For the best experience, open
https://m.samyuktakarnataka.in
on your mobile browser.

ಸರಕಾರದಿಂದ ಧಾರವಾಡ ನಿರ್ಲಕ್ಷ್ಯ

08:58 PM Sep 19, 2024 IST | Samyukta Karnataka
ಸರಕಾರದಿಂದ ಧಾರವಾಡ ನಿರ್ಲಕ್ಷ್ಯ

ಧಾರವಾಡ: ಕಳೆದ ಹತ್ತು ವರ್ಷಗಳಿಂದ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಕೂಗು ಕೇಳಿ ಬರುತ್ತಿದೆ. ಆದರೆ, ಅದು ಉತ್ತರ ಕರ್ನಾಟಕದ ಭಾಗ ಎಂಬ ಮಾತ್ರಕ್ಕೆ ನಿರ್ಲಕ್ಷ್ಯಕ್ಕೊಳಗಾಗುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಹು-ಧಾ ಮಹಾನಗರ ಪಾಲಿಕೆಯು ನಮ್ಮ ರಾಜ್ಯದಲ್ಲಿ ಎರಡನೇ ಬೃಹತ್ ಮಹಾನಗರ ಪಾಲಿಕೆಯಾಗಿದೆ. ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಗೆ ಬೇಕಾದಂತಹ ಎಲ್ಲ ತರಹದ ರೂಪು-ರೇಷಗಳನ್ನು ಸಿದ್ಧಪಡಿಸಿ ಹಲವಾರು ಬಾರಿ ಪತ್ರದ ಮೂಲಕ ಆಗ್ರಹಿಸಿ ಸದನದಲ್ಲಿ ಧ್ವನಿ ಎತ್ತಿದರೂ ಈ ವರೆಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳದೇ, ಜನರ ಭಾವನೆಗೆ ಸ್ಪಂದಿಸದೇ ಅಸಡ್ಡೆ ತೋರುತ್ತಿರುವುದು ನೋವಿನ ಸಂಗತಿ ಎಂದಿದ್ದಾರೆ.
ದಾವಣಗೆರೆ ಮಹಾನಗರ ಪಾಲಿಕೆ ಹಾಗೂ ತುಮಕೂರು ಮಹಾನಗರ ಪಾಲಿಕೆಯ ಒಟ್ಟು ವಾರ್ಷಿಕ ಉತ್ಪನ್ನ ಕೇವಲ ೨೫ ಕೋಟಿ ರೂ.ಗಳು. ಆದರೆ, ನಮ್ಮ ಧಾರವಾಡ ಮಹಾನಗರ ಪಾಲಿಕೆಯ ವಾರ್ಷಿಕ ಉತ್ಪನ್ನ ೩೦ ಕೋಟಿ ರೂ.ಗಿಂತ ಹೆಚ್ಚಿದೆ. ಹುಬ್ಬಳ್ಳಿ ಮತ್ತು ಧಾರವಾಡ ಸಮೀಪದ ಅನೇಕ ಹಳ್ಳಿಗಳು ಪಾಲಿಕೆಗೆ ಸಮೀಪವಾಗಿರುತ್ತದೆ. ವಸತಿ, ಕೈಗಾರಿಕೆ, ಶಿಕ್ಷಣ ಹಾಗೂ ಎಲ್ಲ ರೀತಿಯ ಬೆಳವಣಿಗೆಗಳಿಂದ ಧಾರವಾಡವು ಜನಸಂಖ್ಯೆಯ ಹಿತದೃಷ್ಟಿಯಿಂದ ಹಾಗೂ ಕ್ಷೇತ್ರವಾರು ದೃಷ್ಟಿಯಿಂದ ಹೆಚ್ಚಿಗೆ ಬೆಳೆದಿದೆ. ಇವೆಲ್ಲವನ್ನು ಪರಿಗಣಿಸಿದಾಗಲು ಸರ್ಕಾರವು ಮೀನ-ಮೇಷ ಮಾಡುತ್ತಿರುವುದು ಬೇಸರ ಮೂಡಿಸಿದೆ.
ಕಲ್ಯಾಣ ಕರ್ನಾಟಕ ಭಾಗದ ಬೀದರ ಹಾಗೂ ರಾಯಚೂರಿಗೆ ಪ್ರತ್ಯೇಕ ಮಹಾನಗರ ಪಾಲಿಕೆ ನೀಡಿದ್ದು, ಇದು ಮೇಲಿಂದ ಮೇಲೆ ಉತ್ತರ ಕರ್ನಾಟಕ ಭಾಗದ ಧಾರವಾಡಕ್ಕೆ ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚುತ್ತಿರುವುದು ಎದ್ದು ಕಾಣುತ್ತಿದೆ. ಮೇಲಾಗಿ ಸ್ಥಳೀಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಕಾಂಗ್ರೆಸ್ ಶಾಸಕರು ಇದರ ಬಗ್ಗೆ ಗಮನ ಹರಿಸದೇ ಇರುವುದು ಅವರ ಆಸಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದಿದ್ದಾರೆ.
ಇದೇ ರೀತಿ ಮುಂದುವರಿದಲ್ಲಿ ಮುಂಬರುವ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡುವುದು ನಿಶ್ಚಿತ ಎಂದು ಎಚ್ಚರಿಕೆ ನೀಡಿದ್ದಾರೆ.

Tags :