ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸರ್ಕಾರಕ್ಕೆ ಗ್ಯಾರಂಟಿ ಧರ್ಮ ಸಂಕಟ

02:00 AM Aug 16, 2024 IST | Samyukta Karnataka

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದ ಅಂತಿಮ ಹಂತದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ ಐದು ಗ್ಯಾರಂಟಿಗಳ ಆಕರ್ಷಣೆಯಿಂದ ಮತದಾರರ ವಲಯದಲ್ಲಿ ಆಗಿರುವ ಬದಲಾವಣೆ ಏನೆಂಬುದು ಈಗ ಖಚಿತವಾಗಿ ಅನುಭವಕ್ಕೆ ಬಂದಿರುವ ವಿಚಾರ. ಬೇಷರತ್ತಾಗಿ ಎಲ್ಲರೂ ನಂಬುವ ವಿಚಾರವೆಂದರೆ ಐದು ಗ್ಯಾರಂಟಿಗಳು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪ್ರತಿಷ್ಠಾಪನೆಗೆ ನಿರ್ಣಾಯಕವಾಯಿತು ಎಂಬುದು. ಹೀಗೆ ಹೇಳಿದಾಕ್ಷಣ ಕಾಂಗ್ರೆಸ್ ಪರವಾದ ಒಲವು ರಾಜ್ಯದ ಮತದಾರರಲ್ಲಿ ಇರಲಿಲ್ಲ ಎಂದಲ್ಲ. ಈ ಒಲವನ್ನು ಗೆಲುವಿನ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದೇ ಈ ಗ್ಯಾರಂಟಿ. ೨೨೪ ಸದಸ್ಯ ಬಲದ ವಿಧಾನಸಭೆಯಲ್ಲಿ ೧೩೫ ಸೀಟುಗಳಲ್ಲಿ ಗೆಲುವು ಸಾಧಿಸಿ ಸರ್ಕಾರದ ಪ್ರತಿಷ್ಠಾಪನೆಗೆ ಕಾರಣವಾಯಿತು ಎಂಬುದು ಈಗ ಇತಿಹಾಸ. ಚುನಾವಣೆಯ ಸಂದರ್ಭದಲ್ಲಿ ತ್ರಿಶಂಕು ಫಲಿತಾಂಶವನ್ನೇ ಚುನಾವಣಾ ಪಂಡಿತರು ಹಾಗೂ ವಿಶ್ಲೇಷಕರು ನಿರೀಕ್ಷಿಸಿದ್ದರು. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಣ ತ್ರಿಕೋನ ಸ್ಪರ್ಧೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದೆ ತ್ರಿಶಂಕು ಪರಿಸ್ಥಿತಿ ತಲೆದೋರುತ್ತದೆ ಎಂಬ ನಿರೀಕ್ಷೆ ತಲೆಕೆಳಗಾಗಿ ಕಾಂಗ್ರೆಸ್ ಪಕ್ಷಕ್ಕೆ ಅದ್ಭುತ ಬಹುಮತ ತಂದುಕೊಟ್ಟ ಮತದಾರರಿಗೆ ಕೊಟ್ಟ ಮಾತಿನಂತೆ ಸಿಕ್ಕಿದ್ದು ಐದು ಗ್ಯಾರಂಟಿಗಳ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ೨೦೦ ಯೂನಿಟ್‌ವರೆಗೆ ಉಚಿತ ವಿದ್ಯುತ್, ವಿದ್ಯಾವಂತ ನಿಯರುದ್ಯೋಗಿ ಯುವಕರಿಗೆ ಯುವ ನಿಧಿ, ಮನೆಯೊಡತಿಗೆ ೨೦೦೦ ರೂ. ಮಾಸಿಕ ಭತ್ಯೆ ಹಾಗೂ ಐದು ಕೆ.ಜಿ. ಅಕ್ಕಿಯ ಬದಲು ನಗದು ಹಣ ಪ್ರಾಪ್ತಿ. ಮಾತಿನ ಮೂಲಕ ಭರವಸೆಗಳನ್ನು ಕೊಡುವುದು ಬೇರೆ. ಆದರೆ, ಅದನ್ನು ಕಾರ್ಯರೂಪಕ್ಕೆ ತರುವಾಗ ಹಣಕಾಸಿನ ಪರಿಸ್ಥಿತಿಯನ್ನು ಆಧರಿಸಿ ಹೇಳುವುದು ಬೇರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಸರ್ಕಾರ ಈ ಗ್ಯಾರಂಟಿ ಯೋಜನೆಗಳಿಗಾಗಿ ಸಾವಿರಾರು ಕೋಟಿ ರೂಪಾಯಿ ಹಣವನ್ನು ವಿನಿಯೋಗಿಸಿದೆ. ತತ್ಪರಿಣಾಮವಾಗಿ ಹೊಸ ಯೋಜನೆಗಳನ್ನು ಜಾರಿಗೆ ತರುವುದಕ್ಕಾಗಲೀ ಅಥವಾ ಅಭಿವೃದ್ಧಿ ಕೆಲಸಗಳಿಗೆ ಹಣ ತೊಡಗಿಸುವುದಾಗಲೀ ಅಂದುಕೊಂಡಂತೆ ಆಗುತ್ತಿಲ್ಲ. ಯಾವುದೇ ಕೆಲಸ ತೆಗೆದುಕೊಂಡರೂ ಅದಕ್ಕೆ ಹಣಕಾಸಿನ ಮುಗ್ಗಟ್ಟು ಎದುರಾಗುತ್ತಿರುವುದು ಸಹಜವಾಗಿಯೇ ಸರ್ಕಾರಕ್ಕೆ ಒಂದು ಧರ್ಮ ಸಂಕಟವಾಗಿ ಗೋಚರಿಸುತ್ತಿದೆ.
ಇಂತಹ ಧರ್ಮಸಂಕಟದ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಸುಸೂತ್ರವಾಗಿ ನಿಭಾಯಿಸಲು ಯಾವ ಮಾರ್ಗ ಅನುಸರಿಸಬೇಕು ಎಂಬ ನಿಟ್ಟಿನಲ್ಲಿ ದೆಹಲಿಯಲ್ಲಿ ಹೈಕಮಾಂಡ್ ಮುಖಂಡರ ಮಟ್ಟದಲ್ಲಿ ನಡೆದ ಮಾತುಕತೆಯಲ್ಲಿ ಹಲವಾರು ವಿಚಾರಗಳು ಪ್ರಸ್ತಾಪವಾಗಿವೆ ಎಂಬ ಮಾಧ್ಯಮಗಳ ವರದಿಯನ್ನು ಆಧರಿಸಿ ಹೇಳುವುದಾದರೆ ಸರ್ಕಾರ ಹಾಗೂ ಪಕ್ಷದ ಮುಖಂಡರು ಆಡಳಿತದ ಹಿತದೃಷ್ಟಿಯಿಂದ ಪರಿಷ್ಕೃತ ದೃಷ್ಟಿಕೋನದಲ್ಲಿ ಗ್ಯಾರಂಟಿಗಳನ್ನು ಪರಿಶೀಲಿಸುವ ಅಗತ್ಯವಂತೂ ಕಂಡುಬಂದಿದೆ. ಈ ವಿಚಾರದಲ್ಲಿ ಮಂತ್ರಿಗಳ ಅಭಿಪ್ರಾಯದಲ್ಲೂ ಸಹಮತ ಕಾಣುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಖಡಾಖಂಡಿತವಾಗಿ ಗ್ಯಾರಂಟಿ ಮುಂದುವರಿಕೆ ಮಾತುಗಳನ್ನು ಆಡುತ್ತಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಹಣಕಾಸಿನ ಸ್ಥಿತಿ ಗತಿ ಆಧರಿಸಿ ಗ್ಯಾರಂಟಿಗಳನ್ನು ಮರುಜಾರಿ ಪ್ರಕ್ರಿಯೆಗೆ ಹೊಂದಾಣಿಕೆ ಮಾಡುವ ಯೋಜನೆ ರೂಪಿಸುವ ನಿಟ್ಟಿನಲ್ಲಿ ಆಲೋಚನೆ ಆರಂಭವಾಗಿದೆ.
ಅಭಿವೃದ್ಧಿ ಕೆಲಸ ಕಾರ್ಯಗಳು ಸ್ಥಗಿತಗೊಂಡರೆ ರಾಜ್ಯದ ಪ್ರಗತಿ ಯಥಾಸ್ಥಿತಿಗೆ ಬೀಳುತ್ತದೆ. ಇದರಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ. ಪ್ರಯೋಜನವಾಗುವುದು ಕೇವಲ ಜನಪ್ರಿಯತೆಗೆ ಮಾತ್ರ. ಈಗಿರುವ ಗ್ಯಾರಂಟಿ ಯೋಜನೆಗಳಿಗೆ ಷರತ್ತುಗಳು ಇಲ್ಲ. ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಮಾತ್ರ ಎಂಬುದೇ ಈಗಿರುವ ಷರತ್ತು. ಆದರೆ, ಬಿಪಿಎಲ್ ಕಾರ್ಡುಗಳೇ ಬಹಳಷ್ಟು ಪ್ರಮಾಣದಲ್ಲಿ ನಕಲಿ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಬಿಪಿಎಲ್ ಮಾನದಂಡ ಒಂದೇ ಸಾಲುವುದಿಲ್ಲ. ಇದಲ್ಲದೆ ಆದಾಯ ತೆರಿಗೆ, ಆದಾಯದ ಪ್ರಮಾಣ ಆಧರಿಸಿ ಗ್ಯಾರಂಟಿ ಯೋಜನೆಗಳ ಜಾರಿ ಪ್ರಕ್ರಿಯೆ ಮರು ರೂಪಿಸುವ ಸಾಧ್ಯತೆಗಳು ಹೆಚ್ಚು. ಹಿಂದೊಮ್ಮೆ ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಾಲ ಮನ್ನಾ ಯೋಜನೆ ಜಾರಿಗೆ ಮುಂದಾದಾಗ ಚುನಾವಣಾ ಆಯೋಗಕ್ಕೆ ರಿಸರ್ವ್ ಬ್ಯಾಂಕ್ ಪತ್ರದ ಮುಖೇನ ಸಲಹೆ ಮುಂದಿಟ್ಟಿತ್ತು. ಚುನಾವಣಾ ಪ್ರಣಾಳಿಕೆಯಲ್ಲಿ ರಾಜಕೀಯ ಪಕ್ಷಗಳು ಹಣ ಬದ್ಧತೆ ಇರುವ ಭರವಸೆಗಳನ್ನು ಸೇರಿಸದಂತೆ ನಿರ್ದೇಶನ ಕೊಡಬೇಕು ಎಂಬುದು ರಿಸರ್ವ್ ಬ್ಯಾಂಕ್ ಹಾಗೂ ನಬಾರ್ಡ್ ಚುನಾವಣಾ ಆಯೋಗಕ್ಕೆ ಮಾಡಿಕೊಂಡಿದ್ದ ಮನವಿ. ಆದರೆ, ರಾಜಕೀಯ ಸ್ವರೂಪದ ಈ ಪ್ರಸ್ತಾಪವನ್ನು ಚುನಾವಣಾ ಆಯೋಗ ಪರಿಗಣಿಸಲಿಲ್ಲ. ಏಕೆಂದರೆ, ಇಂತಹ ವಿಚಾರಗಳ ಬಗ್ಗೆ ಪರಮಾಧಿಕಾರ ಇರುವುದು ಸಂಸತ್ತಿಗೆ ಮಾತ್ರ. ಈಗಂತೂ ಕರ್ನಾಟಕದಲ್ಲಿ ತಲೆದೋರಿರುವ ಈ ಧರ್ಮ ಸಂಕಟದ ನಿವಾರಣೆಗೆ ಸೂತ್ರವೊಂದು ರೂಪಿತವಾಗುತ್ತಿದೆ. ಹೀಗಾಗಿ ಮುಂದೆ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿದ್ದರೂ ಅವುಗಳಿಗೆ ಷರತ್ತುಗಳು ಲಾಗೂ ಆಗುತ್ತವೆ ಎಂಬುದಂತೂ ಖಂಡಿತ.

Next Article