ಸರಣಿ ಅಪಘಾತ: ಓರ್ವ ಸಾವು
ಬೆಳಗಾವಿ: ರಾಷ್ಟ್ರೀಯ ಹೆದ್ದಾರಿಯ ತವಂಡಿ ಘಾಟ್‌ನಲ್ಲಿ ವೇಗವಾಗಿ ಬಂದ ಟ್ರಕ್ ನಾಲ್ಕು ವಾಹನಗಳಿಗೆ ಡಿಕ್ಕಿ ಹೊಡೆದು ನಡೆದ ಸರಣಿ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದು ೧೫ ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ.
ಮೃತರನ್ನು ಜಾಂಬೋಟಿಯ ನಾರಾಯಣ ನಾಗು ಪರ್ವಡ್ಕರ್(೬೫) ಎಂದು ಗುರುತಿಸಲಾಗಿದೆ. ಕೊಲ್ಹಾಪುರದಲ್ಲಿರುವ ಜ್ಯೋತಿಬಾ ಮತ್ತು ಮಹಾಲಕ್ಷ್ಮಿ ದರ್ಶನಕ್ಕೆ ಪ್ರಯಾಣಿಕರು ಖಾನಾಪುರದ ಜಾಂಬೋಟಿಯಿಂದ ಕ್ರೂಸರ್‌ನಲ್ಲಿ ಹೊರಟಿದ್ದರು. ಈ ಅವಘಡದಲ್ಲಿ ಟ್ರಕ್ ಸೇರಿದಂತೆ ವಾಹನಗಳಿಗೆ ಭಾರೀ ಹಾನಿಯಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಬೆಳಗಾವಿಯ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತಕ್ಕೆ ಕಾರಣವಾದ ಟ್ರಕ್ ಸುಮಾರು ಮುನ್ನೂರು ಅಡಿ ಬಿದ್ದು ಹೆದ್ದಾರಿ ಬದಿಯ ಹೊಲಕ್ಕೆ ಡಿಕ್ಕಿ ಹೊಡೆದಿದೆ.
ಶಂಕರ್ ಮೋಹನ್ ಪರ್ವಾಡ್ಕರ್(೨೮) ಮತ್ತು ರೇಷ್ಮಾ ರಾಜೇಂದ್ರ ಕುರ್ತುಡ್ಕರ್(೪೫) ಗಂಭೀರವಾಗಿ ಗಾಯಗೊಂಡವರು. ಮೋಹನ್ ನಾಗು ಪರ್ವಾಡ್ಕರ್(೫೭), ವಿದ್ಯಾ ಮೋಹನ್ ಪರ್ವಾಡ್ಕರ್(೪೭), ಪ್ರತೀಕ್ಷಾ ಮೋಹನ್ ಪರ್ವಾಡ್ಕರ್(೨೨), ಪ್ರಿಯಾಂಕಾ ಮೋಹನ್ ಪರ್ವಾಡ್ಕರ್(೨೫), ಪೂನಂ ಮಹೇಶ್ ಡಿಯೋಲೆ(೨೬), ಆಯೇಷಾ ಮಹೇಶ್ ಡಿಯೋಲೆ(೫), ಆಯುಷ್ ಮಹೇಶ್ ದೀವಳಿ(೩), ಸುಹಾಸ್ ಬಬ್ಲಿ ಪರ್ವಾಡ್ಕರ್(೪೦), ಸ್ವಾತಿ ಸುಹಾಸ್ ಪರ್ವಾಡ್ಕರ್(೧೨), ವೈಷ್ಣವಿ ಮೋಹನ್ ಘಾಡೆ(೨೫), ಪ್ರಮೋದ್ ಮಾರುತಿ ಪರ್ವಡ್ಕರ್(೨೬) ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತಕ್ಕೆ ಕಾರಣವಾದ ಟ್ರಕ್ ಚಾಲಕ, ಕ್ಲೀನರ್ ತಲೆಮರೆಸಿಕೊಂಡಿದ್ದಾನೆ. ಹೆದ್ದಾರಿಯಲ್ಲಿ ವಾಹನಗಳು ಕುಸಿದು ಬಿದ್ದಿದ್ದರಿಂದ ಎರಡು ಗಂಟೆಗಳ ಕಾಲ ಹೆದ್ದಾರಿ ಸಂಚಾರ ಸ್ಥಗಿತಗೊಂಡಿತ್ತು.