For the best experience, open
https://m.samyuktakarnataka.in
on your mobile browser.

ಸರಣಿ ಕೊಲೆಯ ಜಾಡು ಹಿಡಿದು…

02:16 PM Jan 27, 2024 IST | Samyukta Karnataka
ಸರಣಿ ಕೊಲೆಯ ಜಾಡು ಹಿಡಿದು…

-ಜಿ.ಆರ್.ಬಿ

ಅದು ಬೆಂಗಳೂರು ಹೊರವಲಯ. ನಿರ್ಜನ ಪ್ರದೇಶ. ದಟ್ಟ ಮರಗಳ ನಡುವೆ ಒಂದಷ್ಟು ಖಾಲಿ ಜಾಗ. ಆ ಸ್ಥಳದ ಹೆಸರು ಕೊಂಡಾಣ. ನಟ್ಟ ನಡುರಾತ್ರಿಯಲ್ಲಿ ಮೂವರು ಪೊಲೀಸರ ಹತ್ಯೆ ನಡೆಯುತ್ತದೆ. ಅದಕ್ಕೂ ಮುನ್ನ ಜೋಡಿ ಕೊಲೆಯೊಂದು ನಡೆದಿರುತ್ತದೆ. ಅದರ ಬೆನ್ನಲ್ಲೇ ಮತ್ತೊಂದು ಕೊಲೆ…
ಸಿನಿಮಾದ ಬಹುತೇಕ ಸನ್ನಿವೇಶಗಳು ರಾತ್ರಿಯಲ್ಲೇ ಘಟಿಸುತ್ತವೆ. ಪೊಲೀಸರಿಗೆ ತಲೆನೋವಾಗಿ ಪರಿಣಮಿಸುವ ಸರಣಿ ಕೊಲೆಗಳು, ತಕ್ಷಣವೇ ಎಚ್ಚೆತ್ತುಕೊಳ್ಳುವಂತೆ ಮಾಡುತ್ತವೆ. ಎಲ್ಲಾ ಹತ್ಯೆಗಳ ಹಂತಕರು ಯಾರು..? ಕಾರಣವೇನು… ಎಂಬ ಹುಡುಕಾಟ ಶುರುವಾಗುತ್ತದೆ. ಅಲ್ಲೀವರೆಗೂ ಮರಣಗಳನ್ನೇ ನೋಡಿದ್ದ ಕಣ್ಣುಗಳಿಗೆ, ತನಿಖೆಯ ನಾನಾ ಮುಖಗಳ ಪರಿಚಯವಾಗುತ್ತಾ ಹೋಗುತ್ತದೆ. ಅದಕ್ಕೂ ಮುನ್ನ ಒಂದು ಬ್ರೇಕ್.
ಅಪರಾಧಗಳ ಜಾಡು ಹಿಡಿದು ಹೊರಡುವ ಪೊಲೀಸರಿಗೆ ಅಸಲಿ ಕಥೆ ತೆರೆದುಕೊಳ್ಳುವುದೇ ಸೆಕೆಂಡ್ ಹಾಫ್‌ನಲ್ಲಿ. ಕೌತುಕದ ಕಥಾಹಂದರದ ನಡುವೆ ರೋಚಕತೆ ಬೆರೆತಿರುವುದು ಕೇಸ್ ಆಫ್ ಕೊಂಡಾಣ’ದ ಬಹುಮುಖ್ಯ ತಿರುವು..! ಸಸ್ಪೆನ್ಸ್, ಥ್ರಿಲ್ಲರ್ ಕಥಾವಸ್ತುವಿನ ಈ ಸಿನಿಮಾಕ್ಕೆ ಕಲಾವಿದರು ಹಾಗೂ ತಂತ್ರಜ್ಞರೇ ಆಧಾರಸ್ತಂಭ. ಎಲ್ಲರಿಂದಲೂ ಕೆಲಸ ತೆಗೆಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ. ವಿಶ್ವಜಿತ್ ರಾವ್ ಕ್ಯಾಮೆರಾ ಕುಸುರಿ, ಜೋಗಿ ಪದಜೋಡಣೆಕೇಸ್’ನ ತನಿಖೆಗೆ ಸಹಕಾರಿಯಾಗಿದೆ. ವಿಜಯ ರಾಘವೇಂದ್ರ ಪಾತ್ರ ಮೆಲ್ಲಗೆ ಹತ್ತಿರವಾಗುತ್ತದೆ. ಭಾವನಾ ಮೆನನ್‌ರದ್ದು ಖಡಕ್ ನಟನೆ. ಖುಷಿ ರವಿ, ರಂಗಾಯಣ ರಘು, ಪೆಟ್ರೋಲ್ ಪ್ರಸನ್ನ ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ.