For the best experience, open
https://m.samyuktakarnataka.in
on your mobile browser.

ಸರಳ ಜೀವಿ ಸ್ವಾಮಿ ಸ್ಮರಣಾನಂದಜೀ

04:32 AM Mar 29, 2024 IST | Samyukta Karnataka
ಸರಳ ಜೀವಿ ಸ್ವಾಮಿ ಸ್ಮರಣಾನಂದಜೀ

ಭಾರತ ದೇಶವು ಸಂತರ ತವರೂರು. ಭಾರತದ ಪ್ರತಿಯೊಂದು ಹಳಿಯಲ್ಲಿಯೂ ಸಂತರೊಬ್ಬರು ಹುಟ್ಟೇ ಇರುತ್ತಾರೆ. ಅವರ ಜೀವನ ಒಂದು ಪುಣ್ಯ ನದಿ. ಅದರಲ್ಲಿ ಮಿಂದು ಅನೇಕರು ಪುನೀತರಾಗುತ್ತಾರೆ. ಅಲ್ಲದೆ ಅವರ ಜೀವನವನ್ನು ಅಧ್ಯಯನ ಮಾಡುವುದರಿಂದ ಜೀವನಕ್ಕೆ ಬೇಕಾಗುವ ಅತ್ಯಮೂಲ್ಯ ಪಾಠಗಳನ್ನು ನಾವು ಕಲಿಯಬಹುದು.
ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ನಿನ ೧೬ನೇ ಪರಮಾಧ್ಯಕ್ಷರಾದ ಪರಮ ಪೂಜ್ಯ ಸ್ವಾಮಿ ಸ್ಮರಣಾನಂದಜೀ ಮಹಾರಾಜ್ ಅವರು ಮಾರ್ಚ್ ೨೬ ರಂದು ಮಹಾಸಮಾಧಿ ಹೊಂದಿದರು. ಅವರೊಬ್ಬ ಮಹಾನ್ ಸಂತ. ಆದರೆ ಅವರ ವೈಯಕ್ತಿಕ ಜೀವನದಲ್ಲಿ ಬಹಳ ಕಟ್ಟುನಿಟ್ಟಾಗಿದ್ದರು. ಶಿಸ್ತಿನ ಸಿಪಾಯಿಯಾಗಿದ್ದರು. ಸರಳಜೀವಿ. ಆದರೆ ಇತರರಿಗೆ ಅವರು ಸದಾ ಮಮತೆಯ ಮಡಿಲು.
ಪೂಜ್ಯರರು ೧೯೨೯ರಲ್ಲಿ ತಮಿಳುನಾಡಿನ ತಂಜಾವೂರು ಜಿಲ್ಲೆಯ ಆಂದಮಿ ಗ್ರಾಮದಲ್ಲಿ ಹುಟ್ಟಿದರು. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಬಾಲ್ಯದಿಂದಲೂ ಆಧ್ಯಾತ್ಮಿಕ ಪ್ರವೃತ್ತಿ, ಆಳವಾದ ಅಧ್ಯಯನ ಮತ್ತು ಚಿಂತನೆಗಳಲ್ಲಿ ಆಸಕ್ತರಾಗಿದ್ದರು.
ಸ್ನೇಹಿತನ ನೆರವಿನಿಂದಾಗಿ ೨೦ನೇ ವಯಸ್ಸಿನಲ್ಲಿ ಮುಂಬೈನ ರಾಮಕೃಷ್ಣ ಮಠದ ಸಂಪರ್ಕಕ್ಕೆ ಬಂದರು. ಶ್ರೀರಾಮಕೃಷ್ಣ ವಚನವೇದ, ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ ಇವರ ಜೀವನದ ವೇಳೆ ಆಳವಾದ ಪರಿಣಾಮವನ್ನು ಉಂಟುಮಾಡಿದವು. ರಾಮಕೃಷ್ಣ ಸಂಘದ ಧ್ಯೇಯವಾಕ್ಯದಿಂದ ಪ್ರಭಾವಗೊಂಡು ಮುಂಬೈನ ರಾಮಕೃಷ್ಣ ಮಠವನ್ನು ಸೇರಿದರು. ಪ.ಪೂ ಸ್ವಾಮಿ ಶಂಕರಾನಂದಜೀ ಮಹಾರಾಜ್ ಅವರಿಂದ ಮಂತ್ರದೀಕ್ಷೆ, ಬ್ರಹ್ಮಚರ್ಯ ಹಾಗೂ ಸಂನ್ಯಾಸ ದೀಕ್ಷೆಗಳನ್ನು ಪಡೆದರು.
೧೯೫೮ರಲ್ಲಿ ಕಲ್ಕತ್ತೆಯ ಅದ್ವೈತ ಆಶ್ರಮಕ್ಕೆ ಇವರಿಗೆ ವರ್ಗಾವಣೆಯಾಯಿತು. ಅಲ್ಲಿ ಸ್ವಾಮಿ ವಿವೇಕಾನಂದರು ಪ್ರಾರಂಭಿಸಿರುವ ಪ್ರಬುದ್ಧ ಭಾರತ ಮಾಸ ಪತ್ರಿಕೆಯ ಸಹಾಯ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಅಲ್ಲಿ ಸುಮಾರು ೧೮ ವರ್ಷಗಳ ಕಾಲ ರಾಮಕೃಷ್ಣ, ವಿವೇಕಾನಂದ, ವೇದಾಂತ ಸಾಹಿತ್ಯದ ಪ್ರಕಾಶನದಲ್ಲಿ ಅವರು ತಮ್ಮ ಅಮೋಘ ಸೇವೆಯನ್ನು ಸಲ್ಲಿಸಿರುವುದು ನೆನಪಿಸಿಕೊಳ್ಳಬೇಕಾದ ಸಂಗತಿ.
೧೯೭೬ರಲ್ಲಿ ಕಲ್ಕತ್ತೆಯ ಬಹುದೊಡ್ಡ ವಿದ್ಯಾ ಸಂಸ್ಥೆಯಾದ ರಾಮಕೃಷ್ಣ ಶಾರದಾಪೀಠಕ್ಕೆ ಕಾರ್ಯದರ್ಶಿಗಳಾಗಿ ನೇಮಕಗೊಂಡರು. ಸಮಾಜದ ಏಳಿಗೆಗೆ ಶಿಕ್ಷಣ ರಾಮಬಾಣ ಎಂದು ಅರಿತಿದ್ದ ಪೂಜ್ಯರು ಅಲ್ಲಿ ಯುವಕರಿಗೆ ವಿವಿಧ ರೀತಿಯ ವಿದ್ಯಾ ಸೇವೆಗಳನ್ನು ಉಚಿತವಾಗಿ ನೀಡಿದರು. ಭಾರತದ ಬೆನ್ನೆಲುಬು ಹಳ್ಳಿಗಳಾದ್ದರಿಂದ, ಅನೇಕ ರೀತಿಯ ಗ್ರಾಮೀಣ ಕಲ್ಯಾಣ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತಾವು ಅಹರ್ನಿಶಿ ತೊಡಗಿಸಿಕೊಂಡರು. ೧೯೭೮ರಲ್ಲಿ ಪಶ್ಚಿಮ ಬಂಗಾಳದಲ್ಲಿ ಮಹಾಪ್ರವಾಹ ಉಂಟಾಯಿತು. ಹಗಲು-ರಾತ್ರಿ ಎನ್ನದೆ ಇತರೆ ಯತಿಗಳೊಡಗೂಡಿ ಸಹಸ್ರ ಸಂಖ್ಯೆಯಲ್ಲಿ ನಿರಾಶ್ರಿತರಿಗಾಗಿ ಆಹಾರ, ವಸ್ತ್ರ, ಇತ್ಯಾದಿ ವಸ್ತುಗಳನ್ನು ನೀಡುವ ಮೂಲಕ ಪರಿಹಾರ ಕಾರ್ಯಗಳನ್ನು ಮಾಡಿದರು. ೧೯೮೩ರಲ್ಲಿ ರಾಮಕೃಷ್ಣ ಮಠದ ಟ್ರಸ್ಟಿಗಳಾಗಿ ನೇಮಕಗೊಂಡರು.
೧೯೯೧ಲ್ಲಿ ಚೆನ್ನೈನ ರಾಮಕೃಷ್ಣ ಮಠಕ್ಕೆ ಅಧ್ಯಕ್ಷರಾಗಿ ನೇಮಕಗೊಂಡರು. ಅಲ್ಲಿ ವಿಶ್ವೆಕ್ಯ ರಾಮಕೃಷ್ಣ ಮಂದಿರದ ಶಂಕುಸ್ಥಾಪನೆಗೆ ಕಾರಣೀಭೂತರಾದರು. ಅಲ್ಲಿಯೂ ವಿವಿಧ ರೀತಿಯ ಸೇವಾ ಕಾರ್ಯಗಳನ್ನು, ರಾಮಕೃಷ್ಣ-ವೇದಾಂತ ಪ್ರಚಾರ ಕಾರ್ಯಗಳನ್ನೂ ಕೈಗೊಂಡರು. ಇವುಗಳ ನಡುವೆಯೂ ನಿರಂತರ ಅಧ್ಯಯನ, ಅಧ್ಯಾಪನ, ತಪಸ್ಸ್ಸು ಇವರ ದಿನಚರಿಯಾಗಿತ್ತು. ೧೯೯೫ರಲ್ಲಿ ಪ್ರಧಾನ ಕೇಂದ್ರವಾದ ಬೇಲೂರು ಮಠದ ಸಹ ಪ್ರಧಾನ ಕಾರ್ಯದರ್ಶಿಯಾಗಿಯೂ, ಎರಡು ವರ್ಷಗಳ ನಂತರ ಪ್ರಧಾನ ಕಾರ್ಯದರ್ಶಿಗಳಾಗಿ ವಿಶ್ವಾದ್ಯಂತ ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್, ಹಾಗೂ ಅದರ ಅಂಗ ಸಂಸ್ಥೆಗಳಿಗೆ ಮಾರ್ಗದರ್ಶನ ಮಾಡಿದರು. ೨೦೦೭ರಲ್ಲಿ ಉಪಾಧ್ಯಕ್ಷರಾಗಿ ನೇಮಕಗೊಂಡ ಅವರು, ೨೦೧೭ರಲ್ಲಿ ರಾಮಕೃಷ್ಣ ಮಠದ ೧೬ನೇ ಪರಮಾಧ್ಯಕ್ಕ್ಷರಾದರು. ಇವರು ಸಹಸ್ರ ಸಂಖ್ಯೆಯಲ್ಲಿ ಆಧ್ಯಾತ್ಮಿಕ ಪಿಪಾಸುಗಳಿಗೆ ಮಂತ್ರದೀಕ್ಷೆಯನ್ನು ನೀಡಿದ್ದಾರೆ.