For the best experience, open
https://m.samyuktakarnataka.in
on your mobile browser.

ಸಮಾಜ ಒಡೆಯುವ ದುಷ್ಟರ ಷಡ್ಯಂತ್ರ ಸೋಲಿಸೋಣ

04:14 PM Sep 15, 2024 IST | Samyukta Karnataka
ಸಮಾಜ ಒಡೆಯುವ ದುಷ್ಟರ ಷಡ್ಯಂತ್ರ ಸೋಲಿಸೋಣ

ಬೆಂಗಳೂರು: ಏಕತೆ ನೆಪದಲ್ಲಿ ಸಮಾಜವನ್ನು ಒಡೆಯುವ, ಮನುಷ್ಯರನ್ನು ವಿಭಜಿಸುವ ವಿಚ್ಚಿದ್ರಕಾರಕ ದುಷ್ಟ ಶಕ್ತಿಗಳನ್ನು ನಾಶ ಮಾಡಲು ಪ್ರಜಾಪ್ರಭುತ್ವವಾದಿಗಳು ಎದ್ದುನಿಲ್ಲಿ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾರಿತ್ರಿಕ ಮಾನವ ಸರಪಳಿ ಚಳವಳಿಯನ್ನು ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್‌ನಲ್ಲಿ ಉದ್ಘಾಟಿಸಿ ಮಾತನಾಡಿದರು.
ನಮ್ಮ ಸಂವಿಧಾನ ಎತ್ತಿ ಹಿಡಿದಿರುವ ಬಹುತ್ವವನ್ನು ನಾವು ಬದುಕಿನಲ್ಲಿ ಆಚರಿಸೋಣ. ಆ ಮೂಲಕ ಸಮಾಜ ಒಡೆಯುವ ದುಷ್ಟರ ಷಡ್ಯಂತ್ರ ಸೋಲಿಸೋಣ. ಪ್ರಜಾಪ್ರಭುತ್ವ ಗಟ್ಟಿಗೊಳಿಸೋಣ ಎಂದರು.
ನಮ್ಮ ಬುದ್ದ, ಬಸವಣ್ಣನ ಕಾಲದಲ್ಲೇ ನಮ್ಮಲ್ಲಿ ಪ್ರಜಾಪ್ರಭುತ್ವ, ಸಂಸದೀಯ ವ್ಯವಸ್ಥೆ ಇತ್ತು. ಅನುಭವ ಮಂಟಪ ಮೊದಲ ಪ್ರಜಾಪ್ರಭುತ್ವದ ಸಾಂಸ್ಥಿಕ ಸಂಕೇತ ಎಂದರು.
1949ರ ನವೆಂಬರ್ 25ನೇ ತಾರೀಕಿನಂದು ಬಾಬಾ ಸಾಹೇಬರು ಮಾಡಿದ ಭಾಷಣವನ್ನು ಪ್ರಸ್ತಾಪಿಸಿದ ಸಿಎಂ, ಆರ್ಥಿಕ-ಸಾಮಾಜಿಕ ಪ್ರಜಾಪ್ರಭುತ್ವ ಎಲ್ಲರಿಗೂ ಸಿಕ್ಕಾಗ ಮಾತ್ರ ರಾಜಕೀಯ ಸ್ವಾತಂತ್ರಕ್ಕೆ ಅರ್ಥ ಬರುತ್ತದೆ. ತಾರಾತಮ್ಯ ಭಾರತದಲ್ಲಿ ಆಚರಣೆಯಲ್ಲಿ ಇರುವವರೆಗೂ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥ ಇಲ್ಲ ಎಂದರು.
ಸಂವಿಧಾನದ ಪೀಠಿಕೆಯಲ್ಲಿ ಅತ್ಯಂತ ದೊಡ್ಡ ಮೌಲ್ಯಗಳಿವೆ. ಹೀಗಾಗಿಯೇ ಪ್ರತಿ ಶಾಲಾ ಕಾಲೇಜುಗಳಲ್ಲಿ ಇದನ್ನು ಓದಿಸುವ, ಅರ್ಥೈಸುವ, ಪಾಲಿಸುವ ಪ್ರಯತ್ನ‌ ಮುನ್ನಡೆಸಿದ್ದೇವೆ ಎಂದರು.
ನಮ್ಮ ರಾಷ್ಟ್ರಗೀತೆ ಮತ್ತು ನಮ್ಮ‌ ನಾಡಗೀತೆಯಲ್ಲಿರುವ ಭಾರತ ಮತ್ತು ಕರ್ನಾಟಕ ನಮ್ಮದಾಗಬೇಕು. ಯಾವುದೇ ತಾರತಮ್ಯ ಇಲ್ಲದ ಶಾಂತಿಯ ತೋಟ ನಮ್ಮದಾಗಬೇಕು ಎಂದು ಕರೆ ನೀಡಿದರು.
ಸಮಾಜದಲ್ಲಿರುವ ಅಸಮಾನತೆ ತೊಡೆದು ಹಾಕುವವರೆಗೂ ದೇಶಕ್ಕೆ ಸಿಕ್ಕ ಸ್ವಾತಂತ್ರ್ಯಕ್ಕೆ ಅರ್ಥ ಇರುವುದಿಲ್ಲ. ನಮ್ಮ ಸರ್ಕಾರ ಸಮಾನತೆ ಸಾಧಿಸುವ ದಿಕ್ಕಿನಲ್ಲಿ, ಎಲ್ಲಾ ಜಾತಿ-ಎಲ್ಲಾ ಧರ್ಮದ ಬಡವರಿಗೆ, ಮಧ್ಯಮ ವರ್ಗದವರಿಗೆ ಶಕ್ತಿ ತುಂಬುವ ಕಾರ್ಯಕ್ರಮ ರೂಪಿಸಿ ಜಾರಿ ಮಾಡಿದ್ದೇವೆ.
ಏಕತೆ ನೆಪದಲ್ಲಿ ಸಮಾಜವನ್ನು ಒಡೆಯುವ ವಿಚ್ಚಿದ್ರಕಾರಕ ಶಕ್ತಿಗಳನ್ನು ನಾಶ ಮಾಡಲು ಪ್ರಜಾಪ್ರಭುತ್ವವಾದಿಗಳು ಎದ್ದುನಿಲ್ಲಬೇಕು. ಬನ್ನಿ ಎದ್ದು ನಿಲ್ಲೋಣ ಎಂದು ಕರೆ ನೀಡಿದರು.
ಏಕತೆ ಭಜನೆ ಮಾಡುವ ವಿಚ್ಚಿದ್ರಕಾರಕ ದುಷ್ಟ ಶಕ್ತಿಗಳು ಸಾಮಾಜಿಕ ನ್ಯಾಯ, ಸಮಾನತೆಯ ವಿರೋಧಿಗಳು. ಇವರು ಸಮಾಜದ ಶತ್ರುಗಳು ಇವರನ್ನು ಮೆಟ್ಟಿ ನಿಲ್ಲದ ಹೊರತು ಮಹಿಳೆಯರ, ದಲಿತರ, ಹಿಂದುಳಿದವರ ಹಕ್ಕುಗಳು, ಅವಕಾಶಗಳು ಸಿಗಲು ಸಾಧ್ಯವಾಗುವುದಿಲ್ಲ ಎಂದರು.
ಈ BJP ಮತ್ತು ಇವರ ಜೊತೆಗಿರುವ ವಿಚ್ಚಿದ್ರಕಾರಕ ಶಕ್ತಿಗಳು ಬಡವರ, ಮಧ್ಯಮ ವರ್ಗದ ವಿರೋಧಿಗಳು. ಇವರು ಬಡವರ ಪರವಾದ ಕಾರ್ಯಕ್ರಮಗಳು ಜಾರಿ ಆಗಲು ಬಿಡುವುದಿಲ್ಲ. ಆದ್ದರಿಂದ ಇವರನ್ನು ನಾವು ಸೋಲಿಸಬೇಕು ಎಂದರು.
20 ಲಕ್ಷಕ್ಕೂ ಹೆಚ್ಚು ಮಂದಿಯ ಮಾನವ ಸರಪಳಿ ರಚಿಸಿರುವುದೇ ದುಷ್ಟಶಕ್ತಿಗಳಿಗೆ ಎಚ್ಚರಿಕೆ ನೀಡಿ ಮನುಷ್ಯ ಸಮಾಜವನ್ನು ಬೆಸೆಯುವುದಾಗಿದೆ ಎಂದರು.
ಉದ್ಘಾಟನೆ ಸಂದರ್ಭದಲ್ಲಿ ಪ್ರಜಾಪ್ರಭುತ್ವ ದಿನದ ರಾಯಭಾರಿ ಹರೇಕಳ ಹಾಜಪ್ಪ, ಪೌರ ಕಾರ್ಮಿಕ ತಾಯಂದಿರಾದ ನಾಗಲಕ್ಷ್ಮಿ, ಮಂಜುಳ ಹಾಗೂ ತೃತೀಯ ಲಿಂಗಿ ಪ್ರಿಯಾಂಕ ಮತ್ತು ಇಬ್ಬರು ವಿಶೇಷ ಚೇತನ ವಿದ್ಯಾರ್ಥಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎಡ-ಬಲದಲ್ಲಿ ನಿಂತು ಪ್ರಜಾಪ್ರಭುತ್ವ ದಿನವನ್ನು ಅರ್ಥಪೂರ್ಣಗೊಳಿಸಿದರು.
ಶಾಸಕರಾದ ರಿಜ್ವಾನ್ ಅರ್ಷದ್ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಉಪಸಭಾಪತಿ ರುದ್ರಪ್ಪ ಲಮಾಣಿ, ಸಚಿವರುಗಳಾದ ಹೆಚ್.ಸಿ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಕೆ.ಜೆ.ಜಾರ್ಜ್, ದಿನೇಶ್ ಗುಂಡೂರಾವ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹಮದ್, ಯು.ಬಿ.ವೆಂಕಟೇಶ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.