ಸಬ್ ರಿಜಿಸ್ಟ್ರಾರ್ ಕಚೇರಿ ಸುತ್ತ ಅನುಮಾನದ ಹುತ್ತ..!
ಹರ್ಷ ಕುಲಕರ್ಣಿ
ಹುಬ್ಬಳ್ಳಿ: ಒಂದೆಡೆ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲು ವಕ್ಫ್ ಹುನ್ನಾರ ನಡೆಸುತ್ತಿದ್ದರೆ ಮತ್ತೊಂದೆಡೆ ನಗರ ಪ್ರದೇಶದಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ಸತ್ತವರ ಹೆಸರಿನಲ್ಲಿ ನಿವೇಶನಗಳನ್ನು ಮಾರಾಟ ಮಾಡುವ ವ್ಯವಸ್ಥಿತ ಮನೆಮುರುಕ ಜಾಲವೊಂದು ಸಕ್ರಿಯವಾಗಿದೆ.
ಹುಬ್ಬಳ್ಳಿ ತಾಲೂಕಿನ ರಾಯನಾಳ ಗ್ರಾಮದ ವಸತಿ ವಿನ್ಯಾಸದ ಸ.ನಂ. ೮೮ರ ಡಾ.ಆರ್.ಎಂ. ಲೋಹಿಯಾ ನಗರದಲ್ಲಿ ೨೦/೩೦ ಅಳತೆಯ ೮ ನಿವೇಶನ ಹಾಗೂ ಮುರಾರ್ಜಿ ನಗರದಲ್ಲಿ ೩೦/೪೦ ಅಳತೆಯ ಒಂದು ನಿವೇಶನವನ್ನು ಖದೀಮರು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲದೇ, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಹೆಸರಿನಲ್ಲಿಯೇ ಖೊಟ್ಟಿ ಶುದ್ಧ ಕ್ರಯ ಪತ್ರ ತಯಾರಿಸಿದ್ದು, ಸತ್ತವರ ಹೆಸರಿನಲ್ಲಿಯೇ ಆಸ್ತಿ ನೋಂದಣಿಯೂ ಆಗಿದೆ. ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಆರೋಪಿಗಳು ಉಪಕಾರಾಗೃಹದಲ್ಲಿ ಮುದ್ದೆ ಮುರಿಯುತ್ತಿದ್ದಾರೆ.
ಹುಡಾ ಅಭಿವೃದ್ಧಿಪಡಿಸಿದ ನಿವೇಶನಗಳೆಂದರೆ ಕಡಿಮೆ ದರದಲ್ಲಿ ಸಿಗುತ್ತವೆ ಎಂಬ ನಂಬಿಕೆಯನ್ನೇ ಇಂಥವರು ಬುಡ ಮೇಲು ಮಾಡಲಾರಂಭಿಸಿದ್ದಾರೆ. ಹುಡಾದಿಂದ ಮಂಜೂರಾದ ಖಾಲಿ ಸೈಟ್ ಅನೇಕ ವರ್ಷಗಳಿಂದ ಖಾಲಿ ಬಿದ್ದಿರುವ ಸೈಟು ಕಂಡರೆ ಅದಕ್ಕೆ ಸಂಬಂಧಿಸಿದ ಖೊಟ್ಟಿ ದಾಖಲೆಗಳನ್ನು ಸೃಷ್ಟಿ ಮಾಡಿ ಮಾರಾಟ ಮಾಡಿ ವಂಚಿಸುವವರು ಹಲವರಿದ್ದಾರೆ. ಈ ಪೈಕಿ ಸದ್ಯ ಮನೋಜಕುಮಾರ ತೋಟಗೇರ, ಸುನೀಲ ಚಿಟ್ಟಾಣಿ, ಸಂಜಯ, ಮಂಜು ಹಾಗೂ ವಿನೋದ ಕಂಬಿ ಎಣಿಸುತ್ತಿದ್ದಾರೆ.
ನಿವೇಶನ ಮತ್ತು ಮನೆಗಳಿಗೆ ವಾರಸುದಾರರು ಇಲ್ಲವಾಗಿದ್ದರೆ ಇವರ ಆಟ ಹೇಳತೀರದು. ಸೀದಾ ನೋಂದಣಾಧಿಕಾರಿಗಳ ಕಚೇರಿ ಮುಖೇನ ದಾಖಲೆಗಳಲ್ಲಿ ಬೇರೆಯವರ ಹೆಸರು ಕುಳಿತು ಬಿಟ್ಟಿರುತ್ತದೆ. ಉಪನಗರ ಠಾಣೆಯಲ್ಲಿ ಈಗ ದಾಖಲಾಗಿರುವುದು ಒಂದೇ ಪ್ರಕರಣವಾದರೂ ಇಂತಹ ಅನೇಕ ಪ್ರಕರಣಗಳು ಇನ್ನಷ್ಟೇ ಬೆಳಕಿಗೆ ಬರಬೇಕಿದೆ. ಖಾಲಿ ಸೈಟ್‌ಗಳನ್ನು ಬಿಟ್ಟ ಮಾಲೀಕರು ಕಾಲಕಾಲಕ್ಕೆ ತಮ್ಮದೇ ಸೈಟಿನ ದಾಖಲೆ ಪರಿಶೀಲಿಸಿಕೊಳ್ಳದೇ ಹೋದರೆ ಮುಂದೊಂದು ದಿನ ಇಂಥ ಕಳ್ಳಕಾಕರು ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಿ ಮುಗಿಸಿರುತ್ತಾರೆ. ಹೀಗಾಗಿ, ಖಾಲಿ ಸೈಟ್ ಹೊಂದಿರುವವರು ಎಚ್ಚರಗೊಳ್ಳಬೇಕಿದೆ.
ದಶಕದ ಹಿಂದೆ ಸತ್ತವರು ಬಂದು ಕ್ರಯಪತ್ರ ಮಾಡಿದ್ರಂತೆ !
ಡಾ.ಆರ್.ಎಂ. ಲೋಹಿಯಾ ನಗರದಲ್ಲಿ ಮಹಿಳೆಯೊಬ್ಬರು ಜಾಗ ಖರೀದಿಸಿದ್ದರು. ಅವರು ಮೃತಪಟ್ಟಿದ್ದು, ಇವರ ಹೆಸರಿನಲ್ಲಿಯೇ ಇನ್ನೊಬ್ಬರಿಗೆ ಜಾಗ ಮಾರಾಟ ಮಾಡಲಾಗಿದೆ. ಸತ್ತು ದಶಕವಾದ ಬಳಿಕ ಹು-ಡಾ ಕಚೇರಿಯಲ್ಲಿ ಶುದ್ಧ ಕ್ರಯ ಪತ್ರ ಮಾಡುವಾಗ ಮತ್ತು ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಬೇರೆಯವರ ಹೆಸರಿಗೆ ನೋಂದು ಮಾಡುವಾಗ ಸತ್ತವರೇ ಬಂದು ಫೋಟೋ ಕೊಟ್ಟು, ಸಹಿ ಮಾಡಿದ್ದಾರೆ ಎಂದರೆ ನೀವು ನಂಬಲೇಬೇಕು! ಅಲ್ಲದೇ, ಈ ಪ್ರಕರಣದಲ್ಲಿ ಹು-ಡಾ ಅಧಿಕಾರಿಗಳು, ಉಪ ನೋಂದಣಾಧಿಕಾರಿ ಕಚೇರಿಯ ಸಿಬ್ಬಂದಿ ಭಾಗಿಯಾಗಿರುವ ಸಾಧ್ಯತೆ ಇದೆ. ಈಗ ತನಿಖೆ ಚುರುಕುಗೊಂಡರೆ ತಪ್ಪಿತಸ್ಥರು ಬಣ್ಣ ಬಯಲಾಗಲಿದೆ.