ಸದಾನಂದ ಗೌಡರ ತುರ್ತು ಪತ್ರಿಕಾಗೋಷ್ಠಿ: ಬಿಜೆಪಿ ಪಕ್ಷ ಶುದ್ದೀಕರಣ ಮಾಡುವತ್ತ ಗಮನ
ಬೆಂಗಳೂರು: ನಾನು ಬಿಜೆಪಿ ಪಕ್ಷ ಶುದ್ದೀಕರಣ ಮಾಡುವತ್ತ ಗಮನ ಹರಿಸುತ್ತೇನೆ, ಕಾಂಗ್ರೆಸ್‌ನಿಂದ ನನಗೆ ಆಹ್ವಾನ ಬಂದಿದ್ದು ಟಿಕೆಟ್ ಕೊಡುತ್ತೇವೆ, ನಿಮ್ಮನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಆಹ್ವಾನ ಬಂದಿತ್ತು. ಆದರೆ ನಾನು, ಕಾಂಗ್ರೆಸ್ ಸೇರಲ್ಲ ಎಂದು ಮಾಜಿ ಸಿಎಂ ಡಿವಿ ಸದಾನಂದ ಗೌಡ ಹೇಳಿದ್ದಾರೆ.
ಬೆಂಗಳೂರಿನ ಸಂಜಯ ನಗರ ನಿವಾಸದಲ್ಲಿ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು ಪಕ್ಷದ ಜವಾಬ್ದಾರಿ ವಹಿಸಿದವರು ಸ್ವಾರ್ಥಿಗಳಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಕುಟುಂಬ, ಮಕ್ಕಳು, ಜಾತಿ, ತನ್ನವರಿಗೆ ಸೀಮಿತ ಮಾಡಿದ್ದಾರೆ. ಮೋದಿಯವರ ಮೇರಾ ದೇಶ್ ಮೇರಾ ಪರಿವಾರ್ ಆಗಬೇಕು, ಆಡಳಿತ ಮಾಡುವವರು ಸತ್ಯವಂತರಾಗಬೇಕು. ಸುಳ್ಳು ಹೇಳಬಾರದು. ಬೆಂಗಳೂರು ಉತ್ತರದಲ್ಲಿ ಟಿಕೆಟ್‌ಗಾಗಿ ಒಬ್ಬನ ಹೆಸರು ಮಾತ್ರ ಇತ್ತು. 142 ಜನರು ನನ್ನ ಹೆಸರನ್ನು ಆಯ್ಕೆ ಮಾಡಿದ್ದರು. ನನ್ನನ್ನು ಚೆಂದ ಆರತಿ ಎತ್ತಿ, 'ಬನ್ನಿ, ಸ್ಪರ್ಧೆ ಮಾಡಿ' ಎಂದು ಕರೆದು, ಮಂಗಳಾರತಿ ಮಾಡಿ ಕಳಿಸಿದ್ದಾರೆ, ಬಿಜೆಪಿ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಲಾಗುತ್ತಿದೆ. ಸರ್ವಾಧಿಕಾರ ರಾಜಕೀಯದಲ್ಲಿ ನಡೆಯುವುದಿಲ್ಲ. ಬಿಜೆಪಿ ಶುದ್ದೀಕರಣ ಆಗುವವರೆಗೆ ನಾನು ವಿರಮಿಸುದಿಲ್ಲ. ಲೋಕಸಭಾ ಚುನಾವಣೆಯ ಬಳಿಕ ಶುದ್ದೀಕರಣ ಕಾರ್ಯಕ್ಕೆ ವೇಗ ಕೊಡಲಾಗುವುದು ಎಂದಿದ್ದಾರೆ, ನಾನು ಕನ್ನಡಿಗನಾಗಿ ಇಂದು ಕೇವಲ ಕನ್ನಡದಲ್ಲಿ ಮಾತ್ರ ಮಾತನಾಡುವುದಾಗಿ ಹೇಳಿದ ಅವರು ಆಂಗ್ಲ್ ಮಾದ್ಯಮಗಳಿಗೂ ಸಹ ಕನ್ನಡದಲ್ಲಿಯೇ ಉತ್ತರ ನೀಡಿದರು, ಶೋಭಾ ಕರಂದ್ಲಾಜೆ ಪರವಾಗಿ ನಾನು ಈಗಾಗಲೇ ಪ್ರಚಾರ ಮಾಡಿದ್ದೇನೆ. ಅವರಿಗೆ ಬೆಂಬಲ ಕೊಡದೆ ಇರುವ ಪ್ರಶ್ನೆ ಇಲ್ಲ ಎಂದರು.