ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸರಳ ಸುಂದರ ಪ್ರೇಮ್ ಕಹಾನಿ

07:54 PM Feb 09, 2024 IST | Samyukta Karnataka

ಸಿನಿಮಾ: ಒಂದು ಸರಳ ಪ್ರೇಮಕಥೆ
ನಿರ್ದೇಶನ: ಸುನಿ
ತಾರಾಗಣ: ವಿನಯ್ ರಾಜ್‌ಕುಮಾರ್, ಸ್ವಾತಿಷ್ಟ ಕೃಷ್ಣನ್, ಮಲ್ಲಿಕಾ ಸಿಂಗ್, ಸಾಧುಕೋಕಿಲ, ರಾಜೇಶ್ ನಟರಂಗ, ಅರುಣಾ ಬಾಲರಾಜ್ ಮೊದಲಾದವರು.
ರೇಟಿಂಗ್ಸ್: 3.5

-ಗಣೇಶ್ ರಾಣೆಬೆನ್ನೂರು

ಈವರೆಗೂ ನಾನಾ ಬಗೆಯ ಪ್ರೇಮಕಥೆಗಳನ್ನು ಕಂಡವರಿಗೆ ‘ಒಂದು ಸರಳ ಪ್ರೇಮಕಥೆ’ ನೋಡಿದಾಕ್ಷಣ ‘ಇದೊಂದು ವಿರಳ ಪ್ರೇಮಕಥೆ’ ಅಂತಲೂ ಅನಿಸಬಹುದು. ಅದಕ್ಕೆ ಕಾರಣ ಚಿತ್ರದ ಕಥಾಹಂದರ. ಸರಳವಾಗಿಯೇ ಸಾಗುವ ಸಿನಿಮಾ, ವಿರಳರೂಪ ತಾಳುತ್ತದೆ. ಒಂದೇ ಪ್ರೇಮ ಬೇರೆ ಬೇರೆ ಆಯಾಮಗಳಲ್ಲಿ ಟಿಸಿಲೊಡೆಯುತ್ತದೆ. ಈ ರೂಪಾಂತರದ ಪ್ರೇಮ್ ಕಹಾನಿ ಫಿದಾ ಆಗುವಂತೆ ಮಾಡಲು ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುವ ಕ್ಲೈಮ್ಯಾಕ್ಸ್ ಇದೆ. ಒಟ್ಟಾರೆ ಸಿನಿಮಾದ ಸಾರ ಅಡಗಿರುವುದೇ ಅಲ್ಲಿ ಎಂಬುದು ಅರ್ಥವಾಗುತ್ತಿದ್ದಂತೇ, ಹಿನ್ನೆಲೆಯಲ್ಲಿ ‘ಮೂಕನಾಗಬೇಕು…’ ರಾಗಸುಧೆ ಕೇಳಿಬರುತ್ತಿರುತ್ತದೆ. ಅಲ್ಲಿಗೆ ಸಿನಿಮಾ ನೋಡಿದವರೂ ಮೂಕವಿಸ್ಮಿತ..!

ನಿರ್ದೇಶಕ ಸುನಿ ಈವರೆಗೂ ಭಿನ್ನ-ವಿಭಿನ್ನ ಲವ್‌ಸ್ಟೋರಿಗಳನ್ನು ತೆರೆಯ ಮೇಲೆ ತಂದಿದ್ದಾರೆ. ಆದರೆ ಇದೊಂದು ಅಪರೂಪದ ಪ್ರೇಮಕಥೆ ಎಂಬುದನ್ನು ಶೀರ್ಷಿಕೆಯಲ್ಲೇ ಸೂಚ್ಯವಾಗಿ ಹೇಳಿದ್ದಾರೆ. ಯಾವುದಕ್ಕೂ ಇರಲಿ ಎಂಬಂತೆ ‘ಸರಳ’ತೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಸಿನಿಮಾ ನೋಡಿದ ನಂತರ ಇದು ಸರಳವೂ ಹೌದು, ವಿರಳ ಪ್ರೇಮಕಥೆಯೂ ಹೌದು ಎಂಬಂತೆ ಭಾಸವಾಗುತ್ತದೆ.

ವಿನಯ್ ರಾಜ್‌ಕುಮಾರ್ ಇಲ್ಲಿ ಅತಿಶಯ ಪಾತ್ರ ನಿರ್ವಹಿಸಿದ್ದಾರೆ. ಮಧುರ, ಅನುರಾಗ ಪಾತ್ರಗಳು ಅತಿಶಯನ ಸುತ್ತಲೇ ಸುತ್ತುತ್ತವೆ. ‘ಒಲವು ಒಂಟಿಯಲ್ಲ…’ ಎಂಬುದು ಆಗಾಗ ಸಾಬೀತಾಗುತ್ತಲೇ ಇದ್ದರೂ ‘ಪ್ರೀತಿ ಅಮರ’ ಎಂಬುದೂ ಸಿನಿಮಾದಲ್ಲಿ ಸಾಕ್ಷೀಕರಿಸಲಾಗಿದೆ. ಹೀಗಾಗಿ ಪ್ರೀತಿ-ಗೀತಿ ಇತ್ಯಾದಿಗಳ ಜತೆಜತೆಗೆ ಸಿನಿಮಾದುದ್ದಕ್ಕೂ ಹಾಡುಗಳ ಸರಮಾಲೆಯಿದೆ. ಕೆಲವೊಂದು ಮಾತುಗಳನ್ನು, ಸನ್ನಿವೇಶಗಳನ್ನು ಹಾಡಿನ ಮೂಲಕವೇ ದಾಟಿಸಲಾಗಿದೆ.

ಪ್ರೀತಿಗಾಗಿ ನಾನಾ ಕಡೆ ಅಲೆದಾಡುವ ನಾಯಕ-ನಾಯಕಿ, ಕೊನೆಗೂ ಜೀವನದಲ್ಲಿ ಪ್ರೀತಿ ಪಡೆದುಕೊಳ್ಳುವಲ್ಲಿ ಸಫಲರಾಗುತ್ತಾರಾ ಎಂಬುದೇ ಸಿನಿಮಾದ ಪ್ರಮುಖ ಅಂಶ. ಇದೊಂಥರ ತ್ರಿಕೋನ ಪ್ರೇಮಕಥೆಯಂತೆ ಮೇಲ್ನೋಟಕ್ಕೆ ಕಂಡುಬರುತ್ತದೆ. ಆಗಾಗ ಯಾರೇ ನೀನು ಚೆಲುವೆ, ಎಕ್ಸ್‌ಕ್ಯೂಸ್‌ಮಿ ಸಿನಿಮಾಗಳೂ ನೆನಪಿಗೆ ಬಂದು ಹೋಗುತ್ತವೆ. ಆದರೆ ಅವೆಲ್ಲವನ್ನೂ ಮೀರಿ ‘ಸರಳ ಪ್ರೇಮಕಥೆ’ ಮನಸ್ಸಿನಾಳಕ್ಕೆ ಇಳಿಯುವಂತೆ ಮಾಡುವಲ್ಲಿ ಸುನಿ ಸಫಲರಾಗಿದ್ದಾರೆ.

ಪಾತ್ರದಲ್ಲಿ ವಿನಯ್ ರಾಜ್‌ಕುಮಾರ್ ತನ್ಮಯತೆ, ನಾಯಕಿಯರ ಭಾವತೀವ್ರತೆ ಸಿನಿಮಾದ ಪ್ಲಸ್ ಪಾಯಿಂಟ್ಸ್. ಸಾಧುಕೋಕಿಲ, ರಾಜೇಶ್ ನಟರಂಗ, ಅರುಣಾ ಬಾಲರಾಜ್ ಮೊದಲಾದವರು ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ವೀರ್ ಸಮರ್ಥ್ ಹಾಡುಗಳು ಸಿನಿಮಾದಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಿವೆ.

ಜಸ್ಟ್‌ಪಾಸ್ ಆದವರ ಫಸ್ಟ್‌ಕ್ಲಾಸ್ ಚಿತ್ರ

Next Article