ಸರಕಾರಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು: ಆರೋಪ
ಯಾದಗಿರಿ: ಸರಕಾರಿ ಆಸ್ಪತ್ರೆಯ ವೈದ್ಯರ ಕರ್ತವ್ಯದಲ್ಲಿ ನಿರ್ಲಕ್ಷ್ಯತನದಿಂದ ಹೆರಿಗೆ ಮಾಡಿಸಿದ್ದ ಪರಿಣಾಮ ಬಾಣಂತಿಯೊಬ್ಬಳು ಮೃತಪಟ್ಟಿರುವ ಕುರಿತು ಆರೋಪವೊಂದು ಕೇಳಿಬಂದಿದೆ. ಜಿಲ್ಲೆಯ ದೋರನಹಳ್ಳಿ ಗ್ರಾಮದ ಭವಾನಿ ಎಂಬ ಯುವತಿ ಮೃತ ದುರ್ದೈವಿಯಾಗಿದ್ದು, ಈ ಬಾಣಂತಿ ಸಾವಿಗೆ ಶಹಾಪುರ ತಾಲೂಕು ಆಸ್ಪತ್ರೆಯ ವೈದ್ಯೆ ಸರೋಜಿನಿ ಪಾಟೀಲ ಅಜಾಗರೂಕತೆಯೇ ಕಾರಣವೆಂದು ಕುಟುಂಬಸ್ಥರು ದೂರಿದ್ದಾರೆ.
ಆಗಿರೋದೇನು..?
ಶಹಾಪುರ ತಾಲೂಕಾಸ್ಪತ್ರೆಗೆ ಯುವತಿಯನ್ನು ಹೆರಿಗೆಗೆಂದು ಕುಟುಂಬಸ್ಥರು ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಕರ್ತವ್ಯದಲ್ಲಿದ್ದ ವೈದ್ಯೆ ಸರೋಜಾ ಪಾಟೀಲ, ರಕ್ತ ತಪಾಸಣೆ ನಡೆಸಿ ವರದಿ ಬಂದ ನಂತರ ಹೆರಿಗೆ ಮಾಡಿಸುವ ಬದಲು ರಿಪೋರ್ಟ್ ಬರುವ ಮುನ್ನವೇ ಸಿಜೆರಿಯನ್ ಹೆರಿಗೆ ಮಾಡಿಸಿದ್ದು, ಇದಾದ ನಂತರ ಬಂದ ರಕ್ತ ತಪಾಸಣೆ ವರದಿಯಲ್ಲಿ ಬಾಣಂತಿಗೆ ಕಾಮಾಲೆ ಇರುವುದು ಗೊತ್ತಾಗಿದೆ. ಹೀಗಾಗಿ ಹೆರಿಗೆಯಾದ ಒಂದು ಗಂಟೆ ಬಳಿಕ ತೀವ್ರ ರಕ್ತಸ್ರಾವದಿಂದ ಬಾಣಂತಿ ಅಸ್ವಸ್ಥಳಾಗಿದ್ದಾಳೆ. ಇದರಿಂದ ಬಾಣಂತಿಯನ್ನು ತಕ್ಷಣ ಕಲಬುರಗಿಯ ಖಾಸಗಿ ಆಸ್ಪತ್ರೆಯೊಂದಕ್ಕೆ ರವಾನಿಸಲು ಸೂಚನೆ ನೀಡಿ ಸ್ವತಃ ವೈದ್ಯರೇ ದಾಖಲಿಸಿದ್ದಾರೆ. ಅಲ್ಲಿಯೂ ಕೂಡಾ ಅಪರೇಷನ್ ಮಾಡಲು 10 ಲಕ್ಷ ಬಿಲ್ ಪಾವತಿ ಮಾಡಿದರೂ ಸಹಿತ ಯುವತಿ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ. ಬಳಿಕ ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಇದಾದ ನಂತರ ಭಾನುವಾರ(ಅ.13) ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕಾರಣ ಶಹಾಪುರ ತಾಲೂಕು ಆಸ್ಪತ್ರೆಗೆ ಕರೆದೊಯ್ದುರಾದರೂ ಸೋಮವಾರ ನಸುಕಿನ ಜಾವ ಚಿಕಿತ್ಸೆ ಫಲಕಾರಿಯಾಗದೇ ಬಾಣಂತಿ ಮೃತಪಟ್ಟಿದ್ದಾಳೆ.
ಇದಕ್ಕೆ ಕೆರಳಿದ ಬಾಣಂತಿ ಕುಟುಂಬಸ್ಥರು ಶಹಾಪುರ ಸರ್ಕಾರಿ ಆಸ್ಪತ್ರೆ ವೈದ್ಯೆ ಸರೋಜಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಹಾಗೂ ಆಸ್ಪತ್ರೆಯ 10 ಲಕ್ಷ ಬಿಲ್ ಪಾವತಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.