For the best experience, open
https://m.samyuktakarnataka.in
on your mobile browser.

ಸಮಾನತೆಯ ಹರಿಕಾರ ಕರ್ಪೂರಿ ಠಾಕೂರ್‌ಗೆ ಭಾರತ ರತ್ನ ಗೌರವ

11:11 AM Jan 25, 2024 IST | Samyukta Karnataka
ಸಮಾನತೆಯ ಹರಿಕಾರ ಕರ್ಪೂರಿ ಠಾಕೂರ್‌ಗೆ ಭಾರತ ರತ್ನ ಗೌರವ

ಪ್ರಶಸ್ತಿಗಳ ಆಯ್ಕೆ ಮಾಡುವಾಗ ಪ್ರಾದೇಶಿಕ ಇಲ್ಲವೇ ಧಾರ್ಮಿಕ ಅಥವಾ ಭಾಷಿಕ ತಾರತಮ್ಯಗಳಾಗಲೀ, ರಾಜಕೀಯ ಒಲವು ನಿಲುವುಗಳಾಗಲೀ ನಿರ್ಣಾಯಕವಾಗಲೇ ಬಾರದು.

ಹಿಂದುಳಿದ ವರ್ಗದವರು ಸೇರಿದಂತೆ ದುರ್ಬಲರ ಆಮೂಲಾಗ್ರ ಕಲ್ಯಾಣಕ್ಕಾಗಿ ಜೀವಮಾನ ರ‍್ಯಂತ ಹೋರಾಟ ನಡೆಸಿದ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿ ಅರಸಿಕೊಂಡು ಬಂದಿರುವುದು ನಿಜವಾದ ಅರ್ಥದಲ್ಲಿ ಸಾಧಕರಿಗೆ ಸಿಕ್ಕಿರುವ ಗೌರವ. ಕರ್ಪೂರಿ ಠಾಕೂರ್ ಅವರು ಶಾಲಾ ಉಪಾಧ್ಯಾಯರಾಗಿ ವೃತ್ತಿಯನ್ನು ಆರಂಭಿಸಿ ತಮಗೆ ದೊರೆತ ಅವಕಾಶಗಳ ಇತಿಮಿತಿಯಲ್ಲಿಯೇ ಸಮಾಜದ ಕಣ್ತೆರೆಸುವ ಕಾರ್ಯಕ್ರಮಗಳ ಮೂಲಕ ಜನನಾಯಕನ ಗೌರವಕ್ಕೆ ಪಾತ್ರರಾಗಿದ್ದು, ಯಾವುದೇ ಸರ್ಕಾರಿ ಪ್ರಯೋಜಿತ ಇಲ್ಲವೇ ಸ್ವಹಿತಾಸಕ್ತಿಯಿಂದ ರೂಪುಗೊಂಡ ಖಾಸಗಿ ಸಂಸ್ಥೆಯ ಕೃಪಾಶ್ರಯದಿಂದ ಅಲ್ಲ. ಬದಲಿಗೆ ಜನನಾಯಕ ಎಂಬ ಗೌರವ ಜನರೇ ತಾವಾಗಿಯೇ ಕೊಟ್ಟ ಗೌರವ. ಎರಡು ಬಾರಿ ಬಿಹಾರದ ಮುಖ್ಯಮಂತ್ರಿಯಾಗಿದ್ದಾಗ ಆದ್ಯತೆಗಳನ್ನು ಗುರುತಿಸಿ ದುರ್ಬಲ ವರ್ಗದವರ ಕಲ್ಯಾಣಕ್ಕೆ ವಿವಿಧ ಯೋಜನೆಗಳನ್ನು ರೂಪಿಸಿದ್ದಷ್ಟೇ ಅಲ್ಲದೇ ಹೊಸ ಗಾಳಿಯ ವಾತಾವರಣ ಸೃಷ್ಟಿಯಾಗುವ ರೀತಿಯಲ್ಲಿ ತರುಣ ಮುಖಂಡರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಸಕ್ರಿಯಗೊಳಿಸಿದ್ದು ಸಾಮಾನ್ಯ ಸಂಗತಿಯಲ್ಲ. ಜನತಾ ಪರಿವಾರದಲ್ಲಿ ಅಗ್ರಪಂಕ್ತಿಯ ನಾಯಕರಾಗಿ ಗುರುತಿಸಿಕೊಂಡ ಇವರಿಗೆ ಬಿಹಾರದ ಪ್ರಸ್ತುತ ಮುಖ್ಯಮಂತ್ರಿ ನಿತೀಶ್‌ಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಶಿಷ್ಯರು. ಬಿಹಾರದಲ್ಲಿ ಮೊಟ್ಟ ಮೊದಲ ಬಾರಿಗೆ ಪಾನ ನಿರೋಧವನ್ನು ವಿರೋಧಗಳ ನಡುವೆಯೂ ಕೂಡಾ ಜಾರಿಗೆ ತಂದಿದ್ದು ಇವರ ಹೆಚ್ಚುಗಾರಿಕೆ.
ಜನಸೇವೆ ಹಾಗೂ ರಾಷ್ಟ್ರ ಸೇವೆಯಲ್ಲಿ ತೊಡಗಿದವರಿಗೆ ಭಾರತರತ್ನ ಸೇರಿದಂತೆ ರಾಷ್ಟ್ರದ ಉನ್ನತ ಪ್ರಶಸ್ತಿಗಳು ದೊರಕಬೇಕು ಎಂಬ ಬಗ್ಗೆ ಎರಡು ಮಾತಿಲ್ಲ. ಇಂತಹ ಪ್ರಶಸ್ತಿಗಳ ಆಯ್ಕೆ ಮಾಡುವಾಗ ಪ್ರಾದೇಶಿಕ ಇಲ್ಲವೇ ಧಾರ್ಮಿಕ ಅಥವಾ ಭಾಷಿಕ ತಾರತಮ್ಯಗಳಾಗಲೀ, ರಾಜಕೀಯ ಒಲವು ನಿಲುವುಗಳಾಗಲೀ ನಿರ್ಣಾಯಕವಾಗಲೇ ಬಾರದು. ಆಗಷ್ಟೇ ಈ ಪ್ರಶಸ್ತಿಗಳಿಗೆ ಪ್ರಶ್ನಾತೀತ ಗೌರವ. ಕೇಂದ್ರ ಸರ್ಕಾರಕ್ಕೆ ಇಂತಹ ಪ್ರಶಸ್ತಿಗಳಿಗೆ ಅರ್ಹರನ್ನು ಹುಡುಕಿ ಆಯ್ಕೆ ಮಾಡುವ ಪರಮಾಧಿಕಾರವಿರುತ್ತದೆ. ರಾಷ್ಟ್ರಪತಿಯವರ ಮೂಲಕ ಈ ಪ್ರಶಸ್ತಿಗಳು ಘೋಷಣೆಯಾದರೂ, ಪ್ರಶಸ್ತಿ ಆಯ್ಕೆಯ ಪೂರ್ವಭಾವಿ ಕಾರ್ಯಗಳೆಲ್ಲ ನಡೆಯುವುದು ಕೇಂದ್ರ ಸರ್ಕಾರದ ಸುಪರ್ದಿಯಲ್ಲಿ. ಇಂತಹ ಆಯ್ಕೆಗಳು ಪಾರದರ್ಶಕವಾಗಿದ್ದರಷ್ಟೇ ಪ್ರಶಸ್ತಿಗಳಿಗೆ ಹೆಚ್ಚಿನ ಮರ್ಯಾದೆ. ಹಿಂದೊಮ್ಮೆ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಎಂ.ಜಿ.ರಾಮಚಂದ್ರನ್ ಅವರಿಗೆ ಪ್ರಶಸ್ತಿ ಕೊಡುವ ನಿರ್ಧಾರ ಕೈಗೊಳ್ಳಲು ಕಾರಣವೇನೆಂಬುದನ್ನು ಕೇಂದ್ರ ಸರ್ಕಾರವಾಗಲೀ, ಬೇರೆ ಜವಾಬ್ದಾರಿ ಸ್ಥಾನದಲ್ಲಿರುವವರಾಗಲೀ ಇದುವರೆಗೆ ಹೇಳಿಲ್ಲ. ಎಂಜಿಆರ್‌ಗೆ ಪ್ರಶಸ್ತಿ ಘೋಷಣೆಯಾದಾಗಲೇ ಈ ವಿವಾದ ಮಾರ್ದನಿಗೊಂಡದ್ದನ್ನು ಸ್ಮರಿಸಬೇಕು. ಇದರ ಅರ್ಥ ಸ್ಪಷ್ಟ. ಕೇಂದ್ರ ಸರ್ಕಾರ ಎಷ್ಟಾದರೂ ಜನಾದೇಶದ ಮೂಲಕ ಆಯ್ಕೆಯಾಗಿರುವ ಸರ್ಕಾರ. ಇದಕ್ಕೆ ಒಂದಲ್ಲಾ ಒಂದು ರೀತಿಯ ರಾಜಕೀಯ ಒಲವು ನಿಲುವುಗಳು ಸ್ವಾಭಾವಿಕ. ಅಧಿಕಾರಸ್ಥರು ರಾಜಕೀಯವನ್ನು ಮೀರಿ ನಿರ್ಧಾರ ಕೈಗೊಳ್ಳಬೇಕು ಎಂಬುದು ಜನಾಶಯವಷ್ಟೇ. ಆದರೆ ವಾಸ್ತವವೇ ಬೇರೆ.
ಕರ್ನಾಟಕದ ಸಿದ್ಧಗಂಗಾ ಮಠಾಧೀಶರಾಗಿದ್ದ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತರತ್ನ ಪ್ರಶಸ್ತಿ ಕೊಡಬೇಕೆಂಬ ಒಕ್ಕೊರಲ ಕೂಗು ಸ್ವಾಮೀಜಿ ಅವರು ಕೈಲಾಸವಾಸಿಗಳಾಗುವ ಪೂರ್ವದಲ್ಲಿಯೇ ಮಾರ್ದನಿಗೊಂಡಿತ್ತು. ಕೈಲಾಸವಾಸಿಗಳಾದ ಮೇಲೆ ಅದು ಇನ್ನಷ್ಟು ಜೋರಾಯಿತು. ರಾಜ್ಯ ಸರ್ಕಾರವೂ ಕೂಡಾ ಸ್ವಾಮೀಜಿಗಳಿಗೆ ಈ ಪ್ರಶಸ್ತಿಯನ್ನು ಕೊಡಮಾಡಬೇಕು ಎಂಬ ಶಿಫಾರಸ್ಸನ್ನು ಕೇಂದ್ರಕ್ಕೆ ರವಾನಿಸಿತ್ತು. ಕೇಂದ್ರ ಸರ್ಕಾರದ ಮಂತ್ರಿಗಳು ಹಲವಾರು ಬಾರಿ ಈ ಬಗ್ಗೆ ಒಲವನ್ನು ಬಹಿರಂಗವಾಗಿಯೇ ತೋರಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಕೂಡಾ ತುಮಕೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಸ್ವಾಮೀಜಿ ಅವರ ಸೇವೆಯ ಗುಣಗಾನ ಮಾಡಿದ್ದರು. ಆದರೆ ವರ್ಷಗಳು ಉರುಳುತ್ತಿದ್ದರೂ, ಸ್ವಾಮೀಜಿ ಅವರಿಗೆ ಭಾರತರತ್ನ ಪ್ರಶಸ್ತಿಗೆ ಆಯ್ಕೆಯಾಗುವ ಯೋಗ ಇನ್ನೂ ಬಾರದೇ ಇರುವುದು ಕಾರಣವೇನೋ ಅರ್ಥವಾಗುತ್ತಿಲ್ಲ. ಇದರ ಜೊತೆಗೆ, ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯದ ಹೊಸ ಅಧ್ಯಾಯವನ್ನು ಆರಂಭಿಸಿದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರೂ ಕೂಡಾ ಭಾರತರತ್ನ ಪ್ರಶಸ್ತಿಗೆ ಯೋಗ್ಯವಾದ ಆಯ್ಕೆ ಎಂಬುದು ಹಲವರ ನಂಬಿಕೆ. ಬಿಹಾರದಲ್ಲಿ ಕರ್ಪೂರಿ ಠಾಕೂರ್ ಮಾಡಿದ ರೀತಿಯ ಐತಿಹಾಸಿಕ ಕ್ರಾಂತಿ ಪರ್ವವನ್ನೇ ಅರಸು ಅವರು ಕರ್ನಾಟಕದಲ್ಲಿ ಮಾಡಿದ್ದರು. ಕರ್ಪೂರಿ ಅವರಿಗೆ ಒಲಿದ ಗೌರವ ಅರಸು ಅವರಿಗೆ ಒಲಿಯದೇ ಹೋದದ್ದು ಇನ್ನೊಂದು ಕಥೆ. ಇಂತಹ ಪ್ರಶಸ್ತಿಗಳ ಅಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿದ್ದರೆ, ಆಗ ಆಯ್ಕೆಯಾದವರ ಬಗ್ಗೆ ವಿವೇಚನೆಯ ಮಾರ್ಗದಲ್ಲಿ ಅರ್ಹತೆಯ ತುಲಾಭಾರ ಮಾಡಲು ದೇಶವಾಸಿಗಳಿಗೂ ಅವಕಾಶವಿದೆ. ಆದರೆ ವಿವರಗಳಿಲ್ಲದೆ ನಿರ್ಧಾರ ಮಾತ್ರ ಹೊರಬಿದ್ದಾಗ `ಬಂದದ್ದೆಲ್ಲ ಬರಲಿ ಗೋವಿಂದನ ದಯೆಯೊಂದಿರಲಿ' ಎಂದು ದೇಶವಾಸಿಗಳು ಸುಮ್ಮನಾಗಬೇಕಾಗುತ್ತದೆ ಎಂಬುದು ಈಗಿನ ಜನತಂತ್ರ ವ್ಯವಸ್ಥೆಯ ದಿಕ್ಸೂಚಿ.