ಸದ್ಯಕ್ಕೆ ಬಿಜೆಪಿಗೆ ಮರಳುವ ಯೋಚನೆ ಇಲ್ಲ
ಬಾಗಲಕೋಟೆ: ಬಿಜೆಪಿ ಪಕ್ಷಕ್ಕೆ ಮರಳುವಂತೆ ತಮಗೆ ಹಲವರಿಂದ ಆಹ್ವಾನವಿದ್ದು, ಸದ್ಯಕ್ಕೆ ಆ ಬಗ್ಗೆ ಯೋಚನೆ ಇಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಕುಟುಂಬ, ಹೊಂದಾಣಿಕೆ ರಾಜಕೀಯವಿದೆ. ಶಿಕಾರಿಪುರದಲ್ಲಿ ನಾವು ಕೊಟ್ಟಿರುವ ಭಿಕ್ಷೆಯಿಂದ ನೀವು ಗೆದ್ದಿದ್ದೀರಿ ಎಂದು ಡಿ.ಕೆ.ಶಿವಕುಮಾರ ಅವರು ಬಿ.ವೈ.ವಿಜಯೇಂದ್ರ ಅವರಿಗೆ ಹೇಳಿದಾಗ ನನಗೆ ನೋವಾಯಿತು. ಈ ಹೇಳಿಕೆ ಹೊಂದಾಣಿಕೆ ರಾಜಕಾರಣವನ್ನು ತೋರಿಸುತ್ತದೆ ಎಂದು ಅಸಮಾಧಾನ ಹೊರಹಾಕಿದರು.
ಕುಟುಂಬ ರಾಜಕಾರಣ ವಿರೋಧಿಸಿದ ಬಿಜೆಪಿಯಲ್ಲಿ ಕುಟುಂಬ ರಾಜಕಾರಣವೇ ಆವರಿಸಿದೆ. ಇದನ್ನು ವಿರೋಧಿಸಿ ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ನನ್ನ ಸ್ಪರ್ಧೆಯ ಉದ್ದೇಶ ಈಡೇರಿದೆ, ಈಗ ಬಿಜೆಪಿಯಲ್ಲಿ ಶುದ್ಧೀಕರಣ ಪ್ರಕ್ರಿಯೆ ನಡೆದಿದೆ ಎಂದರು.
ಪಕ್ಷದಲ್ಲಿ ಒಂದು ಕುಟುಂಬಕ್ಕೆ ಒಂದು ಸ್ಥಾನ ಎಂಬ ನಿಯಮವಿದೆ. ಆ ಪ್ರಕಾರ ನಾನು ಪುತ್ರನಿಗೆ ಟಿಕೆಟ್ ಕೇಳಿದ್ದೆ, ನಾನು ಶಾಸಕ, ಸಂಸದನಾಗಿರಲಿಲ್ಲ. ಶಾಸಕ ಯತ್ನಾಳ ನೇತೃತ್ವದಲ್ಲಿ ಹಲವರು ಕುಟುಂಬ ರಾಜಕಾರಣದ ವಿರುದ್ಧ ಹೋರಾಟ ನಡೆಸಿದ್ದಾರೆ. ನನ್ನ ಆಪೇಕ್ಷೆ ಕೂಡ ಇದೇ ಆಗಿತ್ತು. ಜಾತಿಗಣತಿ ಬಗ್ಗೆ ಸಿದ್ದರಾಮಯ್ಯ ಅವರು ೯ ವರ್ಷದ ಹಿಂದೆ ಕೂಡ ಉತ್ತರ ಕುಮಾರನ ಪೌರುಷದ ಹೇಳಿಕೆ ನೀಡಿದ್ದರು. ಈಗ ಚುನಾವಣೆ ನೆಪ ಹೇಳುತ್ತಿದ್ದಾರೆ. ಮೂಡಾ ಹಗರಣದಲ್ಲಿ ಸಿಲುಕಿರುವ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ. ನಂತರ ಮತ್ತೆ ಸಿಎಂ ಆಗಲಿ ಅಭ್ಯಂತರವಿಲ್ಲ. ಆದರೆ ಅವರು ಅಹಿಂದ ಜನರನ್ನು ರಾಜಕಾರಣಕ್ಕೆ ಬಳಸುತ್ತಿದ್ದಾರೆ ಎಂದು ಟೀಕಿಸಿದರು.
ಸರ್ವೊಚ್ಛ ನ್ಯಾಯಾಲಯದ ಆದೇಶದ ಪ್ರಕಾರ ಒಳಮೀಸಲಾತಿ ಜಾರಿಯಾಗಬೇಕು. ಸಿದ್ದರಾಮಯ್ಯ ತಮ್ಮ ಅನುಕೂಲಕ್ಕೆ ತಕ್ಕಂತೆ ಹೇಳಿಕೆ ಕೊಡುತ್ತಾರೆ. ಮೂಡಾ ವಿಚಾರದಲ್ಲಿ ನ್ಯಾಯಾಲಯ ತಮ್ಮ ಪರವಾಗಿ ಇಲ್ಲ ಎಂದಾಗ ರಾಜೀನಾಮೆ ಕೊಡುವುದಿಲ್ಲ ಎಂದರು. ಎಲ್ಲ ಸಚಿವರು ಸಿದ್ದರಾಮಯ್ಯನವೇ ಸಿಎಂ ಎಂದು ಹೇಳಿ ಅವರ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ. ಕಾಂಗ್ರೆಸ್ ಕೆಟ್ಟ ರಾಜಕಾರಣ ಮಾಡುತ್ತಿರುವುದು ಹೊಸತಲ್ಲ ಎಂದು ಕುಟುಕಿದರು.