ಸರ್ಕಾರಗಳು ಮದ್ಯಪಾನ ನಿಷೇಧ ಮಾಡಲಿ
ಗ್ರಾಮ ಸ್ವರಾಜ ಮೂಲಕ ಗ್ರಾಮಗಳ ಅಭಿವೃದ್ಧಿಯಿಂದಲೇ ದೇಶ ಅಭಿವೃದ್ಧಿವೆಂದು ಪ್ರತಿಪಾದಿಸಿದ ಗಾಂಧಿ ಅವರ ತತ್ವ -ಸಿದ್ಧಾಂತ ಇಂದು ಸಮರ್ಪಕವಾಗಿ ಅನುಷ್ಠಾನವಾಗದೆ ಇರುವುದರಿಂದ ಗ್ರಾಮಗಳು ಇನ್ನೂ ಅಭಿವೃದ್ಧಿ ಕಂಡಿಲ್ಲ
ಕಲಬುರಗಿ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮದ್ಯಪಾನ ನಿಷೇಧ ಮಾಡಬೇಕು ಎಂದು ಮುಖ್ಯಮಂತ್ರಿ ಸಲಹೆಗಾರ, ಆಳಂದ ಶಾಸಕ ಬಿ.ಆರ್.ಪಾಟೀಲ್ ಒತ್ತಾಯಿಸಿದ್ದಾರೆ.
ಗಾಂಧಿ ಜಯಂತಿ ಅಂಗವಾಗಿ ಗಾಂಧೀಜಿ ವಿಚಾರ ವೇದಿಕೆಯಿಂದ ಕಲಬುರಗಿಯ ಮಹಾನಗರ ಪಾಲಿಕೆ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಬುಧವಾರ ಹಮ್ಮಿಕೊಂಡಿದ್ದ ಜಾಗೃತಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಗಾಂಧಿ ಜಯಂತಿ ದಿನ ಮಾತ್ರ ಮದ್ಯಪಾನ ನಿಷೇಧ ಮಾಡಿದರೆ ಸಾಲದು ಶಾಶ್ವತವಾಗಿ ದೇಶದಲ್ಲಿಯೇ ಮದ್ಯ ನಿಷೇಧವಾಗಬೇಕು ಎಂದರು.
ಮದ್ಯಪಾನ ಮಾರಾಟದಿಂದಲೇ ರಾಜ್ಯ ಸರ್ಕಾರಕ್ಕೆ ಸುಮಾರು ೩೬ ಕೋಟಿ ರೂ. ಆದಾಯ ಬರುತ್ತಿದೆ. ಆದರೂ ಸಹ ಮದ್ಯಪಾನ ನಿಷೇಧ ಮಾಡಲು ಒತ್ತಾಯಿಸುತ್ತೇನೆ ಎಂದ, ಅವರು, ಪ್ರಧಾನಿ ಮೋದಿ ಅವರು ದೇಶಾದ್ಯಂತ ಮದ್ಯ ನಿಷೇಧಕ್ಕೆ ಆದೇಶ ಹೊರಡಿಸಬೇಕೆಂದು ಆಗ್ರಹಿಸಿದರು. ವ್ಯಸನಮುಕ್ತ ದೇಶವಾಗಬೇಕೆಂದು ಮಹಾತ್ಮ ಗಾಂಧೀಜಿ ಕನಸು ಕಂಡಿದ್ದರು. ಆದರೆ, ಎಲ್ಲಡೆ ವ್ಯಸನಪ್ರೀಯರ ಸಂಖ್ಯೆ ಅಧಿಕವಾಗುತ್ತಿದೆ. ಮದ್ಯ ಸೇವನೆಯಿಂದಾಗಿ ಸಾವಿರಾರು ಕುಟುಂಬಗಳು ಹಾಳಾಗುತ್ತಿವೆ. ಗ್ರಾಮ ಸ್ವರಾಜ ಮೂಲಕ ಗ್ರಾಮಗಳ ಅಭಿವೃದ್ಧಿಯಿಂದಲೇ ದೇಶ ಅಭಿವೃದ್ಧಿವೆಂದು ಪ್ರತಿಪಾದಿಸಿದ ಗಾಂಧಿ ಅವರ ತತ್ವ -ಸಿದ್ಧಾಂತ ಇಂದು ಸಮರ್ಪಕವಾಗಿ ಅನುಷ್ಠಾನವಾಗದೆ ಇರುವುದರಿಂದ ಗ್ರಾಮಗಳು ಇನ್ನೂ ಅಭಿವೃದ್ಧಿ ಕಂಡಿಲ್ಲ. ನಿರುದ್ಯೋಗ ಸಮಸ್ಯೆ ಇನ್ನೂ ಹೆಚ್ಚಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು.
ಕೋಮುವಾದದಿಂದಾಗಿ ಜಾತಿ, ಧರ್ಮಗಳು ಒಡೆಯುತ್ತಿವೆ, ಪರಸ್ಪರ ದ್ವೇಷ, ಅಸೂಯೆ ಬೆಳೆಯುತ್ತಿದೆ. ಕೋಮು ಸೌಹಾರ್ದತೆ ಇಲ್ಲದಂತಾಗಿದೆ. ಸತ್ಯ, ಅಹಿಂಸೆ, ಧರ್ಮದ ಮಾರ್ಗದಲ್ಲಿ ನಡೆದ ಗಾಂಧಿ ಅಹಿಂಸೆ, ಸತ್ಯಾಗ್ರಹ ಮೂಲಕವೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಅವರು ಇಂದು ಇಲ್ಲ. ಆದರೆ, ಅವರ ತತ್ವ ಇನ್ನೂ ಜೀವಂತವಾಗಿವೆ. ಅವರ ತತ್ವ-ವಿಚಾರಗಳನ್ನು ಮುಂದಿನ ಪೀಳಿಗೆಗೆ ಮುಟ್ಟಿಸುವ ನಿಟ್ಟಿನಲ್ಲಿ ನಾವೆಲ್ಲ ಗಾಂಧಿ ತತ್ವ ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗೋಣ ಶಪತ ಮಾಡೋಣ ಎಂದು ಸಲಹೆ ನೀಡಿದರು.