ಸಮಸ್ಯೆಗಳ ಮೂಟೆ ಹೊತ್ತ ಗ್ರಾಮಗಳಿಗೆ ಪುರಸ್ಕಾರ.!
ಜಿಲ್ಲೆಯಲ್ಲೇ ಈ ಪರಿಯ ದುಸ್ಥಿತಿಯಾದರೆ, ರಾಜ್ಯದ ಪರಿಸ್ಥಿತಿ ಎಲ್ಲಿಗೆ ಮುಟ್ಟಿರಬಹುದು?
ಬೆಂಗಳೂರು: ಕಲಬುರಗಿ ಜಿಲ್ಲೆಯಲ್ಲಿ ಸಮಸ್ಯೆಗಳ ಮೂಟೆ ಹೊತ್ತ ಗ್ರಾಮ ಪಂಚಾಯಿತಿಗಳಿಗೆ ಪುರಸ್ಕಾರ ನೀಡಲು ಹೊರಟಿರುವುದು ನಾಚಿಕೆಗೇಡಿನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಎಲ್ಲಿ ನೋಡಿದರಲ್ಲಿ ಕಸದ ರಾಶಿಯೇ ತುಂಬಿರುವ, ರಸ್ತೆಯ ಮೇಲೆ ಕೊಳಚೆ ನೀರು ಹರಿಯುವ, ಕುಡಿಯುವ ನೀರಿನ ಸಮಸ್ಯೆ ಪರಿಹರಿಸದ, ಸ್ವಚ್ಛತೆಯನ್ನೇ ಕಾಪಾಡದ, ಸಮಸ್ಯೆಗಳ ಮೂಟೆಯನ್ನೇ ಹೊತ್ತ ಕಲಬುರಗಿ ಜಿಲ್ಲೆಯ ಕೆಲ ಗ್ರಾಮ ಪಂಚಾಯಿತಿಗಳಿಗೆ 'ಗಾಂಧಿ ಗ್ರಾಮ' ಪುರಸ್ಕಾರ ನೀಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿಯಲ್ಲದೇ ಮಹಾತ್ಮಾ ಗಾಂಧಿ ಅವರಿಗೆ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ದೊಡ್ಡ ಅವಮಾನ. ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಜಿಲ್ಲೆಯಲ್ಲೇ ಈ ಪರಿಯ ದುಸ್ಥಿತಿಯಾದರೆ, ರಾಜ್ಯದ ಪರಿಸ್ಥಿತಿ ಎಲ್ಲಿಗೆ ಮುಟ್ಟಿರಬಹುದು? ದೇಶವನ್ನು ಬಯಲು ಶೌಚ ಮುಕ್ತ ಮಾಡಲು ಪ್ರಧಾನಿ ಮೋದಿ ಅವರು ನೂರಾರು ಕೋಟಿ ಅನುದಾನವನ್ನು ಗ್ರಾಮ ಪಂಚಾಯಿತಿಗಳಿಗೆ ನೀಡುತ್ತಿದ್ದಾರೆ. ಆ ಹಣವನ್ನೂ ಸಮರ್ಪಕವಾಗಿ ಬಳಸಿಕೊಂಡು ಸ್ವಚ್ಛತೆ ಕಾಪಾಡದ ಜಿಲ್ಲಾಡಳಿತ ಹಾಗೂ ಬೊಕ್ಕಸ ಬರಿದಾಗಿಸಿಕೊಂಡು ಅಭಿವೃದ್ಧಿ ಕಾರ್ಯಗಳಿಗೆ ಎಳ್ಳುನೀರು ಬಿಟ್ಟಿರುವ ಕಾಂಗ್ರೆಸ್ ಸರ್ಕಾರಕ್ಕೆ ನಾಡಿನ ಜನರೇ ತಕ್ಕಪಾಠ ಕಲಿಸುವ ಕಾಲ ದೂರವಿಲ್ಲ ಎಂದಿದ್ದಾರೆ.