For the best experience, open
https://m.samyuktakarnataka.in
on your mobile browser.

ಸಮುದ್ರದಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಸಾವು

07:55 PM Jan 08, 2025 IST | Samyukta Karnataka
ಸಮುದ್ರದಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಸಾವು

ಮಂಗಳೂರು: ಈಜಲು ಸಮುದ್ರಕ್ಕೆ ಇಳಿದಿದ್ದ ನಾಲ್ಕು ಮಂದಿ ಯುವಕರ ಪೈಕಿ ಮೂವರು ನೀರು ಪಾಲಾಗಿದ್ದು, ಓರ್ವನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ ಘಟನೆ ಕುಳಾಯಿ ಜೆಟ್ಟಿ ಬಳಿಯ ಸಮುದ್ರ ತೀರದಲ್ಲಿ ಇಂದು ನಡೆದಿದೆ.
ಮೃತರನ್ನು ಚಿತ್ರದುರ್ಗ ಜಿಲ್ಲೆಯ ಉಪ್ಪರಿಗೇನಹಳ್ಳಿ ನಿವಾಸಿ ಶಿವಲಿಂಗಪ್ಪ ಎಂಬವರ ಪುತ್ರ ಮಂಜುನಾಥ್ ಎಸ್(೩೧), ಶಿವಮೊಗ್ಗ ಜಿಲ್ಲೆಯ ಶಿವಕುಮಾರ್(೩೦), ಬೆಂಗಳೂರು ಜೆ.ಪಿ. ನಗರ ನಿವಾಸಿ ಸತ್ಯವೇಲು(೩೦) ಎಂದು ತಿಳಿದು ಬಂದಿದ್ದು, ಬೀದರ್ ಜಿಲ್ಲೆಯ ಹಂಗಾರಗಾ ನಿವಾಸಿ ವಿಶ್ವಂಬರ್ ಎಂಬವರ ಪುತ್ರ ಪರಮೇಶ್ವರ್(೩೦) ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶಿವಕುಮಾರ್, ಸತ್ಯವೇಲು ಮತ್ತು ಮಂಜುನಾಥ್ ಅವರ ಮೃತದೇಹ ಜೆಟ್ಟಿಯ ಬಲಭಾಗದ ಮೂಲೆಯಲ್ಲಿ ಪತ್ತೆಯಾಗಿದೆ. ಮೃತದೇಹಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ನಾಲ್ವರು ಬೆಂಗಳೂರಿನ ಎಎಂಸಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಎಲ್ಲರೂ ಸ್ನೇಹಿತರಾಗಿದ್ದರು. ಇವರು ಮಂಗಳವಾರ ರಾತ್ರಿ ಕಾರಿನಲ್ಲಿ ಬೆಂಗಳೂರಿನಿಂದ ಹೊರಟು ಇಂದು ಬೆಳಗ್ಗೆ ಮಂಗಳೂರಿಗೆ ತಲುಪಿದ್ದರು. ಮಂಗಳೂರಿನ ಹೊಟೇಲೊಂದರಲ್ಲಿ ಬೆಳಗ್ಗಿನ ಉಪಹಾರ ಸೇವಿಸಿ ಬಳಿಕ ಮಧ್ಯಾಹ್ನದ ವೇಳೆಗೆ ಕುಳಾಯಿಜೆಟ್ಟಿ ಬಳಿಗೆ ಬಂದಿದ್ದಾರೆ. ಅಲ್ಲಿ ಎಲ್ಲರೂ ಸಮುದ್ರಕ್ಕೆ ಇಳಿದು ಆಡುತ್ತಿದ್ದ ಸಂದರ್ಭ ನಾಲ್ವರು ನೀರು ಪಾಲಾಗಿದ್ದಾರೆ. ಘಟನೆಯನ್ನು ಗಮನಿಸುತ್ತಿದ್ದ ಸ್ಥಳೀಯ ಮೀನುಗಾರರು ನಾಲ್ವರ ರಕ್ಷಣೆಗೆ ಮುಂದಾದರಾದರೂ ಅಷ್ಟರಲ್ಲೇ ಮೂವರು ನೀರು ಪಾಲಾಗಿದ್ದರು. ಓರ್ವನನ್ನು ರಕ್ಷಿಸಿ ತಕ್ಷಣ ಆತನನ್ನು ನಗರದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸುರತ್ಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮಹಜರು ನಡೆಸಿದ್ದಾರೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.