ಸರಕಾರದ ಅಂಗಳಕ್ಕೆ ಜಾತಿ ಗಣತಿ
ಬೆಂಗಳೂರು: ಬಹು ನಿರೀಕ್ಷಿತ ಕರ್ನಾಟಕ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಎಂಬ ಶೀರ್ಷಿಕೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿದ ಜಾತಿ ಗಣತಿಯ ವರದಿಯನ್ನು ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಗುರುವಾರ ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದರು.
ವಿಧಾನಸೌಧದ ಸಿಎಂ ಕಚೇರಿಗೆ ಆಯೋಗದ ಸಿಬ್ಬಂದಿ ಜಾತಿ ಗಣತಿಯ ಸಂಪೂರ್ಣ ಪ್ರತಿಗಳನ್ನು ಸಿಎಂ ಕಚೇರಿಗೆ ಹೊತ್ತು ತಂದಿದ್ದರು. ವರದಿಯ ಪ್ರತಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಆಯೋಗದ ಅಧ್ಯಕ್ಷ ಹೆಗ್ಡೆ ಸಾಂಕೇತಿಕವಾಗಿ ಸಿಎಂಗೆ ನೀಡಿದರು. ಸಚಿವರಾದ ಡಾ. ಜಿ.ಪರಮೇಶ್ವರ್, ಶಿವರಾಜ್ ತಂಗಡಗಿ ಹಾಜರಿದ್ದರು. ೨೦೧೪ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಎಚ್.ಕಾಂತರಾಜು ಅವರ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿ, ಜಾತಿ ಗಣತಿ ನಡೆಸಲು ಆದೇಶಿಸಿದ್ದರು. ೨೦೧೫ರಲ್ಲಿ ಸಮೀಕ್ಷೆ ನಡೆದಿತ್ತು. ಆದರೆ ರಾಜ್ಯದ ಬಹುಸಂಖ್ಯಾತ ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣ ಸಮುದಾಯಗಳ ಮಠಾಧೀಶರು, ರಾಜಕೀಯ ಮತ್ತು ಸಾಮಾಜಿಕ ಮುಖಂಡರು ವೈಜ್ಞಾನಿಕವಾದ ಮರು ಸಮೀಕ್ಷೆ ನಡೆಸುವಂತೆ ಆಗ್ರಹಿಸಿದ್ದರು. ವರದಿ ಸಲ್ಲಿಕೆ ಬೆನ್ನಲ್ಲೇ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಒಕ್ಕಲಿಗರ ಸಂಘಗಳು ಜಾತಿ ಗಣತಿ ತಿರಸ್ಕರಿಸುವಂತೆ ಆಗ್ರಹಿಸಿವೆ.