For the best experience, open
https://m.samyuktakarnataka.in
on your mobile browser.

ಸದ್ದಿಲ್ಲದ ಕ್ರಾಂತಿಗೆ ಕರುನಾಡು ಸಜ್ಜು

02:30 AM Nov 01, 2024 IST | Samyukta Karnataka
ಸದ್ದಿಲ್ಲದ ಕ್ರಾಂತಿಗೆ ಕರುನಾಡು ಸಜ್ಜು

ಕನ್ನಡಿಗರೆಲ್ಲಾ ಒಂದಾಗಬೇಕು ಎಂದು ಕನ್ನಡನಾಡನ್ನು ನವೆಂಬರ್ ೧, ೧೯೫೦ ರಲ್ಲಿ ಪ್ರತ್ಯೇಕ ರಾಜ್ಯವಾಗಿ ಘೋಷಿಸಿಕೊಂಡೆವು. ಅಂದಿನಿಂದ ಇಂದಿನವರೆಗೆ ಆರ್ಥಿಕವಾಗಿ ಸಾಮಾಜಿಕವಾಗಿ ನಾವೆಲ್ಲ ಒಂದುಗೂಡಿ ಕೆಲಸ ಮಾಡುತ್ತಿದ್ದೇವೆ. ಆದರೂ ನಮ್ಮಲ್ಲಿ ನಾಡು ನುಡಿಯ ಬಗ್ಗೆ ಅಭಿಮಾನ ಕಡಿಮೆ ಎಂದೇ ಹೇಳಬೇಕು. ಕನ್ನಡದ ಬಗ್ಗೆ ದುರಭಿಮಾನ ಬೇಡ. ಆದರೆ ಸ್ವಲ್ಪವಾದರೂ ನಮ್ಮ ನಾಡು, ನಮ್ಮ ಭಾಷೆ ಎಂಬ ಹೆಮ್ಮೆ ಇಲ್ಲದೆ ಹೋದಲ್ಲಿ ಹೊರಗಿನವರೇ ನಮ್ಮ ರಾಜ್ಯವನ್ನೂ ಆಕ್ರಮಿಸಿಕೊಳ್ಳುತ್ತಾರೆ. ಇದು ಇಂದು ಕರ್ನಾಟಕದಲ್ಲಿ ಕಂಡು ಬರುತ್ತಿರುವ ವಾಸ್ತವ ಸತ್ಯ. ಗಡಿ ಸಮಸ್ಯೆಗಳು ಇಂದಿಗೂ ಇದೆ. ಮರಾಠಿಗರು ಈಗಲೂ ಬೆಳಗಾವಿ ನಮಗೆ ಬರಬೇಕು ಎನ್ನುತ್ತಾರೆ. ನಾವು ಮಂದಗತಿಯಲ್ಲಿ ಸಾಗಿದ್ದೇವೆ.
ಕನ್ನಡ ಭಾಷೆಯೇ ಪ್ರಧಾನ ಎಂದು ಹೇಳುತ್ತ ಬಂದಿದ್ದೇವೆ. ಅದರ ಪಾರಮ್ಯವನ್ನು ಜನ ತೋರಿಸಿಕೊಟ್ಟಿದ್ದಾರೆಯೇ ಹೊರತು ಸರ್ಕಾರದಿಂದ ಏನೂ ಆಗಿಲ್ಲ. ಗ್ರಾಮ ಪಂಚಾಯ್ತಿಯಿಂದ ಹಿಡಿದು ವಿಧಾನಸೌಧವರೆಗೆ ಕನ್ನಡದಲ್ಲೇ ಸರ್ಕಾರದ ಆಡಳಿತ ನಡೆಯಬೇಕು ಎಂದು ನಿಯಮ ಹೇಳುತ್ತದೆ. ಇದು ಇನ್ನೂ ಸಂಪೂರ್ಣವಾಗಿ ಕಾರ್ಯಗತವಾಗಿಲ್ಲ. ಐಎಎಸ್ ಅಧಿಕಾರಿಗಳು ರಾಜ್ಯಕ್ಕೆ ಬಂದ ೬ ತಿಂಗಳಲ್ಲಿ ಕನ್ನಡ ಕಲಿಯಬೇಕು ಎಂದು ಆದೇಶ ಹೊರಡಿಸಿದ್ದೇವೆ. ಈಗಲೂ ಬಹುತೇಕ ಅಧಿಕಾರಿಗಳು ಕನ್ನಡದಲ್ಲಿ ಮಾತನಾಡುವುದೇ ಇಲ್ಲ. ಅದರಲ್ಲಿ ಕೆಲವರಿಗೆ ಕನ್ನಡ ಎಂದರೆ ಅಸಡ್ಡೆ. ಕನ್ನಡಿಗರ ಆರ್ಥಿಕ ಪರಿಸ್ಥಿತಿ ಉತ್ತಮ ಪಡಿಸುವ ಕೆಲಸಕ್ಕೆ ಆದ್ಯತೆ ಸಿಗುತ್ತಿಲ್ಲ. ಬೃಹತ್ ನೀರಾವರಿ ಯೋಜನೆಗಳು ಇನ್ನೂ ಕುಂಟುತ್ತ ಸಾಗಿದೆ. ಇದಕ್ಕಾಗಿ ನಿಗದಿಪಡಿಸಿದ್ದ ಹಣ ವೆಚ್ಚವಾಗುತ್ತಿದೆಯೇ ಹೊರತು ರೈತರ ಹೊಲಕ್ಕೆ ನೀರು ಹರಿಯುತ್ತಿಲ್ಲ. ಇನ್ನೂ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಕೊಡುವ ಕೆಲಸ ನಡೆಯುತ್ತಿಲ್ಲ. ಇದನ್ನು ಕಾನೂನು ಮೂಲಕ ಕಡ್ಡಾಯಗೊಳಿಸಲು ಬರುವುದಿಲ್ಲ. ಆದರೆ ಸರ್ಕಾರ ಪರೋಕ್ಷವಾಗಿ ಇದನ್ನು ಜಾರಿಗೆ ತರಬಹುದು. ಇದನ್ನು ಬೇರೆ ರಾಜ್ಯದವರು ಅನುಸರಿಸುತ್ತಿದ್ದಾರೆ. ಕಾರ್ಮಿಕರು ಬಹುತೇಕ ಜನ ಹೊರ ರಾಜ್ಯದವರು. ಅವರು ಸಂಪಾದಿಸಿದ ಹಣ ಇಲ್ಲಿ ಹೂಡಿಕೆ ಆಗುವುದಿಲ್ಲ. ಅವರು ತಮ್ಮ ತಮ್ಮ ರಾಜ್ಯಗಳಲ್ಲಿ ಮನೆ ಮಠ ಕಟ್ಟಿಕೊಳ್ಳಲು ಬಯಸುತ್ತಾರೆ. ಇಲ್ಲಿಯ ಆದಾಯ ನೆರೆ ರಾಜ್ಯಗಳಿಗೆ ಹೋಗುತ್ತದೆ. ಮೂಲ ಕನ್ನಡಿಗರು ನಿರುದ್ಯೋಗಿಗಳು. ಇನ್ನು ಬಿಪಿಎಲ್ ಮತ್ತು ಆಧಾರ್ ಕಾರ್ಡ್ಗಳು ಹೊರಗಿನವರಿಗೆ ಸುಲಭವಾಗಿ ಸಿಗುತ್ತವೆ. ಇಲ್ಲಿಯ ಮಣ್ಣಿನ ಮಕ್ಕಳು ಯಾವುದೇ ಸವಲತ್ತು ಇಲ್ಲದೆ ಪರದಾಡುವಂತಾಗಿದೆ. ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ರಂಗದಲ್ಲಿ ಹೊರಗಿನವರಿಗೆ ಮಣೆ ಹಾಕುವ ಕೆಲಸ ನಡೆಯುತ್ತಿದೆ. ಜನಸಾಮಾನ್ಯರಿಂದ ಸರ್ಕಾರ ದೂರ ಸರಿಯುತ್ತಿದೆ. ಶಿಕ್ಷಣ ರಂಗ ಮನಬಂದಂತೆ ಸಾಗುತ್ತಿದೆ. ಪ್ರತಿದಿನ ನ್ಯಾಯಾಲಯಗಳು ಛೀಮಾರಿ ಹಾಕುತ್ತಿವೆ. ಇಡೀ ದೇಶದಲ್ಲಿ ಅತಿ ಹೆಚ್ಚು ಆರ್ಥಿಕ ಬೆಳವಣಿಗೆ ಕಂಡಿರುವುದು ಕರ್ನಾಟಕ. ಅದಕ್ಕೆ ಇಲ್ಲಿಯ ಜನರ ಶ್ರಮವೇ ಹೊರತು ಮತ್ತೇನೂ ಅಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುನ್ನ ೫ ಉಚಿತ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತು. ಅದರಿಂದ ರಾಜ್ಯದ ಬೊಕ್ಕಸದ ಮೇಲೆ ಹೆಚ್ಚಿನ ಹೊರೆ ಬಿದ್ದಿರುವುದಂತೂ ನಿಜ. ಲೋಕಸಭೆ ಚುನಾವಣೆ ಕಾಲದಲ್ಲಿ ಈ ಗ್ಯಾರಂಟಿ ಯೋಜನೆಗಳು ಹೆಚ್ಚಿನ ಮತಗಳನ್ನು ತಂದುಕೊಡಲಿಲ್ಲ ಎಂಬ ಮಾತುಗಳು ಕೇಳಿಬಂದದ್ದವು. ಈಗ ಮಹಿಳೆಯರೇ ಉಚಿತ ಬಸ್ ಪ್ರಯಾಣ ನಮಗೆ ಬೇಡ ಎಂದು ಹೇಳುತ್ತಿದ್ದಾರೆ ಎಂದ ಮೇಲೆ ಅದರ ಪುನರಾಲೋಕನಕ್ಕೆ ಸೂಕ್ತ ಕಾಲಬಂದಿದೆ. ಅದೇ ರೀತಿ ಬೇರೆ ಗ್ಯಾರಂಟಿಗಳ ಮೌಲ್ಯಮಾಪನ ಕೂಡ ಅಗತ್ಯ. ಎಲ್ಲರಿಗೂ ಉಚಿತ ಸವಲತ್ತು ಅಗತ್ಯವಿರುವುದಿಲ್ಲ. ಅಂಥ ವರ್ಗವನ್ನು ಉಚಿತದಿಂದ ದೂರವಿಡುವುದು ತಪ್ಪೇನಲ್ಲ.
ಕೇಂದ್ರ ಸರ್ಕಾರ ತೆರಿಗೆ ಪಾಲು ಹಂಚಿಕೆಯಲ್ಲಿ ತಾರತಮ್ಯ ತೋರುತ್ತಿರುವುದು ಎದ್ದು ಕಾಣುತ್ತಿದೆ. ಇದನ್ನು ಸರಿಪಡಿಸುವುದು ಕೇಂದ್ರದ ಕೆಲಸ. ಕೊರೊನಾ ಕಾಲದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಹಣ ನೀಡಬೇಕಾಗಿ ಬಂದಿದ್ದರಿಂದ ಇತರ ಕ್ಷೇತ್ರಗಳ ಬೆಳವಣಿಗೆ ಇಳಿಮುಖಗೊಂಡಿತು. ಆದರೂ ಐಟಿ ಕ್ಷೇತ್ರ ನಮ್ಮ ಬೆಳವಣಿಗೆಗೆ ಶ್ರೀರಕ್ಷೆಯಾಗಿ ಬಂದಿತು. ಕೊರೊನಾ ಕಾಲದಲ್ಲಿ ಐಟಿ ನೌಕರರು ಮನೆಯಲ್ಲೇ ಕೆಲಸ ಮಾಡಿದ್ದರಿಂದ ಬೆಳವಣಿಗೆ ಕಾಣಲು ಸಾಧ್ಯವಾಯಿತು. ದೇಶದ ಒಟ್ಟು ಸಾಫ್ಟವೇರ್ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ. ೩೮. ಒಟ್ಟು ೨೧ ಲಕ್ಷ ಜನ ಈ ಕ್ಷೇತ್ರದಲ್ಲೇ ಕೆಲಸ ಮಾಡುತ್ತಿದ್ದಾರೆ. ಕಟ್ಟಕಡೆಯ ಹಳ್ಳಿಯ ಮಗುವಿಗೆ ಎಲ್ಲ ಶಿಕ್ಷಣ ಸವಲತ್ತು ಕಲ್ಪಿಸಿ ಅದು ಜಗತ್ತಿನ ಯಾವುದೇ ಮೂಲೆಯಲ್ಲಾದರೂ ಎಲ್ಲ ಮಕ್ಕಳಿಗೆ ಸರಿಸಮಾನವಾಗಿ ನಿಲ್ಲುವ ಬುದ್ಧಿಮತ್ತೆಯನ್ನು ಬೆಳೆಸುವುದು ಮುಖ್ಯ. ಇದಕ್ಕೆ ನಿಸರ್ಗವೂ ಸಹಕಾರಿಯಾಗಿದೆ. ನಾವು ಹೊರಗಿನಿಂದ ಯಾರೇ ಬರಲಿ ಇವನಾರವ, ಇವನಾರವ ಎಂದು ಕೇಳುವುದಿಲ್ಲ. ಇವ ನಮ್ಮವ ಎನ್ನುತ್ತೇವೆ. ಅದರಿಂದಲೇ ವಿದೇಶಿ ನೇರ ಬಂಡವಾಳ ಹೂಡಿಕೆ ಹರಿದು ಬರಲು ಕಾರಣವಾಗಿದೆ.