ಸಮಾಜಕ್ಕೆ ಅನ್ಯಾಯವಾಗುವುದಿದ್ದರೆ ಜಾತಿ ಜನಗಣತಿ ಬಿಡುಗಡೆ ಬೇಡ
ಬಾಗಲಕೋಟೆ: ಕಾಂತರಾಜ್ ಆಯೋಗದ ಜಾತಿಜನಗಣತಿಯಲ್ಲಿ ಯಾವುದಾದರೂ ಸಮಾಜಕ್ಕೆ ನೋವನ್ನುಂಟು ಮಾಡುವ ಅಂಶಗಳಿದ್ದರೆ ಅಂಥ ವರದಿಯನ್ನು ಬಿಡುಗಡೆಗೊಳಿಸಬಾರದು ಎಂದು ಶಿರಹಟ್ಟಿ-ಬಾಲೆಹೊಸೂರಿನ ಜಗದ್ಗುರು ಶ್ರೀಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿಯಲ್ಲಿ ಒಂದು ಸಮಾಜಕ್ಕೆ ಬೆಣ್ಣೆ, ಮತ್ತೊಂದು ಸುಣ್ಣ ಎಂಬ ಪರಿಸ್ಥಿತಿ ಬರಬಾರದು ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ. ಇರೋ ವರದಿಯಲ್ಲಿ ಸತ್ಯಾಂಶವಿದಯೇ ಎಂಬುದು ಸಹ ನಮಗೆ ಗೊತ್ತಿಲ್ಲ. ವರದಿ ಬಂದಮೇಲೇ ಸ್ಪಷ್ಟವಾಗಿ ಮಾತನಾಡುತ್ತೇನೆ. ಇವತ್ತಿನ ಅಭಿಪ್ರಾಯವೆಂದರೆ ವರದಿ ಮೂಲಕ ಯಾವ ಜಾತಿಗೂ ಅನ್ಯಾಯವಾಗಬಾರದು ಎಂದರು.
ನಮಗೆ ಯಾವುದು ಸರಿ ಕಾಣುವುದಿಲ್ಲವೋ ಅದನ್ನು ನಾವು ಖಂಡಿಸುತ್ತೇವೆ. ವರದಿಯಲ್ಲಿ ಯಾವುದಾದರೂ ಸಮಾಜಕ್ಕೆ ನೋವುಂಟು ಮಾಡುವ ಅಂಶಗಳಿದ್ದರೆ ಅಂಥ ವರದಿ ಬಿಡುಗಡೆ ಮಾಡುವುದು ಬೇಡ ಎಂದರು. ಲಿಂಗಾಯತರಿಗೆ ಸಿಎಂ ಸ್ಥಾನದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಯಾರಿಗೆ ಅರ್ಹತೆ ಇದೆಯೋ ಅವರು ಸಿಎಂ ಆಗುತ್ತಾರೆ ಎಂದರು.