For the best experience, open
https://m.samyuktakarnataka.in
on your mobile browser.

ಸದೃಢ ಮನಸ್ಸಿಗೆ ಹೆಚ್ಚು ಅವಕಾಶ ಸಿಗಲಿ….

05:00 AM Sep 24, 2024 IST | Samyukta Karnataka
ಸದೃಢ ಮನಸ್ಸಿಗೆ ಹೆಚ್ಚು ಅವಕಾಶ ಸಿಗಲಿ…

ತುಂಬಾ ವರ್ಷಗಳ ಹಿಂದೆ, ಅಂದರೆ ನಮ್ಮ ಸಂನ್ಯಾಸ ಸ್ವೀಕಾರದ ಆರಂಭದ ದಿನಗಳಲ್ಲಿ, ಓರ್ವ ಹಿರಿಯರು ಹೇಳಿದ್ದರು. ಹೊರಗೆ ಪೀಠಕ್ಕೆ ಬಂದು ಕುಳಿತುಕೊಳ್ಳುವುದಕ್ಕಿಂತ ಮೊದಲೇ ಇವತ್ತಿನ ವಿಷಯಗಳು ಏನೇನು ಎಂಬುದಾಗಿ ಚಿಂತನೆ ಮಾಡಿಕೊಂಡೇ ಬಂದು ಕುಳಿತೊಳ್ಳಬೇಕು' ಎಂಬುದಾಗಿ. ಹೊರಗೆ ಬಂದು ಕುಳಿತ ತಕ್ಷಣ ಅಲ್ಲಿರುವ ಜನಗಳ ಕಡೆ ಗಮನ ಹರಿಯುತ್ತದೆ. ಅನೇಕ ಸಲ ಆ ಜನಗಳೇ ತಮ್ಮ ವಿಷಯಗಳನ್ನು ತಾವಾಗಿಯೇ ಹೇಳಲು ಪ್ರಾರಂಭಿಸುತ್ತಾರೆ. ಹಾಗಾಗಿ ನಾವು ಹೇಳಬೇಕಾಗಿರುವ ವಿಷಯಗಳು ಮರೆತುಹೋಗಿ ಆ ಮೂಲಕ ಆಗಬೇಕಾಗಿರುವ ಕೆಲಸ ನಿಂತುಹೋಗುತ್ತದೆ. ಇದನ್ನು ತಪ್ಪಿಸಲು ಈ ಉಪಾಯವನ್ನು ಅವರು ಹೇಳುತ್ತಿದ್ದರು. ನಾವು ಕೊಠಡಿಯೊಳಗೆ ಒಬ್ಬರೇ ಇರುವಾಗ ವಿಷಯಗಳನ್ನು ಚಿಂತನೆ ಮಾಡುವಲ್ಲಿ ಇರುವ ಏಕಾಗ್ರತೆ ಹೊರಗೆ ಬಂದು ಎಲ್ಲರ ಜೊತೆ ಕುಳಿತಾಗ ಇರುವುದಿಲ್ಲ. ಬೇರೆಯವರ ಕಡೆ ಮನಸ್ಸು ಹರಿದು ವಿಕ್ಷಿಪ್ತಗೊಂಡಿರುವುದೇ ಇದಕ್ಕೆ ಕಾರಣ. ಏಕಾಂತದಲ್ಲಿ ಏಕಾಗ್ರತೆ ಇದೆ. ಹೊರಗೆ ಬಂದಾಗ ಹೀಗಾಗಲು ಇನ್ನೊಂದು ಕಾರಣವಿದೆ. ನಮ್ಮ ಮಾತೇ ಚಿಂತನೆಗೆ ಬ್ರೇಕ್ ಹಾಕುತ್ತದೆ. ಅಂದರೆ ಇತರರನ್ನು ಮಾತನಾಡಿಸಲು ಆರಂಭಿಸಿದಾಗ ಅಥವಾ ಬೇರೆ ವಿಷಯವನ್ನು ಕುರಿತು ಮಾತು ಪ್ರಾರಂಭವಾದಾಗ ಮನಸ್ಸಿನಲ್ಲಿ ಮೊದಲೇ ಅಂದುಕೊಂಡಿದ್ದ ವಿಷಯವು ನೆನಪಿದ್ದರೂ ಅದರ ಬಗ್ಗೆ ಮನನ ಅಥವಾ ಆಳವಾದ ಚಿಂತನೆ ಕಡಿಮೆಯಾಗುತ್ತದೆ. ಹಾಗೆಯೇ ಸಭೆಯಲ್ಲಿ ಭಾಷಣಕ್ಕೆ ನಿಂತಾಗ ಮೊದಲೇ ಸಿದ್ಧಮಾಡಿಕೊಂಡ ವಿಷಯಗಳ ಹೊರತಾಗಿ ಅದೇ ವಿಷಯದ ಬಗ್ಗೆ ಹೊಸ ಅಂಶಗಳು ಮನಸ್ಸಿನಲ್ಲಿ ಹೆಚ್ಚು ಸ್ಫುರಿಸುವುದಿಲ್ಲ. ಯಾಕೆಂದರೆ ಮನಸ್ಸು ಆಗ ಮಾತನಾಡುವ ಕಡೆ ಹೆಚ್ಚು ತೊಡಗುತ್ತದೆ. ಮಾತನಾಡುವುದನ್ನು ನಿಲ್ಲಿಸಿ ವಿಷಯವನ್ನು ಚಿಂತನೆ ಮಾಡಿದಾಗಲೇ ಹೊಸ ಅಂಶಗಳ ಸ್ಫುರಣೆ ಹೆಚ್ಚಿಗೆಯಾಗುತ್ತದೆ. ಮಾತಿಗಿಂತಲೂ ಮೌನಕ್ಕೆ ಹೆಚ್ಚು ಶಕ್ತಿಯಿದೆ. ವಾಗಿಂದ್ರಿಯಕ್ಕಿಂತಲೂ ಮನಸ್ಸೆಂಬ ಅಂತಃಕರಣಕ್ಕೆ ಹೆಚ್ಚು ಶಕ್ತಿಯಿದೆ.ಮನೋಸ್ಯದೈವಂ ಚಕ್ಷಃ' ಮನಸ್ಸಿನ ಚಿಂತನೆಗಳೇ ಅನಂತರ ಮಾತಿನ ಮೂಲಕ ಹೊರಬರುತ್ತವೆ. ಮಾತಿಗೆ ಮನಸ್ಸಿನ ಹೊರತಾದ ಸ್ವತಂತ್ರ ಶಕ್ತಿಯಿಲ್ಲ. ಅನೇಕ ಸಲ ಮಾತು ಮಾಡದ ಕೆಲಸವನ್ನು ಮೌನವೇ ಮಾಡಿಬಿಡುತ್ತದೆ. ಆದ್ದರಿಂದಲೇ ‘ಮಾತು ಬೆಳ್ಳಿ ಮೌನ ಬಂಗಾರ’ ಎಂಬ ಗಾದೆಮಾತು ಬಂದಿದೆ.
ಮನನವಿಲ್ಲದ ಮಾತು ಮತ್ತು ಮನನವಿಲ್ಲದ ಕ್ರಿಯೆ ಇವೆರಡೂ ಶೋಭಿಸುವುದಿಲ್ಲ. ನಿದ್ದೆಯಲ್ಲಿ ಕನವರಿಸುತ್ತಿದ್ದಾಗ ಬರುವ ಮಾತುಗಳನ್ನು ಕೇಳಿದರೆ ಒಂದಕ್ಕೊಂದು ಹೊಂದಿಕೆಯೇ ಇರುವುದಿಲ್ಲ. ವಿಚಾರ ಮಾಡದೆ ಆರಂಭಿಸಿದ ಕ್ರಿಯೆಯನ್ನು ಸಮಾಜವು ‘ಅವಿವೇಕ’ ಎಂಬುದಾಗಿ ಗುರುತಿಸುತ್ತದೆ. `ಸಹಸಾ ವಿದಧೀತ ನಕ್ರಿಯಾಂ ಅವಿವೇಕಃ ಪರಮಾಪದಾಂ ಪದಮ್ ||' ಚಿಂತನೆ ಮಾಡಿಕೊಳ್ಳದ ಕ್ರಿಯೆಗಳಿಂದ ಮುಂದೆ ದೊಡ್ಡ ಆಪತ್ತುಗಳು ಬಂದೆರಗುತ್ತವೆ. ಹೀಗೆ ಕ್ರಿಯೆಗೂ ಮನನವೇ ಮೂಲ ಶಕ್ತಿ. ಮನಸ್ಸಿನ ಮನನಕ್ಕೆ ಹೆಚ್ಚು ಅವಕಾಶ ಕೊಡಬೇಕು. ಮಾತು-ಕ್ರಿಯೆಗಳೆಂಬ ಮಂತ್ರಿಗಳು ಮನಸ್ಸೆಂಬ ರಾಜನ ಸ್ವಾತಂತ್ರö್ಯಕ್ಕೆ ಅಡ್ಡಿಯಾಗುವಂತಿರಬಾರದು.