನಿ, ವಿಧಾನಸಭೆ ಸಭಾಪತಿ ಯು.ಟಿ. ಖಾದರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಕರ್ನಾಟಕ ವಿಧಾನ ಪರಿಷತ್ ವಿಶ್ರಾಂತ ಸಭಾಪತಿಗಳಾದ ಡಾ. ಬಿ.ಎಲ್. ಶಂಕರ, ವಿ.ಆರ್ ಸುದರ್ಶನ, ವೀರಣ್ಣ ಮತ್ತಿಕಟ್ಟಿ, ಕಾರ್ಮಿಕ ಸಚಿವ ಸಂತೋಷ ಲಾಡ್ ಆಗಮಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ, ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್.ಪಾಟೀಲ ಆಗಮಿಸಲಿದ್ದಾರೆ. ಕಾನೂನು ಸಚಿವ ಎಚ್.ಕೆ. ಪಾಟೀಲ ಉಪಸ್ಥಿತರಿರುವರು ಎಂದರು.
ವಿಧಾನ ಪರಿಷತ್‌ನಲ್ಲಿ ೧೯೮೪ರಿಂದ ೨೦೦೮ರವರೆಗೆ ಎಚ್.ಕೆ. ಪಾಟೀಲ ಸದಸ್ಯರಾಗಿ, ವಿರೋಧ ಪಕ್ಷದ ನಾಯಕರಾಗಿ, ಸಭಾನಾಯಕರಾಗಿ, ಸಚಿವರಾಗಿ ಸದನದಲ್ಲಿ ಮಾಡಿದ ಚರ್ಚೆ, ಮಂಡನೆ, ಭಾಷಣ ಮತ್ತು ವಿಚಾರ ವಿಮರ್ಶೆಗಳ ೫ ಸಂಪುಟಗಳನ್ನು ಬಿಡುಗಡೆಗೊಳಿಸಲಾಗುವುದು. ಕರ್ನಾಟಕ ಸಂಶೋಧಕರ ಒಕ್ಕೂಟ ಸಂಪುಟಗಳನ್ನು ಪ್ರಕಾಶನಗೊಳಿಸಿದೆ. ಒಟ್ಟು ೧೬ ಸಂಪುಟಗಳನ್ನು ಸಂಪಾದಿಸಲಾಗಿದ್ದು, ಪ್ರಸ್ತುತ ೫ ಸಂಪುಟಗಳನ್ನು ಲೋಕಾರ್ಪಣೆ ಮಾಡಲಾಗುತ್ತಿದೆ ಐದು ಸಂಪುಟಗಳು ಸುಮಾರು ೧೫೦೦ ಪುಟಗಳನ್ನು ಹೊಂದಿವೆ ಎಂದು ತಿಳಿಸಿದರು.