For the best experience, open
https://m.samyuktakarnataka.in
on your mobile browser.

`ಸಮರಕಲಾ'ವಲ್ಲಭೆ..!

11:35 AM Sep 01, 2024 IST | Samyukta Karnataka
 ಸಮರಕಲಾ ವಲ್ಲಭೆ

ಚಿತ್ರ: ಟೇಕ್ವಾಂಡೋ ಗರ್ಲ್
ನಿರ್ದೇಶನ: ರವೀಂದ್ರ ವೆಂಶಿ
ನಿರ್ಮಾಣ: ಡಾ. ಸುಮಿತಾ ಪ್ರವೀಣ್
ತಾರಾಗಣ: ಋತುಸ್ಪರ್ಶ, ರೇಖಾ,
ವಿಫಾ ರವಿ, ಸುವಿತಾ, ಸಹನಾ ಹಾಗೂ ರವೀಂದ್ರ ಮುಂತಾದವರು.
ರೇಟಿಂಗ್ಸ್: 3

ಗಣೇಶ್ ರಾಣೆಬೆನ್ನೂರು

ದೂರದ ಹಳ್ಳಿಯೊಂದರಲ್ಲಿ ವಾಸವಾಗಿದ್ದ ಹುಡುಗಿ ಋತು, ಕಾರಣಾಂತರಗಳಿಂದ ಸಿಟಿಗೆ ಬರಬೇಕಾಗುತ್ತದೆ. ಅನಕ್ಷರತೆಯಿಂದ ಒದ್ದಾಡುತ್ತಿದ್ದ ಹುಡುಗಿಗೆ ಬಡತನದ ಬೇಗೆಯೂ ಹಾಸಿ-ಹೊದ್ದು ಮಲಗುವಷ್ಟಿರುತ್ತದೆ. ಆದರೆ ಆಕೆಯ ಪೋಷಕರಿಗೆ ಮಗಳನ್ನು ನಗರದ ಪ್ರತಿಷ್ಠಿತ ಶಾಲೆಗೆ ಸೇರಿಸುವ ಬಯಕೆ. ಹಾಗೋ ಹೀಗೋ… ಶತಪ್ರಯತ್ನದಿಂದ ಆರ್‌ಟಿಇ ಮೂಲಕ ಖಾಸಗಿ ಶಾಲೆಯೊಂದರಲ್ಲಿ ಸೀಟು ಸಿಗುತ್ತದೆ. ಆದರೆ ತನ್ನ ಸಹಪಾಠಿಗಳಿಂದ ಆಗಾಗ ಮಾನಸಿಕ ಹಿಂಸೆ ಅನುಭವಿಸುವ ‘ಋತು’ವಿಗೆ ವಿದ್ಯಾಭ್ಯಾಸ ಮುಂದುವರಿಸುವುದೋ ಭೇಡವೋ ಎಂಬ ಜಿಜ್ಞಾಸೆ ಕಾಡುತ್ತಿರುತ್ತದೆ. ಹಾಗೇ ಒಂದಿನ ರಸ್ತೆಯಲ್ಲಿ ಹಾದು ಹೋಗುವಾಗ ಒಂದಷ್ಟು ಮಂದಿ ಟೇಕ್ವಾಂಡೋ ಅಭ್ಯಾಸನಿರತರಾಗಿರುತ್ತಾರೆ. ಇದು ಋತು ಕಣ್ಣಿಗೆ ಬೀಳುತ್ತದೆ. ಕೊರಿಯನ್ ಮೂಲದ ಈ ಸಮರಕಲೆ ಆಕೆಯನ್ನು ಆಕರ್ಷಿಸುತ್ತದೆ. ಆದರೆ ಅದನ್ನು ಕಲಿಯಲು ಬೇಕಾದಷ್ಟು ಹಣ ಈಕೆಯ ಬಳಿ ಇಲ್ಲ. ಅಪ್ಪ ಮಹಾನ್ ಕುಡುಕ, ಅಮ್ಮನ ಅರೆಕಾಸು ಹೊಟ್ಟೆ ತುಂಬಿಸಿಕೊಳ್ಳಲಷ್ಟೇ ಮೀಸಲು… ಇಷ್ಟೆಲ್ಲ ಕಡುಬಡತನವಿದ್ದರೂ ‘ಟೇಕ್ವಾಂಡೋ’ ಮಾತ್ರ ಆಕೆಗೆ ನಿದ್ದೆ ಕೊಡದಷ್ಟು ಕಾಡುತ್ತಿರುತ್ತದೆ.

ದುಡ್ಡಿಲ್ಲದೇ ಆಕೆ ಟೇಕ್ವಾಂಡೋ ಕಲಿಯಲು ಪ್ರಯತ್ನಿಸುವ ಋತು, ಒಂದು ಹಂತದವರೆಗೂ ಗುರಿ ಮುಟ್ಟುತ್ತಾಳೆ. ಗುರು ಮುಖೇನ ಕಲಿತುಕೊಳ್ಳಬೇಕಾದ ಕಲೆಯೊಂದನ್ನು ಗುರು ಇಲ್ಲದೆ ಕಲಿತುಕೊಳ್ಳಲು ಮುಂದಾಗುವ ಋತುವಿಗೆ ಆಕೆಯ ಪ್ರತಿಭೆಗೆ ತಕ್ಕನಾದ ಗುರು ಸಿಗುತ್ತಾರಾ… ಕಡು ಬಡತನದ ಹುಡುಗಿಯೊಬ್ಬಳ ಕನಸು ಈಡೇರುತ್ತದೆಯಾ… ಎಂಬುದೇ ‘ಟೇಕ್ವಾಂಡೋ ಗರ್ಲ್’ ಸಿನಿಮಾದ ಒಟ್ಟಾರೆ ಕಥಾಹಂದರ.

ಸ್ಲಂ ಹುಡುಗಿ, ಕಡು ಬಡತನ ಅಂತೆಲ್ಲ ತೋರಿಸಿರುವ ನಿರ್ದೇಶಕರು, ಇನ್ನು ಕೊಂಚ ವಾಸ್ತವಕ್ಕೆ ಹತ್ತಿರವಾಗಿ ಚಂತಿಸುವ, ಚಿತ್ರಿಸುವ ಅವಕಾಶಗಳು ಹೇರಳವಾಗಿದ್ದವು. ಹಾಗೆಯೇ ಟೇಕ್ವಾಂಡೋ ಕಲೆಯ ಕುರಿತು ಮತ್ತಷ್ಟು ಬೆಳಕು ಚೆಲ್ಲಬಹುದಿತ್ತು. ನಿರ್ದೇಶಕರಿಗಿದ್ದ ಸೀಮಿತ ಚೌಕಟ್ಟಿನಲ್ಲಿ ಸಿನಿಮಾ ಮಾಡಿ ಮುಗಿಸಿದಂತಿದೆ. ಯುವ ಪ್ರತಿಭೆ ಋತು ಒಂದಷ್ಟು ಗಮನ ಸೆಳೆದರೆ, ರೇಖಾ, ಸಹನಾ ಮುಂತಾದವರು ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.